ಸಮಾಜ

 

ಭಾರತೀಯ ಒಕ್ಕೂಟದ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕವೂ ತನ್ನದೇ ಆದ ಸ್ಥಾನ ವಿಶೇಷ ಹೊಂದಿದೆ. ಸರಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸ ಈ ನಾಡಿಗಿದೆ. ಚರಿತ್ರೆಯ ಉದ್ದಕ್ಕೆ ಇದು ಅನೇಕ ವಿಭಿನ್ನ ಮೂಲಗಳ ಜನ ಸಮುದಾಯಗಳಿಗೆ ನೆಲೆ ನೀಡುತ್ತಾ ಬಂದಿದೆ. ಈ ಸಮುದಾಯ ವೈವಿಧ್ಯಗಳಿಂದಾಗಿ ಇಲ್ಲಿನ ಆಚಾರ, ವಿಚಾರ, ಭಾಷೆ, ಸಾಹಿತ್ಯ,ಜೀವನಕ್ರಮ-ಸಂಸ್ಕೃತಿ, ಆಲೋಚನಾ ವಿಧಾನ ಹೀಗೆ ಏನೆಲ್ಲವೂ ಪ್ರಭಾವಿತಗೊಂಡಿವೆ. ಈ ಎಲ್ಲವುಗಳ ಪರಿಚಯ ಭಾರತೀಯತೆಯ, ಅಷ್ಟೆ ಅಲ್ಲ, ಜಗತ್ತಿನ ನಾಗರಿಕತೆಗಳ ವಿಸ್ತರಣೆಯ ಅಧ್ಯಯನದ ದೃಷ್ಟಿಯಿಂದಲೂ ಮುಖ್ಯವಾಗುತ್ತದೆ.

ಭೌಗೋಳಿಕವಾಗಿ ಕರ್ನಾಟಕ ರಾಜ್ಯವು ದಖ್ಖನ್ ಪ್ರಸ್ಥಭೂಮಿಯ ನಡುಮಧ್ಯಭಾಗದಲ್ಲಿದೆ. ಅನೇಕ ಬುಡಕಟ್ಟು ಲಕ್ಷಣಗಳನ್ನು ತೋರುವ ಜನರು ಇಲ್ಲಿ ಕಂಡುಬರುವುದರಿಂದ ಕೆಲವೊಮ್ಮೆ ಕರ್ನಾಟಕ ರಾಜ್ಯವನ್ನು ಮಾನವ ಶಾಸ್ತ್ರೀಯ ವಸ್ತುಸಂಗ್ರಹಾಲಯ ಎಂದೂ ಕರೆಯಲಾಗಿದೆ. ದ್ರಾವಿಡರು ಮತ್ತು ಇಂಡೋ-ಆರ್ಯನ್ ಜನಾಂಗಗಳ ಜೊತೆ ಜೊತೆಗೇ ಬೇರೆ ಬೇರೆ ಪಂಗಡಗಳ ಗುಣಲಕ್ಷಣಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಪ್ರದೇಶವನ್ನಾಳಿದ ಮುಸ್ಲಿಂ ರಾಜ ವಂಶಗಳಿಂದ ತುರುಷ್ಕರು, ಆಫ್ಘನ್ನರು ಮತ್ತು ಮಧ್ಯ ಪ್ರಾಚ್ಯದ ಅನೇಕ ಜನಾಂಗೀಯರು ಚಾರಿತ್ರಿಕ ಕಾರಣಗಳಿಂದಾಗಿ ಇಲ್ಲಿಗೆ ಆಕರ್ಷಿಸಲ್ಪಟ್ಟರು. ಗೋವಾಕ್ಕಿರುವ ಸಾಮೀಪ್ಯದಿಂದಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಉತ್ತರ ಕನ್ನಡ ಮುಂತಾದ ಗಡಿ ಜಿಲ್ಲೆಗಳಲ್ಲಿ ನೆಲೆಸಿದರು. ಈ ಜನರನ್ನು ಸಿದ್ದಿಗಳು ಎಂದು ಕರೆಯಲಾಗಿದೆ. ಕೆಲವು ದಶಕಗಳಿಂದೀಚೆಗೆ ಟಿಬೇಟಿಯನ್ ನಿರಾಶ್ರಿತರ ನೆಲೆಗಳೂ ಅಲ್ಲಲ್ಲಿ ತಲೆಯೆತ್ತಿವೆ. ರಾಜ್ಯದ ಕರಾವಳಿ ತೀರದಲ್ಲಿ ಅನೇಕ ಶತಮಾನಗಳಿಂದ ನೆಲೆಸಿರುವ ನವಾಯತರು ಮೂಲತಃ ಅರೇಬಿಯಾದಿಂದ ಬಂದವರು. ಇಲ್ಲಿನ ಕ್ರೈಸ್ತ ಜನತೆಯಲ್ಲಿ ಯುರೋಪಿಯನ್ ಜನಾಂಗದ ಶಾರೀರಿಕ ಲಕ್ಷಣಗಳು ಗೋಚರಿಸಲು ಗೋವಾದಲ್ಲಿ ನೆಲೆ ನಿಂತಿದ್ದ ಪೋರ್ಚುಗೀಸರು ಸ್ಥಳೀಯ ಸ್ತ್ರೀಯರೊಡನೆ ವೈವಾಹಿಕ ಸಂಬಂಧ ಬೆಳೆಸುತ್ತಿದ್ದುದೇ ಕಾರಣ. ಸಾಕಷ್ಟು ಸಂಖ್ಯೆಯಲ್ಲಿ ಗೋವಾದ ಕ್ರೈಸ್ತರು ಕರ್ನಾಟಕಕ್ಕೆ ವಲಸೆ ಬಂದಿರುವುದೂ ನಿಜ. ಕನ್ನಡ ಕರಾವಳಿಯ ಜನರು ಅರಬ್ ವ್ಯಾಪಾರಿಗಳೊಡನೆ ಹೊಂದಿದ್ದ ವಾಣಿಜ್ಯ ಸಂಪರ್ಕಗಳು ಸ್ಥಳೀಯ ಜನರೊಂದಿಗೆ ಅವರು ಸಾಂಸ್ಕೃತಿಕವಾಗಿ ಬೆರೆಯಲು ಅನುವು ಮಾಡಿಕೊಟ್ಟವು. ತೀರಾ ಈಚಿನ ದಶಕಗಳಲ್ಲಿ ಬೆಂಗಳೂರು ಮಹಾ ನಗರವು ಐಟಿ ಕ್ಷೇತ್ರದಲ್ಲಿ ಸಾಧಿಸಿದ ಅಂತಾರಾಷ್ಟ್ರೀಯ ಖ್ಯಾತಿ, ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣಗಳಲ್ಲಿ ಇರುವ ಕಲಿಕಾ ಅವಕಾಶಗಳು, ವೈದ್ಯಕೀಯ ಪ್ರವಾಸೋದ್ಯಮ ಇತ್ಯಾದಿಗಳಿಂದಲೂ ಜಗತ್ತಿನ ನಾನಾ ಭಾಗಗಳ ಆಸಕ್ತರು ಕರ್ನಾಟದೊಡನೆ ನಿಕಟ ಸಂಪರ್ಕ ಬೆಳೆಸುತ್ತಿರುವುದು ಹೊಸ ಪ್ರಕ್ರಿಯೆ ಆಗಿದೆ. ಇವೆಲ್ಲವುದರ ಜೊತೆಗೆ ಮಲಿನಗೊಳ್ಳದೇ ಉಳಿದಿರುವ ಹೆಚ್ಚಿನ ಸಂಖ್ಯೆಯ ದೇಶೀಯ ಜನರು, ವಿವಿಧ ಧಾರ್ಮಿಕ ಆಂದೋಲನ, ಮತ್ತು ಪ್ರಾದೇಶಿಕ ರೂಢಿ ಸಂಪ್ರದಾಯಗಳೆಲ್ಲವೂ ಸೇರಿ ಇಂದಿನ ಕರ್ನಾಟಕದ ಸಂಸ್ಕೃತಿಯನ್ನು ರೂಪಿಸಿ ಬೆಳೆಸಿವೆ.

 

ಜನಸಂಖ್ಯಾ ಅಧ್ಯಯನ

ಕರ್ನಾಟಕ ರಾಜ್ಯವು 1,91,791 ಚ.ಕಿ.ಮೀ.ಯಷ್ಟು ವಿಸ್ತಾರವಾಗಿದ್ದು, 2011ರ ಜನಗಣತಿಯಂತೆ 3,09, 66,657ಪುರುಷರು ಮತ್ತು 3, 01,28,640 ಸ್ತ್ರೀಯರನ್ನೊಳಗೊಂಡಂತೆ ಒಟ್ಟು 6,10, 95,297 ಜನಸಂಖ್ಯೆಯನ್ನು ಪಡೆದಿದೆ. ಅದೇ ಜನಗಣತಿ ವರದಿ ತಿಳಿಸುವಂತೆ ಕರ್ನಾಟಕ ರಾಜ್ಯವು, ಭಾರತ ಗಣರಾಜ್ಯದಲ್ಲಿರುವ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೌಗೋಳಿಕ ವಿಸ್ತೀರ್ಣ ಮತ್ತು ಜನಸಂಖ್ಯೆ ಎರಡರಲ್ಲಿಯೂ 9ನೇ ಸ್ಥಾನದಲ್ಲಿದೆ. ಭಾರತದ ಒಟ್ಟು ಜನಸಂಖ್ಯೆ (1,21,15,65,573,)ಯಲ್ಲಿ ಕರ್ನಾಟಕದ ಪಾಲು ಶೇ. 5.05ರಷ್ಟಿದೆ. 2001-2011ರ ದಶಕದಲ್ಲಿ 82,44,735 ರಷ್ಟು ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬರುತ್ತದೆ.

ಜನಸಂಖ್ಯಾ ಬೆಳವಣಿಗೆಯ ಪ್ರವೃತ್ತಿಗಳು ಸೂಚಿಸುವಂತೆ, 1911-21 ರ ನಡುವೆ ಜನಸಂಖ್ಯೆಯು ಪ್ಲೇಗ್, ಶೀತ ಜ್ವರ ಸಾಂಕ್ರಾಮಿಕ ರೋಗಗಳೇ ಮುಂತಾದ ಕಾರಣಗಳಿಂದ ಕಡಿಮೆಯಾಗಿತ್ತು. 1971  ಮತ್ತು 1931ರ ನಡುವಿನ ಅವಧಿಯಲ್ಲಿ ಜನಸಂಖ್ಯೆಯು ಕೇವಲ ಹತ್ತೂವರೆ ಲಕ್ಷದಷ್ಟು ಮಾತ್ರ ಹೆಚ್ಚಾಗಿತ್ತು. ಆದರೆ 1951 ಮತ್ತು ನಂತರದ ಅವಧಿಯಲ್ಲಿ ಜನಸಂಖ್ಯಾ ವೃದ್ಧಿದರವು ಹೆಚ್ಚುತ್ತಾ ಸಾಗಿತು.

ಜನಸಂಖ್ಯಾ ವೃದ್ಧಿದರವು 1981-1991ರ ನಡುವಿನ ಅವಧಿಯಲ್ಲಿ ಶೇಕಡಾ 21.12 ರಷ್ಟಾಗಿತ್ತು. [ಗ್ರಾಮೀಣ 17.65 ಮತ್ತು ನಗರ ಪ್ರದೇಶ 29.62]; ಆದರೆ ಹಿಂದಿನ ದಶಕವಾದ 1971-81ರ ಅವಧಿಯಲ್ಲಿ ವೃದ್ಧಿದರವು ಶೇ.26.76 ರಷ್ಟಿತ್ತು. ಇದು 1991-2001ರ ಅವಧಿಯಲ್ಲಿ ಶೇ. 17.51ರಷ್ಟಕ್ಕೆ ಕುಸಿಯಿತು [ಗ್ರಾಮೀಣ 19.07 ಮತ್ತು ನಗರ ಪ್ರದೇಶ 50.65]. ಜಿಲ್ಲೆಗಳ ಬಗ್ಗೆ ಹೇಳುವುದಾದರೆ, 1981-91ರ ಅವಧಿಯಲ್ಲಿ ಬೆಂಗಳೂರು ಜಿಲ್ಲೆಯು ಅತಿ ಹೆಚ್ಚು ಅಂದರೆ, ಶೇ.25.10ರಷ್ಟು  ವೃದ್ಧಿದರವನ್ನು ದಾಖಲಿಸಿದರೆ,1997 ರಲ್ಲಿ ಹೊಸತಾಗಿ ರಚಿತವಾದ ಉಡುಪಿ ಜಿಲ್ಲೆಯು ಅತ್ಯಂತ ಕಡಿಮೆ ಎನ್ನಲಾದ ಶೇ. 7.10ರಷ್ಟು ವೃದ್ಧಿದರವನ್ನು ಮಾತ್ರ ದಾಖಲಿಸಿತ್ತು.

 

ಲಿಂಗಾನುಪಾತ

ಲಿಂಗಾನುಪಾತವೆಂದರೆ, ಒಂದು ನಿರ್ದಿಷ್ಟ ಪ್ರದೇಶದೊಳಗೆ ವಾಸವಿರುವ ಪ್ರತಿ 1,11 ಪುರುಷರಿಗೆ ಅದೇ ಪ್ರದೇಶದಲ್ಲಿ ಎಷ್ಟು ಸ್ತ್ರೀಯರಿರುತ್ತಾರೆ ಎಂಬುದೇ ಆಗಿದೆ. ಇದನ್ನು ಸ್ತ್ರೀ-ಪುರುಷ ಪ್ರಮಾಣ ಎಂದೂ ಕರೆಯುತ್ತಾರೆ.  2001ರ ಜನಗಣತಿಯಂತೆ ಕರ್ನಾಟಕ ರಾಜ್ಯದಲ್ಲಿ ಸರಾಸರಿ ಲಿಂಗಾನುಪಾತವು ಪ್ರತಿ ಸಾವಿರ ಪುರುಷರಿಗೆ 965 ಇದ್ದು, ಇದು 2011ರಲ್ಲಿ 973ಕ್ಕೆ ಏರಿದೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ರಾಯಚೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯು ಹೆಚ್ಚಾಗಿದೆ ಮತ್ತು ಉಳಿದ ಬೆಂಗಳೂರು, ಬೆಂಗಳೂರು ಗ್ರಾ, ದಾವಣಗೆರೆ, ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ ಮತ್ತಿತರ ಕೆಲವು ಜಿಲ್ಲೆಗಳಲ್ಲಿ ಲಿಂಗಾನುಪಾತವು ಸರಾಸರಿಗಿಂತ ಕಡಿಮೆ ಆಗಿ ದಾಖಲಾಗಿದೆ. ಉಡುಪಿ(994) ಜಿಲ್ಲೆಯಲ್ಲಿ ಲಿಂಗಾನುಪಾತವು ಉಳಿದೆಲ್ಲಾ ಜಿಲ್ಲೆಗಳಿಗಿಂತ ಬಹಳ ಅಧಿಕವಾಗಿಯೂ, ಬೆಂಗಳೂರು ನಗರ (916) ಜಿಲ್ಲೆಯಲ್ಲಿ ಭಾರೀ ಕಡಿಮೆಯೂ ಆಗಿರುವುದು ಗಮನಾರ್ಹವಾಗಿದೆ.

ಜನಸಾಂದ್ರತೆ

ಪ್ರತಿ ಚ.ಕಿ.ಮೀ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯ ಪ್ರಮಾಣವನ್ನೇ ಜನಸಾಂದ್ರತೆ ಎಂದು ಕರೆಯುತ್ತಾರೆ. ರಾಜ್ಯದ ಜನಸಾಂದ್ರತೆಯು 1991ರಲ್ಲಿ 235 ಆಗಿದ್ದರೆ, ಅದರ ಹಿಂದಿನ ಜನಗಣತಿ (1981)ಯಂತೆ 193 ಆಗಿತ್ತು. 2001 ರಲ್ಲಿ 276 ಮತ್ತು 2011 ರ ಜನಗಣತಿಯಂತೆ 319 ಆಗಿತ್ತು. ಇದು ರಾಷ್ಟ್ರದ (1991ರಲ್ಲಿ 263, 2001ರಲ್ಲಿ 325  ಹಾಗೂ 2011ರಲ್ಲಿ 382) ಸರಾಸರಿಗಿಂತ ಸಾಕಷ್ಟು ಕಡಿಮೆ ಇದೆ. ರಾಷ್ಟ್ರದಲ್ಲಿರುವ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕವು ಜನಸಾಂದ್ರತೆಯಲ್ಲಿ 1991, 2001ರ ಜನಗಣತಿಯಂತೆ 20 ನೇ ಸ್ಥಾನದಲ್ಲಿದ್ದು ಅದು 2011ನೇ ಸಾಲಿನ ಜನಗಣತಿಯಂತೆ 1ನೇ ಸ್ಥಾನದಲ್ಲಿದೆ.

2011ರ ಜನಗಣತಿಯಂತೆ ರಾಜ್ಯದಲ್ಲಿ ಪ್ರತಿ ಚದರ ಕಿಲೋಮೀಟರಿಗೆ 4,381 ಜನರಿರುವ ಬೆಂಗಳೂರು ಜಿಲ್ಲೆಯು ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳದ್ದಾದರೆ, ಪ್ರತಿ ಚ.ಕಿ.ಮೀಟರಿಗೆ ಕೇವಲ 125  ಜನ ಇರುವ ಕೊಡಗು ಅತ್ಯಂತ ಕಡಿಮೆ ಜನಸಾಂದ್ರತೆಯುಳ್ಳ ಜಿಲ್ಲೆಯಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಬೆಂಗಳೂರು (ಗ್ರಾ), ಮೈಸೂರು, ಧಾರವಾಡ, ಕೋಲಾರ, ಮಂಡ್ಯ, ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್, ಉಡುಪಿ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಜನಸಾಂದ್ರತೆಯು 300 ಜನರಿಗಿಂತಲೂ ಅಧಿಕವಾಗಿದೆ. ಜನಸಾಂದ್ರತೆಯು 250 ರಿಂದ 299 ರವರೆಗೂ ಇದ್ದ ಜಿಲ್ಲೆಗಳೆಂದರೆ ಕೊಪ್ಪಳ, ತುಮಕೂರು, ಹಾಸನ, ಬಾಗಲಕೋಟೆ, ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ. 200ರಿಂದ 249 ರವರೆಗೆ ಜನಸಾಂದ್ರತೆಯುಳ್ಳ ಜಿಲ್ಲೆಗಳೆಂದರೆ ಚಾಮರಾಜನಗರ, ಶಿವಮೊಗ್ಗ, ವಿಜಯಪುರ, ಯಾದಗಿರಿ, ರಾಯಚೂರು, ಗದಗ ಹಾಗೂ ಕಲಬುರಗಿ. ಉಳಿದಂತೆ ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಕೊಡಗು 135 ರಿಂದ 200ರ ಒಳಗೆ ಜನಸಾಂದ್ರತೆಯುಳ್ಳದ್ದಾಗಿವೆ.

 

ಸಾಕ್ಷರತೆ

ಸಾಕ್ಷರ ಅಥವಾ ಅಕ್ಷರಸ್ಥ ಎಂದರೆ, ಭಾಷಯೊಂದನ್ನು ಅರ್ಥ ಮಾಡಿಕೊಂಡು ಓದಿ ಬರೆಯುವ ಸಾಮರ್ಥ್ಯವುಳ್ಳ ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ವ್ಯಕ್ತಿ ಎಂದರ್ಥ. ಇದಕ್ಕೆ ಯಾವುದೇ ಕನಿಷ್ಠ ವಿದ್ಯಾರ್ಹತೆಯಾಗಲೀ ಅಥವಾ ಕ್ರಮಬದ್ಧವಾದ ಶಿಕ್ಷಣವಾಗಲೀ ಬೇಕಿಲ್ಲ. 2011ರ ಜನಗಣತಿ ಪ್ರಕಾರ ಅಕ್ಷರಸ್ಥರ ಪ್ರಮಾಣ ರಾಜ್ಯದಲ್ಲಿ ಶೇ.75.36 ಆಗಿದ್ದು, 2001ರಲ್ಲಿ ಇದು ಶೇ.66.64 ಆಗಿತ್ತು. ಇದರ ಹಿಂದಿನ ದಶವಾರ್ಷಿಕ ಜನಗಣತಿ ವರದಿಗಳ ಪ್ರಕಾರ ಅಕ್ಷರಸ್ಥರ ಪ್ರಮಾಣ ಹೀಗಿತ್ತು: 1991ರಲ್ಲಿ ಶೇ.47.05, 1981ರಲ್ಲಿ ಶೇ.38.41, 1971 ರಲ್ಲಿ ಶೇ.31.52, 1961ರಲ್ಲಿ ಶೇ.25.40, ಕಾಲಕಾಲಕ್ಕೆ ಅಕ್ಷರಸ್ಥರ ಸಂಖ್ಯೆ ಹೇಗೆ ಹೆಚ್ಚುತ್ತಾ ಬರುತ್ತಿದೆ ಎಂಬುದನ್ನು ಈ ಸಂಖ್ಯೆಗಳು ಬಿಂಬಿಸುತ್ತವೆ. ಈ ಏರಿಕೆ ಪ್ರವೃತ್ತಿಯು ಸ್ತ್ರೀ-ಪುರುಷರೀರ್ವರ ಸಾಕ್ಷರತೆಯ ಪ್ರಮಾಣಗಳೆರಡಕ್ಕೂ ಅನ್ವಯಿಸುತ್ತದೆ. ಪುರುಷ ಸಾಕ್ಷರರ ಪ್ರಮಾಣ ಈ ಕೆಳಗಿನಂತೆ ಏರುತ್ತಾ ಬಂದಿದೆ: 1971 ರಲ್ಲಿ ಶೇ.41.62, 1981ರಲ್ಲಿ ಶೇ.48.61, 1991ರಲ್ಲಿ ಶೇ.56.41, 2001ರಲ್ಲಿ ಶೇ.76.10 ಹಾಗೂ 2011ರಲ್ಲಿ ಶೇ.82.47. 1901ರಲ್ಲಿ ಕೇವಲ ಶೇ.9.9 ರಷ್ಟಿದ್ದ ಪುರುಷ ಸಾಕ್ಷರತೆಯು 2011ರಲ್ಲಿ ಶೇ.82.47 ತಲುಪಿದ್ದರೆ, ಇದೇ ಅವಧಿಯಲ್ಲಿ ಸ್ತ್ರೀ ಸಾಕ್ಷರತೆಯ ದರ 1901 ರಲ್ಲಿ ಕೇವಲ ಶೇ.0.6 ಇದ್ದದ್ದು, 2011ರಲ್ಲಿ ಶೇ.68.08ಕ್ಕೆ ತಲುಪಿತ್ತು.

ಎಲ್ಲಾ ಜಿಲ್ಲೆಗಳಲ್ಲಿಯೂ ಸ್ತ್ರೀ ಮತ್ತು ಪುರುಷ ಸಾಕ್ಷರರ ಪ್ರಮಾಣ ಗಣನೀಯ ಏರಿಕೆಯನ್ನು ಕಂಡಿದ್ದು ಉಲ್ಲೇಖಾರ್ಹ. ದಕ್ಷಿಣ ಕನ್ನಡ ಜಿಲ್ಲೆಯು 2011ರ ಜನಗಣತಿ ವರದಿಯಂತೆ ಶೇ.88.57 ರೊಡನೆ ಪ್ರಥಮ ಸ್ಥಾನದಲ್ಲಿತ್ತು. ಬೆಂಗಳೂರು ಜಿಲ್ಲೆಯು ಶೇ.87.57, ಆಗಿದ್ದು ದ್ವಿತೀಯ ಸ್ಥಾನದಲ್ಲಿಯೂ, ಶೇ.86.24 ಉಳ್ಳ ಉಡುಪಿಯು 3ನೇ ಸ್ಥಾನದಲ್ಲಿಯೂ ಇದ್ದು, ಶೇ. 51.83 ಸಾಕ್ಷರತೆಯೊಡನೆ ಯಾದಗಿರಿ ಕಟ್ಟಕಡೆಯ ಸ್ಥಾನದಲ್ಲಿತ್ತು.

2011ರ ಜನಗಣತಿಯಂತೆ ರಾಜ್ಯದಲ್ಲಿ ಶೇ.68.08 ಸ್ತ್ರೀ ಸಾಕ್ಷರರಿದ್ದು, ಶೇ.84.12 ಇರುವ ದಕ್ಷಿಣ ಕನ್ನಡ ಜಿಲ್ಲೆಯು ಸ್ತ್ರೀ ಸಾಕ್ಷರರ ದರದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದಾದ ನಂತರದ ಸ್ಥಾನಗಳು ಕ್ರಮವಾಗಿ ಬೆಂಗಳೂರು ಶೇ.84.01, ಉಡುಪಿ ಶೇ.81.58 ಮತ್ತು ಉತ್ತರ ಕನ್ನಡ ಶೇ. 78.39ಗಳಿಗೆ ಸಂದಿದೆ. ಇಡೀ ರಾಜ್ಯದಲ್ಲಿ ಸಾಕ್ಷರತೆಯು ಅತ್ಯಂತ ಕಡಿಮೆ ಇರುವುದು ಯಾದಗಿರಿ ಜಿಲ್ಲೆಯಲ್ಲಿ (ಶೇ.41.38). ಜನಗಣತಿ ವರದಿ 2011ರಂತೆ ಜಿಲ್ಲಾವಾರು ಸಾಕ್ಷರತೆಯ ಪ್ರಮಾಣವು ಮುಂದಿನಂತಿದೆ: ಉತ್ತರ ಕನ್ನಡ ಶೇ.78.39, ಕೊಡಗು ಶೇ.78.14, ಶಿವಮೊಗ್ಗ ಶೇ.74.84, ಧಾರವಾಡ ಶೇ.73.46, ಚಿಕ್ಕಮಗಳೂರು ಶೇ.73.16, ಬೆಂಗಳೂರು (ಗ್ರಾ) ಶೇ.70.63,  ಹಾವೇರಿ ಶೇ.70.46, ದಾವಣಗೆರೆ ಶೇ.68.91, ಹಾಸನ ಶೇ.62.54, ಮೈಸೂರು ಶೇ.67.06, ಕೋಲಾರ ಶೇ.66.84, ತುಮಕೂರು ಶೇ.67.38, ಚಿತ್ರದುರ್ಗ ಶೇ.65.88, ಗದಗ ಶೇ.65.44, ಬೆಳಗಾವಿ ಶೇ.64.74, ಮಂಡ್ಯ ಶೇ.62.10, ಬೀದರ್ ಶೇ.61.55, ಚಿಕ್ಕಬಳ್ಳಾಪುರ ಶೇ.61.55, ರಾಮನಗರ ಶೇ.61.50, ಬಾಗಲಕೋಟೆ ಶೇ.58.40, ಬಳ್ಳಾರಿ ಶೇ.58.09, ವಿಜಯಪುರ ಶೇ.56.72, ಕೊಪ್ಪಳ ಶೇ.57.55, ಕಲಬುರಗಿ ಶೇ.55.09, ಚಾಮರಾಜನಗರ ಶೇ.54.92, ರಾಯಚೂರು ಶೇ.48.73, ಯಾದಗಿರಿ ಶೇ.41.38.

ಸಾಕ್ಷರತೆಯಲ್ಲಿ ಶೇ.84.13 ನೊಂದಿಗೆ ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯು ಶೇ.84.01 ಸಾಕ್ಷರತೆಯನ್ನು ಹೊಂದಿರುವ ಬೆಂಗಳೂರು ಜಿಲ್ಲೆಯನ್ನು ಕೂದಲ ಅಂತರದಲ್ಲಿ ದ್ವಿತೀಯ ಸ್ಥಾನಕ್ಕೆ ತಳ್ಳಿದೆ; ಶೇ.81.58 ರೊಂದಿಗೆ ಉಡುಪಿ ಜಿಲ್ಲೆಯು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

 

ಗ್ರಾಮಾಂತರ ಪ್ರದೇಶಗಳು

ಎಲ್ಲಾ ಹಳ್ಳಿಗಳು ಮತ್ತು ಅವುಗಳ ಸರಹದ್ದುಗಳಾಚೆ ಇರುವ ವಸತಿ ಮತ್ತು ಅರಣ್ಯ ಪ್ರದೇಶಗಳು ಗ್ರಾಮಾಂತರ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಗರ ಪ್ರದೇಶವೆಂದು ಘೋಷಿತವಾಗಿಲ್ಲದ ಎಲ್ಲಾ ಪ್ರದೇಶಗಳೂ ಗ್ರಾಮಾಂತರ ಎಂದು ಪರಿಗಣಿಸಲ್ಪಡುತ್ತವೆ. ಜನವಸತಿ ಇಲ್ಲದ ಹಳ್ಳಿಯನ್ನು ‘ಬೇಚಿರಾಕ್ ಅಥವಾ ‘ಜ್ಯೋತಿಹೀನ ಎಂದು ಕರೆಯುವರು.

ಜನವಸತಿ ಇರುವ ಹಳ್ಳಿಗಳ ಸಂಖ್ಯೆ 1901 ರಿಂದ 1991 ರವರೆಗಿನ ದಶವಾರ್ಷಿಕ ಜನಗಣತಿಯಂತೆ ಹೀಗಿದೆ : 1901 - 28,288 ; 1911 - 28,388; 1921 - 28,349 ; 1931 - 28,635 ; 1941 - 28,290 ; 1951 - 27,629 ; 1961 - 26,377 ; 1971 - 26,826 ; 1981 - 27,028 ಮತ್ತು 1991 - 27,066. 2001ರ ಜನಗಣತಿಯಂತೆ ರಾಜ್ಯದಲ್ಲಿ 27,481 ವಸತಿ ಮತ್ತು 1,925 ನಿರ್ವಸತಿ ಹಳ್ಳಿಗಳಿದ್ದವು. 2011ರ ಗಣತಿಯಂತೆ ರಾಜ್ಯದಲ್ಲಿ ಒಟ್ಟು 29,340 ಗ್ರಾಮಗಳಿದ್ದು, ಅವುಗಳಲ್ಲಿ 27,397 ಜನವಸತಿ ಹಾಗೂ 1943 ನಿರ್ವಸತಿ ರಹಿತ ಗ್ರಾಮಗಳಾಗಿದ್ದವು.

 

ವೈವಾಹಿಕ ಸ್ಥಿತಿ

1991ರ ಜನಗಣತಿ ವರದಿಯಂತೆ, 15ರಿಂದ 44ರ ವಯೋಮಾನದವರಲ್ಲಿ ವಿವಾಹವಾಗಿದ್ದವರ ಸಂಖ್ಯೆ ರಾಜ್ಯದಲ್ಲಿ 1,32,55,554 [ಪುರುಷರು, 56,59,555; ಸ್ತ್ರೀಯರು, 75,95,999] ಆಗಿತ್ತು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಇದು ಶೇ.64.24 [ಪುರುಷರು, ಶೇ.53.75 ಮತ್ತು ಸ್ತ್ರೀಯರು, ಶೇ.75.05]. ಇದೇ ರೀತಿ, 2001ರ ಜನಗಣತಿ ಪ್ರಕಾರ 15 ರಿಂದ 44 ರ ವಯೋಮಾನದವರಲ್ಲಿ ವಿವಾಹವಾಗಿದ್ದವರ ಸಂಖ್ಯೆ 2,56,43,500 [ಪುರುಷರು, 1,30,79,600 ಮತ್ತು ಸ್ತ್ರೀಯರು, 1,24,63,900]. ಅವರಲ್ಲಿ ಮೇಲಿನದೇ ವಯೋಮಾನದ, 1,24,400 ಜನರು [ಪುರುಷರು, 19,200 ಮತ್ತು ಸ್ತ್ರೀಯರು 1,05,200] ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು ಅಥವಾ ಬೇರ್ಪಟ್ಟಿದ್ದರು.

 

ನಗರೀಕರಣ

1981ರ ಜನಗಣತಿ ಪ್ರಕಾರ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ನಗರೀಕರಣದ ದೃಷ್ಠಿಯಿಂದ ಕರ್ನಾಟಕವು 10ನೇ ಸ್ಥಾನದಲ್ಲಿತ್ತು. ಇದಾದ ನಂತರದ, ಅಂದರೆ 1991 ರ ಜನಗಣತಿ ಪ್ರಕಾರ ಕರ್ನಾಟಕವು 11ನೇ ಸ್ಥಾನಕ್ಕೆ ಜಾರಿತ್ತು. ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆ ತ್ವರಿತವಾಗಿಯೇ ಇತ್ತು. ಈ ಪ್ರವೃತ್ತಿ 1901 ರಿಂದ 1991ರವರೆವಿಗೂ ಬಲವಾಗಿಯೇ ಇತ್ತು. ಜನಗಣತಿ 1981ರ ಪ್ರಕಾರ ರಾಜ್ಯದಲ್ಲಿ 281 ಸ್ಥಳಗಳನ್ನು ಪಟ್ಟಣಗಳೆಂದು ವರ್ಗೀಕರಿಸಿದ್ದರೆ, 1991 ರ ಜನಗಣತಿಯಲ್ಲಿ ರಾಜ್ಯದ 306 ಸ್ಥಳಗಳನ್ನು ಪಟ್ಟಣಗಳೆಂದು ವರ್ಗೀಕರಿಸಲಾಗಿತ್ತು. ಇದು ಕರ್ನಾಟಕ ರಾಜ್ಯವು ಒಂದೇ ಸಮನೆ ನಗರೀಕರಣಗೊಳ್ಳುತ್ತಿರುವ ಅಂಶವನ್ನು ಸೂಚಿಸುತ್ತದೆ. ಇಡೀ ಭಾರತದಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರ ಪ್ರಮಾಣವು ಅತ್ಯಂತ ಜಾಸ್ತಿ ಇರುವುದು ಕರ್ನಾಟಕ ರಾಜ್ಯದಲ್ಲಿಯೇ. ಜನಗಣತಿ 1991ರ ವರದಿಯಲ್ಲಿ ದಾಖಲಿಸಿರುವಂತೆ ಕರ್ನಾಟಕದಲ್ಲಿ ಜಿಲ್ಲಾವಾರು ನಗರ ಪ್ರದೇಶಗಳ  ಹಂಚಿಕೆ ಈ ರೀತಿ ಇತ್ತು: ಬೆಂಗಳೂರು, 33; ಬೆಂಗಳೂರು ಗ್ರಾಮೀಣ, 9; ಬೆಳಗಾವಿ, 22; ಬಳ್ಳಾರಿ, 12 ; ಬೀದರ್, 5, ವಿಜಯಪುರ, 18 ; ಚಿಕ್ಕಮಗಳೂರು, 10 ; ಚಿತ್ರದುರ್ಗ, 10 ; ದಕ್ಷಿಣ ಕನ್ನಡ, 27 ; ಧಾರವಾಡ, 20 ; ಕಲಬುರಗಿ, 19 ; ಹಾಸನ, 13 ; ಕೊಡಗು, 9 ; ಕೋಲಾರ, 15 ; ಮಂಡ್ಯ, 11 ;ಮೈಸೂರು, 18 ; ರಾಯಚೂರು, 13 ; ಶಿವಮೊಗ್ಗ, 16 ; ತುಮಕೂರು, 12 ; ಮತ್ತು ಉತ್ತರ ಕನ್ನಡ, 14.

 

ನಗರ ಸಮುಚ್ಛಯಗಳು ಮತ್ತು ನಗರಗಳು

1991ರ ಜನಗಣತಿಯಂತೆ, ಕರ್ನಾಟಕ ರಾಜ್ಯದಲ್ಲಿ 22 ನಗರ ಸಮುಚ್ಛಯಗಳಿದ್ದುವು. ಅವುಗಳೆಂದರೆ, ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ದಾವಣಗೆರೆ, ವಿಜಯಪುರ, ಶಿವಮೊಗ್ಗ, ತುಮಕೂರು, ರಾಯಚೂರು, ಬಂಗಾರಪೇಟೆ [ಕೆ.ಜಿ.ಎಫ್.], ಭದ್ರಾವತಿ, ಹೊಸಪೇಟೆ, ಬೀದರ್, ಉಡುಪಿ, ಹಾಸನ, ಚಿತ್ರದುರ್ಗ, ಗಂಗಾವತಿ, ಶಹಬಾದ್, ಸಿರ್ಸಿ, ಅರಸೀಕೆರೆ ಮತ್ತು ವಾಡಿ.

2001ರ ಜನಗಣತಿಯಂತೆ ರಾಜ್ಯದಲ್ಲಿ 270 ಪಟ್ಟಣಗಳಿದ್ದವು ಅವುಗಳಲ್ಲಿ 24 ನಗರ ಸಮುಚ್ಛಯಗಳೂ ಸೇರಿದ್ದವು. ಅವುಗಳೆಂದರೆ ಬೆಂಗಳೂರು, ಮೈಸೂರು, ಮಂಗಳೂರು, ಕಾರವಾರ, ಸಿರ್ಸಿ, ಅಂಕೋಲಾ, ಕುಮಟಾ, ಭಟ್ಕಳ, ಬೆಳಗಾವಿ, ರಾಮದುರ್ಗ, ಅಥಣಿ, ಕಲಬುರಗಿ, ಶಹಬಾದ್, ವಾಡಿ, ಹರಿಹರ, ವಿಜಯಪುರ, ಗಂಗಾವತಿ, ಬಂಗಾರಪೇಟೆ [ಕೆ.ಜಿ.ಎಫ್.], ಬೀದರ್, ಉಡುಪಿ, ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಮತ್ತು ಚಿತ್ರದುರ್ಗ. 8 ನಗರ ಪಾಲಿಕೆಗಳು, 44 ನಗರ ಮುನಿಸಿಪಲ್ ಕೌನ್ಸಿಲುಗಳು, 94 ಪಟ್ಟಣ ಮುನಿಸಿಪಲ್ ಕೌನ್ಸಿಲುಗಳು, 68 ಪಟ್ಟಣ ಪಂಚಾಯತಿಗಳು, ಜೊತೆಗೆ ಜನಗಣತಿ ಪಟ್ಟಣಗಳು, ಅಧಿಸೂಚಿತ ಪ್ರದೇಶ ಸಮಿತಿ ಪಟ್ಟಣಗಳೂ ಸೇರಿದ್ದವು.

ಮನೆಗಳು, ಕುಟುಂಬಗಳು ಮತ್ತು ಸೌಕರ್ಯಗಳು

2001ರ ಜನಗಣತಿಯಂತೆ, ರಾಜ್ಯದಲ್ಲಿ ಒಟ್ಟು 1,38,30,096 ಮನೆಗಳಿದ್ದು, ಅವುಗಳಲ್ಲಿ 89,98,481(ಶೇ.85) ಗ್ರಾಮೀಣ ಪ್ರದೇಶದಲ್ಲಿಯೂ, 48,31,615 (ಶೇ.34.9) ನಗರ ಪ್ರದೇಶದಲ್ಲಿಯೂ ಇದ್ದವು. ಇದೇ ವರದಿಯಂತೆ, ರಾಜ್ಯದಲ್ಲಿ ಒಟ್ಟು 1,02,32,133 ಕುಟುಂಬಗಳಿದ್ದು ಅವುಗಳಲ್ಲಿ 66,75,173 (ಶೇ.65.2) ಗ್ರಾಮೀಣ ಪ್ರದೇಶದಲ್ಲಿಯೂ, 35,56,960 (ಶೇ.34.8) ಪಟ್ಟಣ ಪ್ರದೇಶದಲ್ಲಿಯೂ ಇದ್ದವು. ಗಣತಿ ಮಾಡಿದ ಒಟ್ಟು 1,26,57,293 ಮನೆಗಳಲ್ಲಿ 95,51,113 ವಸತಿ ಮನೆಗಳು, 5,18,186 ವಸತಿ ಮತ್ತು ಇನ್ನಿತರ ಉದ್ದೇಶಕ್ಕೆ ಬಳಕೆಯಾಗುವಂತವು, 7,79,024 ವಾಣಿಜ್ಯ ಮಳಿಗೆ ಮತ್ತು ಕಛೇರಿಗಳಿಗೂ, 1,16,719 ಶಾಲಾ ಕಾಲೇಜುಗಳಿಗೂ, 62,858 ಹೋಟೆಲು, ಲಾಡ್ಜ್ ಮತ್ತು ಅತಿಥಿ ಗೃಹಗಳಿಗೂ, 38,380 ಆಸ್ಪತ್ರೆ ಮತ್ತು ದವಾಖಾನೆಗಳಿಗೂ, 1,80,891 ಕಾರ್ಖಾನೆಗಳು, ಕಾರ್ಯಾಗಾರ ಮತ್ತು ಶೆಡ್ಡುಗಳಿಗೂ, 2,07,332 ಪೂಜಾ ಸ್ಥಳಗಳಿಗೂ ಮತ್ತು 12,02,790 ವಸತಿಯೇತರ ಉದ್ದೇಶಗಳಿಗೂ ಬಳಕೆಯಾಗುವಂತವುಗಳಾಗಿದ್ದವು. ಅಲ್ಲದೆ ಗಣತಿ ಮಾಡಿದ ಮನೆಗಳಲ್ಲಿ 11,72,803 ಖಾಲಿ ಇದ್ದವು.

 

ರಾಜ್ಯದಲ್ಲಿದ್ದ ಒಟ್ಟು 1,02,32,133 ಕುಟುಂಬಗಳಲ್ಲಿ 56,13,007 ಖಾಯಂ, 36,45,185 ಅರೆಖಾಯಂ, 9,71,473 ತಾತ್ಕಾಲಿಕ ಸ್ವರೂಪದವಾಗಿದ್ದರೆ ಉಳಿದ 2,468 ವರ್ಗೀಕರಿಸದಿರುವ ಸ್ವರೂಪಕ್ಕೆ ಸೇರಿದ್ದವು. ಈ ಕುಟುಂಬಗಳಿಗೆ ನೀರು ಸರಬರಾಜನ್ನು ಈ ರೀತಿ ಒದಗಿಸಲಾಗಿತ್ತು: 60,25,364 ಕುಟುಂಬಗಳಿಗೆ ನಲ್ಲಿಗಳಿಂದ, 17,50,387 ಕುಟುಂಬಗಳಿಗೆ ಕೈಪಂಪುಗಳಿಂದ, 8,76,001 ಕುಟುಂಬಗಳಿಗೆ ಕೊಳವೆ ಬಾವಿಗಳಿಂದ, 12,68,913 ಕುಟುಂಬಗಳಿಗೆ ಬಾವಿಗಳಿಂದ, 1,10,689 ಕುಟುಂಬಗಳಿಗೆ ಕೆರೆ ಮತ್ತು ಕೊಳಗಳಿಂದ, 1,11,748 ಕುಟುಂಬಗಳಿಗೆ ನದಿ ಮತ್ತು ಕಾಲುವೆಗಳಿಂದ, 30,640 ಕುಟುಂಬಗಳಿಗೆ ಒರತೆ ಅಥವಾ ಚಿಲುಮೆಗಳಿಂದ ಮತ್ತು 54,491 ಕುಟುಂಬಗಳಿಗೆ ಇತರೆ ಜಲಮೂಲಗಳಿಂದ ನೀರನ್ನು ಒದಗಿಸಲಾಗಿತ್ತು.

 

ಇದೇ ರೀತಿ ಕುಟುಂಬಗಳು ರಾಜ್ಯದಲ್ಲಿ ಹೊಂದಿರುವ ವಿವಿಧ ರೀತಿಯ ಶೌಚಾಲಯ ಸೌಲಭ್ಯಗಳು ಕೆಳಗಿನಂತಿದ್ದವು: 13,68,797 ಕುಟುಂಬಗಳಿಗೆ ಗುಂಡಿ ಪಾಯಖಾನೆ, 19,07,116 ಕುಟುಂಬಗಳಿಗೆ ಜಲ ಶೌಚಾಲಯ, ಹಾಗೂ 5,61,118 ಕುಟುಂಬಗಳು ಇತರೆ ರೀತಿಯ ಪಾಯಖಾನೆಗಳನ್ನು ಬಳಿಸಿದರೆ, 63,95,107 (ಶೇ.62.5) ಕುಟುಂಬಗಳು ಶೌಚಾಲಯ ಸೌಕರ್ಯ ವಂಚಿತವಾಗಿದ್ದು ಬಯಲುಗಳನ್ನೇ ಅವಲಂಬಿಸಿದ್ದವು. ಇದೇ ರೀತಿ ರಾಜ್ಯದಲ್ಲಿ 80,37,052 [ಶೇ.78.5] ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆದಿದ್ದರೆ, 21,26,345 ಕುಟುಂಬಗಳು ಸೀಮೆ ಎಣ್ಣೆಯನ್ನು, 21,989 ಕುಟುಂಬಗಳು ಸೌರಶಕ್ತಿಯನ್ನು, 5,187 ಕುಟುಂಬಗಳು ಇತರೆ ಬಗೆಯ ತೈಲಗಳನ್ನು ಮತ್ತು 7,047 ಕುಟುಂಬಗಳು ಅನ್ಯ ಶಕ್ತಿ ಮೂಲಗಳನ್ನು ದೀಪದ ಬೆಳಕಿಗಾಗಿ ಅವಲಂಬಿಸಿದ್ದವು. ಉಳಿದ 34,513 ಕುಟುಂಬಗಳು ಇಂತಹ ಯಾವುದೇ ಬೆಳಕಿನ ಸೌಲಭ್ಯಗಳಿಂದ ವಂಚಿತವಾಗಿದ್ದವು. ಒಳ ಚರಂಡಿ ಮತ್ತು ಸಾರ್ವಜನಿಕ ನೈರ್ಮಲ್ಯ ಕುರಿತಂತೆ ಹೇಳುವುದಾದರೆ 17,66,563 ಕುಟುಂಬಗಳು ಮುಚ್ಚಿದ ಚರಂಡಿ ವ್ಯವಸ್ಥೆಯನ್ನು, 34,75,862 ಕುಟುಂಬಗಳು ತೆರೆದ ಚರಂಡಿ ವ್ಯವಸ್ಥೆಯನ್ನು ಹೊಂದಿದ್ದರೆ, 49,89,708 ಕುಟುಂಬಗಳು ಯಾವುದೇ ರೀತಿಯ ಚರಂಡಿ ವ್ಯವಸ್ಥೆಯನ್ನು ಹೊಂದಿರಲಿಲ್ಲ.

 

ವಲಸೆ

ಒಂದು ನಿರ್ದಿಷ್ಟ ಪ್ರದೇಶದ ಜನಸಂಖ್ಯೆಯ ಗಾತ್ರ ಮತ್ತು ಸ್ವರೂಪವನ್ನು ಮಾರ್ಪಡಿಸುವಲ್ಲಿ ವಲಸೆ ಒಂದು ಮುಖ್ಯವಾದ ಅಂಶವಾಗಿರುತ್ತದೆ. ವಲಸೆಯು ಎರಡು ರೀತಿಯದಾಗಿರುತ್ತದೆ - ತಾತ್ಕಾಲಿಕ ಮತ್ತು ಖಾಯಂ. ತಾತ್ಕಾಲಿಕ ವಲಸೆಯು ಋತುಮಾನವನ್ನು ಆಧರಿಸಿದ್ದು ವರ್ಷದ ನಿರ್ದಿಷ್ಟ ಅವಧಿಗಳಿಗೆ ಮಿತಿಗೊಂಡಿರುತ್ತದೆ. ಸಾಮಾನ್ಯವಾಗಿ ಬಯಲು ಪ್ರದೇಶಗಳಿಂದ ಜನರು ಬಿತ್ತನೆ ಮತ್ತು ಸುಗ್ಗಿಯ ಕಾಲಗಳಲ್ಲಿ ಮಲೆನಾಡು ಜಿಲ್ಲೆಗಳಿಗೆ ವಲಸೆ ಹೋಗಿ, ಆನಂತರ ಅವರ ಮೂಲ ಸ್ಥಳಗಳಿಗೆ ಹಿಂತಿರುಗುವುದೇ ಹೆಚ್ಚು. ಸ್ತ್ರೀಯರ ವಲಸೆ ಬಹುತೇಕ ವೈವಾಹಿಕ ಕಾರಣದಿಂದ ಸಂಭವಿಸುತ್ತದೆ.

ಜನರ ವಲಸೆ ಪ್ರವೃತ್ತಿಗೆ ಶೈಕ್ಷಣಿಕ ಮತ್ತು ಉದ್ಯೋಗದಂತಹ ಅಂಶಗಳೂ ಕಾರಣವಾಗಿರಬಹುದು. 1971 ಮತ್ತು 1981ರ ಜನಗಣತಿ ನಡುವೆ ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದ ವಲಸೆಗಾರರು ಹೆಚ್ಚಾಗಿ ಬಂದಿದ್ದು, ಆ ಸಂಖ್ಯೆಗಳು ಹೀಗಿವೆ: ಆಂಧ್ರ ಪ್ರದೇಶದಿಂದ 62,000; ಕೇರಳದಿಂದ 60,000; ಮಹಾರಾಷ್ಟ್ರದಿಂದ 67,000 ಮತ್ತು ತಮಿಳುನಾಡಿನಿಂದ 1.53 ಲಕ್ಷ. ಭಾರತದ ಇತರೆ ರಾಜ್ಯಗಳಿಂದ ವಲಸೆ ಬಂದವರ ಸಂಖ್ಯೆ 11.88 ಲಕ್ಷವಾಗಿದ್ದರೆ ಏಷಿಯನ್ ದೇಶಗಳಿಂದ 21,394 ಮಂದಿ ಹಾಗು ಏಷಿಯಾ ಖಂಡದ ಹೊರಗಿನಿಂದ 2,859 ಮಂದಿ ವಲಸೆ ಬಂದಿದ್ದರು.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ

ಪರಿಶಿಷ್ಟ ಜಾತಿಗಳೆಂದರೆ, ಭಾರತ ಸಂವಿಧಾನದ 341ನೇ ಅನುಚ್ಛೇದದಂತೆ ಸಾರ್ವಜನಿಕ ಅಧಿಸೂಚನೆಯ ಮೂಲಕ ಘೋಷಿಸಲ್ಪಟ್ಟ ಎಲ್ಲಾ ಜಾತಿಗಳು, ಸಮುದಾಯ ಅಥವಾ ಪಂಗಡಗಳು, ಅಥವಾ ಅವುಗಳಲ್ಲಿ ಇರುವ ಒಳಗುಂಪುಗಳು. ಪರಿಶಿಷ್ಟ  ಪಂಗಡಗಳೆಂದರೆ, ಭಾರತ ಸಂವಿಧಾನದ 342 ನೇ ಅನುಚ್ಛೇದದಂತೆ ಸಾರ್ವಜನಿಕ ಅಧಿಸೂಚನೆಯ ಮೂಲಕ ಘೋಷಿಸಲ್ಪಟ್ಟ ಎಲ್ಲಾ ಬುಡಕಟ್ಟು ಅಥವಾ ಬುಡಕಟ್ಟು ಸಮುದಾಯಗಳು ಮತ್ತು ಅವುಗಳೊಳಗಿನ ಗುಂಪುಗಳು.

ಭಾರತ ಸರ್ಕಾರವು 1976 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆದೇಶಕ್ಕೆ ತಿದ್ದುಪಡಿ ಮಾಡಿ ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವಂತೆ ಒಂದು ಪಟ್ಟಿಯನ್ನು ಪ್ರಕಟಿಸಿದೆ. 2001 ಜನಗಣತಿಯಂತೆ ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳು ಮತ್ತು 49 ಪರಿಶಿಷ್ಟ ಪಂಗಡಗಳು ಇವೆ. ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಹುತೇಕ ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ವಾಸಿಸುತ್ತಾರೆ. 2001ರ ಜನಗಣತಿಯಲ್ಲಿ ದಾಖಲಾಗಿರುವಂತೆ ರಾಜ್ಯದಲ್ಲಿ 85,63,930 (ಶೇ.16.2) ಪರಿಶಿಷ್ಟ ಜಾತಿ ಜನರು [64,17,243 ಜನರು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 21,46,687 ನಗರ ಪ್ರದೇಶಗಳಲ್ಲಿ] ಮತ್ತು 34,63,986 (ಶೇ.6.6) ಪರಿಶಿಷ್ಟ ಪಂಗಡಗಳ ಜನರು [29,34,530 ಜನರು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 5,29,456 ನಗರ ಪ್ರದೇಶಗಳಲ್ಲಿ] ನೆಲೆಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಏಳ್ಗೆಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಇವುಗಳ ಜೊತೆ ಜೊತೆಗೇ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಸಮಾಜದ ದುರ್ಬಲ ವರ್ಗದವರ ಏಳ್ಗೆಗಾಗಿ ಕಾರ್ಯನಿರತವಾಗಿವೆ.

2011ರ ಜನಗಣತಿಯಂತೆ, ರಾಜ್ಯದಲ್ಲಿನ ಪರಿಶಿಷ್ಟ ಜಾತಿಯವರ ಜನಸಂಖ್ಯೆ 1,04,74,992 (ಶೇ.17.15) ಕ್ಕೆ ಏರಿಕೆಯಾಗಿದ್ದು, ಈ ದಶವಾರ್ಷಿಕ ಬೆಳವಣಿಗೆಯ ದರವು ಶೇ. 22.32 ಆಗಿರುತ್ತದೆ. ಕೋಲಾರ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿಗಳ ಸಂಖ್ಯಾ ಪ್ರಮಾಣವು ಶೇ. 30.32ರಷ್ಟಿದ್ದು, ಇದು ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚಿನದಾಗಿದ್ದರೆ, ಶೇ. 25.42ರಷ್ಟಿರುವ ಚಾಮರಾಜನಗರವು ನಂತರದ ಸ್ಥಾನದಲ್ಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳು ಕ್ರಮವಾಗಿ ಶೇ. 7.09 ಹಾಗೂ ಶೇ.6.41ರಷ್ಟು ಜನಸಂಖ್ಯೆಯನ್ನು ದಾಖಲಿಸುವ ಮೂಲಕ, ಇಡೀ ರಾಜ್ಯದಲ್ಲಿಯೇ ಅತಿ ಕಡಿಮೆ ಪರಿಶಿಷ್ಟ ಜಾತಿ ಜನಸಂಖ್ಯಾ ಪ್ರಮಾಣವನ್ನು ಒಳಗೊಂಡಂತಾಗಿವೆ. ರಾಜ್ಯದ 4 ಜಿಲ್ಲೆಗಳಲ್ಲಿ ಶೇ. 10 ರಿಂದ 13ರಷ್ಟು, 13 ಜಿಲ್ಲೆಗಳಲ್ಲಿ ಶೇ.10ರಿಂದ20 ಮತ್ತು ಉಳಿದ 13 ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಜನ ಸಂಖ್ಯೆ ಇರುವುದು ದಾಖಲಾಗಿದೆ.

ರಾಜ್ಯದಲ್ಲಿನ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯು 2001ರಲ್ಲಿ 34,63,98 ಇದ್ದದ್ದು, 2011ರ ಹೊತ್ತಿಗೆ 42,48,987ಕ್ಕೆ ಏರಿಕೆಯಾಗಿರುವುದು ಕಂಡುಬರುತ್ತದೆ. ಈ ಬೆಳವಣಿಗೆಯ ದಶಾಂಶವು ಶೇ. 22.66ಆಗಿರುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಪ್ರಮಾಣವು ಶೇ.6.95 ಆಗುತ್ತದೆ. ಇಡೀ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ (ಶೇ.19.03) ಹಾಗೂ ಮಂಡ್ಯ ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಮಾಣದಲಿ (1.24%) ಪರಿಶಿಷ್ಟ ಪಂಗಡಗಳ ಜನಸಂಖ್ಯೆ ದಾಖಲಾಗಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಶೇ.5, 7ಜಿಲ್ಲೆಗಳಲ್ಲಿ ಶೇ.5 ರಿಂದ 9 ಹಾಗೂ ಉಳಿದ 18 ಜಿಲ್ಲೆಗಳಲ್ಲಿ ಶೇ.10 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಇದ್ದದ್ದು ಕಂಡುಬಂದಿದೆ.

 

ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗಗಳು

ಹಿಂದುಳಿದ ವರ್ಗದ ಜನರ ಕಲ್ಯಾಣಕ್ಕಾಗಿ ಕರ್ನಾಟಕವು ಸುಧಾರಣೆಗಳನ್ನು ಜಾರಿಗೆ ಅತ್ಯಂತ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಮೈಸೂರು ರಾಜಯ ಸಂಸ್ಥಾನದಲ್ಲಿ ಒಡೆಯವರು ಮಿಲ್ಲರ್ ಸಮಿತಿಯನ್ನು 1918 ರಲ್ಲಿಯೇ ರಚಿಸಿದ್ದರು, ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಾಮ್ರಾಜ್ಯದ ಆಡಳಿತಗಾರರಾಗಿದ್ದರು.

ಆರ್ಥಿಕ ಮಾನದಂಡ:

ಶಿಫಾರಸುಗಳು: ಮೀಸಲಾತಿ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮತ್ತು ನಿಜವಾಗಿಯೂ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ನ್ಯಾಯಮೂರ್ತಿ ರೆಡ್ಡಿ ಹಲವಾರು ಪ್ರಮುಖ ಶಿಫಾರಸುಗಳನ್ನು ನೀಡಿದ್ದಾರೆ;

 1. ಉನ್ನತ ಶ್ರೇಣಿಗಳಲ್ಲಿ (ಎ ಅಥವಾ ಬಿ) ಕೆಲಸ ಮಾಡುತ್ತಿರುವ, ವೈದ್ಯರು, ಎಂಜಿನಿಯರ್, ಇತ್ಯಾದಿ ಅರ್ಹ ವೃತ್ತಿಪರರು, ಆದಾಯ ತೆರಿಗೆ ಅಥವಾ ಮಾರಾಟ ತೆರಿಗೆ ಮೌಲ್ಯಮಾಪಕರು ಅಥವಾ ಎಂಟು ಹೆಕ್ಟೇರ್‌ಗಳಷ್ಟು ಮಳೆಯಾಶ್ರಿತ ಒಣ ಭೂಮಿ ಅಥವಾ ಅದರ ಸಮಾನ ಮಾಲೀಕರಾಗಿರುವ ಎಲ್ಲರನ್ನು ಮೀಸಲಾತಿಯಿಂದ ಹೊರಗಿಡುವುದು,;
 2. ತಹಶೀಲ್ದಾರ್ ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಹಿಂದುಳಿದ ವರ್ಗಗದ ಸದಸ್ಯರಿಗೆ  ಮೀಸಲಾತಿ ಪ್ರಯೋಜನಗಳಿಗೆ ಅರ್ಹತೆ.
 3. ಸುಳ್ಳು ಪ್ರಮಾಣಪತ್ರಗಳನ್ನು ಪಡೆಯುವವರೆಲ್ಲರಿಗೂ ಮತ್ತು ವಿತರಿಸುವ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಹಚರರಿಗೆ ಆರು ತಿಂಗಳವರೆಗೆ ಜೈಲುವಾಸದ ಶಿಕ್ಷೆ, ಮತ್ತು ಅಂತಹ ಪ್ರಮಾಣಪತ್ರಗಳ ಮೂಲಕ ಪಡೆದ ಎಲ್ಲಾ ಪ್ರಯೋಜನಗಳನ್ನು ರದ್ದುಗೊಳಿಸುವುದು.
 4. ಮೀಸಲಾತಿ ನಿಯಮದ ಅನ್ವಯವು ಆರಂಭಿಕ ನೇಮಕಾತಿಗೆ ಮಾತ್ರವಲ್ಲದೆ ಮೊದಲ ಹಂತದ ಬಡ್ತಿಗೂ ಅನ್ವಯ;
 5. ಹಿಂದುಳಿದ ವರ್ಗ ಒಳಗೊಂಡಿರುವ ಪ್ರತಿಯೊಂದು ಜಾತಿ/ಸಮುದಾಯಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಮೂಲಕ ಮೀಸಲಾತಿ ಯೋಜನೆಯನ್ನು ಸ್ವಯಂ-ಬದಲಾವಣೆ ಮತ್ತು ಸ್ವಯಂ-ನಿಯಂತ್ರನಕ್ಕೆ ಶಾಶ್ವತ ಸಮಿತಿಯೊಂದನ್ನು ಸ್ಥಾಪಿಸುವುದು.
 6. ಸಾಕ್ಷರತೆ ಮತ್ತು ಬಡತನ ನಿರ್ಮೂಲನೆ, ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣಾ ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗಗಳ ಪ್ರಗತಿಗೆ ಅವಕಾಶಗಳನ್ನು ಸೃಷ್ಟಿಸುವುದು.

 

ವಿಕಲಚೇತನರು

ಸಾಮಾನ್ಯವಾಗಿ ಅಂಗವಿಕಲರು ಎಂದು ಬಳಕೆ ಆಗುತ್ತಿದ್ದ ಪದಕ್ಕೆ ಬದಲಾಗಿ ವಿಕಲ ಚೇತನರು, ವಿಶೇಷ ಚೇತನರು ಎಂಬಿತ್ಯಾದಿ ಅನ್ವರ್ಥ ಪದಗಳನ್ನು ಈಚೆಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ವಿಕಲಚೇತನರ ಜನಗಣತಿಯನ್ನು 1941 ರಿಂದ ನಿಲ್ಲಿಸಲಾಗಿತ್ತು. ಆದರೆ ಅಂತರರಾಷ್ಟ್ರೀಯ ಅಂಗವಿಕಲರ ವರ್ಷವಾಗಿ ಆಚರಿಸಿದ 1981 ರಿಂದ ಇದನ್ನು ಪುನರಾರಂಭಿಸಲಾಯಿತು. ಭಾರತದ ಜನಗಣತಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ 1981 ರ ಜನಗಣತಿ ಸಮಯದಲ್ಲಿ ಹೆಳವರ ಅಂಕಿ – ಅಂಶಗಳನ್ನು ಸಂಗ್ರಹಿಸಲಾಯಿತು. ಈ ಜನಗಣತಿಯಂತೆ ವಿಕಲಚೇತನರಲ್ಲಿ ಮೂಕರು (14,970 ಗ್ರಾಮೀಣರು, 2,643 ನಗರವಾಸಿಗಳು,) ಕುರುಡರು (15,162 ಗ್ರಾಮೀಣರು, 2,944 ನಗರವಾಸಿಗಳು;) ಮತ್ತು ಹೆಳವರು (15,208 ಗ್ರಾಮೀಣರು, 3,803 ನಗರವಾಸಿಗಳು) ಇದ್ದದ್ದು ಕಂಡುಬಂದಿದೆ. ಪ್ರತಿ 10,000 ಗ್ರಾಮೀಣ ಜನಸಂಖ್ಯೆಯಲ್ಲಿ, ಆರು ಮಂದಿ ಸಂಪೂರ್ಣ ಕುರುಡರು, ಆರುಮಂದಿ ಸಂಪೂರ್ಣ ಮೂಕರು, ಮತ್ತು ಆರುಮಂದಿ ಸಂಪೂರ್ಣ ಹೆಳವರಿದ್ದರು; ಇದಕ್ಕನುಗುಣವಾಗಿ ನಗರ ಪ್ರದೇಶಗಳಲ್ಲಿ ಪ್ರತಿ 10,000 ಜನಸಂಖ್ಯೆಗೆ ಇದು ಕ್ರಮವಾಗಿ 3, 4 ಮತ್ತು 3 ಆಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ವಿಕಲಚೇತನರ ಪ್ರಮಾಣವು ನಗರ ಪ್ರದೇಶಗಳಿಗಿಂತ ಹೆಚ್ಚಾಗಿದ್ದು, ಸಾರ್ವಜನಿಕ ಆರೋಗ್ಯ ಸೇವೆ, ನೈರ್ಮಲ್ಯ ವ್ಯವಸ್ಥೆ, ವೈಯಕ್ತಿಕ ಸ್ವಚ್ಛತೆ ಕೊರತೆಗಳು ಹಾಗೂ ಪೌಷ್ಠಿಕ ಆಹಾರದ ಅಲಭ್ಯತೆಯೂ ಈ ವ್ಯತ್ಯಾಸಕ್ಕೆ ಕಾರಣವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ಅನೇಕ ಸ್ವಯಂಸೇವಾ ಸಂಸ್ಥೆಗಳು ಅಂಗವಿಕಲರ ಪುನರ್ವಸತಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ. 2001ರ ಜನಗಣತಿಯಂತೆ ರಾಜ್ಯದಲ್ಲಿದ್ದ ಒಟ್ಟು ವಿಕಲಚೇತನರ ಸಂಖ್ಯೆ 9,40,643 ಆಗಿದ್ದು, ಇದರಲ್ಲಿ 4,40,875 ಕುರುಡರು, 90,717 ಮೂಕರು, 48,861 ಕಿವುಡರು ಮತ್ತು 92,631 ಹೆಳವರು ಇದ್ದರು, 2011ರ ಜನಗಣತಿಯಂತೆ ಕರ್ನಾಟಕದಲ್ಲಿ ಒಟ್ಟು ವಿಕಲಚೇತನರ 13,24,205 (ಪುರುಷರು 726521, ಮಹಿಳೆಯರು 597684)

 

ಭಾಷೆಗಳು

ಭಾರತ ಸಂವಿಧಾನದಲ್ಲಿ ದೇಶದ ಪ್ರಮುಖ 22 ಭಾಷೆಗಳಿಗೆ ರಾಷ್ಟ್ರೀಯ ಭಾಷೆಗಳೆಂದು ಮಾನ್ಯತೆ ನೀಡಲಾಗಿದೆ. ಅವುಗಳಲ್ಲಿ ಕನ್ನಡವೂ ಒಂದಾಗಿದ್ದು, ಇದು ಕರ್ನಾಟಕದ ಆಡಳಿತ ಭಾಷೆಯಾಗಿಯೂ ಬಳಕೆಯಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷಿಕರ ಸಂಖ್ಯೆ 2001ರ ಗಣತಿಯಂತೆ ಶೇ.65ಕ್ಕಿಂತ ಹೆಚ್ಚಿದ್ದರೂ, ಅದು 1991ರ ಗಣತಿಯಲ್ಲಿ ದಾಖಲಾಗಿದ್ದ ಶೇ. 66ಕ್ಕಿಂತಲೂ ಕಡಿಮೆ ಇದ್ದಿತು-ಎಂಬುದು ಗಮನಾರ್ಹವಾಗುತ್ತದೆ, ಹಾಗೂ ಈ ಇಳಿಕೆಗೆ ಕಾರಣವಾದ ಅಂಶಗಳ ಬಗೆಗೂ ಗಂಭೀರವಾಗಿ ಅಧ್ಯಯನ ನಡೆಸಬೇಕಾಗುತ್ತದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷತೆ ಮತ್ತಿತರ ಕಾರಣಗಳಿಗಾಗಿ ಹೊರ ರಾಜ್ಯಗಳಿಂದ ಬಂದು ನೆಲೆಗೊಂಡ ಅನ್ಯ ಭಾಷಿಕರಿಗೂ ಕರ್ನಾಟಕವು ಆಶ್ರಯ ನೀಡಿದೆ. ಕರ್ನಾಟಕದಲ್ಲಿನ ಇಂಥಾ ಅನ್ಯ ಭಾಷಿಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದು ಕಂಡುಬಂದಿದೆ.

1981ರ ಗಣತಿ ಪ್ರಕಾರ ರಾಜ್ಯದಲ್ಲಿದ್ದ ಕನ್ನಡಿಗರ ಹಾಗೂ ಕೆಲವು ಅನ್ಯ ಭಾಷಿಕರ ಸಂಖ್ಯಾ ಪ್ರಮಾಣವು ಹೀಗಿದ್ದಿತು :ಅಸ್ಸಾಮಿ 157, ಬೆಂಗಾಲಿ 10,226, ಗುಜರಾತಿ 36,390, ಹಿಂದಿ 6,57,561, ಕನ್ನಡ 2,41,99,576, ಕಾಶ್ಮೀರಿ 94, ಕೊಂಕಣಿ 6,40,738, ಮಲಯಾಲಂ 5,90,709, ಮರಾಠಿ 13,91,311, ಒರಿಯಾ 2,118, ಪಂಜಾಬಿ 9,536, ಸಂಸ್ಕೃತ 509, ಸಿಂಧಿ 11,597, ತಮಿಳು 13,85,313, ತೆಲುಗು 29,93,501,ತುಳು 12,17,834, ಉರ್ದು 35,12,831. ಈ ವಿವಿಧ ಭಾಷಿಕರ ಶೇಕಡಾವಾರು ಅಂಶ 1991ರ ಗಣತಿಯಂತೆ ಹೀಗಿದೆ: ಕನ್ನಡ ಭಾಷಿಕರು ಶೇ. 66.22, ಉರ್ದು ಶೇ.9.96, ತೆಲುಗು ಶೇ.7.3, ತಮಿಳು ಶೇ.3.84, ಮರಾಠಿ ಶೇ.3.65, ತುಳು ಶೇ.3.07, ಹಿಂದಿ ಶೇ.1.97, ಮಲಯಾಲಂ ಶೇ.1.68, ಕೊಂಕಣಿ ಶೇ.1.75, ಕೊಡವ ಶೇ.0.21.

 

 

ಧರ್ಮಗಳು

ಕರ್ನಾಟಕವು ಅನೇಕ ಧರ್ಮಗಳ ನೆಲೆವೀಡಾಗಿದೆ. ಎಲ್ಲ ಧರ್ಮಗಳೂ ತಮ್ಮದೇ ವಿಭಿನ್ನ ಎಂಬಂತಹ ನಂಬಿಕೆ, ಪ್ರದಾಯಗಳನ್ನು ನಿರೂಪಿಸಿ, ತಮ್ಮ ಅನುಯಾಯಿಗಳ ಜೀವನ ಕ್ರಮವನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತವೆ. ಅದರ ಹೊರತಾಗಿಯೂ, ಮಾನವ ಸಮಾಜ ಜೀವಿಯಾದುದರಿಂದ, ವಿಭಿನ್ನ ಸಮುದಾಯಗಳ ನಡುವೆ ಪರಸ್ಪರ ಪ್ರಭಾವಗಳಾಗುವುದು, ಅನುಸರಣೆಗಳಾಗುವುದು ಸಹಜವಾದ ಪ್ರಕ್ರಿಯೆಯಾಗಿದೆ. ಅಲ್ಲದೆ, ವ್ಯಕ್ತಿಗತ ನೆಲೆಯಲ್ಲಿ ತನ್ನ ಧರ್ಮದ ತತ್ವಗಳಿಗೆ ಬದ್ಧನಾದರೂ, ಸಾಮಾಜಿಕ ಸಂದರ್ಭದಲ್ಲಿ ದೇಶದ ಸಂವಿಧಾನಕ್ಕೂ ಬದ್ಧನಾಗುವುದು ಭಾರತೀಯ ಸಂದರ್ಭದಲ್ಲಿ ಸಹಜವಾಗಿರುತ್ತದೆ.  ಒಟ್ಟಾರೆ, ಇಂತೆಲ್ಲಾ ಪರಿಸರದಿಂದ ಕರ್ನಾಟಕ ಸಂಸ್ಕೃತಿಯಲ್ಲಿ ಬಹುತ್ವವೂ, ಭ್ರಾತೃತ್ವದಂತಹ ಆದರ್ಶಗಳೂ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ, ಎಲ್ಲ ಧರ್ಮಗಳೂ ಕರ್ನಾಟಕದ ಸಂಸ್ಕೃತಿಯನ್ನು ಉನ್ನತೀಕರಿಸುವಲ್ಲಿ ವೈವಿಧ್ಯಮಯ ಕೊಡುಗೆಗಳನ್ನು ನೀಡುತ್ತಲೇ ಬಂದಿವೆ ಎಂಬುದನ್ನೂ ಮರೆಯುವಂತಿಲ್ಲ.

ಕರ್ನಾಟಕದ ಬಹುತೇಕ ಜನರು ಹಿಂದೂ ಧರ್ಮಾನುಯಾಯಿಗಳು. ರಾಜ್ಯದಲ್ಲಿ ಪ್ರಚಲಿತವಿರುವ ಇನ್ನಿತರ ಧರ್ಮಗಳೆಂದರೆ ಜೈನ, ಬೌದ್ಧ, ಸಿಖ್, ಇಸ್ಲಾಂ ಮತ್ತು ಕ್ರೈಸ್ತ.  1991ರ ಜನಗಣತಿ ಪ್ರಕಾರ ವಿವಿಧ ಧರ್ಮೀಯರ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ಹೀಗಿತ್ತು:  ಬೌದ್ಧರು (ಒಟ್ಟು 73,012, ಶೇ.0.16); ಕ್ರಿಶ್ಚಿಯನ್ನರು (ಒಟ್ಟು 8,59,478, ಶೇ.1.9); ಹಿಂದೂಗಳು (ಒಟ್ಟು 3,84,32,027,ಶೇ85.45); ಜೈನರು (ಒಟ್ಟು 3,26,114,ಶೇ. 0.73), ಮುಸ್ಲಿಮರು (ಒಟ್ಟು 52,34,023,ಶೇ 11.64), ಸಿಖ್ಖರು (ಒಟ್ಟು 10,101, ಶೇ. 0.02), ಬೇರೆ ಧರ್ಮೀಯರು (ಒಟ್ಟು 6,325,ಶೇ. 0.01), ಮತ್ತು ಯಾವುದೇ ನಿಶ್ಚಿತ ಧರ್ಮಕ್ಕೆ ಸೇರಿರುವುದಾಗಿ ಹೇಳಿಲ್ಲದವರು (ಒಟ್ಟು 36,121,ಶೇ, 0.08).

2001ರ ಜನಗಣತಿಯಂತೆ, ರಾಜ್ಯದಲ್ಲಿ ಬೌದ್ಧರು (ಒಟ್ಟು 393300,ಶೇ.0.74); ಕ್ರಿಶ್ಚಿಯನ್ನರು (ಒಟ್ಟು 1009164, ಶೇ.1.90); ಹಿಂದೂಗಳು(ಒಟ್ಟು 44321279, ಶೇ.83.86); ಜೈನರು (ಒಟ್ಟು 412659, ಶೇ.0.78); ಮುಸ್ಲಿಮರು (ಒಟ್ಟು6463127,ಶೇ12.23); ಸಿಖ್ಖರು (ಒಟ್ಟು 15326, ಶೇ 0.02); ಉಳಿದ ಧರ್ಮಗಳ ಜನರು(115460-0.22) ಮತ್ತು ಯಾವುದೇ ನಿಶ್ಚಿತ ಧರ್ಮಕ್ಕೆ ಸೇರಿರುವುದಾಗಿ ಹೇಳಿಲ್ಲದವರು (ಒಟ್ಟು 120247, ಶೇ 0.23).

 

ಜನಪದ ಧರ್ಮ

ಹಿಂದೂ ಅಥವಾ ಬೇರಾವುದೇ ಶಿಷ್ಟ ಧರ್ಮದ ಭಾಗವಾಗಿಯೇ ಜನಪದ ಧರ್ಮವೂ ಇದ್ದಂತೆ ತೋರುವುದಾದರೂ, ಕೆಲವೊಂದು ವಿಶೇಷ ಗುಣ, ಕಾರಣಗಳಿಗಾಗಿ ಜನಪದ ಧರ್ಮವನ್ನು ಪ್ರತ್ಯೇಕವಾಗಿಯೇ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಎಲ್ಲಾ ಶಿಷ್ಟ ಧರ್ಮಗಳ ಮೂಲದಲ್ಲಿ ಇದ್ದದ್ದು ಅಥವಾ, ಇರುವುದು ಜನಪದ ಧರ್ಮವೇ ಎಂಬುದು ಎಲ್ಲರೂ ಒಪ್ಪಿದ ಸಂಗತಿಯೇ ಆಗಿದೆ. ಜನಪದ ಎಂದರೆ, ಸ್ಥೂಲವಾದ ಅರ್ಥದಲ್ಲಿ ಯಾವುದಾದರೂ ಸಮುದಾಯ ಎಂದಾಗುತ್ತದೆ. ಜಾನಪದ ಎಂದರೆ,  ಆ ಜನಪದರ ಜೀವನ ಕ್ರಮ, ಅವರ ಸಾಂಪ್ರದಾಯಿಕ ಜ್ಞಾನ ಎಂಬ ಅರ್ಥವಾಗುತ್ತದೆ. ಹೀಗಾಗಿ, ಆದಿವಾಸಿ, ಬುಡಕಟ್ಟು, ಅಲೆಮಾರಿ,ಹಳ್ಳಿ, ಮಹಾನಗರ ಎಲ್ಲೆಡೆಯೂ ಅವರವರದೇ ರೀತಿಯ ಜಾನಪದ ಇರುತ್ತದೆ. ಕೆಲವೊಂದು ಬಾಹ್ಯ ಸಂಪರ್ಕಗಳಿಂದ ಅಲ್ಲಲ್ಲಿನ ಸಾಂಪ್ರದಾಯಿಕ ಜಾನಪದವು ಇತರ ಜೀವನಕ್ರಮಗಳೊಡನೆ ಬೆರೆತಂತೆ ಇದ್ದರೂ, ಅವರವರ ಜನಪದದ ತಾತ್ವಿಕ ದೃಷ್ಟಿಕೋನ ಇತರರಿಗಿಂತ ವಿಭಿನ್ನವಾಗಿಯೇ ಇರುತ್ತದೆ. ಪ್ರಸ್ತುತ, ಒಟ್ಟಾರೆ ನಮ್ಮ ನಾಡಿನ ಗ್ರಾಮೀಣ ಜನಪದರಲ್ಲಿ ಸಾಮಾನ್ಯವಾಗಿ ವ್ಯಕ್ತವಾಗುವ ಜನಪದ ಧರ್ಮದ ಕೆಲವು ಲಕ್ಷಣಗಳನ್ನು ಹೀಗೆ ಸಂಕ್ಷಿಪ್ತ ಗೊಳಿಸಬಹುದು:

ಶಿಷ್ಟ ಧರ್ಮವು ಯಾರೋ ಒಬ್ಬರಿಂದ ನಿರೂಪಿತವಾದದ್ದಾಗಿದ್ದರೆ ಹಾಗೂ ಅದಕ್ಕೊಂದು ನಿರ್ದಿಷ್ಟವಾದ ಧರ್ಮಗ್ರಂಥವೂ ಇದ್ದರೆ, ಜನಪದ ಧರ್ಮದ ರೂಪುರೇಷೆಗಳು ಯಾವುದೋ ಕಾಲದಲ್ಲಿ ಯಾರಾರದೋ ಆಲೋಚನೆಗಳನ್ನೆಲ್ಲಾ ಒಳಗೊಂಡು, ಸಮುದಾಯ ಒಪ್ಪಿತವಾಗಿ ಜಾರಿಗೆ ಬಂದು, ವ್ಯವಹರಣೆಯಲ್ಲಿರುತ್ತದೆ. ಜನಪದ ಧರ್ಮವು ಪ್ರಧಾನವಾಗಿ ಒಬ್ಬರಿಂದ ಒಬ್ಬರಿಗೆ, ಬಾಯಿಂದ ಬಾಯಿಗೆ, ಅಂದರೆ, ಮಾತು, ನಡವಳಿಕೆಗಳ ಮೂಲಕವೇ ಪ್ರಸರಣಗೊಳ್ಳುವುದರಿಂದ, ಅದಕ್ಕೊಂದು ನಿಗದಿತವಾದ ನಿಯಮಾವಳಿಯ ಗ್ರಂಥ ಇರುವುದಿಲ್ಲ. ಇದರಿಂದಾಗಿ, ಅದಕ್ಕೊಂದು ಕಾಲದ ಪರಿಮಿತಿಯೂ ಇರುವುದಿಲ್ಲ. ಕುಲ ಅಥವಾ ಸಮುದಾಯದ ಹಿರಿಯನ ಮಾರ್ಗದರ್ಶನದಲ್ಲಿ ಉಳಿದವರು ತಮ್ಮ ಸಾಂಪ್ರದಾಯಿಕ ಬದುಕನ್ನು ನಿರ್ವಹಿಸುತ್ತಾರಾದರೂ, ಅದು ಪ್ರದೇಶ, ಕಾಲ, ವ್ಯಕ್ತಿಯ ಚಿಂತನೆಗೆ ತಕ್ಕಂತೆ ಬದಲಾವಣೆಗೂ ಒಳಗಾಗುತ್ತಿರುತ್ತದೆ. ಶಿಷ್ಟ ಧರ್ಮವು ಬಹುಮಟ್ಟಿಗೆ ಏಕದೇವೋಪಾಸನೆಯನ್ನು ಒಪ್ಪಿಕೊಂಡದ್ದಾಗಿದ್ದರೆ, ಜನಪದ ಧರ್ಮವು ಬಹು ದೇವತಾರಾದನೆಯನ್ನು, ನಿಸರ್ಗಾರಾಧನೆಯನ್ನು ಅನುಸರಿಸುತ್ತದೆ. ಇದರ ಫಲವಾಗಿ, ನಿಸರ್ಗದಲ್ಲಿನ ನೆಲ, ನೀರು, ಮರ, ಬಂಡೆ, ಹುತ್ತ, ದನ, ಎಮ್ಮೆ, ಸೂರ್ಯ, ಚಂದ್ರ.. ಹೀಗೆ ಎಲ್ಲವೂ ದೇವರ ಪ್ರತೀಕ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಇದೆ ಎಂದು ನಂಬಲಾದ ಅತಿಮಾನುಷ ಶಕ್ತಿ ಒಳ್ಳೆಯದು ಎಂದಾದರೆ, ದೇವರು ಎಂದೂ, ಕೆಡುಕಿನದು ಎಂದಾದರೆ, ದೆವ್ವ ಎಂದೂ ಕರೆಸಿಕೊಳ್ಳುತ್ತದೆ. ಹಾಗೂ, ಅದಕ್ಕೆ ತಕ್ಕಂತೆ ಬಲಿ ಪೂಜೆ ಪಡೆಯುತ್ತದೆ. ಜನಪದರ ಲೋಕದೃಷ್ಟಿಯೂ ಶಿಷ್ಟರಿಗಿಂತ ವಿಭಿನ್ನವಾಗಿರುತ್ತದೆ. ನಾಲಗೆ ಕೆಳಕ್ಕೆ ಇಳಿದರೆ ನರಕ ಎಂಬುದು ಆಹಾರ ಶ್ರೇಷ್ಟತೆ ಬಗೆಗಿನ ವಿಮರ್ಶೆಯಾದರೆ, ಬಿದ್ದ ಕಲ್ಲು ಮಡಿವಾಳಿಯದು; ಎದ್ದ ಕಲ್ಲು ಪೂಜಾರಿಯದು ಎಂಬ ಮಾತು ದೈವದ ಪರಿಕಲ್ಪನೆ ಬಗೆಗಿನ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಉಂಡದ್ದೇ ಉಗಾದಿ; ಮಿಂದದ್ದೇ ದೀವಳಿಗೆ ಎಂಬ ಮಾತು ಹಬ್ಬ, ಆಚರಣೆಗಳಿಗೆ ಜನಪದರು ನೀಡುವ ಅಂತಿಮ ನೆಲೆಯನ್ನು ದಾಖಲಿಸುತ್ತದೆ. ಗಾದೆ ವೇದಕ್ಕೆ ಸಮ ಎಂಬ ಮಾತು ಅನಕ್ಷರಸ್ಥರೆನಿಸಿದ ಗ್ರಾಮೀಣರಲ್ಲಿಯೂ ಇರಬಹುದಾದ ಪ್ರಚಂಡ ತಿಳಿವಳಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಜನಪದರ ಲೋಕಜ್ಞಾನವನ್ನೂ, ಅವರ ಧಾರ್ಮಿಕ ಬದುಕಿನ ಒಳ ನೋಟಗಳನ್ನೂ ಅರಿಯಲು ಅವರಲ್ಲಿನ ಗಾದೆ, ನುಡಿಗಟ್ಟುಗಳು ಉತ್ತಮ ನಿದರ್ಶನಗಳಾಗಿವೆ. 

ಮಾಟ ಮಂತ್ರಗಳೂ ಜನಪದರ ಪ್ರಬಲ ನಂಬಿಕೆಯ ಭಾಗವೇ ಆಗಿರುತ್ತವೆ. ಮಾಸ್ತಿ ಪೂಜೆ, ಭೂತಾರಾಧನೆ, ಅಪ್ರಾಪ್ತ ವಯಸ್ಸಿನಲ್ಲಿ ನಿಧನರಾದವರ ಆತ್ಮಗಳಿಗೆ ಸಂತೃಪ್ತಿ ಸಿಗಲೆಂಬ ನಂಬಿಕೆಯಲ್ಲಿ ಅವುಗಳಿಗೂ ವಿವಾಹ ಕಾರ್ಯ ನೆರವೇರಿಸುವಂತಹ ನಡವಳಿಕೆಗೂ ಜನಪದರಲ್ಲಿ ಪ್ರಾದೇಶಿಕವಾಗಿ ರೂಢಿಯಲ್ಲಿರುತ್ತವೆ. ಇದೆಲ್ಲದರ ಜೊತೆಗೇ, ಬಾಹ್ಯ ಪ್ರಭಾವಗಳಿಂದ ಹರಿದುಬರುವ ಶಿಷ್ಟ ಧರ್ಮಗಳ ಹಾಗೂ ಜಾಗತಿಕ ಬದುಕಿನ ಅನೇಕ ರೀತಿ ನೀತಿಗಳು ಜನಪದ ಧರ್ಮದಲ್ಲಿ ಮಿಳಿತವಾಗುತ್ತಿರುತ್ತದೆ. ಇದರಿಂದಾಗಿ, ಮಾನವನು ಎಷ್ಟೆ ವಿದ್ಯಾವಂತ, ನಾಗರಿಕನಾಗಿ ಬೆಳೆದಿದ್ದರೂ, ಅವನ ಧಾರ್ಮಿಕ ಬದುಕಿನಲ್ಲಿ, ಮನಸ್ಸಿನಲ್ಲಿ ಅದೆಷ್ಟೆ ಆದಿಕಾಲದಿಂದ ಬಂದ ನಂಬಿಕೆ, ನಡಾವಳಿಗಳು ಇದ್ದೇ ಇರುತ್ತವೆ; ಆಧುನಿಕ ಮಾನವನಲ್ಲಿ ಆದಿಮ ಮಾನವ ಕಂಡೂ ಕಾಣದಂತೆ ಬದುಕಿರುತ್ತಾನೆ.

 

ಹಿಂದೂ ಧರ್ಮ

ಹಿಂದೂ ಎಂಬುದು ಇತರ ಪ್ರಸಿದ್ಧ ಧರ್ಮಗಳಂತೆ ಒಂದು ಧರ್ಮ ಎಂಬುದಕ್ಕೆ ಬದಲು, ಅದೊಂದು ಜೀವನ ಕ್ರಮ ಎಂದು  ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತಿದೆ. ಹಿಂದೂ ಧರ್ಮವು ತನ್ನಲ್ಲಿ ವೈವಿಧ್ಯದ ಪಂಥಗಳನ್ನೂ ನಂಬಿಕೆಗಳನ್ನೂ ಒಳಗೊಂಡಿದ್ದಾಗಿದೆ. ಹೀಗಾಗಿ, ಇಲ್ಲಿ ಅನೇಕ ಮತಾಚರಣೆಗಳು, ಚಿಂತನಾಕ್ರಮಗಳು ಕಂಡುಬರುತ್ತವೆ. ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದ್ಯರಲ್ಲದ ಎಲ್ಲಾ ಭಾರತೀಯರನ್ನೂ ಹಿಂದೂ ಎಂದು ಪರಿಗಣಿಸಲಾಗಿದೆ. ಹಿಂದೂ ನ್ಯಾಯಶಾಸ್ತ್ರದ ಪ್ರಕಾರ ಹಿಂದೂ ಧರ್ಮದಲ್ಲಿ ಸನಾತನಿಗಳು ಅಥವಾ, ವೈದಿಕ ಸಂಪ್ರದಾಯದವರು, ಸಿಖ್ಖರು, ಜೈನರು,ಬೌದ್ಧರು, ವೀರಶೈವರು, ಆರ್ಯ ಸಮಾಜದವರು, ಬ್ರಹ್ಮ ಸಮಾಜದವರು ಮತ್ತು ಭೂತಾರಾಧನೆಯೇ ಮುಂತಾದ ಸರ್ವಚೇತನವಾದಿಗಳೂ ಸೇರುತ್ತಾರೆ. ಇವರಲ್ಲದೆ, ಚಾರ್ವಾಕರು ಅಥವಾ, ನಿರೀಶ್ವರವಾದಿಗಳೂ ಇದ್ದು, ಇವರು ಮೋಕ್ಷ, ಸ್ವರ್ಗ ಇತ್ಯಾದಿಗಳನ್ನು ನಿರ್ಲಕ್ಷಿಸುವ ಚಿಂತನಾ ಕ್ರಮದವರಾಗಿದ್ದು, ಲೌಕಿಕ ಬದುಕಿಗೇ ಹೆಚ್ಚಿನ ಆದ್ಯತೆ ನೀಡುವವರಾಗಿದ್ದಾರೆ. ಸಾಂದರ್ಭಿಕವಾಗಿ ತಮ್ಮನ್ನು ಸನಾತನಿಗಳೆಂದು ಗುರುತಿಸಿಕೊಳ್ಳುವ ವೈದಿಕ ಬ್ರಾಹ್ಮಣರು ವೇದ ಕಾಲೀನ ಹೋಮ ಹವನಾದಿ ಆಚರಣೆಗಳಿಗೆ ಆದ್ಯತೆ ನೀಡುತ್ತಾರೆ. ಇಂದ್ರಾದಿ ದೇವತೆಗಳು ವೇದಕಾಲದಲ್ಲಿ ಪ್ರಧಾನವಾಗಿ ಆರಾಧನೆಗೊಳ್ಳುತ್ತಿದ್ದರು. ಹಿಂದೂಗಳಲ್ಲಿ ಬಹು ದೊಡ್ಡ ಗುಂಪಾದ ದ್ರಾವಿಡರು ಮೂಲತಃ ಪೂಜನ ಪದ್ಧತಿಯವರಾಗಿದ್ದರೆಂದೂ, ಆರಾಧನಾ ಪ್ರಕ್ರಿಯೆಯಲ್ಲಿ ಹೂವು ಇಟ್ಟು ಮಾಡುವ ಕ್ರಮವೇ ಪೂಜೆ ( ಪೂ+ಚೆಯ್) ಎನ್ನಿಸಿಕೊಂಡಿದೆ ಎಂದೂ, ಅದು ಅಚ್ಚ ದ್ರಾವಿಡ ಭಾಷೆಯ ಪದವೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಗಳಲ್ಲಿ ಅನೇಕ ಬಗೆಯ ಮತೀಯ ಆಚರಣೆಗಳಿವೆ. ಇತರ ಧರ್ಮಗಳ ಹಾಗೂ ಆಧುನಿಕ ಪ್ರಭಾವಗಳಿಂದ ಬಹುಮಟ್ಟಿಗೆ ಎಲ್ಲಾ ಸಮುದಾಯಗಳಲ್ಲಿನ ಪಾರಂಪರಿಕ ಸಂಪ್ರದಾಯ-ಆಚರಣೆಗಳಲ್ಲಿ ಅನೇಕ ಬದಲಾವಣೆಗಳು, ವೈರುಧ್ಯಗಳು ಕಾಣಬರುತ್ತಿರುವುದು ಅಧ್ಯಯನ ಯೋಗ್ಯ ಸಂಗತಿಗಳಾಗಿವೆ. ದಕ್ಷಿಣ ಭಾರತೀಯರದ್ದಾದ ಪೂಜೆ ಪದ್ಧತಿಯು ಉತ್ತರ ಭಾರತೀಯರಲ್ಲಿಯೂ ವ್ಯಾಪಕವಾಗಿ ಪ್ರಚಾರಕ್ಕೆ ಬಂದಿದೆ. ವೇದಕಾಲೀನ ವೈದಿಕರ ಬದುಕಿನ ಭಾಗವಾಗಿದ್ದ ಯಜ್ಞ-ಯಾಗ, ಹೋಮ-ಹವನಾದಿಗಳು ಇಂದು ಇತರ ಹಿಂದೂಗಳಿಗೂ ಪರಿಚಿತವಾಗಿವೆ. ಉತ್ತರ ಭಾರತೀಯರಲ್ಲಿ ರೂಢಿಯಾದ ಕೆಲವು ವಿವಾಹ ಕ್ರಮಗಳು ದಕ್ಷಿಣ ಭಾರತೀಯ ಕೆಲವು ಹಿಂದೂ ಸಮುದಾಯಗಳಲ್ಲಿಯೂ ಈಚೆಗೆ ಸಾಮಾನ್ಯವೆಂಬಂತೆ ಅನುಸರಣೆಯಾಗುತ್ತಿವೆ.

 

ಗೋಕರ್ಣವು ಅತ್ಯಂತ ಪುರಾತನವಾದ ಪ್ರಮುಖ ಶೈವ ಕೇಂದ್ರವಾಗಿದೆ. ಭಾರತದ ಅತ್ಯಂತ ಪ್ರಾಚೀನ ಶೈವ ದೇವಾಲಯಗಳಲ್ಲಿ ತಾಳಗುಂದದ ಪ್ರಣವೇಶ್ವರವೂ ಒಂದಾಗಿದೆ. ಆದಿ ಶಂಕರಾಚಾರ್ಯ (ಕ್ರಿ.ಶ. ಸು. 788-820)ರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರಲ್ಲದೆ ಶೃಂಗೇರಿಯಲ್ಲಿ ಅದ್ವೈತ ಪೀಠವನ್ನೂ ಸ್ಥಾಪಿಸಿದರೆನ್ನಲಾಗಿದೆ. ಇದು ಅವರಿಂದ ದೇಶದಲ್ಲಿ ಸ್ಥಾಪನೆಗೊಂಡ ನಾಲ್ಕು ಮಠಗಳಲ್ಲಿ ಒಂದು. ಅವರು ಅದ್ವೈತ ಸಿದ್ಧಾಂತವನ್ನು ಬೋಧಿಸಿದರು. ಅದರ ಪ್ರಕಾರ ಬ್ರಹ್ಮ ಅಥವಾ ಪರಮಾತ್ಮ ಮಾತ್ರವೇ ಸತ್ಯವಾಗಿದ್ದು, ಜಗತ್ತು ಕೇವಲ ಮಾಯೆ ಅಥವಾ ಭ್ರಾಂತಿಕಾರಕವಾದದ್ದಾಗಿದೆ. ಶಿವ, ವಿಷ್ಣು, ಶಕ್ತಿ, ಕಾರ್ತಿಕೇಯ, ಗಣಪತಿ ಮತ್ತು ಸೂರ್ಯ ಈ ಆರು ದೇವತೆಗಳಲ್ಲಿ ಯಾರನ್ನಾದರೂ ಪೂಜೆ ಮಾಡಬಹುದು. ಈ ಪಂಥಕ್ಕೆ ಸೇರಿದ ಶೃಂಗೇರಿ ಪೀಠ ಮಾತ್ರವಲ್ಲದೆ ಕೂಡಲಿ, ಶಿವಗಂಗಾ, ಆವನಿ ಮತ್ತು ಸಂಕೇಶ್ವರ ಮಠಗಳು ಕಾಲಾನಂತರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದವು. ಕರ್ನಾಟಕದಲ್ಲಿ ಆದಿಶಂಕರರ ಅದ್ವೈತ ಸಿದ್ಧಾಂತವನ್ನು ಬಡಗ ನಾಡು, ಮುಲುಕುನಾಡು, ಬಬ್ಬೂರಕಮ್ಮೆ, ಕೋಟ, ಕರಾಡೆ, ಹೊಯ್ಸಳ ಕರ್ನಾಟಕ, ಉಲುಚುಕಮ್ಮೆ ಮತ್ತು ಚಿತ್ಪಾವನ-ಎಂಬ ಬ್ರಾಹ್ಮಣ ಪಂಗಡ ಅಥವಾ ಶಾಖೆಗಳು ಅನುಸರಿಸುತ್ತಿವೆ.

ವೀರಶೈವ ಧರ್ಮ

ಪ್ರಾಚೀನ ಶೈವಮತದ ಒಂದು ವಿಕಸಿತ ಉಪಶಾಖೆಯೇ ವೀರಶೈವ ಧರ್ಮ ಎನ್ನಲಾಗಿದೆ. ಇದನ್ನು ಕಲ್ಯಾಣದಲ್ಲಿ ಆಳುತ್ತಿದ್ದ ಕಳಚೂರಿ ಬಿಜ್ಜಳನ ಭಂಡಾರಿಯಾಗಿದ್ದ ಬಸವಣ್ಣ (ಕ್ರಿ.ಶ.ಸುಮಾರು 1131-1167) ಜನಪ್ರಿಯಗೊಳಿಸಿದ್ದೆಂದು ಹೇಳಲಾಗುತ್ತದೆ. ಬಸವಣ್ಣ ಸೇರಿದಂತೆ, ಅವರ ಸಮಕಾಲೀನ ವೀರಶೈವ ಶರಣರು ವಚನ ರಚನೆಗಳ ಮೂಲಕ ಕನ್ನಡ ಭಾಷೆಯಲ್ಲಿ ತಮ್ಮ ತಾತ್ವಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ಬೋಧಿಸಿದ್ದೊಂದು ವಿಶಿಷ್ಟ. ಲಿಂಗ ಪೂಜೆಯ ಮಹತ್ವವನ್ನು ಸಾರುವುದರ ಜೊತೆ ಜೊತೆಗೆ ನೀತಿಬದ್ಧ ಜೀವನ ನಡೆಸಬೇಕೆಂದೂ ಮತ್ತು ಸಾಮಾಜಿಕ ಪಿಡುಗುಗಳಾದ ಜಾತಿ-ಬೇಧ, ಅಸ್ಪೃಶ್ಯತೆಗಳನ್ನು, ಮೌಢ್ಯಾಚರಣೆಗಳನ್ನು ತ್ಯಜಿಸಬೇಕೆಂದೂ ಜನರಿಗೆ ಒತ್ತಿ ಹೇಳಿದರು. ‘ಕಾಯಕವೇ ಕೈಲಾಸ ಎಂದು ಘೋಷಿಸುವ ಮೂಲಕ ದುಡಿಮೆಯ ಮಹತ್ವವನ್ನು ಜನರು ಅರಿತುಕೊಳ್ಳುವಂತೆ ಮಾಡಿದರು. ಬಸವಣ್ಣನಿಗಿಂತ ಸ್ವಲ್ಪ ಮೊದಲೇ ಆಗಿ ಹೋಗಿದ್ದ ಶಿವಶರಣರಾದ ಜೇಡರ ದಾಸಿಮಯ್ಯ ಮತ್ತು ಏಕಾಂತದ ರಾಮಯ್ಯ, ಬಸವೇಶ್ವರರ ಸಮಕಾಲೀನರಾಗಿದ್ದ ಅಲ್ಲಮ ಪ್ರಭು, ಚನ್ನಬಸವಣ್ಣ, ಸಿದ್ದರಾಮ, ಮಡಿವಾಳ ಮಾಚಯ್ಯ (ಓರ್ವ ಅಗಸ), ಕಕ್ಕಯ್ಯ (ಓರ್ವ ಮೋಚಿ), ಹಡಪದ ಅಪ್ಪಣ್ಣ (ಓರ್ವ ಕ್ಷೌರಿಕ) ಮತ್ತು ಶಿವ ಶರಣೆಯರಾದ ಅಕ್ಕಮಹಾದೇವಿ, ಅಕ್ಕನಾಗಮ್ಮ, ನೀಲಾಂಬಿಕಾ, ಮುಕ್ತಾಯಕ್ಕ ಮುಂತಾದವರು ವಚನಗಳನ್ನು ರಚಿಸಿ ಹೇಳುವ ಮೂಲಕ ವೀರಶೈವ ದರ್ಶನವನ್ನು ಜನಪ್ರಿಯಗೊಳಿಸಿದರು. ಇದರಿಂದಾಗಿ ಕರ್ನಾಟಕದಲ್ಲಿ ವೀರಶೈವರು ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಮುಖ್ಯವಾಗಿ ಇವರು ದೇಹದ ಮೇಲೆ ಧರಿಸುವ ಇಂಲಿಂಗದಿಂದಾಗಿ ಗುರುತಿಸಲ್ಪಡುತ್ತಾರೆ. ಇವರಲ್ಲಿ ಮೊದಲಿನಿಂದಲೂ ರೂಢಿಯಲ್ಲಿರುವ ದಾಸೋಹದ ಆಚರಣೆ ಅನೇಕ ಉಚಿತ ವಿದ್ಯಾರ್ಥಿನಿಲಯ ಮತ್ತು ಭೋಜನ ಶಾಲೆಗಳನ್ನು ವೀರಶೈವ ಮಠಗಳು ತೆರೆಯಲು ಮತ್ತು ಈ ಮೂಲಕ ವಿದ್ಯಾ ಪ್ರಸಾರ ಮಾಡಲು ಪ್ರೇರಣೆ ಒದಗಿಸಿವೆ. ರಾಜ್ಯದಲ್ಲಿ ವೀರಶೈವ ಮಠಗಳು ಈಗಲೂ ವಿದ್ಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.

 

ಕಲ್ಯಾಣ ಕ್ರಾಂತಿಯ ಪರಿಣಾಮವಾಗಿ, ಕಲ್ಯಾಣದಿಂದ ಚದುರಿ ಹೋದ ಕೆಲವು ಶಿವಶರಣರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನೆಲೆ ನಿಂತು, ಅಲ್ಲಿ ತಮ್ಮ ಚಿಂತನೆಗಳನ್ನು ಪ್ರಚುರಪಡಿಸಿದರು. ಹೀಗೆ, ಅವರು ನೆಲೆ ನಿಂತ ಸ್ಥಳಗಳಲ್ಲಿ, ಅವರ ಗದ್ದುಗೆಗಳು ಅಥವಾ ಅವರ ಹೆಸರಿನ ಮಠಗಳು ಸ್ಥಾಪನೆಯಾಗಿವೆ. ಉಳವಿ, ಕೊಡೇಕಲ್ಲು ಅಂತಹ ಕೆಲವು ಸ್ಥಳಗಳಾಗಿವೆ. ಕೊಳ್ಳೇಗಾಲ ತಾಲೂಕಿನ ಮಲೆಮಾದೇಶ್ವರ ಹಾಗೂ ಮಂಟೇಸ್ವಾಮಿ ಅವರ ಆರಾಧನಾ ಸ್ಥಳಗಳು ಮೈಸೂರು ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾಗಿವೆ.

ವೈಷ್ಣವ ಪಂಥ

ಕರ್ನಾಟಕದ ಮತ್ತೊಂದು ಪ್ರಾಚೀನ ಧಾರ್ಮಿಕ ಪಂಥವೆಂದರೆ ವೈಷ್ಣವರದು. ಕೆಲವು ಮುಂಚಿನ ಗಂಗ ದೊರೆಗಳು ವೈಷ್ಣವರಾಗಿದ್ದರೆನ್ನಲಾಗಿದೆ. ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಜನಿಸಿದ ರಾಮಾನುಜಾಚಾರ್ಯರು (ಕ್ರಿ.ಶ.1017-1137), ಹನ್ನೆರಡನೇ ಶತಮಾನದ ಪ್ರಾರಂಭದಲ್ಲಿ ಕರ್ನಾಟಕಕ್ಕೆ ಬಂದರೆನ್ನಲಾಗಿದೆ. ಅವರ ಮಾತಾಪಿತೃಗಳೆಂದರೆ ಭೂಮಿ ಪಿರತ್ತಿ (ಕಾಂತಿಮತಿ) ಮತ್ತು ಕೇಶವ ಪೆರುಮಾಳ. ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಸಾರುವ ಶ್ರೀವೈಷ್ಣವ ಧರ್ಮವನ್ನು ಬೋಧಿಸಿದರು. ಪತ್ನಿಯಾದ ಶ್ರೀಲಕ್ಷ್ಮೀ ಸಮೇತನಾದ ವಿಷ್ಣುವೇ ಪರಮಾತ್ಮನು. ಲಕ್ಷ್ಮಿಯು ಭಗವಂತ ಮತ್ತು ಮಾನವರ ನಡುವಿನ ಮಧ್ಯಸ್ಥಗಾರಳು. ಹೀಗಾಗಿ, ಈ ಪಂಥವನ್ನು ಶ್ರೀವೈಷ್ಣವ ಎಂದು ಕರೆಯಲಾಗುತ್ತದೆ. ರಾಮಾನುಜರು ತಮ್ಮ ಬೋಧನೆಗಳನ್ನು ಸರ್ವ ಜನರಿಗೂ ತಿಳಿಯಪಡಿಸಲೆತ್ನಿಸಿದರು; ಅಸ್ಪೃಶ್ಯರೆನಿಸಿಕೊಂಡಿದ್ದ ವರ್ಗದವರಿಗೂ ಕೆಲವು ನಿರ್ದಿಷ್ಟ ದಿನಗಳಂದು ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಒಂದು ಕ್ರಾಂತಿಕಾರಕ ಹೆಜ್ಜೆಯನ್ನೇ ಇರಿಸಿದರು. ಆ ಕಾಲದಲ್ಲಿ ಅನೇಕ ಶ್ರೇಷ್ಠ ದರ್ಜೆಯ ಶ್ರೀವೈಷ್ಣವ ದೇವಾಲಯಗಳನ್ನು ನಿರ್ಮಿಸಲಾಯಿತು. ಬೇಲೂರಿನಲ್ಲಿರುವ ಜಗದ್ವಿಖ್ಯಾತ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವೂ ಅವುಗಳಲ್ಲೊಂದು. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಸ್ವಾಮಿಯ ಹೆಸರಾಂತ ದೇವಾಲಯವಿದ್ದರೆ, ಮೈಸೂರು ನಗರದಲ್ಲಿ ಶ್ರೀವೈಷ್ಣವ ಪಂಥದವರ ಪರಕಾಲ ಮಠವಿದೆ.

ರಾಮಾನುಜಾಚಾರ್ಯರ ತರುವಾಯದ ಮತ್ತೋರ್ವ ಆಚಾರ್ಯರೇ ಮಧ್ವರು (ಕ್ರಿ.ಶ. 1200-1280). ಉಡುಪಿ ಬಳಿ ಇರುವ ಪಾಜಕ ಕ್ಷೇತ್ರದಲ್ಲಿ ಜನಿಸಿದ ಇವರು ದ್ವೈತ ದರ್ಶನವನ್ನು ಬೋಧಿಸುವ ಮೂಲಕ ಶ್ರೀಹರಿಯ ಪಾರಮ್ಯವನ್ನು ಎತ್ತಿಹಿಡಿದರು. ಮಧ್ವಾಚಾರ್ಯ ಬೋಧಿಸಿದ ದ್ವೈತ ಸಿದ್ಧಾಂತದ ಪ್ರಚಾರ ಮಾಧ್ಯಮವಾಗಿ ಹರಿದಾಸ ಸಾಹಿತ್ಯ ಹುಟ್ಟಿತೆನ್ನಲಾಗಿದೆ.

ರಾಮಾನುಜ ಮತ್ತು ಮಧ್ವರ ಬೋಧನೆಗಳು ಭಕ್ತಿ ಮಾರ್ಗಕ್ಕೆ ನೀಡಿದ ಪ್ರಾಶಸ್ತ್ಯದಿಂದಾಗಿ ಉತ್ತರ ಭಾರತದಲ್ಲಿಯೂ ಭಕ್ತಿ ಚಳವಳಿಯು ಜನಪ್ರಿಯವಾಗಲು ನೆರವಾದವು. ಇದರ ಪರಿಣಾಮವಾಗಿಯೇ ಪೂಜೆ ಪದ್ಧತಿಯು ಉತ್ತರ ಭಾರತದವರಿಗೆ ಪರಿಚಯವಾಯಿತು ಎನ್ನಲಾಗಿದೆ. ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು ಆ ಕ್ಷೇತ್ರದ ಅಧಿದೈವ ಶ್ರೀಕೃಷ್ಣ  ಮಠದ ಪೂಜಾ ಕೈಂಕರ್ಯಗಳನ್ನು ಪರ್ಯಾಯ ವ್ಯವಸ್ಥೆಯ ಪ್ರಕಾರ ನಿರ್ವಹಿಸಿಕೊಂಡು ಬರುತ್ತಿವೆ. ದಾಸಪರಂಪರೆಯಲ್ಲಿ ಪ್ರಮುಖರಾದ ಕನಕದಾಸ, ಶ್ರೀಕೃಷ್ಣನ ಭಕ್ತಿಯ ಕಾರಣವಾಗಿ ಉಡುಪಿಗೆ ಭೇಟಿಕೊಟ್ಟಿದ್ದರ ಪ್ರತೀಕವಾಗಿ ಕೃಷ್ಣ ಮಠದ ಬಳಿ ಆತನ ವಿಗ್ರಹವನ್ನು ಇರಿಸಲಾಗಿದೆ. ಮಧ್ವ ಸಂಪ್ರದಾಯದ ಮತ್ತೆರಡು ಮುಖ್ಯವಾದ ಮಠಗಳೆಂದರೆ ಹೊಸಪೇಟೆಯ ಉತ್ತರಾದಿ ಮಠ ಮತ್ತು ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ರಾಯರ ಬೃಂದಾವನ.

 

ಭಕ್ತಿ ಚಳುವಳಿ

ಭಕ್ತಿ ಎಂಬುದು ಸಂಸ್ಕೃತದ ಭಜ್ ಎಂಬ ಧಾತುವಿನಿಂದ ರೂಪುಗೊಂಡ ಶಬ್ದವಾಗಿದೆ. ತನ್ನ ನಂಬಿಕೆಯ ದೇವರನ್ನು ಅಥವಾ, ಶಕ್ತಿಯನ್ನುಆರಾಧಿಸುವವನು, ಪೂಜಿಸುವವನು, ಸೇವೆ ಮಾಡುವವನು , ಶ್ರದ್ಧೆ ಇಟ್ಟವನು ಭಕ್ತಎನ್ನಿಸಿಕೊಳ್ಳುತ್ತಾನೆ. ಭಗವದ್ಗೀತಾ, ಭಾಗವತ, ಭಕ್ತಿಸೂತ್ರಗಳು, ಧಾರ್ಮಿಕ ಬೋಧನೆಗಳು, ಸಂತರು, ದಾಸರು, ಜನಸಾಮಾನ್ಯರಲ್ಲಿನ ಭಜನೆ ಪದ, ಸ್ತುತಿ ಗೀತೆ, ಕೆಲವೊಂದು ಕಾವ್ಯ-ಪುರಾಣಗಳು ಮೊದಲಾದುವೆಲ್ಲಾ ಭಕ್ತಿ ಪಂಥದ-ಚಳುವಳಿಯ ಭಾಗವಾಗಿ ಹುಟ್ಟಿಕೊಂಡ ಸಾಹಿತ್ಯ ಪ್ರಕಾರವಾಗಿದೆ. ನಾಡಿನ ಬೇರೆ ಪ್ರದೇಶ ಹಾಗೂ ಸಮುದಾಯಗಳಲ್ಲಿ ಆಚರಣೆಯಲ್ಲಿರುವ ಪಟಾ ಕುಣಿತ, ಕಂಸಾಳೆ, ಬಯಲಾಟ, ಗೊಂಬೆಯಾಟ ನಾಗಮಂಡಲ, ತುಳಸಿ ಪೂಜೆಯ ಹಾಡ್ಗುಣಿತ, ಭಾಗವಂತಿಕೆ ಪದ, ಪಂಢರಿ ಭಜನೆ, ಕರ್ಬಲ ಹಾಡು.., ಮೊದಲಾದ ಅನೇಕ ಬಗೆಯ ಹಾಡು ಹಾಗೂ ಕುಣಿತಗಳು ಭಕ್ತಿ ಚಳುವಳಿಯ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಜನಪದ ಪ್ರದರ್ಶನ ಕಲಾ ಪ್ರಕಾರಗಳಾಗಿವೆ ಎಂಬುದನ್ನು ವಿಶೇಷವಾಗಿ ಅನುಲಕ್ಷಿಸಿ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ(ಹೆಚ್ಚಿನ ಮಾಹಿತಿಗೆ ಕರ್ನಾಟಕ ಜಾನಪದ ಅಕಾಡಮಿ ಪ್ರಕಟಿಸಿರುವ ಟಿ. ಗೋವಿಂದರಾಜು ಸಂಪಾದಿತ ಜನಪದ ಕುಣಿತದ ಹಾಡುಗಳು ಸಂಕಲನಗಳನ್ನು ಪರಿಶೀಲಿಸಬಹುದು). ದಾಸರು, ಶರಣರು ಸಹ ಭಕ್ತಿ ಚಳವಳಿಯ ಭಾಗವಾಗಿ ದುಡಿದವರಾಗಿದ್ದಾರೆ.

ಭಕ್ತಿ ಪಂಥದಲ್ಲಿ ಶರಣ ಪರಂಪರೆ ಹಾಗೂ ದಾಸ ಪರಂಪರೆಗಳು ಪ್ರಧಾನ ಧಾರೆಗಳಾಗಿ ಬೆಳೆದಿವೆ. ಭಕ್ತಿ ಪಂಥವು ಒಂದು ಚಳುವಳಿ ರೂಪದಲ್ಲಿ ವ್ಯಾಪಕವಾಗಿ ಹರಡಲು, ಜನ ಸಾಮಾನ್ಯರನ್ನೂ ತನ್ನತ್ತ ಸೆಳೆದುಕೊಳ್ಳಲು ಈ ಪರಂಪರೆಗಳು ಸಾಕಷ್ಟು ದುಡಿದಿವೆ. ಶರಣ ಪರಂಪರೆಯು ಪ್ರಧಾನವಾಗಿ ಶೈವಾರಾಧನೆ ಹಾಗೂ ದಾಸ ಪರಂಪರೆಯು ವೈಷ್ಣವಾರಾಧನೆಯ ತತ್ವಗಳನ್ನು ಆಧರಿಸಿವೆ. ಶರಣರು ವಚನಗಳ ರೂಪದಲ್ಲಿ ಬೋಧಿಸಿದರೆ, ದಾಸರು ಕೀರ್ತನೆಗಳನ್ನು ಅಭಿವ್ಯಕ್ತಿ ಮಾಧ್ಯಮ ಮಾಡಿಕೊಂಡಿದ್ದಾರೆ. ಕೀರ್ತನ ಸಾಹಿತ್ಯದಲ್ಲಿ, ದ್ವೈತ ಕೀರ್ತನ ಪರಂಪರೆ, ಅದ್ವೈತ ಕೀರ್ತನ ಪರಂಪರೆಗಳಿರುವಂತೆ ವಿಶಿಷ್ಟಾದ್ವೈತ ಕೀರ್ತನ ಪರಂಪರೆಯ ಸಾಹಿತ್ಯ ಇರುವುದೂ ಕಾಣಬಂದಿದೆ. ವಚನಕಾರರಲ್ಲಿ ಅನೇಕ ತಳ ಸಮುದಾಯಗಳ ಶರಣರು ಇರುವಂತೆ, ವಿಶಿಷ್ಟಾದ್ವೈತ ದಾಸ ಸಾಹಿತ್ಯದಲ್ಲಿ ಅನೇಕ ಸ್ತ್ರೀಯರೂ, ಗೌಡ, ಬಣಜಿಗ, ಗಾಣಿಗ, ದಲಿತ ಮತ್ತಿತರ ನಿರ್ಲಕ್ಷಿತ ಸಮುದಾಯಗಳ ಕೀರ್ತನ ರಚನಕಾರರಿರುವುದನ್ನೂ ಈಚೆಗೆ ಗುರುತಿಸಲಾಗಿದೆ.

ನಾಥಪಂಥ

ಮಹಾಯಾನ ಬೌದ್ಧ ಪಂಥ, ಮತ್ತು ಶೈವ ಪಂಥಗಳ ಒಂದು ಸಂಯುಕ್ತ ರೂಪವಾದ ನಾಥ ಪಂಥ ಕರ್ನಾಟಕದಲ್ಲಿ ಜನಪ್ರಿಯವಾಗಿತ್ತು. ಈಗಲೂ ರಾಜ್ಯದ ಅನೇಕ ಕಡೆಗಳಲ್ಲಿ ನಾಥ ಪಂಥದ ಮಠಗಳು ಕಂಡು ಬರುತ್ತವೆ. ಬೆಳಗಾವಿ  ಜಿಲ್ಲೆಯ ಹಂಡಿ ಬಡಗನಾಥ, ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಮತ್ತು ವಿಟ್ಲ ಕೂಡ ಈ ಪಂಥಕ್ಕೆ ಸೇರಿವೆ. ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಈ ಪಂಥದ ಒಂದು ಕೇಂದ್ರವಾಗಿತ್ತು. ನಾಥ ಪಂಥದಿಂದ ಪ್ರಭಾವಿತವಾದ ದತ್ತಾತ್ರೇಯ ಆರಾಧನೆಯು ಕರ್ನಾಟಕದಲ್ಲಿ ಇಂದಿಗೂ ಜನಪ್ರಿಯವಾಗಿದೆ. ದತ್ತಾತ್ರೇಯನ ಅವತಾರವೆಂದೇ ನಂಬಲಾದ ನರಸಿಂಹ ಸರಸ್ವತಿ (ಕ್ರಿ.ಶ. 1378-1455) ಬೀದರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಹಮನಿ ಸುಲ್ತಾನನಾಗಿದ್ದ ಅಲ್ಲಾವುದ್ದೀನ್‌ನನ್ನು ಗಂಭೀರ ಸ್ವರೂಪದ ಖಾಯಿಲೆಯಿಂದ ಗುಣಮುಖನನ್ನಾಗಿ ಮಾಡಿದನೆಂದು ನಂಬಲಾಗಿದೆ. ಕಲಬುರಗಿ ಜಿಲ್ಲೆಯ ದೇವರ ಗಾಣಗಾಪುರ, ರಾಯಚೂರು ಜಿಲ್ಲೆಯ ಕುರುಗದ್ದೆ, ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯಲ್ಲಿರುವ ದತ್ತಪೀಠ ಕರ್ನಾಟಕ ರಾಜ್ಯದಲ್ಲಿರುವ ಕೆಲವು ದತ್ತಾತ್ರೇಯ ಆರಾಧನಾ ಕೇಂದ್ರಗಳೆನಿಸಿವೆ.

 

ಹಿಂದಿನಿಂದಲೂ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಮತ್ತೊಂದು ಶೈವ ಸಂಪ್ರದಾಯವೆಂದರೆ ಮೈಲಾರ ಮತ್ತು ಅವನ ಪತ್ನಿ ಮಾಳಚಿ(ಮಾಳವ್ವ)ಯ ಆರಾಧನೆ. ಈ ಪಂಥದ ಮುಖ್ಯ ಕೇಂದ್ರಗಳೆಂದರೆ ಬೀದರ್ ಜಿಲ್ಲೆಯ ಆದಿ ಮತ್ತು ಮಂಗಸೂಳಿ, ಬಳ್ಳಾರಿ ಜಿಲ್ಲೆಯ ಮೈಲಾರ, ಹಾವೇರಿ ಜಿಲ್ಲೆಯ ಗುಡ್ಡದಗುಡ್ಡಾಪುರ ಮತ್ತು ಮಂಡ್ಯ ಜಿಲ್ಲೆಯ ಬೆಳ್ಳೂರು. ಗೊರವರು ಅಥವಾ ವಗ್ಗಯ್ಯರು ಎಂದು ಕರೆಯಲ್ಪಡುವ ಈ ಪಂಥದ ಪ್ರವರ್ತಕರು ಕೆಂಪು ನೀಳುಡುಪು ಮತ್ತು ಕರಡಿ ತೊಗಲಿನ ಟೊಪ್ಪಿಗೆಯನ್ನು ಧರಿಸಿ ಸುತ್ತಾಡುವುದನ್ನು ಈಗಲೂ ನೋಡಬಹುದಾಗಿದೆ. ತಮ್ಮ ಸಂಪ್ರದಾಯದ ಮಠಗಳ ಗುರುಗಳಿಂದ ದೀಕ್ಷೆ ಪಡೆದು, ಜೋಗಪ್ಪಗಳಾಗುವ ಜೋಗಿಗಳು, ತಮ್ಮ ಪಂಥಾನುಸರಣೆ ಮಾಡುವ ಒಕ್ಕಲುಗಳ ಮನೆಯ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುವ ಪುರೋಹಿತರಾಗುತ್ತಾರೆ.  

ಶಕ್ತಿ ಆರಾಧನೆ

ರಾಜ್ಯದ ಅನೇಕ ಭಾಗಗಳಲ್ಲಿ ಶಕ್ತಿ ಅಥವಾ ಮಾತೃ ದೇವತಾ ಪೂಜೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ. ಸರಿ ಸುಮಾರು ಎಲ್ಲ ಗ್ರಾಮಗಳಲ್ಲಿಯೂ ಗ್ರಾಮದೇವತಾ ಗುಡಿಗಳಿದ್ದು ಈ ದೇವತೆಗಳು ಗ್ರಾಮದ ರಕ್ಷಣೆ ಮಾಡುತ್ತವೆಂಬ ಬಲವಾದ ನಂಬಿಕೆ ಇದೆ. ಮಾತೃದೇವತೆಯರು ಸಿಟ್ಟುಗೊಂಡಾಗ ಕಾಲರಾ, ಸಿಡುಬು, ಪ್ಲೇಗ್, ಇತ್ಯಾದಿ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತವೆಂಬ ನಂಬಿಕೆ ಹಿಂದಿನಿಂದಲೂ ಇದೆ. ಇಂತಹ ಗ್ರಾಮ ದೇವತೆಗಳಲ್ಲಿ ಕೆಲವನ್ನು ಹೆಸರಿಸಬಹುದು: ಮಾರಮ್ಮ, ಯಾಲಗಮ್ಮ, ಯಲ್ಲಮ್ಮ,ರೇಣುಕಮ್ಮ, ದುರ್ಗಮ್ಮ, ದ್ಯಾಮವ್ವ, ಕಾಳಿಕಾದೇವಿ ಇತ್ಯಾದಿ ಗ್ರಾಮದೇವತೆಗಳಿಗೆ ಅಲ್ಲಲ್ಲಿ ಪ್ರತ್ಯೇಕವಾದ ಗುಡಿ ಅಥವಾ ಸರಳ ಪೂಜಾಗೃಹಗಳಿವೆಯಾದರೂ, ಒಂದು ನಿರ್ದಿಷ್ಟ ಆಕಾರವಿಲ್ಲದ ಕಲ್ಲು ಅಥವಾ ಕಾಷ್ಠವನ್ನೇ ಅನೇಕ ಕಡೆಗಳಲ್ಲಿ ಮಾರಮ್ಮನೆಂದು ಪೂಜಿಸುವುದು ಸರ್ವೇಸಾಮಾನ್ಯವಾಗಿದೆ. ಕಾಷ್ಠಶಿಲ್ಪಗಳಿರುವೆಡೆ ಅವುಗಳಿಗೆ ಕಡು ಬಣ್ಣ ಬಳಿದು ಸಿಂಗರಿಸಿರುವುದೂ ಉಂಟು. ಹಿಂದಿನ ಕಾಲದಲ್ಲಿ ಇಂತಹ ಗ್ರಾಮದೇವತೆಗಳಿಗೆ ಪ್ರಾಣಿ ಬಲಿ ನೀಡುತ್ತಿದ್ದುದೂ ಉಂಟು. ಗ್ರಾಮದೇವತೆಯ ಜಾತ್ರೆ/ಪರಿಷೆ ಕಾಲದಲ್ಲಿ ಅನೇಕ ಪ್ರಾಣಿಗಳನ್ನು ಬಲಿ ನೀಡುತ್ತಿದ್ದುದುಂಟು.

ಕೆಲವು ಅಮಾನವೀಯ ಬಲಿ ಪದ್ಧತಿ, ಆಚರಣೆಗಳ ಬಗ್ಗೆ, ರಾಜ್ಯ ಸರ್ಕಾರ ಈಚೆಗೆ ನಿರ್ಬಂಧಗಳನ್ನು ಹೇರಿದೆ. ಕರ್ನಾಟಕದ ಸುಪ್ರಸಿದ್ಧ ಗ್ರಾಮದೇವತೆಗಳೆಂದರೆ, ಸವದತ್ತಿಯ ಯಲ್ಲಮ್ಮ, ಕೋಲಾರದ ಕೋಲಾರಮ್ಮ, ಬನಶಂಕರಿಯ ಬನಶಂಕರಮ್ಮ, ಸಿರಸಿಯ ಮಾರಿಕಾಂಬಾ, ಚಿಂಚಲಿ (ಬೆಳಗಾವಿ ಜಿಲ್ಲೆಯ) ಮಾಯವ್ವ, ಸನ್ನತಿಯ ಚಂದ್ರಲಾಂಬಾ ಮುಂತಾದವು. ಅನೇಕ ಗ್ರಾಮದೇವತೆಗಳಿಗೆ ಪರಿಶಿಷ್ಟ ಜಾತಿಯವರೂ ಸೇರಿದಂತೆ, ವಿವಿಧ ತಳ ಸಮುದಾಯದವರು ಅಲ್ಲಲ್ಲಿ ಅರ್ಚಕರಾಗಿರುವುದು ಸಾಮಾನ್ಯವಾಗಿದೆ. ವಾರ್ಷಿಕ ಜಾತ್ರೆ ವೇಳೆ ಸಾವಿರಾರು ಭಕ್ತರು ಸಮಾವೇಶಗೊಳ್ಳುವ ಬೆಂಗಳೂರು ಬಳಿಯ ಹುಸ್ಕೂರಿನ ಮದ್ದೂರಮ್ಮನ ದೇವಾಲಯದ ಅರ್ಚಕರು ಪರಿಶಿಷ್ಟ ಜಾತಿಗೆ ಸೇರಿದವರೆಂಬುದು ಅಂತಹ ಒಂದು ನಿದರ್ಶನವಾಗಿದೆ. ಅತಿ ಎತ್ತರದ ತೇರಿನಂತಹ ಕುರ್ಜುಗಳನ್ನು ಈ ಜಾತ್ರೆಗಾಗಿಯೇ ನಿರ್ಮಿಸಿ, ಪಕ್ಕದ ಊರುಗಳಿಂದ ಮೆರವಣಿಗೆಯಲ್ಲಿ ಬರುವುದು ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ. 2015ರ ವಾರ್ಷಿಕ ಜಾತ್ರೆಯ ವೇಳೆ 124 ಅಡಿ ಎತ್ತರದ ಕುರ್ಜು ನಿರ್ಮಿಸಿದ್ದು ಒಂದು ದಾಖಲೆಯಾಗಿದೆ.

ಬೌದ್ಧ ಮತ

ಅಶೋಕ ಚಕ್ರವರ್ತಿಯ ಕಾಲ (ಕ್ರಿ.ಪೂ. ಸುಮಾರು 273 - 232)ಕ್ಕಾಗಲೇ ಕರ್ನಾಟಕದಲ್ಲಿ ಬೌದ್ಧ ಮತವು ಜನಪ್ರಿಯವಾಗಿತ್ತು. ಅಶೋಕನು ಬನವಾಸಿಗೆ ಬೌದ್ಧ ಮತಪ್ರಚಾರಕರನ್ನು ಕಳುಹಿಸಿದ್ದನೆಂದು ನಂಬಲಾಗಿದೆ. ಕ್ರಿ.ಶ. ಸುಮಾರು 640 ರಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಹ್ಯೂಯನ್ ತ್ಸಾಂಗ್ ಹೇಳುವಂತೆ ಆ ವೇಳೆಗಾಗಲೇ ಬನವಾಸಿ ನಾಡಿನಲ್ಲಿ ನೂರಾರು ಬೌದ್ಧ ವಿಹಾರಗಳಿದ್ದವು. ಕಲಬುರಗಿ ಜಿಲ್ಲೆಯ ಸನ್ನತಿ ಮತ್ತು ಕನಗನ ಹಳ್ಳಿಗಳಲ್ಲಿ ಶಾತವಾಹನರ ಕಾಲದ ಸ್ತೂಪದ ಅವಶೇಷಗಳನ್ನು ಅಗೆದು ತೆಗೆಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಐಹೊಳೆಗಳಲ್ಲಿ ಬಾದಾಮಿಯ ಚಾಲುಕ್ಯರ ಕಾಲದ ಬೌದ್ಧ ಸ್ಮಾರಕಗಳಿವೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಮತ್ತು ಧಾರವಾಡ ಜಿಲ್ಲೆಯ ಕೋಳಿವಾಡಗಳಲ್ಲಿ ತಾರಾ ಭಗವತಿಯ ಪ್ರತಿಮೆಗಳು ದೊರೆತಿವೆ. ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಬೌದ್ಧ ಅವಶೇಷಗಳನ್ನು ಹೊರತೆಗೆಯಲಾಗಿದೆ. ಬೌದ್ಧ ಆರಾಧನಾ ಕೇಂದ್ರಗಳಲ್ಲಿ ಕೆಲವನ್ನು ಶೈವ ಪೂಜಾ ಕೇಂದ್ರಗಳನ್ನಾಗಿ ನಂತರದ ಕಾಲದಲ್ಲಿ ಪರಿವರ್ತಿಸಿದ ಬಗ್ಗೆ ಮಾಹಿತಿ ಇದೆ. ನಾಥಪಂಥೀಯರ ಪ್ರಭಾವಕ್ಕೆ ಅವು ಸಿಲುಕಿದಂತೆ ಕಂಡು ಬಂದಿದೆ. ಕದ್ರಿಯಲ್ಲಿ ಲೋಕೇಶ್ವರ ಮುಂತಾದ ಹತ್ತನೆಯ ಶತಮಾನಕ್ಕೆ ಸೇರಿದ ವಿಸ್ಮಯಕಾರಿ ಕಂಚಿನ ಮೂರ್ತಿಗಳಿವೆ. ಬೆಂಗಳೂರಿನಲ್ಲಿರುವ ಮಹಾಬೋಧಿ ಸಂಸ್ಥೆಯು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಶಿಷ್ಠ ಸಮೂಹದ ಅನೇಕ ಜನರು ನವಬೌದ್ಧರಾಗಿ ಪರಿವರ್ತಿತರಾಗಿದ್ದಾರೆ.

ಜೈನ ಧರ್ಮ

ಕರ್ನಾಟಕದ ಒಂದು ಮುಖ್ಯ ಧರ್ಮವಾಗಿ ಜೈನ ಧರ್ಮವು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಕರ್ನಾಟಕದ ಸಂಸ್ಕೃತಿಗೆ ಇದು ಗುರುತರವಾದ ರೀತಿಯಲ್ಲಿ ಕೊಡುಗೆಗಳನ್ನು ನೀಡಿದೆ. ಕೊನೆಯ ಶೃತ ಕೇವಲಿ ಎಂಬ ಕೀರ್ತಿಗೆ ಭಾಜನನಾದ ಭದ್ರಬಾಹು ಮುನಿಯು, ಮೌರ್ಯ ರಾಜಕುಮಾರನೊರ್ವನೊಡನೆ ಭಾರೀ ಸಂಖ್ಯೆಯಲ್ಲಿ ಹಿಂಬಾಲಕರೊಂದಿಗೆ ಬಂದು ಕರ್ನಾಟಕದ ಶ್ರವಣಬೆಳಗೊಳ ಕ್ಷೇತ್ರದಲ್ಲಿ ತನ್ನ ಅಂತಿಮ ದಿನಗಳನ್ನು ಕಳೆದನು. ಬೆಳಗಾವಿ ಜಿಲ್ಲೆಯ ಹಲಸಿ (ಪ್ರಾಚೀನ ಪಲಶಿಕ)ಯಲ್ಲಿ ಬನವಾಸಿಯ ಕದಂಬರು ಜೈನ ಬಸದಿಯನ್ನು ನಿರ್ಮಿಸಿದ್ದರು. ಗಂಗರು ಜೈನಧರ್ಮಕ್ಕೆ ಬಹಳ ಪ್ರಾಶಸ್ತ್ಯವನ್ನು ಕೊಟ್ಟರು. ಶ್ರವಣಬೆಳಗೊಳದಲ್ಲಿರುವ ಸುವಿಖ್ಯಾತ ಗೊಮ್ಮಟೇಶ್ವರನ ಬೃಹತ್ ಏಕಶಿಲಾ ಮೂರ್ತಿಯನ್ನು ಗಂಗರ ದಂಡನಾಯಕನೂ, ವಿದ್ವಾಂಸನೂ ಆಗಿದ್ದ ಚಾವುಂಡರಾಯನೇ ಮಾಡಿಸಿದನು (ಸು.ಕ್ರಿ.ಶ 981-82). ಇದಕ್ಕೂ ಮುಂಚಿತವಾಗಿ ಮದ್ದೂರು ತಾಲೂಕಿನ ಅರೆತಿಪ್ಪೂರಿನಲ್ಲಿ ಸುಮಾರು 10 ಅಡಿ ಎತ್ತರದ ಗೊಮ್ಮಟ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಠಾಪಿಸಲಾಗಿತ್ತು (ಕ್ರಿ.ಶ 918). ಗಂಗರ ಆಡಳಿತ ಕಾಲದಲ್ಲಿ ಶ್ರವಣಬೆಳಗೊಳ, ಮಣ್ಣೆ ಮತ್ತು ಕಂಬದಹಳ್ಳಿಗಳಲ್ಲಿ ಬಸತಿಗಳ ನಿರ್ಮಾಣವಾಗಿತ್ತು. ಗಂಗರ ಆಸ್ಥಾನದಲ್ಲಿ ಪ್ರಖ್ಯಾತ ಜೈನ ವಿದ್ವಾಂಸರಾಗಿದ್ದ ಪೂಜ್ಯಪಾದ (ದೇವನಂದಿ) ಮತ್ತು ಕುಂದಕುಂದಾಚಾರ್ಯರು ಹಾಗೂ ಕನ್ನಡದ ಕವಿಗಳಾಗಿದ್ದ ನೇಮಿಚಂದ್ರ ಮತ್ತು ಚಾವುಂಡರಾಯರು ಜೈನರಾಗಿದ್ದರು. ಕದಂಬರು, ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು ಜೈನ ಧರ್ಮದ ಮಹಾನ್ ಪೋಷಕರಾಗಿದ್ದರು. ಪ್ರಸಿದ್ಧ ಗಣಿತಜ್ಞನಾಗಿದ್ದ ಮಹಾವೀರ, ಕನ್ನಡ ಭಾಷೆಯ ಅತ್ಯಂತ ಪ್ರಾಚೀನ ಕವಿಗಳಾದ ಶ್ರೀವಿಜಯ, ಪಂಪ, ಪೊನ್ನ, ಜನ್ನ ಮತ್ತು ರನ್ನ ಜೈನರಾಗಿದ್ದರು. ಕರ್ನಾಟಕದಲ್ಲಿ ಕಾಲ ಕಾಲಕ್ಕೆ ಕೆತ್ತಿ ನಿಲ್ಲಿಸಿರುವ ಗೊಮ್ಮಟ ಮೂರ್ತಿಗಳಿಂದ ಪ್ರಖ್ಯಾತವಾಗಿರುವ ಸ್ಥಳಗಳೆಂದರೆ ಮೈಸೂರು ಜಿಲ್ಲೆಯ ಹುಣಸೂರಿಗೆ ಸಮೀಪವಿರುವ ಗೊಮ್ಮಟಗಿರಿ (ಸುಮಾರು 12ನೇ ಶತಮಾನ). ಬಸ್ತಿಹೊಸಕೋಟೆ, ಉಡುಪಿ ಜಿಲ್ಲೆಯ ಕಾರ್ಕಳ (ಕ್ರಿ.ಶ. 1432), ವೇಣೂರು (ಕ್ರಿ.ಶ.1603) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ (1982).

ಕರ್ನಾಟಕದಲ್ಲಿ ನೆಲೆಸಿರುವ ಜೈನರಲ್ಲಿ ಬಹುತೇಕ ದಿಗಂಬರ ಪಂಥದವರೇ ಜಾಸ್ತಿ. ಇತ್ತೀಚಿನ ವರ್ಷಗಳಲ್ಲಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಿಂದ ಮುಖ್ಯವಾಗಿ ವ್ಯಾಪಾರ ವಹಿವಾಟಿನ ಸಂಬಂಧ ವಲಸೆ ಬಂದು ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರುವ ಶ್ವೇತಾಂಬರರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ಸಿಖ್ ಧರ್ಮ:

ಸಿಖ್ ಧರ್ಮವೂ ಕರ್ನಾಟಕದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಕರ್ನಾಟಕದ ಬೀದರ್ ಪಟ್ಟಣಕ್ಕೆ ಸಿಖ್ಖರ ಧರ್ಮಗುರು ನಾನಕರು ಭೇಟಿ ನೀಡಿದ್ದರು. ಅವರ ಪವಿತ್ರ ನೆನಪಿಗೆ ಕಟ್ಟಿಸಿರುವ ಗುರುನಾನಕ್ ಝೀರಾ ಸಾಹಿಬ್ ಈಗಲೂ ಇದೆ. ಗುರುಗೋವಿಂದ ಸಿಂಗರ ಪರಮಾಪ್ತರಾಗಿದ್ದ ಐವರು ಶಿಷ್ಯರಲ್ಲಿ (ಪಂಚ ಪ್ಯಾರಾಸ್) ಒಬ್ಬರಾದ ಬೀದರಿನ ಭಾಲ್ ಸಾಹಿಬ್ ಚಂದ್ (ನಂತರ ಸಾಹಿಬ್ ಸಿಂಗ್ ಎಂದು ಖ್ಯಾತರಾದವರು) ಮೂಲತಃ ಕ್ಷೌರಿಕ ಜಾತಿಗೆ ಸೇರಿದವರಾಗಿದ್ದು ದೀಕ್ಷೆ ಪಡೆದು ಖಲ್ಸಾ ಸೇರಿದುದಾಗಿ ತಿಳಿದುಬರುತ್ತದೆ. ನವಾಬ್ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಸೈನ್ಯವನ್ನು ಸೇರಿದ್ದ ಸಿಖ್ ಯೋಧರ ಸಂತತಿಯವರು ಕರ್ನಾಟಕದಲ್ಲಿಯೇ ಉಳಿದುಬಿಟ್ಟಿದ್ದಾರೆ. ತತ್ಪರಿಣಾಮವಾಗಿ ಬೆಂಗಳೂರು, ಕಲಬುರಗಿ ಮತ್ತು ಹುಬ್ಬಳ್ಳಿಗಳಲ್ಲಿ ಗುರುದ್ವಾರ ಅಥವಾ ಸಿಖ್ಖರ ಪೂಜಾ ಮಂದಿರಗಳಿವೆ.

 

ಇಸ್ಲಾಂ

ಇಸ್ಲಾಂ ಧರ್ಮವು ಬಹಳ ಹಿಂದೆಯೇ ಕರ್ನಾಟಕವನ್ನು ಪ್ರವೇಶಿಸಿದೆ. ಮೊದಮೊದಲು ಅರಬ್ ವ್ಯಾಪಾರಿಗಳು ಕರ್ನಾಟಕದ ಬಂದರು ಪಟ್ಟಣಗಳಿಗೆ ಬಂದು ನೆಲೆ ನಿಂತರು. ಶಾಸನಗಳು ಅವರನ್ನು ತಜ್ಜಿಕರೆಂದು ಸಂಬೋಧಿಸಿವೆ. ರಾಷ್ಟ್ರಕೂಟರ ಕಾಲದ ಖ್ಯಾತ ಸಂಜಾಂ ತಾಮ್ರಶಾಸನ ತಿಳಿಸುವಂತೆ, ಇಲ್ಲಿ ಓರ್ವ ತಜ್ಜಿಕ ರಾಜ್ಯಪಾಲನಿದ್ದನು. ರಾಷ್ಟ್ರಕೂಟ ಸಾಮ್ರಾಜ್ಯದ ವ್ಯಾಪಾರ-ವಾಣಿಜ್ಯ ಕೇಂದ್ರಗಳಲ್ಲಿ ಮುಸ್ಲಿಮರ ಜನವಸತಿಗಳಿದ್ದವು. ಗೋವೆಯ ಕದಂಬರು ದಕ್ಷಿಣ ಕನ್ನಡದ ಆಳುಪರು ಮತ್ತು ವಿಜಯನಗರ ಕಾಲದ ಅರಸರ ಶಾಸನಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಏರ್ಪಡಿಸಿಕೊಂಡಿದ್ದ ಹಂಜಮಾನ (ಅಂಜುಮಾನ್) ಎಂಬ ವ್ಯಾಪಾರಿ ಸಂಘಟನೆಯ ಉಲ್ಲೇಖಗಳಿವೆ. ಅರಬ್ಬರಂತೆ ಶಫಿ ಪಂಥದವರಾಗಿರುವ ನವಾಯತರು ಮತ್ತು ಮಾಪಿಳ್ಳೆ (ಮೋಪ್ಲಾ) ಗಳು ಕರ್ನಾಟಕದ ಕರಾವಳಿ ಪ್ರದೇಶದ ಮುಸ್ಲಿಮರಾಗಿದ್ದಾರೆ. ಉರ್ದು ಮಾತನಾಡುವ ಆಫ್ಘನ್ನರು, ಪರ್ಶಿಯನ್ನರು ಮುಂತಾದವರು ಹನಾಫಿ ಪಂಥಕ್ಕೆ ಸೇರಿದವರಾಗಿದ್ದಾರೆ. ಇವರನ್ನು ದಖ್ಖನಿ ಮುಸ್ಲಿಮರೆಂದು ಪರಿಗಣಿಸುವುದೂ ಇದೆ. ಕರ್ನಾಟಕಕ್ಕೆ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳು ಮುಸ್ಲಿಮರ ಮೂಲಕವೇ ಬಂದವು. ದಖ್ಖನಿ ಉರ್ದು ದಕ್ಷಿಣ ಭಾರತದಲ್ಲಿಯೇ ವಿಕಸಿತಗೊಂಡಿತು. ಇಂಡೋ ಇಸ್ಲಾಮಿಕ್ ವಾಸ್ತುಕಲೆಯ ಅನೇಕ ಹೆಮ್ಮೆಯ ಸ್ಮಾರಕಗಳು ಕಲಬುರಗಿ, ಬೀದರ್, ವಿಜಯಪುರ, ಶಹಾಪುರ, ಸಾಗರ, ಗೋಗಿ, ಅಷ್ಟೂರು, ಶಿರಾ, ಶ್ರೀರಂಗಪಟ್ಟಣ ಮುಂತಾದೆಡೆ ಕಂಡು ಬರುತ್ತವೆ. ಕರ್ನಾಟಕದಲ್ಲಿ ಸೂಫಿ ಪಂಥವು ಜನಪ್ರಿಯವಾಗಿದ್ದು ಕಲಬುರಗಿಯಲ್ಲಿರುವ ಬಂದೇ ನವಾಜ್ ಗೇಸು ದರವಾಜ ದರ್ಗಾ, ಸರ್ವರ  ಆದರ ಗೌರವಗಳಿಗೆ ಪಾತ್ರವಾಗಿರುವುದು ಗಮನಿಸಬೇಕಾದ ಸಂಗತಿ. ಕಲಬುರಗಿ, ಬೀದರ್ ಮತ್ತು ವಿಜಯಪುರಗಳಲ್ಲಿ ಸಕ್ರಿಯರಾಗಿದ್ದ ಸೂಫಿ ಸಂತರನ್ನು ಬಹಮನಿ ಸುಲ್ತಾನರು ಬಹಳವಾಗಿ ಪ್ರೋತ್ಸಾಹಿಸಿದರು. ಕಾಫಿ, ಕಾಗದ ಮತ್ತು ಅಗರಬತ್ತಿ ಮುಸ್ಲಿಮರಿಂದ ಪರಿಚಯಿಸಲ್ಪಟ್ಟ ಕೈಗಾರಿಕೆಗಳಾಗಿವೆ. ಟಿಪ್ಪು ಸುಲ್ತಾನನು ರೇಷ್ಮೆ ಉದ್ದಿಮೆಗೆ ಪ್ರೋತ್ಸಾಹ ನೀಡಿದ್ದನು.

 

ಕ್ರೈಸ್ತಧರ್ಮ

ಪೋರ್ಚುಗೀಸರ ಆಗಮನದೊಂದಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮ ಪ್ರಚಾರಕರೂ ಕರ್ನಾಟಕವನ್ನು ತಲುಪಿದರು. ಮಂಗಳೂರು, ಕುಂದಾಪುರ ಮತ್ತು ಹೊನ್ನಾವರಗಳಲ್ಲಿ ತಮ್ಮ ಕಾರ್ಖಾನೆಗಳನ್ನು ತೆರೆದ ಪೋರ್ಚುಗೀಸರು ವಿಜಯನಗರ ಕಾಲದಿಂದಲೇ ಹಿಂದೂಗಳ ಮತಾಂತರಕ್ಕೂ ತೊಡಗಿದರು. ಗೋವಾದಲ್ಲಿ ಪೋರ್ಚುಗೀಸರು ನಡೆಸಿದ ಪಾಷಾಂಡ ವಿಚಾರಣೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ಕ್ಷಾಮಗಳಿಂದಾಗಿ ಅನೇಕ ಕ್ರೈಸ್ತರು ಕರ್ನಾಟಕದತ್ತ ವಲಸೆ ಬಂದರು. ಕೃಷಿ ಮತ್ತು ಪಶು ಸಂಗೋಪನೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಕ್ರಿಶ್ಚಿಯನ್ನರನ್ನು ಕೆಳದಿಯ ನಾಯಕರು ಸ್ವಾಗತಿಸಿದರು. ಮಂಗಳೂರಿನಲ್ಲಿ ಒಂದು ಚರ್ಚನ್ನು ನಿರ್ಮಿಸಿಕೊಳ್ಳಲು ಕೆಳದಿಯ ರಾಣಿ ಚನ್ನಮ್ಮ ಅನುಮತಿ ಇತ್ತುದಲ್ಲದೆ ಅದಕ್ಕಾಗಿ ಒಂದು ನಿವೇಶನವನ್ನೂ ನೀಡಿದ್ದಳು. ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ಪ್ರಾಟೆಸ್ಟೆಂಟ್ ಧರ್ಮ ಪ್ರಚಾರಕರು, ಮುಖ್ಯವಾಗಿ ಬ್ಯಾಸೆಲ್ ಮತ್ತು ಲಂಡನ್ ಮಿಷನ್ನಿನವರು, ಕರ್ನಾಟಕವನ್ನು ಪ್ರವೇಶಿಸಿದರು. ಮೊದಲು, ಅಂದರೆ 1810ರಲ್ಲಿ ಬಳ್ಳಾರಿಯಲ್ಲಿ ಲಂಡನ್ ಮಿಶನ್ ತನ್ನ ಚಟುವಟಿಕೆಯನ್ನು ಪ್ರಾರಂಭಿಸಿ 1820ರ ವೇಳೆಗೆ ಅದು ಬೆಂಗಳೂರಿಗೂ ಬಂದಿತು. ಮೈಸೂರು ಸಂಸ್ಥಾನದಲ್ಲಿ 1821ರಿಂದ ತಮ್ಮ ಚಟುವಟಿಕೆಗಳನ್ನು ವೆಸ್ಲಿಯನ್ ಮಿಷನ್ನಿನವರು ಪ್ರಾರಂಭಿಸಿದರು. ಮಂಗಳೂರಿನಲ್ಲಿ 1834ರಿಂದ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ ಬಾಸೆಲ್ ಮಿಷನ್ನಿನವರು ಶೀಘ್ರವಾಗಿಯೇ ಧಾರವಾಡ, ಹುಬ್ಬಳ್ಳಿ, ಹಾವೇರಿ ಮತ್ತು ಗದಗಿಗೆ ಅವುಗಳನ್ನು ವಿಸ್ತರಿಸುವಲ್ಲಿ ಯಶ ಸಾಧಿಸಿದರು. ಬಾಸೆಲ್ ಮಿಷನ್ನಿನವರು 1843ರಿಂದ ಮಂಗಳೂರು ಸಮಾಚಾರ ಎಂಬ ಪ್ರಪ್ರಥಮ ಕನ್ನಡ ಸುದ್ದಿ ಪತ್ರಿಕೆಯೊಂದನ್ನು ಆರಂಭಿಸಿದರು. ನೂರಾರು ವರ್ಷಗಳಿಂದ ತಾಳೆ ಗರಿಗಳ ಕಟ್ಟುಗಳಲ್ಲಿಯೇ ಉಳಿದುಕೊಂಡಿದ್ದ ಕನ್ನಡದ ಅನೇಕ ಶಾಸ್ತ್ರೀಯ ಗ್ರಂಥಗಳನ್ನು ಅವರು ಮುದ್ರಣ ಮಾಡಿದರು. ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಮಿಷನರಿಗಳು ಮಂಗಳೂರು, ಮಡಿಕೇರಿ, ಬೆಂಗಳೂರು, ಬಳ್ಳಾರಿ, ಧಾರವಾಡ, ಬೆಳಗಾವಿ ಮುಂತಾದೆಡೆ ಇಂಗ್ಲೀಷ್‌ ಶಾಲೆಗಳನ್ನು ತೆರೆದರಲ್ಲದೆ ಆಸ್ಪತ್ರೆಗಳನ್ನು ಸ್ಥಾಪಿಸಿ ವೈದ್ಯಕೀಯ ಸೇವೆಗಳನ್ನೂ ಪರಿಚಯಿಸಿದರು.

 

ಪಾರಸಿ ಧರ್ಮ

ಪಾರ್ಸಿಗಳು ಜೊರಾಸ್ಟ್ರಿಯನ್ ಪಂಥಕ್ಕೆ ಸೇರಿದವರು. ಅರ್ಥಾತ್, ಜರಾತೃಷ್ಟ್ರನ ತತ್ವಗಳನ್ನು ನಂಬಿ ಪಾಲನೆ ಮಾಡುವವರು.  ಪರ್ಸಿಯಾ (ಇದರ ಹಿಂದಿನ ಇನ್ನೊಂದು ಹೆಸರು ಇರಾನ್) ದೇಶದಲ್ಲಿ ತಮಗೆ ಇಸ್ಲಾಂ ಧರ್ಮದವರಿಂದ ಉಂಟಾದ ಒತ್ತಡಗಳನ್ನು ಒಪ್ಪಿಕೊಳ್ಳಲಾಗದೆ, ತಮ್ಮ ಸಮುದಾಯದ ರಕ್ತ ಶುದ್ಧಿ ಹಾಗೂ ಧಾರ್ಮಿಕ ಆಚರಣೆಗಳ ಸಂರಕ್ಷಣೆಗಾಗಿ ಭಾರತಕ್ಕೆ  ವಲಸೆ ಬಂದವರಾಗಿದ್ದಾರೆ. ಗುಜರಾತ್ ಮೂಲಕ ಹೊರಟು, ಅಲ್ಪ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿಯೂ ಇವರು ನೆಲೆ ನಿಂತಿದ್ದಾರೆ. ಇವರು ಅಗ್ನಿ ಆರಾಧಕರು; ಅಗ್ನಿಯು ಜ್ಞಾನ ಅಥವಾ ದೇವರ ಪ್ರತೀಕವೆಂದು ಇವರು ನಂಬಿದ್ದು, ತಮ್ಮ ದೇವಾಲಯದಲ್ಲಿ ಈ ಪವಿತ್ರ ಅಗ್ನಿಯು ಸದಾ ಬೆಳಗುತ್ತಿರುವಂತೆ ವ್ಯವಸ್ಥೆ ಮಾಡಿರುತ್ತಾರೆ. ಇವರ ಆರಾಧನಾ ಸ್ಥಳಗಳ ಹೊರ ಗೋಡೆಗಳ ಮೇಲ್ಭಾಗದಲ್ಲಿ ಅಗ್ನಿ ಜ್ವಾಲೆಯ ಹಾಗೂ ಎತ್ತಿನ ಮುಖ ಭಾಗದ ಆಕೃತಿಗಳನ್ನು ರೂಪಿಸಿರುವುದು ಕಾಣಬರುತ್ತದೆ. ಪಾರ್ಸಿಗಳಲ್ಲಿಯೂ ಜನಿವಾರ ಧಾರಣೆ ಸಂಪ್ರದಾಯವಿದೆ. ಕುರಿಯ ಉಣ್ಣೆಯಿಂದ ತಯಾರಿಸುವ ಈ ಜನಿವಾರ ದಾರವನ್ನು ಅವರು ಕಸ್ತಿ ಎಂದು ಕರೆಯುತ್ತಾರೆ. ಮಗು ಹುಟ್ಟಿದ ಏಳನೇ ದಿನಕ್ಕೆ ಈ ದಾರದ ಧಾರಣೆ ಆಗುವುದು ಕಡ್ಡಾಯವಗಿದೆ. ಹೆಣ್ಣು ಮಗುವು ಋತುಮತಿಯಾಗುವವರೆಗೆ ಮಾತ್ರ ಈ ಕಸ್ತಿಯನ್ನು ಧರಿಸಿರಬೇಕಾಗುತ್ತದೆ. ಪಾರ್ಸಿಗಳು ಪಂಚಭೂತಗಳ  ಪರಿಶುದ್ಧತೆಯನ್ನು ಕಾಪಾಡುವ ಆಶಯದಿಂದ ತಮ್ಮ ಮೃತರ ದೇಹವನ್ನು ಬೆಂಕಿ, ನೀರು ಅಥವಾ ಭೂಮಿಯಲ್ಲಿ ನೇರವಾಗಿ ವಿಸರ್ಜಿಸದೆ, ಎತ್ತರದ ಸ್ಥಂಭದ ಮೇಲೆ ಬಿಸಿಲಿಗೆ ನೇರವಾಗಿ ಇಡುತ್ತಾರೆ. ಶಾಂತಿ ಸ್ಥಂಬ (tower of peace) ಎಂಬ ಹೆಸರಿನ ಒಂದು ಗೋಪುರವು ಬೆಂಗಳೂರಿನ ಹೆಬ್ಬಾಳದ ಬಳಿ ಇದೆ.

 

ಆಧುನಿಕ ಧಾರ್ಮಿಕ ಚಳವಳಿಗಳು

ಆಧುನಿಕ ಕಾಲದ ಧಾರ್ಮಿಕ ಚಳವಳಿಗಳಾದ ಬ್ರಹ್ಮ ಸಮಾಜ, ಆರ್ಯ ಸಮಾಜ, ಥಿಯಾಸಾಫಿಕಲ್ ಸೊಸೈಟಿ, ರಾಮಕೃಷ್ಣ ಮಠ, ಚಿನ್ಮಯ ಮಿಷಿನ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಂತಾದವು ಕರ್ನಾಟಕದ ಜನಜೀವನದ ಮೇಲೆ ಅನೇಕ ರೀತಿಯಲ್ಲಿ ಪ್ರಭಾವ ಬೀರಿವೆ.  ಥಿಯಾಸಾಫಿಕಲ್ ಸೊಸೈಟಿಯು ೧೮೮೬ರಿಂದಲೇ ಕರ್ನಾಟಕದಲ್ಲಿ ಸಕ್ರಿಯವಾಗಿದ್ದು ಪ್ರಥಮವಾಗಿ ಬೆಂಗಳೂರು ನಗರದಲ್ಲೂ ನಂತರ ಬೆಂಗಳೂರು ದಂಡು ಪ್ರದೇಶದಲ್ಲೂ, ಆನಂತರ ಮಂಗಳೂರು (೧೯೦೧), ಧಾರವಾಡ(೧೯೦೨) ಮುಂತಾಗಿ ಇನ್ನೂ ಅನೇಕ ಕೇಂದ್ರಗಳಲ್ಲಿ ತನ್ನ ಶಾಖೆಗಳನ್ನು ತೆರೆಯಿತು. ಬೆಂಗಳೂರಿನಲ್ಲಿ ೧೯೦೪ರಲ್ಲಿ ತನ್ನ ಶಾಖೆಯೊಂದನ್ನು ತೆರೆದ ರಾಮಕೃಷ್ಣ ಮಠವು ಮೈಸೂರಿನಲ್ಲಿ ಇನ್ನೊಂದು ಶಾಖೆಯನ್ನು ತೆರೆದದ್ದು ೧೯೨೭ರಲ್ಲಿ. ಸ್ವಾಮಿ ವಿವೇಕಾನಂದರು ಬೆಳಗಾವಿ ಮತ್ತು ಮೈಸೂರುಗಳಿಗೆ ೧೮೯೨ರಲ್ಲಿ ಭೇಟಿ ನೀಡಿದ್ದು ಮೈಸೂರಿನ ಅರಸ ಚಾಮರಾಜೇಂದ್ರ ಒಡೆಯರಿಂದ ಹಣದ ನೆರವು ಪಡೆದು, ಷಿಕ್ಯಾಗೋ ನಗರದ ಸರ್ವಧರ್ಮ ಸಮ್ಮೇಳನಕ್ಕೂ ತೆರಳಿದ್ದರು. ಇವರ ನಂಬಿಕಸ್ಥ ಹಿಂಬಾಲಕರಲ್ಲೊಬ್ಬನಾಗಿದ್ದ ಚಿಕ್ಕಮಗಳೂರಿನ ಅಳಸಿಂಹ ಪೆರುಮಾಳ (೧೮೬೫-೧೯೦೯) ಎಂಬ ಯುವಕನು ಸ್ವಾಮಿಯ ಇಚ್ಚೆಯ ಪ್ರಕಾರ ಮದರಾಸಿನಲ್ಲಿ ಬ್ರಹ್ಮವಾದಿನ್ ಎಂಬ ನಿಯತಕಾಲಿಕವೊಂದನ್ನು ಪ್ರಾರಂಭಿಸಿದ್ದನು.

ಬ್ರಹ್ಮ ಸಮಾಜವು ೧೮೬೬ ರಲ್ಲಿ ರಾಜ್ಯದ ಬೆಂಗಳೂರಿನಲ್ಲಿ ತನ್ನ ಮೊದಲ ಶಾಖೆಯನ್ನು ತೆರೆಯಿತು. ಮುಂದೆ ಮಂಗಳೂರು ಮತ್ತು ಮೈಸೂರುಗಳಲ್ಲಿಯೂ ಅದು ಶಾಖೆಗಳನ್ನು ತೆರೆಯಿತು. ಮಂಗಳೂರಿನಲ್ಲಿ ದುರ್ಬಲ ವರ್ಗಗಳ ಮಂಡಳಿಯೊಂದನ್ನು ೧೮೯೭ರಲ್ಲಿ ಆರಂಭಿಸಿದ ಕುದ್ಮುಲ್ ರಂಗರಾವ್, ಬ್ರಹ್ಮ ಸಮಾಜದ ಆದರ್ಶಗಳಿಂದ ಪ್ರೇರಣೆ ಪಡೆದಿದ್ದರು. ಪ್ರಾರ್ಥನಾ ಸಮಾಜದಲ್ಲಿ ಸಕ್ರಿಯರಾಗಿದ್ದ ಸರ್.ನಾರಾಯಣ ಚಂದಾವರ್ಕರ್, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಬಂದವರಾಗಿದ್ದರು.

ಹಬ್ಬಗಳು ಮತ್ತು ಜಾತ್ರೆಗಳು

ಹಿಂದೂಗಳ ಧಾರ್ಮಿಕ ಜೀವನದಲ್ಲಿ ಅನೇಕ ಪವಿತ್ರ ದಿನಗಳು ಬರುತ್ತವೆ. ಸಾಮಾನ್ಯವಾಗಿ ಒಂದು ವರ್ಷದಲ್ಲಿ ಅನೇಕ ಹಬ್ಬಗಳು ಮತ್ತು ವ್ರತೋಪಾಸನೆಗಳಿರುತ್ತವೆ. ಹಿಂದೂಗಳು ಆಚರಿಸುವ ಕೆಲವು ಮುಖ್ಯವಾದ ಹಬ್ಬಗಳಲ್ಲಿ ಹೆಸರಿಸಲೇಬೇಕಾದವೆಂದರೆ, ಪ್ರತಿ ಚೈತ್ರಮಾಸದಲ್ಲಿ ಬರುವ ಹೊಸವರ್ಷಾಚರಣೆಯ ಯುಗಾದಿ, ರಾಮ ನವಮಿ ಅಥವಾ ಶ್ರೀರಾಮಚಂದ್ರನ ಜನ್ಮದಿನಾಚರಣೆ (ಚೈತ್ರ ಮಾಸದ ೯ನೇ ದಿನ); ಶಂಕರ ಜಯಂತಿ ಅಥವಾ ಆದಿ ಶಂಕರಾಚಾರ್ಯರ ಜನ್ಮದಿನ (ವೈಶಾಖ ಶುದ್ಧ ಪಂಚಮಿ); ಬಸವ ಜಯಂತಿ ಅಥವಾ ಬಸವೇಶ್ವರರ ಜನ್ಮದಿನ(ಅಕ್ಷಯ ತೃತೀಯ), ಕಾರ ಹುಣ್ಣಿಮೆ (ಜ್ಯೇಷ್ಠ ಮಾಸದ ಹುಣ್ಣಿಮೆ ದಿನ) ಆಷಾಢ ಏಕಾದಶಿ (ಆಷಾಢ ಮಾಸದ ಶುಕ್ಲ ಪಕ್ಷದ ೧೧ನೇ ದಿನ); ಭೀಮನ ಅಮಾವಾಸ್ಯೆ (ಆಷಾಢ ಮಾಸದ ಅಮಾವಾಸ್ಯೆ ದಿನ); ನಾಗರ ಪಂಚಮಿ (ಶ್ರಾವಣ ಮಾಸದ ಪಂಚಮಿ ದಿನ); ಗೋಕುಲಾಷ್ಠಮಿ ಅಥವಾ ಕೃಷ್ಣಾಷ್ಟಮಿ (ಶ್ರಾವಣ ಮಾಸದ ಕೃಷ್ಣ ಪಕ್ಷದ ೮ನೇ ದಿನ),  ಶ್ರೀಕೃಷ್ಣನ ಜನ್ಮದಿನ; ಗಣೇಶ ಚತುರ್ಥಿ (ಭಾದ್ರಪದ ಮಾಸ ಶುಕ್ಲ ಪಕ್ಷದ ೪ನೇ ದಿನ); ನವರಾತ್ರಿ ಅಥವಾ ದಸರಾ (ಆಶ್ವೀಜ ಕೃಷ್ಣ ಪಕ್ಷದ ಮೊದಲ ೧೦ ದಿವಸಗಳು); ದೀಪಾವಳಿ (ಆಶ್ವೀಜ ಮಾಸ ಕೃಷ್ಣಪಕ್ಷದ ೧೩ನೇ  ದಿನ); ಭೋಗಿ ಮತ್ತು ಮಕರ ಸಂಕ್ರಾಂತಿ (ಕ್ರಮವಾಗಿ ೧೩ ಮತ್ತು ೧೪ನೇ ಜನವರಿ); ಮಹಾ ಶಿವರಾತ್ರಿ (ಮಾಘಮಾಸ ಕೃಷ್ಣ ಪಕ್ಷದ ೧೩ ಅಥವಾ ೧೪ನೇ ದಿನ); ಮತ್ತು ಕಾಮದೇವನ ದಹನವನ್ನು ಸಂಕೇತಿಸುವ ಸಂಭ್ರಮ ಮತ್ತು ಉಲ್ಲಾಸದಿಂದ ಆಚರಿಸಲ್ಪಡುವ ಕಾಮನ ಹುಣ್ಣಿಮೆ ಅಥವಾ ಹೋಲಿ ಹಬ್ಬ (ಫಾಲ್ಗುಣ ಮಾಸದ ಹುಣ್ಣಿಮೆ ದಿನ).

ರಾಜ್ಯದ ಹಲವೆಡೆ ನವರಾತ್ರಿಯನ್ನು ನಾಡಹಬ್ಬವಾಗಿ ಆಚರಿಸುವ ಪರಂಪರೆ ಇದೆ. ಇವುಗಳಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಸಲ್ಪಡುವುದೇ ಮೈಸೂರು ದಸರಾ. ವಿಜಯದಶಮಿಯಂದು ಅಲಂಕೃತ ಉನ್ನತ ಗಜವೊಂದರ ಮೇಲೆ ಕಟ್ಟಿರುವ, ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಇರಿಸಿ, ವೈಭವೋಪೇತ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿ ಮಂಟಪದವರೆಗೆ ಕರೆದೊಯ್ಯಲಾಗುವುದು. ಇದರಲ್ಲಿ ಇತರ ಅನೇಕ ಸಾಲಂಕೃತ ಆನೆ, ಅರಮನೆ ಪಟ್ಟದ ಕುದುರೆ, ಎತ್ತುಗಳ ಜೊತೆಗೆ ಐತಿಹಾಸಿಕ ಘಟನೆಗಳನ್ನು, ಸರ್ಕಾರದ ಆಧುನಿಕ ಯೋಜನೆಗಳನ್ನು ನೆನಪಿಸುವ ಸ್ತಬ್ಧಚಿತ್ರಗಳು, ಪದಾತಿದಳ, ಅಶ್ವಾರೋಹಿದಳ, ಭಾರತ್ ಸ್ಕೌರ್ಟ್ ಮತ್ತು ಗೈಡ್ಸ್, ಎನ್.ಸಿ.ಸಿ., ಭಾರತ ಸೇವಾದಳ, ಪೊಲೀಸ್ ಬ್ಯಾಂಡ್ ಮತ್ತು ಶಿಸ್ತಿನಿಂದ ಸಾಗುವ ರಂಗುರಂಗಾದ ಉಡುಪುಗಳನ್ನು ಧರಿಸಿರುವ ಮೈಸೂರು ನಗರದ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಿಂದ ಆಹ್ವಾನಿತರಾದ ಜನಪದ ಕಲಾವಿದರೇ ಮುಂತಾದವರು ಪಾಲ್ಗೊಳ್ಳುವರು. ರಾಜ ಪ್ರಭುತ್ವವಿದ್ದ ದಿನಗಳಲ್ಲಿ ಅಂಬಾರಿಯಲ್ಲಿ ಮೈಸೂರಿನ ಮಹಾರಾಜ ಮತ್ತು ಯುವರಾಜರು ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದ ಆಡಂಬರದ ದೃಶ್ಯವನ್ನು ಈಗಲೂ ವೃದ್ಧರನೇಕರು ನೆನಪಿಸಿಕೊಂಡು ಪುಳಕಿತರಾಗುವುದುಂಟು. ದಸರಾ ಆಚರಣೆಯ ಸಂದರ್ಭದಲ್ಲಿ ಮೈಸೂರು ನಗರವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಅವರಿಗಾಗಿ ವೈವಿಧ್ಯಮಯವಾಗಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಇನ್ನೂ ಹಲವೆಡೆ (ಮಡಿಕೇರಿ, ಮಂಗಳೂರು, ಇತ್ಯಾದಿ) ದಸರಾ ಹಬ್ಬದ ಕಾಲದಲ್ಲಿ ಮೆರವಣಿಗೆಗಳು ಜರುಗುವುದುಂಟು.

ರಾಮನವಮಿ ಮತ್ತು ಗಣೇಶ ಚತುರ್ಥಿ ಸಂದರ್ಭಗಳಲ್ಲಿ ಅತ್ಯುತ್ಸಾಹದಿಂದ ನಾಗರಿಕರು ಪೂಜೆ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವರು. ಉತ್ಸವ ಕಾಲದಲ್ಲಿ ಕೆಲವೊಮ್ಮೆ ಜನನಾಯಕರಿಂದ ಭಾಷಣ ಕಾರ್ಯಕ್ರಮಗಳು ಜರುಗಿದರೆ, ಹರಿಕಥೆ, ಸಂಗೀತ, ನೃತ್ಯ ಮತ್ತು ನಾಟಕ ಮುಂತಾದ ಕಾರ್ಯಕ್ರಮಗಳು ವಿಶೇಷ ರೀತಿಯಲ್ಲಿ ಸಾರ್ವಜನಿಕರನ್ನು ರಂಜಿಸುತ್ತವೆ. ಕೊಡವರು ಕೊಯ್ಲು ಮುಹೂರ್ತ, ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬ (ಸುಗ್ಗಿ ಹಬ್ಬ) ಎಂಬ ಮೂರು ಮುಖ್ಯವಾದ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಇಷ್ಟಲ್ಲದೆ, ಬೆಂಗಳೂರು, ಮೈಸೂರು, ರಾಮನಗರ, ಮಾಲೂರು ಮುಂತಾದೆಡೆಗಳಲ್ಲಿ ಜರುಗುವ ಕರಗ ಒಂದು ಸಡಗರ ಸಂಭ್ರಮದ ಧಾರ್ಮಿಕ ಆಚರಣೆಯಾಗಿದೆ.

ಮುಸ್ಲಿಮರ ಪ್ರಮುಖ ಹಬ್ಬಗಳೆಂದರೆ ಈದ್-ಉಲ್-ಫಿತರ್. ಇದು ರಂಜಾನ್ ಹಬ್ಬದ ಕೊನೇ ದಿನ ಉಪವಾಸ ವ್ರತದ ಅಂತ್ಯವನ್ನು ಆಚರಿಸುವ ಪವಿತ್ರ ದಿನವಾಗಿರುತ್ತದೆ. ಇದುಲ್-ಉಲ್-ಜುಹಾ ಅಥವಾ ಬಕ್ರೀದ್ ಹಬ್ಬವನ್ನು ಝಲ್-ಹಜಾ ತಿಂಗಳ ೯ನೇ ದಿನ ಆಚರಿಸುವರು. ಶಬಾನ್ ತಿಂಗಳ ೧೫ನೇ ದಿನ ಆಚರಿಸುವ ಷಬ್-ಎ-ಬರಾತ್ ಮುಸ್ಲಿಮರ ಮತ್ತೊಂದು ಮುಖ್ಯವಾದ ಹಬ್ಬ. ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕವಾಗಿ ಆಚರಿಸಲ್ಪಡುವ ಮೊಹರಂ ಹಬ್ಬದ ಸಂಜೆ ನಡೆಯುವ ಮೆರವಣಿಗೆಯಲ್ಲಿ ಹಿಂದು-ಮುಸ್ಲಿಮರು ಒಟ್ಟಾಗಿ ಸೇರಿ ಸಾಗುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಅಂದು ತಾಬೂತುಗಳನ್ನು ಸಕಲ ಗೌರವಗಳೊಂದಿಗೆ ಮೆರವಣಿಗೆಯಲ್ಲಿ ಒಯ್ಯಲಾಗುತ್ತದೆ. ಕ್ರಿಶ್ಚಿಯನ್ನರು ಹೊಸ ವರ್ಷಾಚರಣೆಯಲ್ಲದೆ, ಗುಡ್ ಫ್ರೈಡೇ, ಆರೋಹಣ ದಿನ (Ascension day) ಸೇಂಟ್ ಜೋಸೆಫರ ಫೀಸ್ಟ್, ಈಸ್ಟರ್ ಭಾನುವಾರ, ಪುನರುತ್ಥಾನ ದಿನ (The day of Resursection), ಮೇರಿ ಮಾತೆಯ ಜನ್ಮದಿನ, ಕ್ರಿಸ್ ಮಸ್ (ಏಸು ಕ್ರಿಸ್ತನ ಜನ್ಮದಿನ), ಥ್ಯಾಂಕ್ಸ್ ಗಿವಿಂಗ್ ದಿನ, ಸುಗ್ಗಿ ಹಬ್ಬ (Harvest Festival) ಮತ್ತು ಚರ್ಚಿನ ವಾರ್ಷಿಕೋತ್ಸವ ಮುಂತಾದ ಹಬ್ಬಗಳನ್ನು ಆಚರಿಸುವರು.

ಜೈನರು ಅನೇಕ ಹಿಂದೂ ಹಬ್ಬಗಳನ್ನು ತಮ್ಮದೇ ಆದ ರೀತಿ ಸಂಪ್ರದಾಯಗಳ ಪ್ರಕಾರ ಆಚರಿಸುವರು. ಉಪವಾಸ ವ್ರತಪಾಲನೆ, ಪ್ರಾರ್ಥನೆ ಮತ್ತು ಧಾರ್ಮಿಕ ಗ್ರಂಥಗಳ ಪಾರಾಯಣ ಮುಂತಾದವುಗಳಿಗೆ ಜೈನರು ಆದ್ಯತೆ ನೀಡುವರು. ಇವರು ಆಚರಿಸುವ ಕೆಲವು ಮುಖ್ಯವಾದ ಹಬ್ಬಗಳೆಂದರೆ: ಆದಿನಾಥ ತೀರ್ಥಂಕರ [ವೃಷಭದೇವ]ನ ಪುತ್ರ ಭರತನ ದಿಗ್ವಿಜಯವನ್ನು ಸ್ಮರಿಸುವ ಚೈತ್ರ ಪ್ರದಿಪದ್ (ಉಗಾದಿ); ಮಹಾವೀರ ಜಯಂತಿ (ಚೈತ್ರ ಶುಕ್ಲ ತ್ರಯೋದಶಿ]: ಆದಿನಾಥ ತೀರ್ಥಂಕರನು ಕೇವಲ ಜ್ಞಾನವನ್ನು ಹೊಂದಿದ ಮತ್ತು ಅವನ ಪುತ್ರ ಭರತನು ‘ಚಕ್ರರತ್ನವನ್ನು ತನ್ನದಾಗಿಸಿಕೊಂಡ ವಿಜಯ ದಶಮಿ [ದಸರಾ]; ಲಕ್ಷ್ಮಿ ಮತ್ತು ಜ್ಞಾನಲಕ್ಷ್ಮಿಯರ ಪೂಜೆ ಮಾಡುವ ಮಹಾವೀರನ ಮಹಾನಿರ್ವಾಣದ ದಿನವಾದ ದೀಪಾವಳಿ; ಮತ್ತು, ಜಿನರಾತ್ರಿ ಎಂದು ಕರೆಯಲಾಗುವ ಮಾಘ ಶುಕ್ಲ ಪಕ್ಷದ ೧೪ನೇ ದಿನ [ಶಿವರಾತ್ರಿ].

ಸಿಖ್ಖರು ಕಾರ್ತಿಕ ಪೌರ್ಣಿಮೆಯಂದು ಗುರು ನಾನಕರ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸುವರು. ಬೀದರಿನಲ್ಲಿರುವ ನಾನಕ್ ಝಿರಾದ ಪ್ರಾರಂಭೋತ್ಸವ ದಿನವನ್ನು ಗುರುಗ್ರಂಥ ಸಾಹಿಬದ ಅಖಂಡ ಪಠಣ, ಕೀರ್ತನೆ ಮತ್ತು ಸತ್ಸಂಗ ಮುಂತಾದ ಕಾರ್ಯಕ್ರಮಗಳನ್ನು ಉತ್ಸಾಹ ಮತ್ತು ಆಡಂಬರದಿಂದ ಸಿಖ್ಖರು ಆಚರಿಸುವರು. ದೇಶದ ನಾನಾ ಭಾಗಗಳಿಂದ ಇದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸಿಖ್ಖರು ಬಂದು ನೆರೆಯುವರು.

ಕರ್ನಾಟಕದಲ್ಲಿನ ಧಾರ್ಮಿಕ ಹಾಗೂ ತಾತ್ವಿಕ ಪಂಥಗಳಲ್ಲಿ ತತ್ವಪದಕಾರರು, ಸೂಫೀಗಳು ಮೊದಲಾದವರೂ ಇದ್ದಾರೆ. ಈ ಸಾಮಾಜಿಕ, ಧಾರ್ಮಿಕ ಪರಂಪರೆಗಳು ಇಲ್ಲಿನ ಸಾಂಸ್ಕೃತಿಕ ವೈವಿಧ್ಯಕ್ಕೂ ಕಾರಣವಾಗಿವೆ. ಕನ್ನಡ ಸಂಸ್ಕೃತಿಯ ಮೂಲ ನೆಲೆಗಳನ್ನು ಕುರಿತು ವಿಶೇಷ ಅಧ್ಯಯನ ನಡೆಸಲು ಸಾಕಷ್ಟು ಅವಕಾಶಗಳೂ ಇವೆ. ಕನ್ನಡ ನೆಲದ ನಿಜವಾದ ಮೂಲ ನಿವಾಸಿಗಳನ್ನು, ಕನ್ನಡಿಗರದೇ ಎನ್ನಬಹುದಾದ ಆಚಾರ, ಸಂಪ್ರದಾಯ, ಕಸುಬು, ಊಟ, ಉಡುಗೆ ತೊಡುಗೆ, ದೈವಗಳು ಮೊದಲಾದುವನ್ನು ಇಂದು ಸ್ಪಷ್ಟವಾಗಿ ಗುರುತಿಸುವುದೇ ಕ್ಲಿಷ್ಟ ಎಂಬಂತಾಗಿದೆ. ಸಾವಿರಾರು ವರ್ಷಗಳಿಂದ ನಡೆದಿರುವ ಹೊರಗಿನ ಸಮುದಾಯಗಳ ಸಂಪರ್ಕ, ಸಹಜೀವನ, ಅನುಸರಣೆ ಗಳಿಂದಾಗಿ ಎಷ್ಟು ಅನ್ಯ ವಿಚಾರಗಳು ಕನ್ನಡಿಗರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಅಧ್ಯಯನಕಾರರು ಗುರುತಿಸಿರುವಂತೆ, ಸಾಸಿವೆ, ಈರುಳ್ಳಿ, ಬೆಳ್ಳುಳ್ಳಿ, ಕುಂಬಳಕಾಯಿ, ಆಲೂಗಡ್ಡೆ, ಗೆಣಸು, ದ್ರಾಕ್ಷಿ..ಇಂತಹ ಅದೆಷಷ್ಟು ಸಾಮಾನ್ಯ ಆಹಾರ ಪದಾರ್ಥಗಳು ವಿದೇಶೀಯರ ಸಾಹಚರ್ಯಗಳಿಂದಾಗಿಯೇ ನಮ್ಮ ಬದುಕಿನಲ್ಲಿ ಪಾಲು ಪಡೆದಿವೆ. ಹಾಗೆಯೇ, ಇಲ್ಲಿನ ದ್ರಾವಿಡ ಸಮುದಾಯಗಳಲ್ಲಿ ಪ್ರಸ್ತುತ ಅನುಸರಣೆಗೊಳ್ಳುತ್ತಿರುವ ವಿವಾಹ, ಶವ ಸಂಸ್ಕಾರಾದಿಗಳ ಅನೇಕ ಸಂಪ್ರದಾಯಗಳಲ್ಲಿ ಉತ್ತರದ ವೈದಿಕ ಸಂಪ್ರದಾಯಗಳ ಪ್ರಭಾವ ಆಗಿದೆ. ಹಿಂದೂಗಳಂತೆ, ಇಲ್ಲಿನ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಲ್ಲಿಯೂ ಕೆಲವೊಂದು ಪ್ರಭಾವಗಳ ಆದದ್ದಿವೆ. ಸಹಿಷ್ಣುತೆ, ಸಹಬಾಳ್ವೆ, ಉದಾರತೆಗಳನ್ನು ಕನ್ನಡದ ಕವಿಗಳು ಪ್ರಧಾನವಾಗಿ ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ಮನುಷ್ಯ ಕುಲಂ ತಾನೊಂದೇ ವಲಂ ಎಂಬುದು ಮಹಾಕವಿ ಪಂಪನು ಕನ್ನಡದ ಮೂಲಕ ಲೋಕಕ್ಕೆ ಸಾರಿದ ಮಾನವೀಯ ಸಂದೇಶವಾಗಿದೆ.

 

ಜಾತ್ರೆಗಳು

ಸಾಮಾನ್ಯವಾಗಿ ಪ್ರತಿ ಜನಾಂಗವೂ ಗ್ರಾಮ ದೇವತೆಗಳನ್ನು ಆರಾಧಿಸಲು ಸುಗ್ಗಿಯ ನಂತರ ಜಾತ್ರೆ / ಪರಿಷೆಗಳು ನಡೆಯುತ್ತವೆ. ಪ್ರಸ್ತುತದಲ್ಲಿ, ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮದೇವತೆಯ ವಾರ್ಷಿಕ ಆರಾಧನೆಯನ್ನು ಊರ ಹಬ್ಬ ಅಥವಾ, ಪರಿಷೆ  ಎಂದೂ, ದೊಡ್ಡ ಊರುಗಳ ಪ್ರಧಾನ ದೇವರ ವಾರ್ಷಿಕ ರಥೋತ್ಸವಗಳನ್ನು ಜಾತ್ರೆ ಎಂದೂ ಗ್ರಾಮೀಣರು ಗುರುತಿಸಿ ಕೊಳ್ಳುತ್ತಾರೆ. ಹಿಂದೂ ದೇವಾಲಯಗಳು, ಜೈನ ಬಸದಿಗಳು, ಮುಸ್ಲಿಮರ ದರ್ಗಾಗಳು ಮತ್ತು ಇತರೆ ಧಾರ್ಮಿಕ ಪಂಥಗಳ ಪೂಜಾ ಸ್ಥಳಗಳಲ್ಲಿ ವಾರ್ಷಿಕೋತ್ಸವಗಳು ಜರುಗುತ್ತವೆ. ಇಂತಹ ಜಾತ್ರೆಗಳಲ್ಲಿ ಸ್ತ್ರೀ ಪುರುಷರು, ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಬಂದು ಬಹಳ ಸಂಭ್ರಮದಿಂದ ಸಮಾವೇಶಗೊಳ್ಳುವರು. ಜಾತ್ರೆಯ ಕಾಲದಲ್ಲಿ ಯಾವುದೇ ತೆರನಾದ ಜಾತಿ, ಪಂಥ ಅಥವಾ ಮತ ಸಂಬಂಧವಾದ ತಾರತಮ್ಯವನ್ನು ಮಾಡದೇ ಎಲ್ಲರೂ ಒಂದಾಗಿ ರಥೋತ್ಸವ, ಮೆರವಣಿಗೆ, ಮುಂತಾದ ಕಾರ್ಯಕ್ರಮಗಳಲ್ಲಿ ಶ್ರದ್ಧೆ ಸಡಗರಗಳಿಂದ ಭಾಗವಹಿಸುವುದೊಂದು ವಿಶೇಷ.

ರಾಜ್ಯದ ಕೆಲವು ಪ್ರಮುಖ ದೇವಸ್ಥಾನಗಳ ವಾರ್ಷಿಕ ಜಾತ್ರೆಗಳ ಸಂದರ್ಭದಲ್ಲಿ ರಾಸುಗಳ ವ್ಯಾಪಾರ ವಹಿವಾಟೂ ಜೋರಾಗಿ ನಡೆಯುತ್ತದೆ. ರೈತರಿಗೆ ತಮ್ಮ ಎತ್ತು, ಹೋರಿಗಳನ್ನು ಮಾರಲು, ಕೊಳ್ಳಲು ಇದು ಅವಕಾಶ ಒದಗಿಸುತ್ತದೆ. ಅಲ್ಲದೆ, ಕೆಲವು ಮುಖ್ಯ ಹಳ್ಳಿಗಳಲ್ಲಿ ಏರ್ಪಡುವ ವಾರದ ಸಂತೆಗಳಲ್ಲಿ ಎಮ್ಮೆ, ಕುರಿ, ಮೇಕೆ, ಕೋಳಿ ಮೊದಲಾದವುಗಳ ಮಾರಾಟ, ಅಲ್ಲದೆ, ಮನೆಯ ದಿನ ನಿತ್ಯದ ಬಳಕೆಗೆ ಅಗತ್ಯವಾದ ದಿನಸಿ, ಸಾಂಬಾರು ಪದಾರ್ಥ, ತರಕಾರಿ ಹಾಗೂ ಬಟ್ಟೆಗಳನ್ನು ಖರೀದಿಸಲು ಮುಕ್ತ ಅವಕಾಶವಿರುತ್ತದೆ. ಇಂತಹ ಜಾತ್ರೆ- ಪರಿಷೆಗಳಲ್ಲಿ ಸಂಚಾರಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ಗೊಂಬೆ, ಆಟಿಕೆ, ಬಳೆ, ಪಾತ್ರೆ - ಪರಡಿ, ಪ್ಲಾಸ್ಟಿಕ್ ಗೃಹೋಪಕರಣ, ಸಿಹಿ-ಉಪ್ಪು ಖಾರದ ವಿವಿಧ ತೆರನಾದ ತಿಂಡಿ, ತಂಪು ಪಾನೀಯ, ಹಣ್ಣುಗಳೇ ಮುಂತಾದವನ್ನು ಮಾರಾಟ ಮಾಡುವರು. ಸಂಚಾರಿ ಹೋಟೆಲು ಮತ್ತು ಸಂಚಾರಿ ನಾಟಕ, ಸಿನೆಮಾ ಪ್ರದರ್ಶನಗಳು ಇಂತಹ ಜಾತ್ರೆಗಳಲ್ಲಿ ಮೊದಲಿನಿಂದಲೂ ನಡೆಯುತ್ತಾ ಬಂದಿವೆ. ಒಟ್ಟಿನಲ್ಲಿ ಜಾತ್ರೆಗಳು ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ದೃಷ್ಟಿಗಳಿಂದ ರಾಜ್ಯಾದ್ಯಂತ ಮಹತ್ವವನ್ನು ಪಡೆದಿರುವವಲ್ಲದೆ ಜನರನ್ನು ಒಂದುಗೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಲಿವೆ.

 

(*ಮಾಹಿತಿ ಮೂಲ: ಕರ್ನಾಟಕ ಕೈಪಿಡಿ, ಕರ್ನಾಟಕ ರಾಜ್ಯ ಗೆಜೆಟಿಯರ್‌,)

ಇತ್ತೀಚಿನ ನವೀಕರಣ​ : 09-09-2021 02:31 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
 • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

 • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
 • Meity_logo
 • digital
 • data
 • India
 • pm
 • gigw
 • wcag
 • ssl
 • w3c
 • kp_kn