ಇತಿಹಾಸ

ಭೌಗೋಳಿಕವಾಗಿ ದಕ್ಷಿಣಭಾರತದ ನೈಋತ್ಯ ಭಾಗದಲ್ಲಿರುವ ಕರ್ನಾಟಕ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಈ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಶ್ರೀಮಂತವಾದ ಅರಣ್ಯ ಸಂಪತ್ತು ಹಾಗೂ ಸಮತಟ್ಟಾದ ಕಣಿವೆಗಳಿವೆ. ಜೊತೆಗೆ ಅದಕ್ಕೆ ಮುಕುಟಪ್ರಾಯವಾಗಿ ಹೆಚ್ಚು ಸಂಪದ್ಭರಿತ ಆದರೆ ಇಕ್ಕಟ್ಟಾದ ಕರಾವಳಿ ತೀರ ಪ್ರದೇಶವೂ ಇದೆ. ನವಮಂಗಳೂರು ಬಂದರಿನ ಮೂಲಕ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ಅಧಿಕ ವಿದೇಶಿ ವಿನಿಮಯ ಗಳಿಕೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಮೌಲ್ಯವನ್ನು ಕರ್ನಾಟಕವು ಹೆಚ್ಚಿಸಿಕೊಂಡಿದೆ. ಇವೆಲ್ಲದರ ಜೊತೆಗೆ, ಈ ರಾಜ್ಯಕ್ಕೆ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇದೆ.  ಮಿಗಿಲಾಗಿ ಪೌರಾಣಿಕ ಕಥಾನಕಗಳ ಹಿನ್ನೆಲೆಯೂ ಇದೆ.

ಇತಿಹಾಸ ಪೂರ್ವಕಾಲ

ಕರ್ನಾಟಕಕ್ಕೆ ಭವ್ಯವಾದ ಪ್ರಾಚೀನತೆಯಿದೆ. ಅಸಂಖ್ಯಾತ  ಶಾಸನ, ಸ್ಮಾರಕಶಿಲೆ [ವೀರಗಲ್ಲು, ಮಹಾಸತಿ(ಮಾಸ್ತಿ) ಕಲ್ಲು, ನಿಸಿಧಿ ಕಲ್ಲು ಮತ್ತು ಆತ್ಮಾಹುತಿ ಕಲ್ಲು], ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳಿಂದ ಸಮೃದ್ಧವಾಗಿದೆ. ಇಲ್ಲಿನ ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ, ಕಾವೇರಿ, ಶರಾವತಿ, ಹೇಮಾವತಿ, ಶಿಂಷಾ, ತುಂಗಭದ್ರಾ, ಮಂಜ್ರಾ, ಪೆನ್ನಾರ್, ನೇತ್ರಾವತಿ, ಅರ್ಕಾವತಿ ಮೊದಲಾದ ನದಿ-ಉಪನದಿಗಳ ಕಣಿವೆ ಪ್ರದೇಶಗಳಲ್ಲಿ ಇತಿಹಾಸ  ಪೂರ್ವಕಾಲದ ವಿವಿಧ ಹಂತಗಳಿಗೆ ಸೇರಿದ ನಿವೇಶನಗಳು ಗಣನೀಯ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಹಿಂದಿನ ಮದ್ರಾಸ್  ಪ್ರೆಸಿಡೆನ್ಸಿ ಪ್ರಾಂತದ ಭಾಗವಾಗಿದ್ದ ಬಳ್ಳಾರಿ ಪ್ರದೇಶದಲ್ಲಿದ್ದ ಬ್ರಿಟಿಷ್ ಅಧಿಕಾರಿ ಕ್ಯೂಬಾಲ್ಡ್ 1836ರಲ್ಲಿ ಕುಪ್ಪಗಲ್ ಮತ್ತು ಕುಡತಿನಿಯ ಬೂದಿದಿಬ್ಬಗಳನ್ನು ಸಂಶೋಧಿಸಿ ವರದಿಮಾಡಿದ್ದೇ ಭಾರತದಲ್ಲಿ ಇತಿಹಾಸ ಪೂರ್ವಕಾಲದ ಅಧ್ಯಯನಕ್ಕೆ ನಾಂದಿಯಾಯಿತೆಂಬುದು ವಿಶೇಷವಾದ ವಿಷಯವಾಗಿದೆ. ಕರ್ನಾಟಕದ ಇತಿಹಾಸಪೂರ್ವ ಕಾಲದ ಕೈಕೊಡಲಿ ಸಂಸ್ಕೃತಿಯು, ಆಫ್ರಿಕಾ ಖಂಡದಲ್ಲಿದ್ದ ಅದೇ ಬಗೆಯ ಸಂಸ್ಕೃತಿಯೊಂದಿಗೆ ಹೆಚ್ಚೂ ಕಡಿಮೆ ಹೋಲುತ್ತದೆಯಾದರೂ, ಉತ್ತರಭಾರತದ ಇತಿಹಾಸಪೂರ್ವ ಕಾಲದ ಸಂಸ್ಕೃತಿಯೊಂದಿಗೆ ಸಾಕಷ್ಟು ವಿಭಿನ್ನವಾಗಿದೆ. ಹುಣಸಗಿ, ಗುಲಬಾಲ್, ಕಲ್ಲದೇವನಹಳ್ಳಿ, ತೆಗ್ಗಿನಹಳ್ಳಿ, ಬೂದಿಹಾಳ್, ಪಿಕ್ಲಿಹಾಳ್, ಕಿಬ್ಬನಹಳ್ಳಿ, ನಿಟ್ಟೂರು,  ಅನಗವಾಡಿ, ಕಲಾದಗಿ, ಖ್ಯಾಡ್, ನ್ಯಾಮತಿ, ಬಾಳೇಹೊನ್ನೂರು, ಉಪ್ಪಿನಂಗಡಿ ಮುಂತಾದವು(ಆದಿ ಶಿಲಾಯುಗ); ಹೇರಕಲ್, ತಮ್ಮಿನಹಾಳ್, ಸಾವಳಗಿ, ಸಾಲ್ವಡಗಿ, ಮೆಣಸಿಗಿ, ಪಟ್ಟದಕಲ್ಲು, ವಜ್ಜಲ, ನಾರಾವಿ, ತಲಕಾಡು ಇತ್ಯಾದಿ(ಮಧ್ಯ ಶಿಲಾಯುಗ); ಕೋವಳ್ಳಿ, ಇಂಗಳೇಶ್ವರ, ಯಾದವಾಡ, ಮರಳಭಾವಿ ಇತ್ಯಾದಿ(ಅಂತ್ಯ ಶಿಲಾಯುಗ); ಬೇಗಂಪೂರ್, ವನಮಪುರಹಳ್ಳಿ, ಹಿಂಗಣಿ, ಇಂಗಳೇಶ್ವರ, ತಮ್ಮಿನಹಾಳು, ಶೃಂಗೇರಿ, ಜಾಲಹಳ್ಳಿ, ಕಿಬ್ಬನಹಳ್ಳಿ, ಸಂಗನಕಲ್ಲು, ಬ್ರಹ್ಮಗಿರಿ, ಉಪ್ಪಿನಂಗಡಿ, ಮಾಣಿ, ದೊಡ್ಡಗುಣ ಇತ್ಯಾದಿ(ಸೂಕ್ಷ್ಮ ಶಿಲಾಯುಗ); ಮಾಸ್ತಿ, ಟಿ.ನರಸೀಪುರ, ಬನಹಳ್ಳಿ, ಹಳ್ಳೂರು, ಸಂಗನಕಲ್ಲು, ಹೆಮ್ಮಿಗೆ, ಕೊಡೇಕಲ್ಲು, ಬ್ರಹ್ಮಗಿರಿ, ಕುಪ್ಪಗಲ್ಲು, ತೆಕ್ಕಲಕೋಟೆ, ಕರ್ನೊಲ್, ಶ್ರೀನಿವಾಸಪುರ, ಬೀರಮಂಗಲ, ಫ್ರೆಂಚ್‌ರಾಕ್ಸ್ (ಪಾಂಡವಪುರ), ಉತ್ತನೂರು ಇತ್ಯಾದಿ (ನವಶಿಲಾಯುಗ ಮತ್ತು ತಾಮ್ರ ಶಿಲಾಯುಗ); ರಾಜನ ಕೊಲ್ಲೂರು, ಬಾಚಿಗುಡ್ಡ, ಐಹೊಳೆ, ಕೊಣ್ಣೂರು, ತೇರದಾಳ, ಹಿರೇ ಬೆಣಕಲ್ಲು, ಕುಮಾರನಹಳ್ಳಿ, ತಡಕನಹಳ್ಳಿ, ಮಾಸ್ತಿ, ಬನಹಳ್ಳಿ, ಬಡಗ-ಕಜೆಕಾರು, ಬೇಲೂರು, ಬೋರಕಟ್ಟೆ, ಕೊಣಾಜೆ, ಕಕ್ಕುಂಜೆ, ವಡ್ಡರ್ಸೆ,ಹಳ್ಳಿಂಗಲಿ(ಬೃಹತ್ ಶಿಲಾಯುಗ) ಮುಂತಾದೆಡೆ ಇತಿಹಾಸಪೂರ್ವಕಾಲದ ಪ್ರಮುಖ ನೆಲೆಗಳು ಪತ್ತೆಯಾಗಿವೆ.

ಆಫ್ರಿಕಾ ಹಾಗೂ ಕರ್ನಾಟಕದ ಇತಿಹಾಸಪೂರ್ವಕಾಲದ ನಿವೇಶನಗಳಲ್ಲಿ ಸಾಮಾನ್ಯವಾಗಿ ರಾಗಿ ಧಾನ್ಯ ದೊರೆಯುತ್ತದೆ.  ಅಲ್ಲದೆ, ಕರ್ನಾಟಕದ ಪ್ರಾಚೀನ ನಿವಾಸಿಗಳು ಉತ್ತರದವರಿಗಿಂತ ಮೊದಲೇ ಕಬ್ಬಿಣದ ಉಪಯೋಗವನ್ನು ಬಲ್ಲವರಾಗಿದ್ದರು. ಪ್ರಸಕ್ತ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳ್ಳೂರಿನಲ್ಲಿ ಕ್ರಿ.ಪೂ. 1500ಕ್ಕೆ ಸೇರಿದ್ದೆಂದು ಗುರುತಿಸಲಾಗಿರುವ ಕಬ್ಬಿಣದ ಆಯುಧಗಳೂ ದೊರೆತಿವೆ. ಅದೇ ರೀತಿ ಹೆಗಡೆಗಳ್ಳಿ (ಕೊಡಗು ಜಿಲ್ಲೆ) ಮುಂತಾದೆಡೆಗಳಲ್ಲಿ ಕಬ್ಬಿಣದ ಪರಿಕರಗಳು ಪತ್ತೆಯಾಗಿವೆ. (ಹೆಚ್ಚಿನ ಮಾಹಿತಿಗೆ ಕೆ.ಶಿವತಾರಕ್; ‘ಕರ್ನಾಟಕದ ಪುರಾತತ್ವ ನೆಲೆಗಳು’ ಗ್ರಂಥ ನೋಡಿ) ಕರ್ನಾಟಕದ ಕೆಲವು ಭಾಗಗಳನ್ನು ನಂದ ಮತ್ತು ಮೌರ್ಯ  ಅರಸರು ಆಳುತ್ತಿದ್ದರೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ.

ಮೌರ್ಯ ದೊರೆ ಚಂದ್ರಗುಪ್ತನು (ಅಶೋಕನ ತಾತ ಚಂದ್ರಗುಪ್ತ ಅಥವಾ ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತ) ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ತನ್ನ ಅಂತ್ಯ ಕಾಲವನ್ನು ಅಲ್ಲೇ  ಕಳೆದನೆಂದೂ ನಂಬಲಾಗಿದೆ. ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದಗೋಲಂಗಳಲ್ಲಿ ತಲಾ ಎರಡೆರಡು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು, ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡುಗಳಲ್ಲಿ ತಲಾ ಒಂದೊಂದು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಜಟಿಂಗರಾಮೇಶ್ವರ ಮತ್ತು ಸಿದ್ದಾಪುರಗಳಲ್ಲಿ ತಲಾ ಒಂದೊಂದು, (ಒಟ್ಟು 10 ಕಿರು ಶಿಲಾಶಾಸನಗಳು); ಹಾಗೂ ಕಲಬುರಗಿ (ಗುಲಬರ್ಗಾ) ಜಿಲ್ಲೆಯ ಸನ್ನತಿಯಲ್ಲಿ ನಾಲ್ಕು ಬೃಹತ್  ಶಿಲಾಶಾಸನಗಳು (13 ಮತ್ತು 14ನೇ ಸಂಖ್ಯೆಯವು)-ಹೀಗೆ ಅಶೋಕನ ಒಟ್ಟು 14 ಶಿಲಾಶಾಸನಗಳು ಕರ್ನಾಟಕದಲ್ಲಿ ಈವರೆಗೆ ದೊರೆತಿವೆ. ಇವು ಮೌರ್ಯ ಸಾಮ್ರಾಜ್ಯದ ವ್ಯಾಪ್ತಿಗೆ ಸಾಕ್ಷಿಯಾಗಿವೆ.

ಸಾಮ್ರಾಟ್ ಅಶೋಕನ ಹೆಸರು ಮಸ್ಕಿಯ ಕಿರುಶಿಲಾಶಾಸನದಲ್ಲಿ  ‘ದೇವಾನಾಂಪ್ರಿಯ ಪ್ರಿಯದರ್ಶಿ’ ಎಂಬ ವಿಶೇಷಣದೊಂದಿಗೆ,  ಮೊದಲ ಬಾರಿಗೆ ಕಾಣಿಸಿಕೊಂಡಿರುವುದು ಮಹತ್ವದ ವಿಷಯ. ಕರ್ನಾಟಕದಲ್ಲಿ ಲಭಿಸಿರುವ ಅಶೋಕನ ಶಾಸನಗಳ ಭಾಷೆ ಪ್ರಾಕೃತ, ಬಳಸಿರುವ ಲಿಪಿ ಬ್ರಾಹ್ಮೀ. ಬ್ರಾಹ್ಮೀಲಿಪಿ, ಭಾರತದ ಎಲ್ಲಾ  ಲಿಪಿಗಳ (ದೇವನಾಗರಿಯೂ ಸೇರಿದಂತೆ) ಮಾತೃಲಿಪಿಯಾಗಿದೆ. ಮಿಗಿಲಾಗಿ ಚಕ್ರವರ್ತಿ ಅಶೋಕನ ನಾಮಾಂಕಿತ ಶಿಲ್ಪವು ಸನ್ನತಿ ಸಮೀಪದ ಕನಗನಹಳ್ಳಿಯ ಬೌದ್ಧ ನಿವೇಶನದಲ್ಲಿ ದೊರೆತಿದೆ. ಅಲ್ಲದೆ, ಕನಗನಹಳ್ಳಿಯಲ್ಲಿರುವ ಬೌದ್ಧ ಸ್ತೂಪಾವಶೇಷ (Adholoka Maha Chaitya)ವನ್ನು ಅಶೋಕನ ಕಾಲಕ್ಕೆ ಗುರುತಿಸಲಾಗಿದೆ. ಹೀಗೆ ಬ್ರಹ್ಮಗಿರಿ, ಚಂದ್ರವಳ್ಳಿ, ಮಸ್ಕಿ, ಸಂಗನಕಲ್ಲು, ಪಿಕ್ಲಿಹಾಳು, ಬನವಾಸಿ, ಹಳ್ಳೂರು, ತಿರುಮಕೂಡಲು ನರಸೀಪುರ, ರಾಜಘಟ್ಟ, ವಡಗಾಂವ್ ಮಾಧವಪುರ, ಬನಹಳ್ಳಿ, ಸನ್ನತಿ ಮೊದಲಾದ ಸ್ಥಳಗಳು, ಕ್ರಿಸ್ತ ಪೂರ್ವ ಮೂರನೆಯ ಶತಮಾನದಿಂದ ಕ್ರಿಸ್ತ ಶಕ  ಒಂದನೆಯ ಶತಮಾನದ ಅವಧಿಗೆ ಸೇರಿದ ಪೂರ್ವೇತಿಹಾಸ ಅಥವಾ ಪ್ರಾಗಿತಿಹಾಸ ಕಾಲದ ಮಹತ್ವದ ಅವಶೇಷಗಳನ್ನು  ಹೊಂದಿವೆ.

ಶಾತವಾಹನರು (ಕ್ರಿ.ಪೂ.30-ಕ್ರಿ.ಶ.230)

ಮಹಾರಾಷ್ಟ್ರದ ಪೈಠಾಣಾ (ಪ್ರತಿಷ್ಠಾನ ಎಂದೂ ಕರೆಯಲಾಗಿತ್ತು) ಶಾತವಾಹನರ ರಾಜಧಾನಿಯಾಗಿದ್ದು, ಇವರ ಆಳ್ವಿಕೆಗೆ ಉತ್ತರ ಕರ್ನಾಟಕದ ಅನೇಕ ಭಾಗಗಳು ಒಳಪಟ್ಟಿದ್ದವು. ಕೆಲವು  ವಿದ್ವಾಂಸರು, ಈ ವಂಶೀಯರನ್ನು ಕರ್ನಾಟಕ ಮೂಲದವರೆಂದೇ ವಾದಿಸುತ್ತಾರೆ. ಈ ಅವಧಿಯಲ್ಲಿ ಧಾರವಾಡ ಮತ್ತು ಬಳ್ಳಾರಿ  ಜಿಲ್ಲೆಗಳನ್ನು ‘ಶಾತವಾಹನಿಹಾರ’ (ಶಾತವಾಹನ ಪ್ರಾಂತ) ಎಂದು ಕರೆಯಲಾಗುತ್ತಿತ್ತು. ಆ ವಂಶದ ಕೆಲವು ದೊರೆಗಳನ್ನು  ಕುಂತಳದ ದೊರೆಗಳೆಂದೂ ಕರೆಯಲಾಗಿದೆ. ಕಲಬುರಗಿ ಜಿಲ್ಲೆಯ ಸನ್ನತಿ, ಬೆಳಗಾವಿ ಸಮೀಪದ ವಡಗಾವ ಮಾಧವಪುರ, ಬಳ್ಳಾರಿ ಜಿಲ್ಲೆಯ ಹಂಪಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ಇವರ ಕಾಲದ ಅವಶೇಷಗಳು ದೊರೆತಿವೆ. ಉತ್ತರಕನ್ನಡದ ಬನವಾಸಿಯಲ್ಲಿ ಅವರ ರಾಣಿಯೊಬ್ಬಳ ಶಾಸನವಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ವಾಸನದಲ್ಲಿ ಶಾತವಾಹನರ ಕಾಲಕ್ಕೆ ಸೇರಿದ ಶೈವ ದೇವಾಲಯವೊಂದರ  ಇಟ್ಟಿಗೆ ರಚನೆಯನ್ನು ಗುರುತಿಸಲಾಗಿದೆ. ಸನ್ನತಿಯ ಸಮೀಪದ ಕನಗನಹಳ್ಳಿಯಲ್ಲಿ ಇವರ ಕಾಲದ ಶಿಲ್ಪಗಳಿಂದ ಕೂಡಿದ ಬೌದ್ಧ ಸ್ಥೂಪಾವಶೇಷಗಳೂ ದೊರೆತಿವೆ.

ಸನ್ನತಿ ಸಮೀಪದ ಕನಗನಹಳ್ಳಿಯಲ್ಲಿ ದೊರೆತ ಅತ್ಯಂತ  ಮಹತ್ವದ ಪ್ರಾಚ್ಯಾವಶೇಷಗಳೆಂದರೆ ಬುದ್ಧದೇವನ ಆಸೀನ  ಹಾಗೂ ಸ್ತಾನಕ ಭಂಗಿಯ ಶಿಲ್ಪಗಳು. ಅಷ್ಟೇ ಅಲ್ಲ, ಇಲ್ಲಿನ ಉತ್ಖನನದಲ್ಲಿ ಎಂಟು ಮಂದಿ ಶಾತವಾಹನ ದೊರೆಗಳ ಶಿಲ್ಪಗಳೂ  ದೊರೆತಿವೆ. ಆನಂತರದ ಕಾಲದಲ್ಲಿ ಕರ್ನಾಟಕವು ಕಂಚಿಯ ಪಲ್ಲವರ ಅಧೀನಕ್ಕೊಳಗಾಯಿತು. ಶಾತವಾಹನರ ಪತನದ ನಂತರ, ಬನವಾಸಿಯನ್ನು ಆಳುತ್ತಿದ್ದ ಚುಟುವಂಶದ ಸಾತಕರ್ಣಿಗಳು, ಪಲ್ಲವರ ಸಾರ್ವಭೌಮತ್ವವನ್ನು ಒಪ್ಪಿಕೊಂಡು, ಅವರ ಸಾಮಂತರಾಗಿದ್ದಂತೆ ತೋರುತ್ತದೆ. ಸ್ಥಳೀಯ ವಂಶಗಳಾದ  ಬನವಾಸಿಯ ಕದಂಬರು ಹಾಗೂ ತಲಕಾಡಿನ ಗಂಗರು, ಪಲ್ಲವರ ಅಧಿಕಾರವನ್ನು ಈ ಭಾಗದಲ್ಲಿ ಕೊನೆಗಾಣಿಸಿ, ಕರ್ನಾಟಕವನ್ನು ಎರಡು ಭಾಗವನ್ನಾಗಿಸಿಕೊಂಡು ಆಳ್ವಿಕೆ ನಡೆಸಿದರು.

ಪಕ್ಷಿನೋಟ: ಕ್ರಿಸ್ತ ಶಕ ನಾಲ್ಕನೆಯ ಶತಮಾನದಿಂದೀಚಿನ  ಕರ್ನಾಟಕದ ರಾಜಕೀಯ ಇತಿಹಾಸದ ಪಕ್ಷಿನೋಟವನ್ನು ಇಲ್ಲಿ ನೀಡಲಾಗಿದೆ. ಗಂಗರು ಮತ್ತು ಕದಂಬರು ಕ್ರಿಸ್ತ ಶಕ 345ರಿಂದ ಆಳ್ವಿಕೆ ನಡೆಸುತ್ತಿದ್ದರು.ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಚಾಲುಕ್ಯರು (ಕ್ರಿ. ಶ. 540ರಿಂದ 783) ಕದಂಬರನ್ನು ಕೆಳಗಿಳಿಸಿ, ತಲಕಾಡಿನ ಗಂಗರನ್ನೂ ಹಾಗೂ ಕರಾವಳಿ ಭಾಗವನ್ನು ಸುಮಾರು 1,000 ವರ್ಷಗಳಿಗಿಂತ ಹೆಚ್ಚುಕಾಲ ಆಳುತ್ತಿದ್ದ ಸ್ಥಳೀಯ ದೊರೆಗಳಾಗಿದ್ದ ಆಳುಪರಸರನ್ನೂ ಹಿಡಿತದಲ್ಲಿಟ್ಟುಕೊಂಡಿದ್ದರು. ಕಲಬುರಗಿ  ಜಿಲ್ಲೆಯ ಮಳಖೇಡದ ರಾಷ್ಟ್ರಕೂಟರು (ಕ್ರಿ.ಶ. 753ರಿಂದ 973 ರವರೆಗೆ), ಬಾದಾಮಿಯ ಚಾಲುಕ್ಯರ ಉತ್ತರಾಧಿಕಾರಿಗಳಾದರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1189) ಬೀದರ್ ಜಿಲ್ಲೆಯ ಇಂದಿನ ಬಸವಕಲ್ಯಾಣದಿಂದ ಆಳ್ವಿಕೆ ನಡೆಸಿದರು. ದಕ್ಷಿಣ ಭಾಗಗಳಲ್ಲಿ ಮೊದಮೊದಲು ಸಾರ್ವಭೌಮರಾಗಿದ್ದ (ಕ್ರಿಸ್ತ ಶಕ 350ರಿಂದ 550) ಗಂಗರು ಆನಂತರ ಬಾದಾಮಿಯ ಚಾಲುಕ್ಯರ ಅಥವಾ ಮಳಖೇಡದ ರಾಷ್ಟ್ರಕೂಟರ ಮಿತ್ರರಾಗಿಯೋ, ಸಾಮಂತರಾಗಿಯೋ ಕಿಸ್ತ ಶಕ 1004 ರವರೆವಿಗೂ ಆಳ್ವಿಕೆ ನಡೆಸಿದರು. ಆನಂತರ, ಗಂಗವಾಡಿ-96000 (ದಕ್ಷಿಣ ಕರ್ನಾಟಕ ಹಾಗೂ ನೆರೆಯ ತಮಿಳು ನಾಡಿನ ಕೆಲವು ಭಾಗ) ಪ್ರಾಂತವನ್ನು  ಚೋಳರು ಆಕ್ರಮಿಸಿದಾಗ, ಅವರ ರಾಜ್ಯದ ಬಹುಭಾಗ ಚೋಳರ ಆಳ್ವಿಕೆಗೆ ಒಳಗಾಯಿತು.ದಕ್ಷಿಣ ಕರ್ನಾಟಕದಲ್ಲಿ ಕ್ರಿಸ್ತ ಶಕ 1004ರಿಂದ ತಮ್ಮ ಪ್ರಭುತ್ವವನ್ನು ಮೆರೆದ ಚೋಳರನ್ನು ಕ್ರಿ.ಶ. 1114ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನು ಕರ್ನಾಟಕದಿಂದ ಹೊರದಬ್ಬುವಲ್ಲಿ ಯಶಸ್ವಿಯಾದನು.

ಕಲ್ಯಾಣದ ಚಾಳುಕ್ಯರ ಆಳ್ವಿಕೆಯ ನಡುವೆ ಕಲಚೂರಿಗಳ ಆಳ್ವಿಕೆಯೂ (ಕ್ರಿ. ಶ. 1162-1184) ನಡೆಯಿತು. ಆಗಲೇ ನಡೆದದ್ದು ಬಸವಣ್ಣ ಮತ್ತಿತರರು ಪ್ರಚುರಪಡಿಸಿದ ವೀರಶೈವ ಚಳವಳಿ. ಕಲ್ಯಾಣದ ಚಾಳುಕ್ಯರ ಆಳ್ವಿಕೆಯ ಕೊನೆಯಲ್ಲಿ ಅವರ ಸಾಮಂತರಾಗಿದ್ದ ದೇವಗಿರಿಯ ಸೇವುಣರು ಹಾಗೂ ದ್ವಾರಸಮುದ್ರದ ಹೊಯ್ಸಳರು ಪ್ರಬಲರಾಗಿ, ಕರ್ನಾಟಕವನ್ನು ತಮ್ಮಲ್ಲೇ ಹಂಚಿಕೊಂಡು ಆಳಿದರು. ಮುಂದೆ ದೆಹಲಿ ಸುಲ್ತಾನರ ಸೈನ್ಯವು ಈ ಎರಡೂ ವಂಶಗಳ ಅರಸರನ್ನು ಸೋಲಿಸಿದ ಬೆನ್ನಲ್ಲೇ ವಿಜಯನಗರ ಸಾಮ್ರಾಜ್ಯದ ದೊರೆಗಳು (1336) ಹಾಗೂ ಬಹಮನಿ ಸುಲ್ತಾನರು (1347) ಕರ್ನಾಟಕವನ್ನು ಆಳಲು ಮುಂದಾದರು. ಅದರಲ್ಲೂ ವಿಜಯನಗರದರಸರು ಕರ್ನಾಟಕದ ಬಹುಭಾಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು.

ಬಹಮನಿ ಸುಲ್ತಾನರ ನಂತರ ಅಧಿಕಾರಕ್ಕೆ ಬಂದ ಐದು ಶಾಹೀ ಮನೆತನಗಳಲ್ಲಿ ಬಿಜಾಪುರದ ಆದಿಲ್‌ಶಾಹಿಗಳು (1489- 1686) ಮತ್ತು ಬೀದರಿನ ಬರೀದ್‌ಶಾಹಿಗಳು (1504-1619), ಕರ್ನಾಟಕದ ಉತ್ತರ ಭಾಗಗಳ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದರು. ಆದರೆ ಆನಂತರದಲ್ಲಿ ಆದಿಲ್‌ಶಾಹಿಗಳು ಬರೀದ್ ಶಾಹಿಗಳನ್ನು ಉಚ್ಛಾಟಿಸಿದರು.  ಮುಂದೆ 1565ರಲ್ಲಿ ಸಂಯುಕ್ತ ಶಾಹೀ ಸುಲ್ತಾನರ ಸೈನ್ಯ,  ರಕ್ಕಸಗಿ-ತಂಗಡಗಿ ಯುದ್ಧದಲ್ಲಿ ಸೋತ ವಿಜಯನಗರ ಸೇನೆಯ ಬೆನ್ನತ್ತಿ, ರಾಜಧಾನಿ ವಿಜಯನಗರಕ್ಕೆ ಮುತ್ತಿಗೆ ಹಾಕಿ ಸೂರೆ ಮಾಡಿತು. ಆ ವೇಳೆಗಾಗಲೇ ರಾಜಧಾನಿಯಿಂದ ಪರಾರಿಯಾಗಿದ್ದ ವಿಜಯನಗರದ ವೆಂಕಟಪತಿರಾಯ ಮತ್ತು ತಿರುಮಲರಾಯರು ಸಾಮ್ರಾಜ್ಯದ ರಾಜಧಾನಿಯನ್ನು ಮೊದಲು ಪೆನುಗೊಂಡೆಗೆ (1565) ಸ್ಥಳಾಂತರಿಸಿದರು. ಆನಂತರ ಚಂದ್ರಗಿರಿಗೆ (ಎರಡೂ ಆಂಧ್ರ ಪ್ರದೇಶದಲ್ಲಿವೆ) ಮತ್ತು ಕೊನೆಯಲ್ಲಿ ತಮಿಳುನಾಡಿನ ವೆಲ್ಲೂರಿಗೆ ವರ್ಗಾಯಿಸಲಾಯಿತು.ವೆಲ್ಲೂರು ಕ್ರಿ. ಶ. 1646ರವರೆಗೆ ರಾಜಧಾನಿಯಾಗಿತ್ತು.

ಕರ್ನಾಟಕದಲ್ಲಿ ವಿಜಯನಗರದ ಉತ್ತರಾಧಿಕಾರಿಗಳಾದ ಅನೇಕ ಮಂಡಲಾಧಿಪತಿಗಳಲ್ಲಿ, ಮೈಸೂರಿನ ಒಡೆಯರು, ಚಿತ್ರದುರ್ಗದ ಪಾಳೆಯಗಾರರು, ಮಾಗಡಿಯ ಪ್ರಭುಗಳು ಮತ್ತು ಕೆಳದಿಯ ಅರಸರು ಅತ್ಯಂತ ಪ್ರಮುಖರಾಗಿದ್ದರು. ಮುಂದೆ 1686ರಲ್ಲಿ ಮೊಗಲರ ಕೈಯಲ್ಲಿ ಸೋಲುವವರೆವಿಗೂ ಉತ್ತರದ ಪ್ರಾಂತಗಳೆಲ್ಲಾ ಬಿಜಾಪುರದ ಆದಿಲ್‌ಶಾಹಿಗಳ ಹಿಡಿತದಲ್ಲಿದ್ದವು. ಉತ್ತರದಲ್ಲಿ ಮೊಗಲರ ಪ್ರಾಬಲ್ಯ ಕಡಿಮೆಯಾದಂತೆ, ಕರ್ನಾಟಕದ ಉತ್ತರ ಜಿಲ್ಲೆಗಳ ಮೇಲೆ ಮರಾಠರು ಹಿಡಿತವನ್ನು ಸಾಧಿಸಿದರು. 1761ರಲ್ಲಿ ಮೈಸೂರಿನ ಒಡೆಯರಿಂದ ಅಧಿಕಾರವನ್ನು ಸೆಳೆದುಕೊಂಡ ಹೈದರಾಲಿಯು, ಕೆಳದಿ ಹಾಗೂ ಚಿತ್ರದುರ್ಗ  ಸಂಸ್ಥಾನಗಳನ್ನು ಕ್ರಮವಾಗಿ 1763 ಮತ್ತು 1779ರಲ್ಲಿ ವಶಪಡಿಸಿಕೊಂಡು, ಮಂಗಳೂರಿನವರೆವಿಗೂ ತನ್ನ ಅಧಿಕಾರವನ್ನು ವಿಸ್ತರಿಸಿದನು. ಹೈದರ್‌ನ ಮಗ ಟಿಪ್ಪೂವನ್ನು 1799ರಲ್ಲಿ, ಸೋಲಿಸಿದ ನಂತರ ಮೈಸೂರು ಒಡೆಯರ್ ರಾಜಮನೆತನಕ್ಕೆ ಮುಂದೆ, ಅರಸೊತ್ತಿಗೆ ದೊರೆಯಿತು. ಮರಾಠ ಪೇಶ್ವೆಗಳನ್ನು 1818ರಲ್ಲಿ ಬ್ರಿಟಿಷರು ಸೋಲಿಸಿದಾಗ, ಕರ್ನಾಟಕವು ಬ್ರಿಟಿಷರ ಆಳ್ವಿಕೆಗೆ ಒಳಗಾಯಿತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಮೈಸೂರು ಸಂಸ್ಥಾನವೂ ಸೇರಿದಂತೆ ವಿವಿಧ ಆಡಳಿತಕ್ಕೆ ಒಳಪಟ್ಟಿದ್ದ ಕರ್ನಾಟಕವೂ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿತು. ಇದು ಮುಂದೆ 1956ರಲ್ಲಿ ಒಂದು ಭಾಷಾ ರಾಜ್ಯವಾಗಿ ಜನಿಸಿ, 1973ರಲ್ಲಿ ‘ಕರ್ನಾಟಕ’ ಎಂದು ಪುನರ್‌ನಾಮಕರಣಗೊಂಡಿತು.

 

ಬನವಾಸಿಯ ಕದಂಬರು (ಕ್ರಿ. ಶ. 345-540)

 ಬಂಧುಷೇಣನ ಮಗ ಮಯೂರವರ್ಮನೊಂದಿಗೆ  ಕದಂಬರ ಆಳ್ವಿಕೆ ಕ್ರಿ.ಶ.345ರಲ್ಲಿ ಆರಂಭವಾಯಿತು. ಶಿವಮೊಗ್ಗ  ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಪ್ರಸಿದ್ಧ ತಾಳಗುಂದ ಅಗ್ರಹಾರದ (ವಿದ್ವಾಂಸರಾದ ಬ್ರಾಹ್ಮಣರು ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಕೇಂದ್ರಗಳೇ ಅಗ್ರಹಾರಗಳು) ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ  ಇವನು ತನ್ನ ತಾತನಾದ ವೀರಶರ್ಮನೊಂದಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಂಚಿಯ ಘಟಿಕಾಸ್ಥಾನಕ್ಕೆ ಹೋಗಿದ್ದಾಗ, ಪಲ್ಲವರ ರಾಜಧಾನಿಯಾದ ಕಂಚಿಯಲ್ಲಿ ಅವಮಾನಿತನಾದ, ಮಯೂರವರ್ಮನು ತನ್ನ ಪಾರಂಪರಿಕ ವೈದಿಕ ವೃತ್ತಿಯನ್ನು ತೊರೆದು ಸೈನಿಕನಾಗಿ, ಪಲ್ಲವರ ವಿರುದ್ಧ ಬಂಡಾಯ ಸಾರಿದ  ಎಂಬ ಅಭಿಪ್ರಾಯವಿದೆ. (ಆದರೆ ಮಯೂರನ ಬ್ರಾಹ್ಮಣ ಮೂಲವನ್ನು ಇತ್ತೀಚೆಗೆ ಕೆಲವು ಸಂಶೋಧಕರು ಪ್ರಶ್ನಿಸುತ್ತಿದ್ದಾರೆ).

ಮುಂದೆ ಉತ್ತರಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಇವನು  ತನ್ನನ್ನು ದೊರೆ ಎಂದು ಘೋಷಿಸಿಕೊಂಡಾಗ, ಅವನ ಸ್ವತಂತ್ರ ಆಡಳಿತವನ್ನು ಪಲ್ಲವರು ನಿರ್ವಾಹವಿಲ್ಲದೇ  ಒಪ್ಪಿಕೊಳ್ಳಬೇಕಾಯಿತು. ಇವನು ಚಂದ್ರವಳ್ಳಿಯಲ್ಲಿ ಕೆರೆಯೊಂದನ್ನು ಕಟ್ಟಿಸಿದ ಅಥವಾ ದುರಸ್ತಿ ಮಾಡಿಸಿದುದನ್ನು ಚಂದ್ರವಳ್ಳಿ ಶಾಸನ ದಾಖಲಿಸಿದೆ. ಆನಂತರದಲ್ಲಿ ಬಂದ ಕಾಕುಸ್ಥವರ್ಮ  (436-55)ನು ವಾಕಾಟಕರು ಮತ್ತು ಗುಪ್ತವಂಶದ ದೊರೆಗಳ ಜೊತೆಗೆ ವೈವಾಹಿಕ ಸಂಬಂಧವನ್ನು ಬೆಳೆಸಿಕೊಳ್ಳುವಂತಹ  ಪ್ರಬಲ ದೊರೆಯಾಗಿದ್ದ. ಪ್ರಸಿದ್ಧ ಸಂಸ್ಕೃತ ಕವಿ ಕಾಳಿದಾಸ ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದಂತೆ ತೋರುತ್ತದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ (ಸುಮಾರು ಕ್ರಿ. ಶ. 450) ದೊರೆತಿರುವ ಕನ್ನಡದ ಅತ್ಯಂತ ಪ್ರಾಚೀನ ಶಾಸನವನ್ನು  ಹಾಕಿಸಿದವನು ಇವನೇ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಹಲಸಿ ಇವರ ಉಪರಾಜಧಾನಿಯಾಗಿದ್ದು ಪ್ರಮುಖ ಜೈನಕೇಂದ್ರವಾಗಿ ಮಹತ್ವ ಪಡೆದಿತ್ತು. ಕದಂಬರು ಅನೇಕ ಸುಂದರ ದೇವಾಲಯ, ಬಸದಿಗಳನ್ನು ನಿರ್ಮಾಣ ಮಾಡಿದ್ದಾರೆ. ಸೋಪಾನ ಮಾದರಿಯ ಶಿಖರಗಳ ರಚನೆಯಾದ ಕದಂಬ ನಾಗರಶೈಲಿ ಇವರ ಕೊಡುಗೆ. ಇವರು ಮೊದಲ ಬಾರಿಗೆ ಗೋವಾದ ಅರವೆಲಂನ ಕೆಂಪು ಜಂಬಿಟ್ಟಿಗೆ ಪರ್ವತ ಶ್ರೇಣಿಯಲ್ಲಿ ವೈದಿಕ ಪರಂಪರೆಯ ಗುಹಾ ದೇವಾಲಯಗಳನ್ನು ಕೊರೆಸಿದ್ದಾರೆ. ಅವರು ನೀರಾವರಿಗಾಗಿ  ಕಟ್ಟಿಸಿದ ಕೆರೆಗಳಲ್ಲಿ ಚಂದ್ರವಳ್ಳಿ ಹಾಗೂ ಗುಡ್ನಾಪುರದ ಕೆರೆಗಳು ಪ್ರಮುಖವಾದವು. ಅವರು ಸಿಂಹವನ್ನು ತಮ್ಮ ರಾಜಲಾಂಛನವನ್ನಾಗಿಸಿ ಕೊಂಡಿದ್ದರು. ಕ್ರಿ. ಶ. ಸುಮಾರು 540ರಲ್ಲಿ ಬಾದಾಮಿಯ ಚಾಲುಕ್ಯರು ಬಹುಶಃ ಇವರನ್ನು ಸೋಲಿಸಿದಂತೆ  ತೋರುತ್ತದೆ. ಆನಂತರದ ದಿನಗಳಲ್ಲಿ, ಕದಂಬರ ಎರಡು ಶಾಖೆಗಳು (ಹಾನಗಲ್ಲಿನಲ್ಲಿ ಒಂದು, ಗೋವೆಯಲ್ಲಿ ಮತ್ತೊಂದು)  ಮಧ್ಯಯುಗದಲ್ಲಿ ಕಲ್ಯಾಣದ ಚಾಳುಕ್ಯರ ಸಾರ್ವಭೌಮತ್ವದಡಿ  ಆಳ್ವಿಕೆ ನಡೆಸಿದವು. ಅಲ್ಲದೆ ಕದಂಬರ ಇನ್ನೊಂದು ಶಾಖೆ ಒರಿಸ್ಸಾದ  ಕಳಿಂಗ-ಗಂಗ ದೊರೆಗಳ ಆಶ್ರಯದಲ್ಲಿ ಆಳ್ವಿಕೆ ನಡೆಸುತ್ತಿದ್ದುದೂ ತಿಳಿದು ಬಂದಿದೆ.

 

ತುಳುನಾಡಿನ ಆಳುಪರು

ಕ್ರಿಸ್ತಶಕ ನಾಲ್ಕರಿಂದ 16ನೇ ಶತಮಾನದ ವರೆಗೆ  ಉದ್ಯಾವರ, ಮಂಗಳೂರು ಮತ್ತು ಬಾರಕೂರುಗಳನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡು  ಕರಾವಳಿ ಮತ್ತದರ ಮಗ್ಗುಲಿನ ಪ್ರದೇಶಗಳ ಮೇಲೆ ಆಳ್ವಿಕೆ ನಡೆಸಿದ ಆಳುಪರು, ತಮ್ಮ ಸಮಕಾಲೀನ ಕರ್ನಾಟಕ ಸಾರ್ವಭೌಮರಾದ  ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರೇ ಮೊದಲಾದವರೊಂದಿಗೆ ಉತ್ತಮ ಸಾಂಸ್ಕೃತಿಕ  ಸಂಬಂಧವನ್ನು ಹೊಂದಿದ್ದರು. ಕದ್ರಿ, ಸೋಮೇಶ್ವರ, ಉದ್ಯಾವರ, ಬಾರಕೂರು, ಬೆಳ್ಮಣ್ಣು, ವಡ್ಡರ್ಸೆ ಮೊದಲಾದ ಪ್ರದೇಶಗಳಲ್ಲಿ ದೊರೆತಿರುವ ಶಾಸನಗಳು ಕರಾವಳಿ ಪ್ರದೇಶದಲ್ಲಿದ್ದ ಇವರ  ಆಡಳಿತವನ್ನು ಹೇಳುತ್ತವೆ. ಮಂಗಳೂರಿನ ಸಮೀಪದ ಕದ್ರಿಯ ಮಂಜುನಾಥ ದೇವಾಲಯದಲ್ಲಿರುವ, ಅವಲೋಕಿತೇಶ್ವರನ ಲೋಹದ ಮೂರ್ತಿಯನ್ನು ಕ್ರಿ.ಶ. 968ರಲ್ಲಿ ಅಳುಪದೊರೆ ಕುಂದವರ್ಮನು ಪ್ರತಿಷ್ಠಾಪಿಸಿದ್ದು, ದಕ್ಷಿಣ ಭಾರತದಲ್ಲೇ  ಅಪೂರ್ವವಾದದ್ದಾಗಿದೆ.

ತಲಕಾಡಿನ ಗಂಗರು (ಕ್ರಿ. ಶ. 350-1024)

ಗಂಗರು ತಮ್ಮ ಆಳ್ವಿಕೆಯನ್ನು  ಕೋಲಾರದಿಂದ ಸುಮಾರು ಕ್ರಿ.ಶ.350ರಲ್ಲಿ ಆರಂಭಿಸಿದ ಹಾಗೆ ತೋರುತ್ತದೆ. ಆನಂತರ ಅವರು ಮೈಸೂರು ಜಿಲ್ಲೆಯ  ತಲಕಾಡಿಗೆ ರಾಜಧಾನಿಯನ್ನು ಬದಲಾಯಿಸಿಕೊಂಡರು. ಸಲಗ ಅವರ ರಾಜಲಾಂಛನವಾಗಿತ್ತು. ಬಾದಾಮಿ ಚಾಲುಕ್ಯರ ಆಳ್ವಿಕೆ ಆರಂಭವಾಗುವವರೆಗೆ, ಇವರು ಹೆಚ್ಚು ಕಡಿಮೆ ಸಾರ್ವಭೌಮ ದೊರೆಗಳಂತೆಯೇ ಇದ್ದರು. ಅನೇಕ ಗಂಗ ಅರಸರು, ಪಂಡಿತರೂ ಕವಿಗಳೂ ಆಗಿದ್ದು, ಪಂಡಿತರಿಗೆ ಆಶ್ರಯ ನೀಡಿದ್ದರು. ಮುಂದೆ ಅವರು ಕ್ರಿ. ಶ. 10ನೇ ಶತಮಾನದ ಕೊನೆಯವರೆಗೆ ಬಾದಾಮಿಯ ಚಾಲುಕ್ಯ, ಹಾಗೂ ರಾಷ್ಟ್ರಕೂಟರ ಸಾಮಂತರಾಗಿ ದಕ್ಷಿಣ ಕರ್ನಾಟಕದ ಪ್ರಮುಖ ಭಾಗ ಹಾಗೂ ತಮಿಳುನಾಡಿನ ಕೆಲವು  ಭಾಗಗಳಿಂದ ಕೂಡಿದ ಗಂಗವಾಡಿ-96000 ಪ್ರದೇಶವನ್ನು ಆಳಿದರು. ದಕ್ಷಿಣ ಕರ್ನಾಟಕವನ್ನು ಸ್ವಾಧೀನಪಡಿಸಿಕೊಳ್ಳಲು ಹವಣಿಸಿದ ಪಲ್ಲವರು ಹಾಗೂ ಚೋಳರ ಆಕ್ರಮಣಗಳನ್ನು  ತಡೆದವರೇ ಈ ಗಂಗರು. ದುರ್ವಿನೀತ (ಕ್ರಿ. ಶ. 529-579) ಈ ವಂಶದ ಪ್ರಖ್ಯಾತ ದೊರೆ. ಅವನು ಅನೇಕ ಕೃತಿಗಳನ್ನು  ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚಿಸಿದ್ದ. ಸಂಸ್ಕೃತ ಕವಿ ಭಾರವಿ, ಇವನ ಆಸ್ಥಾನದಲ್ಲಿ ಕೆಲವು ಕಾಲ ಆಶ್ರಯ ಪಡೆದಿದ್ದ ಎಂಬ ಅಭಿಪ್ರಾಯವೂ ಇದೆ. ಪ್ರಾಚೀನ ಪುನ್ನಾಟ ದೇಶ (ಇಂದಿನ ಹೆಗ್ಗಡದೇವನಕೋಟೆ ತಾಲ್ಲೂಕು ಪ್ರದೇಶ) ಇವನ ರಾಜ್ಯದಲ್ಲಿ ಸಮಾವೇಶಗೊಂಡಿತ್ತು. ಇವನ ಮರಿ ಮೊಮ್ಮಗನಾದ ಭೂವಿಕ್ರಮ  (ಕ್ರಿ. ಶ. 654-79), ಬಾದಾಮಿಯ ಚಾಲುಕ್ಯರ ಮಿತ್ರನಾಗಿದ್ದು,  ಚಾಲುಕ್ಯ-ಪಲ್ಲವರ ನಡುವೆ ವಿಳಂದೆಯಲ್ಲಿ ನಡೆದ ಯುದ್ಧದಲ್ಲಿ  (ಕ್ರಿ. ಶ. 670) ಭಾಗವಹಿಸಿ, ಪಲ್ಲವ ಪರಮೇಶ್ವರವರ್ಮನ  ಮೇಲೆ ಚಾಲುಕ್ಯ ಚಕ್ರವರ್ತಿಯು ಗೆಲುವನ್ನು ಸಂಪಾದಿಸುವಂತೆ ಮಾಡಿದ. ಯುದ್ಧದ ವಿಜಯ ಸ್ಮಾರಕವಾಗಿ ಪಲ್ಲವ ದೊರೆಯ ‘ಉಗ್ರೋದಯ’ ಎಂಬ ಕಂಠೀಹಾರವನ್ನು ತಾನೇ ಇಟ್ಟುಕೊಂಡ.

ಚನ್ನಪಟ್ಟಣ(ರಾಮನಗರ ಜಿಲ್ಲೆ)ತಾಲ್ಲೂಕಿನ ‘ಮಂಕುಂದ’ ಕೆಲವು ಕಾಲ ಇವರ ನೆಲೆವೀಡಾಗಿತ್ತೆಂಬ(?) ಅಭಿಪ್ರಾಯವಿದೆ. ಈ ವಂಶದ ಆನಂತರದ ದೊರೆಯಾದ ಶ್ರೀಪುರುಷನು (ಕ್ರಿ. ಶ. 725-88) ಚಾಲುಕ್ಯರ ಆಪ್ತ ಬಂಧು-ಸ್ನೇಹಿತನಾಗಿದ್ದು, ತನ್ನನ್ನು ನಿಯಂತ್ರಿಸಲು ಪ್ರಯತ್ನಿಸಿದ ರಾಷ್ಟ್ರಕೂಟರನ್ನು, ಅವರು ಬಾದಾಮಿ ಚಾಲುಕ್ಯರನ್ನು ಪರಾಜಯಗೊಳಿಸಿದಾಗಲೂ ಪ್ರತಿಭಟಿಸಿದ. ಚಾಲುಕ್ಯರ ಪರವಾಗಿ ನಡೆದ ಕ್ರಿ. ಶ.734ರ ವಿಳಂದೆ ಯುದ್ಧದಲ್ಲಿ ಶ್ರೀಪುರುಷನು ಪಲ್ಲವ ಇಮ್ಮಡಿ ನಂದಿವರ್ಮನನ್ನು ಕೊಂದು, ಪಲ್ಲವ ದೊರೆಗಳ ಬಿರುದಾದ ‘ಪೆರ್ಮಾನಡಿ’ಯನ್ನು ತಾನೇ ಧರಿಸಿದ. ಈ ಶ್ರೇಷ್ಠ ದೊರೆ ಆನೆಗಳನ್ನು ಪಳಗಿಸುವ ವಿಷಯವನ್ನುಳ್ಳ ‘ಗಜಶಾಸ್ತ್ರ’ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ. ಇವನು ತನ್ನ ರಾಜಧಾನಿಯನ್ನು ನೆಲಮಂಗಲ ತಾಲೂಕಿನ ಮಣ್ಣೆಗೆ (ಮಾನ್ಯಪುರ) ಬದಲಾಯಿಸಿದ. ಇವನ ಮಗ ಇಮ್ಮಡಿ ಶಿವಮಾರ (788-816) ಹಾಗೂ ಮೊಮ್ಮಗ ಒಂದನೇ ರಾಚಮಲ್ಲ (816-853), ರಾಷ್ಟ್ರಕೂಟರ ಮೇಲಿನ ಪ್ರತಿಭಟನೆಯನ್ನು ಮುಂದುವರಿಸಿದರು. ಕೊನೆಯಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ಒಂದನೇ ನೃಪತುಂಗನು (814-78) ತನ್ನ ಮಗಳನ್ನು ಗಂಗ ರಾಜಕುಮಾರನಿಗೆ ವಿವಾಹ ಮಾಡಿಕೊಡುವುದರ ಮೂಲಕ ಗಂಗರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ. ಆನಂತರದ ಕಾಲದಲ್ಲಿ ಚೋಳರು ಪ್ರಬಲರಾಗಿದ್ದಾಗ, ಗಂಗದೊರೆ ಇಮ್ಮಡಿ ಬೂತುಗನು (938-961), ರಾಷ್ಟ್ರಕೂಟರೊಡನೆ ಸೇರಿ ಚೋಳರನ್ನು ವಿರೋಧಿಸಿದಾಗ, ರಾಷ್ಟ್ರಕೂಟ ಮೂರನೆಯ ಕೃಷ್ಣನ (939-967) ಜೊತೆ ಸೇರಿ, ತಕ್ಕೋಲದಲ್ಲಿ ನಡೆದ  ಯುದ್ಧದಲ್ಲಿ (949) ಚೋಳ ರಾಜಕುಮಾರ ರಾಜಾದಿತ್ಯನನ್ನು ಕೊಂದು, ಚೋಳರನ್ನು ಅವಮಾನಿಸಿದ ವಿಚಾರ ಆತಕೂರು ಶಾಸನದಲ್ಲಿದೆ. ಈ ಶಾಸನವಿಂದು ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿದೆ. ಇದು ಕಾಡುಹಂದಿಯೊಂದಿಗೆ ಹೋರಾಡುತ್ತ ಮಡಿದ ಸಾಕುನಾಯಿ ಕಾಳಿಗಾಗಿ ಹಾಕಿಸಿದ ಸ್ಮಾರಕ ಶಿಲಾಶಾಸನವಾಗಿದೆ.

ಮುಂದೆ ಗಂಗರ ಆಡಳಿತ ಪ್ರದೇಶ ಚೋಳರ ಆಕ್ರಮಣಕ್ಕೆ ಒಳಗಾಗಿ ಅವರ ಆಳ್ವಿಕೆ ಸುಮಾರು 1004ರಲ್ಲಿ ಕೊನೆಗೊಂಡಿತು. ತಲಕಾಡನ್ನು ತಮ್ಮ ಪ್ರಾಂತೀಯ ಕೇಂದ್ರಸ್ಥಾನವಾಗಿ ಮಾಡಿಕೊಂಡು ಗಂಗವಾಡಿ 96000 ಪ್ರಾಂತವನ್ನು ಆಳಿದ ಚೋಳರನ್ನು ಕ್ರಿ. ಶ.1114 ರಲ್ಲಿ ಹೊಯ್ಸಳ ವಿಷ್ಣುವರ್ಧನನು ಓಡಿಸಿದ. ಈ ಗಂಗರ ಒಂದು ಶಾಖೆ ಕ್ರಿ. ಶ. 496ರಿಂದ ಒರಿಸ್ಸಾದಲ್ಲಿ ಆಳುತ್ತಿದ್ದು, ಅವರನ್ನು ಪೂರ್ವ ಅಥವಾ ಕಳಿಂಗ ಗಂಗರೆಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಗಂಗ ಸಾಮಂತರಲ್ಲಿ, ಪ್ರಾಂತೀಯ ರಾಜಕೀಯ ಸೆಳೆವುಗಳಿಗೆ ತಕ್ಕಂತೆ ಸ್ಥಳೀಯ ರಾಜಕಾರಣದಲ್ಲಿ ಭಾಗವಹಿಸಿದವರಲ್ಲಿ ನೊಳಂಬ ದೊರೆಗಳೂ ಪ್ರಮುಖರು. ಗಂಗರು ರಾಜ್ಯದ ಉದ್ದಗಲಕ್ಕೂ ಕೆರೆಗಳನ್ನು ನಿರ್ಮಾಣ ಮಾಡಿಸಿದರು. ಅವರ ಆಳ್ವಿಕೆಯ ಆರಂಭದಲ್ಲಿ ಗಂಗರಾಜ್ಯದ ತಿರುಳ್ನಾಡಾಗಿದ್ದ ಇಂದಿನ ಕೋಲಾರ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಅವರ ಕಾಲದಲ್ಲಿ ಅನೇಕ ನೀರಾವರಿ ಸೌಕರ್ಯಗಳನ್ನು ಕಂಡವು. ಬೇಗೂರು, ದೊಡ್ಡಹುಂಡಿ ಮೊದಲಾದ ಪ್ರದೇಶಗಳಲ್ಲಿರುವ ಗಂಗರ ಕಾಲದ ವೀರಗಲ್ಲುಗಳು, ಮುಂಕುಂದ, ಸೆಟ್ಟಿಹಳ್ಳಿ ಮೊದಲಾದ ಪ್ರದೇಶಗಳಲ್ಲಿರುವ ಮಾಸ್ತಿಕಲ್ಲುಗಳು ಗಮನಾರ್ಹವಾಗಿವೆ.

ಕೋಲಾರ, ತಲಕಾಡು, ಬೇಗೂರು, ನಾಗವಾರ, ಗಂಗವಾರ, ನಂದಿ, ಅರೆತಿಪ್ಪೂರು ಮತ್ತು ನರಸಮಂಗಲಗಳಲ್ಲಿ ಅವರ ಕಾಲದ ಸುಂದರ ದೇವಾಲಯಗಳಿವೆ. ನರಸಮಂಗಲದಲ್ಲಿರುವ ದೇವಾಲಯದ ಆಶ್ಚರ್ಯಕರವಾದ ಗಾರೆ ಶಿಲ್ಪಗಳು ಅತ್ಯಂತ ಕಲಾತ್ಮಕವಾಗಿವೆ. ಅವರು ಕಂಬದಹಳ್ಳಿ ಹಾಗೂ ಶ್ರವಣಬೆಳಗೊಳದಲ್ಲಿ ಜೈನ ಬಸದಿಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಮದ್ದೂರು ತಾಲೂಕು ಕೂಳಗೆರೆಯ ಸಮೀಪದ ಅರೆತಿಪ್ಪೂರಿನ ಬಳಿಯ ಬೆಟ್ಟದ ಮೇಲಿರುವ ಕ್ರಿ. ಶ. 918ರಲ್ಲಿ ಸ್ಥಾಪಿತವಾದ ಸುಮಾರು 10 ಅಡಿ ಎತ್ತರದ ಏಕಶಿಲಾ ಗೊಮ್ಮಟ ವಿಗ್ರಹ ಹಾಗೂ ಸುಮಾರು ಕ್ರಿ. ಶ. 982ರಲ್ಲಿ ಶ್ರವಣಬೆಳಗೊಳದಲ್ಲಿ ಗಂಗರ ಮಂತ್ರಿಯಾದ ಚಾವುಂಡ ರಾಯನು ನಿರ್ಮಾಣ ಮಾಡಿಸಿದ 58 ಅಡಿ ಎತ್ತರದ ಗೊಮ್ಮಟಮೂರ್ತಿ ಅತ್ಯಂತ ಅಪೂರ್ವವಾದವು. ಇತ್ತೀಚಿನ ದಶಕಗಳಲ್ಲಿ ತಲಕಾಡಿನಲ್ಲಿ ನಡೆದ ಉತ್ಖನನಗಳಿಂದ ಗಂಗರ ಕಾಲಕ್ಕೆ ಸೇರಿದ ಜೈನ ಬಸದಿಯ ಪಳಿಯುಳಿಕೆಗಳೂ ಸೇರಿದಂತೆ ಗ್ರೀಕ್ ಸಂಪರ್ಕವನ್ನು ಸೂಚಿಸುವ ಅನೇಕ ಅವಶೇಷಗಳು ಬೆಳಕಿಗೆ ಬಂದಿವೆ.

 

ಬಾದಾಮಿಯ ಚಾಲುಕ್ಯರು (ಕ್ರಿ. ಶ. 540-757)

ಸಂಪೂರ್ಣ ಕರ್ನಾಟಕವನ್ನು ಒಂದೇ ಮನೆತನದ ಆಳ್ವಿಕೆಗೆ ಒಳಪಡಿಸಿದವರು ಬಾದಾಮಿಯ (ಶಾಸನಗಳಲ್ಲಿ ಇದನ್ನು ‘ವಾತಾಪಿʼ ಎಂದು ಕರೆಯಲಾಗಿದೆ) ಚಾಲುಕ್ಯರು. ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲೂ ಇವರ ಕೊಡುಗೆ ಅವಿಸ್ಮರಣೀಯ. ಅವರ ಕಾಲದ ಸ್ಮಾರಕ, ಕಟ್ಟಡಗಳು ಕರ್ನಾಟಕದ ಬಾದಾಮಿ, ನಾಗರಾಳ, ಐಹೊಳೆ, ಬಿ. ಎನ್. ಜಾಲಿಹಾಳ್, ಪಟ್ಟದಕಲ್ಲು, ಹಳೆ ಮತ್ತು ಹೊಸ ಮಹಾಕೂಟ; ಆಂಧ್ರಪ್ರದೇಶದ ಆಲಂಪುರ, ಗದ್ವಾಲ್, ಸತ್ಯವೊಳಲ್ ಮತ್ತು ಬೀಚವೊಳಲುಗಳಲ್ಲಿ ಕೇಂದ್ರೀಕೃತವಾಗಿವೆ. ಇವು ಕೊರೆದ ಗುಹಾ ರಚನೆಗಳೂ, ಕಟ್ಟಡ ರಚನೆಗಳೂ ಆಗಿದ್ದು ಗಟ್ಟಿ ಕೆಂಪು ಮರಳುಗಲ್ಲಿನಲ್ಲಿ ರೂಪುಗೊಂಡ ಶಿಲ್ಪಗಳನ್ನೂ ಒಳಗೊಂಡಿವೆ.

ಈ ಮನೆತನದ ಶಿಗ್ಗಾಂವ್ ತಾಮ್ರಪಟ, ಹಾವೇರಿ ಜಿಲ್ಲೆಯ 14 ಕೆರೆಗಳನ್ನು ಉಲ್ಲೇಖಿಸುತ್ತದೆ. ಬಾದಾಮಿಯಲ್ಲಿ ದೊಡ್ಡ ಕೋಟೆಯನ್ನು ಕಟ್ಟಿಸಿದ ಮೊದಲನೆಯ ಪುಲಿಕೇಶಿ (ಕ್ರಿ. ಶ. 540-566), ಈ ವಂಶದ ಶ್ರೇಷ್ಠ ದೊರೆ. ಇವನು ಕದಂಬರೇ ಮೊದಲಾದ ದೊರೆಗಳನ್ನು ಅಡಗಿಸಿ, ಅಶ್ವಮೇಧಯಾಗವನ್ನು ಮಾಡಿದನೆಂದು ಕ್ರಿ. ಶ. 543ರ ಬಾದಾಮಿಯ ಬಂಡೆ ಶಾಸನವು ದಾಖಲಿಸುತ್ತದೆ. ಕರ್ನಾಟಕದ ಶಾಸನಗಳಲ್ಲಿ ಶಕ (ಶಕ 465) ಸಂವತ್ಸರದ ಅತ್ಯಂತ ಪ್ರಾಚೀನ ಉಲ್ಲೇಖ ಇದರಲ್ಲಿದೆ.ಅವನ ಮೊಮ್ಮಗನಾದ ಇಮ್ಮಡಿ ಪುಲಿಕೇಶಿಯು (ಕ್ರಿ. ಶ. 608-642) ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ ವ್ಯಾಪಿಸಿದ್ದ ಮಹಾ ಸಾಮ್ರಾಜ್ಯವನ್ನು ಕಟ್ಟಿದ. ಪೂರ್ವ ಪ್ರಾಂತದ ವಿಷ್ಣುಕುಂಡಿನರನ್ನು ಸೋಲಿಸಿ, ತನ್ನ ಕಿರಿಯ ಸೋದರ ಕುಬ್ಜ ವಿಷ್ಣುವರ್ಧನನನ್ನು ವೆಂಗಿ ಪ್ರಾಂತಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಆಂಧ್ರದಲ್ಲಿ ಐದು ಶತಮಾನಗಳ ಕಾಲ ಆಳ್ವಿಕೆ ನಡೆಸಿದ ಪೂರ್ವ ಚಾಲುಕ್ಯರ  ಆಳ್ವಿಕೆಗೆ ನಾಂದಿ ಹಾಡಿದನು. (ಈ ವೆಂಗಿ ಪೀಳಿಗೆಯಲ್ಲಿ) ಆನಂತರದ ಕಾಲದಲ್ಲಿ ಬಂದ ಕುಲೋತ್ತುಂಗನು, ಕ್ರಿ. ಶ. 1070ರಲ್ಲಿ ಚೋಳಸಿಂಹಾಸನವನ್ನೂ ಏರಿ ಪ್ರಖ್ಯಾತನೆನಿಸಿದ. ಇಮ್ಮಡಿ ಪುಲಿಕೇಶಿಯು ಕನೂಜಿನ ದೊರೆ ಹರ್ಷನನ್ನು  ಸೋಲಿಸಿದ್ದು, ಚಾಲುಕ್ಯರ ಸೈನ್ಯವನ್ನು ‘ಕರ್ನಾಟಕಬಲ’ ಎಂದು ಕರೆಯಲಾಗುತ್ತಿದ್ದು, ಅವರು ಅಜೇಯರಾಗಿದ್ದರೆಂದು ಸಮಕಾಲೀನ ಶಾಸನಗಳು ಬಣ್ಣಿಸುತ್ತವೆ. ಇವನು ಪರ್ಶಿಯಾ ದೇಶದ ಜೊತೆಗೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡಿದ್ದ. ಚೀನಾ ದೇಶದ ಪ್ರವಾಸಿ ಹ್ಯೂಯನ್‌ತ್ಸಾಂಗ್ ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದ. ಇಮ್ಮಡಿ ಪುಲಿಕೇಶಿಯ ಆಳ್ವಿಕೆಯ ಕೊನೆಯಲ್ಲಿ ಅವನ ಸೈನ್ಯವನ್ನು ಸೋಲಿಸಿದ ಪಲ್ಲವರು, ಕ್ರಿ.ಶ. 642ರಲ್ಲಿ ಬಾದಾಮಿಯನ್ನು ಆಕ್ರಮಿಸಿದರು.ಇವನು ಪುಷ್ಟಿಕರಿಸುವ ಪಲ್ಲವಿ ಶಾಸನವೊಂದು ಬಾದಾಮಿಯಲ್ಲಿದೆ. ಇವನ ಆಸ್ಥಾನ ಕವಿಯಾದ ರವಿಕೀರ್ತಿಯು ಸಂಸ್ಕೃತದಲ್ಲಿ ರಚಿಸಿರುವ ಕ್ರಿ. ಶ. 634ರ ಐಹೊಳೆ ಪ್ರಶಸ್ತಿ ಶಾಸನವು ಪುಲಿಕೇಶಿಯ ದಿಗ್ವಿಜಯಗಳನ್ನು ಅತಿಶಯವಾಗಿ ಹೊಗಳುತ್ತಾ ಪ್ರಾಚೀನ ಕವಿಯಾದ ಕಾಳಿದಾಸನನ್ನೂ ಹೆಸರಿಸುತ್ತದೆ. ಆನಂತರ ಅವನ ಮಗ ಮೊದಲನೆಯ ವಿಕ್ರಮಾದಿತ್ಯನು (655-681) ಚಾಲುಕ್ಯ ರಾಜಧಾನಿ ಬಾದಾಮಿಯನ್ನು ಮತ್ತೆ ಗೆದ್ದು ಚಾಲುಕ್ಯ ರಾಜ್ಯವನ್ನು ಪುನರ್ ವ್ಯವಸ್ಥೆಗೊಳಿಸಿ ಚಾಲುಕ್ಯರ ಸೈನ್ಯ ‘ಕರ್ನಾಟಕಬಲ’ದ ಅಜೇಯ ಗುಣವನ್ನು ಊರ್ಜಿತಗೊಳಿಸಿದ.ಇವನ ಕಾಲದ 18 ಗೇಣುಗಳ ಅಳತೆಯ ವಿಶಿಷ್ಟ ಭೂಮಾಪಕದ ಪ್ರಾತಿನಿಧಿಕ ರೇಖಾ ಕೆತ್ತನೆಯೊಂದು ಬಳ್ಳಾರಿ ತಾಲೂಕಿನ ಕುರುಗೋಡಿನಲ್ಲಿ ಬಂಡೆಯೊಂದರ ಮೇಲೆ (ಕತ್ತೆಬಂಡೆ) ಪತ್ತೆಯಾಗಿದೆ. ಮೊದಲನೆಯ ವಿಕ್ರಮಾದಿತ್ಯನ ಮಗ ವಿನಯಾದಿತ್ಯನು (681-696), ಸಕಲೋತ್ತರಾಪಥನಾಥನೆಂದು ಕರೆದು ಕೊಳ್ಳುತ್ತಿದ್ದ ಕನೂಜಿನ ದೊರೆಯನ್ನು ಸೋಲಿಸಿದ. ಇವನು ಕಾಂಬೋಡಿಯಾ ದೇಶದ ಮೇಲೆ ಸೈನ್ಯವನ್ನು ಕಳುಹಿಸಿದ್ದ. ಇವನ ನಂತರ ದೊರೆಯಾದವನು ವಿಜಯಾದಿತ್ಯ (696-733). ಮಹಮದ್ ಖಾಸಿಂನ ನಾಯಕತ್ವದಲ್ಲಿ ಸಿಂಧ್ ಪ್ರಾಂತವನ್ನು ಗೆದ್ದಿದ್ದ (711) ಅರಬ್ಬರು ದಖನ್ನಿನ ಕಡೆಗೂ ನುಸುಳಲು ಪ್ರಯತ್ನಿಸಿದರು. ಅವರನ್ನು ಚಾಲುಕ್ಯರ ಸಾಮಂತನಾಗಿದ್ದ ಅವನಿಜಾಶ್ರಯ ಪುಲಿಕೇಶಿಯು ಕ್ರಿ. ಶ.739ರಲ್ಲಿ ದಕ್ಷಿಣ ಗುಜರಾತಿನಲ್ಲಿ ಸೋಲಿಸಿದ. ಈ  ಸೋಲಿನಿಂದಾಗಿ ಅರಬ್ಬರು ಸಿಂಧ್ ಪ್ರಾಂತದಿಂದ  ಕಾಲ್ತೆಗೆಯಬೇಕಾಯಿತು.

ಚಾಲುಕ್ಯ ಸಾಮ್ರಾಜ್ಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗಗಳಷ್ಟೇ ಅಲ್ಲದೆ ಗುಜರಾತಿನ ಬಹುಭಾಗ, ಮಧ್ಯಪ್ರದೇಶ, ಆಂಧ್ರ, ಒರಿಸ್ಸಾ ಮತ್ತು ತಮಿಳುನಾಡಿನ ಕೆಲವು ಭಾಗಗಳೂ ಸಮಾವೇಶಗೊಂಡಿದ್ದವು.ಈ ವಂಶದ ಇಮ್ಮಡಿ ವಿಕ್ರಮಾದಿತ್ಯನು(733-744), ಪಲ್ಲವರನ್ನು ಮೂರು ಬಾರಿ ಸೋಲಿಸಿ, ಅವರ ರಾಜಧಾನಿಯಾದ ಕಂಚಿಯನ್ನು ಆಕ್ರಮಿಸಿದ. ಆದರೆ, ಹಿಂದೆ ಕ್ರಿ. ಶ. 642ರಲ್ಲಿ ಬಾದಾಮಿಯನ್ನು ಪಲ್ಲವರು ಲೂಟಿ ಮಾಡಿದಂತೆ ಕಂಚಿಯನ್ನು ಸೂರೆ ಮಾಡಲಿಲ್ಲ. ಬದಲಿಗೆ, ಕಂಚಿಯ ರಾಜಸಿಂಹೇಶ್ವರ ದೇವಾಲಯದ ಭಂಡಾರದಲ್ಲಿದ್ದ ಒಡವೆ-ಸಂಪತ್ತುಗಳನ್ನು ಪರಿಶೀಲಿಸಿ, ಆ ದೇವಾಲಯಕ್ಕೆ ಅವುಗಳನ್ನು ಪುನರ್ದತ್ತಿಯಾಗಿ ನೀಡಿದುದನ್ನು ಅಲ್ಲಿನ ಸ್ತಂಭವೊಂದರ ಮೇಲೆ ಕೆತ್ತಿರುವ ಕನ್ನಡ ಶಾಸನವೊಂದರಲ್ಲಿ ವಿವರಿಸಲಾಗಿದೆ. ಅವನ ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ದೊರೆಯ ಕಂಚಿ ದಿಗ್ವಿಜಯದ ನೆನಪಿಗಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ  ದೇವಾಲಯಗಳನ್ನು ನಿರ್ಮಾಣಮಾಡಿಸಿದ್ದಾರೆ. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ ತ್ರಿಪದಿಯಲ್ಲಿರುವ ಅಪೂರ್ವ ಪ್ರಾಚೀನ ಶಾಸನವಾಗಿದೆ. ಪಲ್ಲವರ ಮೇಲೆ ಮತ್ತೆ ಮತ್ತೆ ನಡೆದ ಯುದ್ಧಗಳಿಂದ ಕೊನೆ ಕೊನೆಯಲ್ಲಿ ಚಾಲುಕ್ಯರ ಶಕ್ತಿ ಕುಂಠಿತವಾಗಿ, ಕ್ರಿ. ಶ. 757ರಲ್ಲಿ ಇಮ್ಮಡಿ ಕೀರ್ತಿವರ್ಮನ ಆಳ್ವಿಕೆಯ ಕಾಲದಲ್ಲಿ ನಶಿಸಿ  ಹೋಯಿತು.

 

ಮಳಖೇಡದ ರಾಷ್ಟ್ರಕೂಟರು (ಕ್ರಿ. ಶ. 753-973)

ಕ್ರಿ. ಶ. 753ರಲ್ಲಿ ರಾಷ್ಟ್ರಕೂಟ ಮೂಲದ ಸಾಮಂತ  ಅಧಿಕಾರಿಯಾಗಿದ್ದ ದಂತಿದುರ್ಗನು, ಚಾಲುಕ್ಯ ಸಾಮ್ರಾಜ್ಯದ ದೊರೆ ಇಮ್ಮಡಿ ಕೀರ್ತಿವರ್ಮನನ್ನು ಸೋಲಿಸಿ, ಚಾಲುಕ್ಯರ ಸಾಮ್ರಾಜ್ಯಕ್ಕೆ ಹಕ್ಕುದಾರನಾದನು. ‘ಅಜೇಯ’ ಎಂದು ಖ್ಯಾತಿ  ಪಡೆದಿದ್ದ ‘ಕರ್ನಾಟಕಬಲ’ವನ್ನು ಸೋಲಿಸಿ ತಾನು ಆ ಜಯವನ್ನು  ಪಡೆದುದಾಗಿ ಅವನು ಶಾಸನದಲ್ಲಿ ಹೇಳಿಕೊಂಡಿದ್ದಾನೆ.  ದಂತಿದುರ್ಗನ ಚಿಕ್ಕಪ್ಪ ಒಂದನೆಯ ಕೃಷ್ಣನಿಗೆ (756-74) ಎಲ್ಲೋರಾದ ಪ್ರಸಿದ್ದ ಕೈಲಾಸದೇವಾಲಯದ ಅಖಂಡ ರಚನೆಗಾಗಿ ನಾವು ಋಣಿಯಾಗಿರಬೇಕು.

ಒಂದನೆಯ ಕೃಷ್ಣನ ಮಗನಾದ ಧೃವನು (780-93), ನರ್ಮದಾ ನದಿಯನ್ನು ದಾಟಿ ದಿಗ್ವಿಜಯ ಯಾತ್ರೆಯನ್ನು ಮಾಡಿದ. ಗೂರ್ಜರ ಪ್ರತಿಹಾರ ವಂಶದ ವತ್ಸರಾಜ, ಬಂಗಾಲದ ಗೌಡ  ದೊರೆ ಧರ್ಮಪಾಲ ಮೊದಲಾದ ಪ್ರಸಿದ್ಧ ರಾಜರನ್ನು ಸೋಲಿಸಿದ ಮೇಲೆ ‘ಭಾರತದ ಅಧಿರಾಜತ್ವದ ಕೇಂದ್ರ’ವಾಗಿದ್ದ ಕನೂಜಿನ  ದೊರೆಯನ್ನೂ ಗೆದ್ದು ಅವನಿಂದ ಕಪ್ಪವನ್ನು ವಸೂಲುಮಾಡಿದ. ಧೃವನ ಮಗನಾದ ಮೂರನೆಯ ಗೋವಿಂದನು(794- 814), ಇದೇ ಸಾಹಸವನ್ನು ಪುನರಾವರ್ತಿಸಿದ. ಅವನ ಸೈನ್ಯದ ಕುದುರೆಗಳು ‘ಹಿಮಾಲಯದಿಂದ ಒಸರುತ್ತಿದ್ದ ಹಿಮಯುಕ್ತ  ನೀರನ್ನು ಹೀರಿದ್ದವು’ ಎಂದು ಅವನ ಉತ್ತರದ ದಿಗ್ವಿಜಯ ಯಾತ್ರೆಯನ್ನು ಶಾಸನವೊಂದು ಹೊಗಳುತ್ತದೆ. ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ಕನೂಜಿನ ದೊರೆಗಳನ್ನು ಸೋಲಿಸಿದ ಸಾಧನೆಯಿಂದಾಗಿ ‘ಕನೂಜಿನ ಸಾರ್ವಭೌಮ ಯುಗ’ ಎಂಬ ಮಾತು ಕಣ್ಮರೆಯಾಗುವಂತಾಯಿತು.

ಮೂರನೆಯ ಗೋವಿಂದನ ಮಗನಾದ ಅಮೋಘವರ್ಷ ನೃಪತುಂಗನು (814-78), ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿದ  ಪೂರ್ವ(ವೆಂಗಿ)ಚಾಲುಕ್ಯರ ಪ್ರತಿಭಟನೆಯನ್ನು ಆರಂಭದಲ್ಲೆ  ಎದುರಿಸಬೇಕಾಯಿತು. ವಿಣಗಲ್ಲಿನ ಯುದ್ಧದಲ್ಲಿ ವೆಂಗಿಯ ದೊರೆ ಚಾಲುಕ್ಯ ಇಮ್ಮಡಿ ವಿಜಯಾದಿತ್ಯನನ್ನು ಸೋಲಿಸಿದ ಮೇಲೆಯೇ ಅವರನ್ನು ದಮನ ಮಾಡಲು ಆತನಿಗೆ ಸಾಧ್ಯವಾಯಿತು. ವಿವಾಹ ಸಂಬಂಧವನ್ನು ಬೆಳೆಸುವ ಸೌಹಾರ್ದ ತಂತ್ರವನ್ನು ಬಳಸಿದ ಶಾಂತಿಪ್ರಿಯ ದೊರೆ ಇವನು.ಇವನು ತನಗೆ ತೊಂದರೆ ನೀಡಿದ ಆರುಮಂದಿ ಸಮಕಾಲೀನ ರಾಜಕೀಯ ಸಾಮಂತರನ್ನು ಕೊಂದು ಹಾಕಿದ್ದು ನಿಜವಾದರೂ, ತನ್ನ ತಂದೆ ಹಾಗೂ ತಾತನಂತೆ ದಿಗ್ವಿಜಯಗಳನ್ನು ಕೈಗೊಳ್ಳಲಿಲ್ಲ. ಆದರೂ ತನ್ನ ರಾಜ್ಯದ ಏಕತೆಯನ್ನು ಕಾಪಾಡಿಕೊಳ್ಳುವಲ್ಲಿ ಸಮರ್ಥನಾದ. ಸ್ವಂತ ಪಂಡಿತನೂ, ಪಂಡಿತಾಶ್ರಯನೂ ಆಗಿದ್ದ ಅಮೋಘವರ್ಷನ ಆಶ್ರಯದಲ್ಲಿ ಪ್ರಸಿದ್ಧ ಜೈನ ವಿದ್ವಾಂಸರಾದ ವೀರಸೇನ, ಜಿನಸೇನ, ಗುಣಭದ್ರ, ವ್ಯಾಕರಣಕಾರ ಶಾಕಟಾಯನ, ಗಣಿತಶಾಸ್ತ್ರಜ್ಞ ಮಹಾವೀರ ಮೊದಲಾದವರಿದ್ದರು. ಆದಿಪುರಾಣ, ಧವಳ-ಜಯಧವಳ - ಮಹಾಧವಳಗಳೆಂಬ ಷಡ್ಖಂಡಾಗಮಗಳ ವ್ಯಾಖ್ಯಾನಗಳನ್ನು ಇವನ ಆಸ್ಥಾನದ ಪಂಡಿತರು ರಚಿಸಿದ್ದು, ಅದು ಅಖಿಲ ಭಾರತ ಮಹತ್ವವನ್ನು ಪಡೆದಿತ್ತು. ಕ್ರಿ. ಶ. 850ರ ಸುಮಾರಿನಲ್ಲಿ ಇವನ ಆಸ್ಥಾನ ಕವಿ ಶ್ರೀವಿಜಯನು, ಕನ್ನಡ ಭಾಷೆಯ ಮೊದಲ ಕೃತಿ ಎಂದು ಭಾವಿಸಲಾಗಿರುವ ‘ಕವಿರಾಜಮಾರ್ಗ’ವನ್ನುರಚಿಸಿದ್ದಾನೆ. ನೃಪತುಂಗನ ಮರಿಮೊಮ್ಮಗನಾದ ಮೂರನೆಯ ಇಂದ್ರನು (914-29) ಕನೂಜನ್ನು ವಶಪಡಿಸಿ ಕೊಂಡದ್ದಷ್ಟೇ ಅಲ್ಲ, ಎರಡು ವರ್ಷಗಳ ಕಾಲ ಅದನ್ನು ತನ್ನ ಡಿತದಲ್ಲಿಟ್ಟುಕೊಂಡಿದ್ದ. ಅವನ ಸಾಮಂತರಲ್ಲಿ ಒಬ್ಬನಾದ ವೇಮುಲವಾಡದ ಅರಿಕೇಸರಿಯು, ಸಂಸ್ಕೃತ ಕವಿ (ಯಶಸ್ತಿಲಕ ಚಂಪೂ ಖ್ಯಾತಿಯ) ಸೋಮದೇವ ಹಾಗೂ ಪ್ರಸಿದ್ಧ ಕನ್ನಡ ಕವಿ ಪಂಪನಿಗೆ ಆಶ್ರಯದಾತನಾಗಿದ್ದ.

ರಾಷ್ಟ್ರಕೂಟ ಮೂರನೆಯ ಕೃಷ್ಣನು (936-67) ದಕ್ಷಿಣದಲ್ಲಿ ಚೋಳರನ್ನು ಸದೆಬಡಿದು ರಾಮೇಶ್ವರಂನಲ್ಲಿ ವಿಜಯಸ್ತಂಭವೊಂದನ್ನು ಸ್ಥಾಪಿಸಿದ. ಹೀಗೆ ಕನ್ನಡಿಗರ ಶಕ್ತಿ ಸಾಹಸಗಳು ಭಾರತದಲ್ಲೆಲ್ಲಾ ಪ್ರತೀತಿಯಾಗಿದ್ದ ಈ ಕಾಲವನ್ನು ‘ಕನೂಜಿನ ಸಾರ್ವಭೌಮ ಯುಗ’ ಎಂದು ಕರೆಯುವುದಕ್ಕಿಂತ “ಕರ್ನಾಟಕದ ಸಾರ್ವಭೌಮ ಯುಗ” ಎಂದು ಹೆಸರಿಸುವುದು  ಸೂಕ್ತ. ಪ್ರಸಿದ್ಧ ಸಂಸ್ಕೃತ ಲಾಕ್ಷಣಿಕನಾದ ರಾಜಶೇಖರನೂ ಸಹ ಕರ್ನಾಟಕದವರ ಯುದ್ಧ ಪಾಂಡಿತ್ಯವನ್ನು ಹೊಗಳಿದ್ದಾನೆ. ಬಂಗಾಳದ ಪಾಲ ದೊರೆಗಳು ಕರ್ನಾಟಕದ ಸೈನಿಕರನ್ನು ನಿಯೋಜಿಸಿಕೊಂಡಿದ್ದರು. ಬಂಗಾಳದ ಸೇನ ರಾಜವಂಶೀಯರು ಹಾಗೂ ಮಿಥಿಲೆಯ (ಬಿಹಾರದ ಇಂದಿನ ತಿರ್‌ಹತ್) ಕರ್ನಾಟಕ ರಾಜವಂಶವನ್ನು ಸ್ಥಾಪಿಸಿದವನು ಅಂತಹ ಒಬ್ಬ ಸೈನಿಕ. ರಾಷ್ಟ್ರಕೂಟರು, ಬೌದ್ಧರ ಮಾದರಿಯಲ್ಲಿ ಗುಡ್ಡಗಳನ್ನು ಕೊರೆದು ಎಲ್ಲೋರಾದ ದಶಾವತಾರ ಗುಹಾಂತರ ದೇವಾಲಯ, ಮುಂಬೈ ಸಮೀಪದ ಜೋಗೇಶ್ವರ ಮತ್ತು ಎಲಿಫೆಂಟಾ ದ್ವೀಪದಲ್ಲಿರುವ ದೇವಾಲಯ ಮಾದರಿಯ ನಿರ್ಮಾಣಗಳಿಗೆ ಕಾರಣಕರ್ತರಾದರು. (ಅದರಲ್ಲಿ ಕೊನೆಯದನ್ನು ಅವರ ಸಾಮಂತರಾಗಿದ್ದ ಕಲಚೂರಿಗಳ ರಚನೆ ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ) ಕ್ರಿ. ಶ. 857ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅರಬ್ ಪ್ರವಾಸಿ ಸುಲೈಮಾನನು, ರಾಷ್ಟ್ರಕೂಟ ಸಾಮ್ರಾಜ್ಯವನ್ನು ಭಾರತದಲ್ಲೇ ಅತ್ಯಂತ ದೊಡ್ಡ ಸಾಮ್ರಾಜ್ಯವೆಂದು ಹೇಳಿದ್ದಾನೆ. ಅಷ್ಟೇ ಅಲ್ಲ, ಅದನ್ನು ಪ್ರಪಂಚದ ಮಹಾ ಸಾಮ್ರಾಜ್ಯಗಳೊಂದಿಗೆ ಗುರುತಿಸಿದ್ದು, ಉಳಿದವು ಪೂರ್ವ ರೋಮ್, ಅರಬ್ ಹಾಗೂ ಚೀನಾ ಸಾಮ್ರಾಜ್ಯಗಳಾಗಿವೆ.

ರಾಷ್ಟ್ರಕೂಟರು ಅನೇಕ ಕೆರೆಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಅವರ ಕಾಲದ ದೇವಾಲಯಗಳನ್ನು ಕಲಬುರಗಿ ಜಿಲ್ಲೆಯ ಸಿರಿವಾಳ, ಸೂಳೇಪೇಟೆ, ಗಡಿಕೇಶ್ವರ, ಅಡಕಿ, ಸೇಡಂ, ಹಂದರ್ಕಿ, ಮೋಘಾ ಮೊದಲಾದೆಡೆ, ಗದಗ ಜಿಲ್ಲೆಯ ನರಗುಂದ, ನಿಡಗುಂದಿ, ನರೇಗಲ್, ರೋಣ, ಕೊಣ್ಣೂರು ಸವಡಿ ಮುಂತಾದೆಡೆ; ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬನಶಂಕರಿ, ಪಟ್ಟದಕಲ್ಲು ಮತ್ತು ಹಂಪಿ(ಬಳ್ಳಾರಿ ಜಿಲ್ಲೆ)ಗಳಲ್ಲಿ ಕಾಣಬಹುದು. ಗದಗ್ ಜಿಲ್ಲೆಯ ರೋಣ, ಕೌಜಗೇರಿ ಕರಮಡಿ, ಬೆಳವಣಕಿ, ಗದಗ್-ಬೆಟಗೇರಿಗಳಲ್ಲಿರುವ ಇವರ ಕಾಲಾವಧಿಯ ಕೆಲವು ಅಪರೂಪದ ವೀರಗಲ್ಲುಗಳು ಗಮನಾರ್ಹವಾಗಿವೆ. ಬಾದಾಮಿ ಚಾಲುಕ್ಯ ಹಾಗೂ ರಾಷ್ಟ್ರಕೂಟ ರಾಜಮನೆತನಗಳಿಗೆ ಸೇರಿದ ಅರಸರು ಗೋವುಗಳನ್ನು ಸಹಸ್ರ ಸಂಖ್ಯೆಯಲ್ಲಿ ದಾನ ನೀಡುವುದರ ಮೂಲಕ ಪಶುಪಾಲನೆಗೆ ವಿಶೇಷ ಮಹತ್ವವನ್ನು ನೀಡಿದ್ದರು. ಅಂತಹ ದತ್ತಿಯನ್ನು ಉಲ್ಲೇಖಿಸುವ ಸಾಸಕಲ್ಲುಗಳನ್ನು ವಿದ್ವಾಂಸರು ಪತ್ತೆ ಹಚ್ಚಿ ವರದಿ ಮಾಡಿದ್ದಾರೆ.

 

ಕಲ್ಯಾಣದ ಚಾಳುಕ್ಯರು (ಕ್ರಿ. ಶ. 973-1189)

ಬಾದಾಮಿ ಚಾಲುಕ್ಯರ ವಂಶಜರೆಂದು ತಮ್ಮನ್ನು ಕರೆದುಕೊಳ್ಳುವ ಕಲ್ಯಾಣದ ಚಾಳುಕ್ಯರು ಕ್ರಿ.ಶ.973ರಲ್ಲಿ ರಾಷ್ಟ್ರಕೂಟರನ್ನು ಮೂಲೆಗೊತ್ತಿದರು. ಈ ವಂಶದ ಮೊದಲ ದೊರೆ ಇಮ್ಮಡಿ ತೈಲ (ತ್ರೈಲೋಕ್ಯ ಮಲ್ಲ)ನು, ಚೋಳ ದೊರೆಗಳಾದ ಉತ್ತಮ ಮತ್ತು ಒಂದನೇ ರಾಜರಾಜ ಚೋಳರನ್ನು ಸೋಲಿಸಿದ. ಆಮೇಲೆ ಧಾರಾನಗರದ ಪರಮಾರರ ಮುಂಜನನ್ನು ಕೊಂದ. ಇವನ ಮಗ ಸತ್ಯಾಶ್ರಯನು (997-1008), ಕನ್ನಡದ ಮಹಾಕವಿಯಾದ ರನ್ನನಿಗೆ ಆಶ್ರಯ ನೀಡಿದ್ದ.ಅವನ ತಮ್ಮನ ಮೊಮ್ಮಗನಾದ ಒಂದನೆಯ ಸೋಮೇಶ್ವರನು (1043-1068) ಕರ್ನಾಟಕವನ್ನು ಆಕ್ರಮಿಸುವ ಚೋಳರ ಪ್ರಯತ್ನಗಳನ್ನು ನಿಷ್ಫಲಗೊಳಿಸಿ, ಕಲ್ಯಾಣವನ್ನು (ಬೀದರ್ ಜಿಲ್ಲೆಯ ಇಂದಿನ ಬಸವಕಲ್ಯಾಣ) ತನ್ನ ನೂತನ ರಾಜಧಾನಿಯನ್ನಾಗಿ ಮಾಡಿಕೊಂಡ. ಕ್ರಿ.ಶ.1054ರಲ್ಲಿ ಇವನು ಚೋಳದೊರೆ ರಾಜಾಧಿರಾಜನನ್ನು ಕುಪ್ಪಂ ಯುದ್ಧದಲ್ಲಿ ಕೊಂದು ಹಾಕಿದ. ಒಂದನೆಯ ಸೊಮೇಶ್ವರನ ಮಗ ಆರನೇಯ ವಿಕ್ರಮಾದಿತ್ಯನು (1076-1127) ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸನಗಳನ್ನು ಹಾಕಿಸಿದವನೆಂಬ ಹೆಗ್ಗಳಿಕೆಗೆ ಪಾತ್ರನಾದವನು. ತಾನು ಪಟ್ಟಾಭಿಷಿಕ್ತನಾದ ತೇದಿಯಿಂದ ಚಾಲುಕ್ಯ ವಿಕ್ರಮ ಶಕ ಸಂವತ್ಸರವನ್ನು ಆರಂಭಿಸಿದ ಶಕಪುರಷ. ಹಿಂದೂ ನ್ಯಾಯಪದ್ಧತಿಯ ಆದರ್ಶ ಕೃತಿಯಾದ ‘ಮಿತಾಕ್ಷರ’ವನ್ನು ರಚಿಸಿದ ನ್ಯಾಯಶಾಸ್ತ್ರಜ್ಞ ವಿಜ್ಞಾನೇಶ್ವರನಿಗೆ ಆಶ್ರಯ ನೀಡಿದವನು.

ಕಾಶ್ಮೀರದ ಕವಿಯಾದ ಬಿಲ್ಹಣನು ತನ್ನ ಸಂಸ್ಕೃತ ಕೃತಿ ‘ವಿಕ್ರಮಾಂಕದೇವ ಚರಿತೆ’ ಮೂಲಕ ವಿಕ್ರಮಾದಿತ್ಯನನ್ನು ಅಮರನನ್ನಾಗಿಸಿದ್ದಾನೆ. ವಿಕ್ರಮಾದಿತ್ಯನು ಮಧ್ಯ ಭಾರತದ ಪರಮಾರರನ್ನು ಮೂರು ಬಾರಿ ಸೋಲಿಸಿದ್ದೇ ಅಲ್ಲದೆ, ಅವರ ರಾಜಧಾನಿ ಧಾರಾ ನಗರವನ್ನು ಒಂದು ಬಾರಿ ಧ್ವಂಸ ಮಾಡಿದ. ದಕ್ಷಿಣದಲ್ಲಿ ಅವನು ಕ್ರಿ. ಶ 1085ರಲ್ಲಿ ಚೋಳರಿಂದ ಕಂಚಿಯನ್ನು ಗೆದ್ದುಕೊಂಡ. ಪೂರ್ವ ದಿಕ್ಕಿನಲ್ಲಿ ಕ್ರಿ. ಶ. 1093ರಲ್ಲಿ ವೆಂಗಿಯನ್ನು ಆಕ್ರಮಿಸಿದ. ಅವನ ಸೇನಾಧಿಪತಿಗಳಲ್ಲೊಬ್ಬನಾದ ಮಹಾದೇವನು, ‘ದೇವಾಲಯ ಚಕ್ರವರ್ತಿ’ ಎಂದು ಶಾಸನವೊಂದರಲ್ಲಿ ಕೀರ್ತಿತವಾದ ಚಾಳುಕ್ಯರ ಅತ್ಯುತ್ತಮ ವಾಸ್ತುಗಳಲ್ಲೊಂದಾದ ಮಹಾದೇವ ದೇವಾಲಯವನ್ನು ಕೊಪ್ಪಳ ಜಿಲ್ಲೆಯ ಇಟಗಿಯಲ್ಲಿ ಕಟ್ಟಿಸಿದ್ದಾನೆ.

ವಿಕ್ರಮಾದಿತ್ಯನ ಮಗ ಮೂರನೆಯ ಸೋಮೇಶ್ವರ(1127-39), ಮಹಾಪಂಡಿತನಾಗಿದ್ದ. ಅವನು ‘ಮಾನಸೋಲ್ಲಾಸ’ ಎಂಬ ಸಂಸ್ಕೃತ ವಿಶ್ವಕೋಶವೊಂದನ್ನು ಹಾಗೂ ತನ್ನ ತಂದೆಯೇ ನಾಯಕನಾಗಿರುವ ‘ವಿಕ್ರಮಾಂಕಾಭ್ಯುದಯಂ’ ಎಂಬ ಕಾವ್ಯವನ್ನು ರಚಿಸಿದ್ದಾನೆ. ವಿವಿಧ ಆಯಾಮಗಳ ಕೃತಿಯಾದ ಮಾನಸೋಲ್ಲಾಸದಲ್ಲಿ ದಕ್ಷಿಣ ಭಾರತದ ಸಾಂಸ್ಕೃತಿಕ ಪರಿಸರದ ನಿರೂಪಣೆ, ಆಡಳಿತ, ವೈದ್ಯ, ವಾಸ್ತುಶಿಲ್ಪ, ವರ್ಣಚಿತ್ರಕಲೆ, ಒಡವೆಗಳು, ಅಡಿಗೆಪಾತ್ರೆಗಳು, ನೃತ್ಯ, ಸಂಗೀತ, ಕ್ರೀಡೆ ಮೊದಲಾದ ವಿಭಾಗಗಳಿವೆ. ಮಾನವ ಸಮಾಜದ ಬಹುಮುಖ ಚಟುವಟಿಕೆಗಳನ್ನು ಚರ್ಚಿಸುವ 100 ಭಾಗಗಳು ಇದರಲ್ಲಿವೆ. ಕಲ್ಯಾಣದ ಚಾಳುಕ್ಯರ ಸಾಮಂತರಾಗಿದ್ದ ಕಲಚೂರಿಗಳು, ತಮ್ಮ ಸಾಮ್ರಾಟರನ್ನೇ ಬದಿಗೊತ್ತಿ ಕ್ರಿ. ಶ. 1162ರಲ್ಲಿ ಕಲ್ಯಾಣವನ್ನು ಆಕ್ರಮಿಸಿದರು. ಈ ವಂಶದ ಮೊದಲ ದೊರೆ ಬಿಜ್ಜಳನು, ಆರನೆಯ ವಿಕ್ರಮಾದಿತ್ಯನ ಮಗಳ ಮಗನಾಗಿದ್ದ. ವೀರಶೈವ ಧರ್ಮದ ಮುಂದಾಳಾಗಿದ್ದ, ವೈದಿಕ ಪರಂಪರೆಯನ್ನು ಪ್ರತಿಭಟಿಸಿದ ಬಸವಣ್ಣನು, ಬಸವನ ಬಾಗೇವಾಡಿ ಅಗ್ರಹಾರದ ಮುಖ್ಯಸ್ಥ ಮಾದರಸನ ಮಗನಾಗಿದ್ದು ಬಿಜ್ಜಳನ ಭಂಡಾರಿಯಾಗಿದ್ದನು. ನಾಲ್ಕನೆಯ ಸೋಮೇಶ್ವರನ ಮುಂದಾಳತ್ವದಲ್ಲಿ ಕ್ರಿ. ಶ. 1184ರಲ್ಲಿ ಚಾಳುಕ್ಯರು ಮತ್ತೆ ಅಧಿಕಾರಕ್ಕೆ ಬಂದರೂ ಸಾಮಂತರಾದ ಹೊಯ್ಸಳರು ಮತ್ತು ದೇವಗಿರಿಯ ಸೇವುಣರ ಅತಿಕ್ರಮಣದಿಂದಾಗಿ ರಾಜ್ಯ ಕಳೆದುಕೊಂಡರು. ತತ್ಪರಿಣಾಮವಾಗಿ ಆ ಎರಡೂ ವಂಶೀಯರು ಕರ್ನಾಟಕವನ್ನು ಎರಡು ಭಾಗವಾಗಿ ತಮಲ್ಲೇ ಹಂಚಿಕೊಂಡರು.

ಈ ಕಾಲದಲ್ಲಿ ಬಳಕೆಯಲ್ಲಿದ್ದ ಭೂಮಾಪನಕ್ಕೆ ಸಂಬಂಧಿಸಿದ ಅಳತೆಗೋಲುಗಳ ಪ್ರಾತಿನಿಧಿಕ ರೇಖಾಕೆತ್ತನೆಗಳನ್ನು ಡಂಬಳ, ಕೋಡಿಕೊಪ್ಪ, ನಿಡಗುಂದಿ ಹಾಗೂ ಶಿರಸಿಂಗಿಗಳಲ್ಲಿ ಕಾಣುತ್ತೇವೆ. ಚಾಳುಕ್ಯರು ಮಹಾ ವಾಸ್ತು ನಿರ್ಮಾಪಕರಾಗಿದ್ದರು. ಗದಗ ಜಿಲ್ಲೆಯ ರೋಣ, ನರೇಗಲ್, ಗದಗ, ಡಂಬಳ, ಲಕ್ಕುಂಡಿಗಳಲ್ಲಿ; ಹಾವೇರಿ ಜಿಲ್ಲೆಯ ಲಕ್ಷ್ಮೇಶ್ವರ, ಬಂಕಾಪುರ, ಹಾನಗಲ್ಲು, ಹಾವೇರಿ, ಅಬ್ಬಲೂರು, ಹಂಸಭಾವಿ, ಚಿಕ್ಕೇರೂರುಗಳಲ್ಲಿ; ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ, ರಾಣಿಬೆನ್ನೂರು ತಾಲೂಕಿನ ಕುರುವತ್ತಿ, ಚೌಡದಾನಪುರಗಳಲ್ಲಿ; ಧಾರವಾಡ ಜಿಲ್ಲೆಯ ಉಣಕಲ್,ಅಣ್ಣಿಗೇರಿ, ಕುಂದಗೋಳ, ಮೊರಬಗಳಲ್ಲಿ; ಕಲಬುರಗಿ ಜಿಲ್ಲೆಯ ನಾಗಾವಿ. ಅಡಕಿ, ಏವೂರು, ಸೇಡಂ, ಕುಳಗೇರಿ, ಕೊಲ್ಲೂರು, ದಿಗ್ಗಾವಿ, ಮಡಿವಾಳ ಮತ್ತು ಕಲಾದಗಿಗಳಲ್ಲಿ; ಬೆಳಗಾವಿ ಜಿಲ್ಲೆಯ ಸೌದತ್ತಿ, ಒಕ್ಕುಂದ, ಹಲಸಿ, ಬೆಳಗಾವಿಗಳಲ್ಲಿ; ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟಗಳಲ್ಲಿ; ವಿಜಯಪುರ ಜಿಲ್ಲೆಯ ಕಡ್ಲೇವಾಡ, ಚಟ್ಟರಕಿ, ತೇರದಾಳ, ನಿಂಬಾಳ, ಮುತ್ತಗಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಗೆ ಪ್ರಸಿದ್ಧವಾದ ಇವರ ಕಾಲದ ಸುಂದರ ದೇವಾಲಯಗಳಿವೆ. ಇವರು ಪಂಡಿತರಿಗೆ ಕವಿಗಳಿಗೆ ಮಹಾಪೋಷಕರಾಗಿದ್ದರು. ಸಂಸ್ಕೃತ ಕವಿ ವಾದಿರಾಜ, ಕನ್ನಡ ಕವಿಗಳಾದ ರನ್ನ,  ದುರ್ಗಸಿಂಹ ಮತ್ತು ನಯಸೇನರು ಇವರ ಕಾಲದಲ್ಲಿದ್ದರು. ವೀರಶೈವ ಚಳವಳಿಯಿಂದ ಪ್ರೇರಿತರಾದ ಜೇಡರ ದಾಸಿಮಯ್ಯ ಮತ್ತು ಕೆಂಭಾವಿ ಭೋಗಣ್ಣ ಮುಂತಾದವರಿಂದ ಪ್ರಾರಂಭವಾದ ವಚನ ಸಾಹಿತ್ಯ ಬೆಳೆದದ್ದು ಇವರ ಕಾಲದಲ್ಲೇ. ಕಲಚೂರ್ಯರ ಸಂಕ್ಷಿಪ್ತ ಆಡಳಿತಾವಧಿಯಲ್ಲಿ, ಬಸವ, ಅಲ್ಲಮ, ಸಿದ್ಧರಾಮ, ಚನ್ನಬಸವಣ್ಣ, ಆಯ್ದಕ್ಕಿ ಮಾರಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮಾದಾರ ಚನ್ನಯ್ಯ, ಅಕ್ಕಮಹಾದೇವಿ ಮೊದಲಾದ 770ಕ್ಕೂ ಹೆಚ್ಚು ಸಂಖ್ಯೆಯ ಶರಣ-ಶರಣೆಯರಿಂದ ವಚನ ಚಳವಳಿಯು ಬೆಳೆಯಿತು. ವೀರಶೈವ ಧರ್ಮ, ಮಾನವರ ಸಮಾನತೆಯನ್ನು ಬೋಧಿಸುವುದರ ಜೊತೆಗೆ, ಮಹಿಳೆಯರ ವಿಮೋಚನೆಯನ್ನೂ ಪ್ರತಿಪಾದಿಸಿತು. ದೇವಪೂಜೆಯ ಜೊತೆಗೆ ಕಾಯಕದ ಮಹತ್ವವನ್ನು‘ಕಾಯಕವೇ ಕೈಲಾಸ’ ಎಂದು ಪ್ರತಿಪಾದಿಸುವ ಮೂಲಕ ಉತ್ತುಂಗಕ್ಕೇರಿಸಿತು.

ದೇವಗಿರಿಯ ಸೇವುಣರು (ಕ್ರಿಶ. 1173-1318)

ರಾಷ್ಟ್ರಕೂಟರು ಹಾಗೂ ಕಲ್ಯಾಣದ ಚಾಳುಕ್ಯರ ಮಹಾಮಂಡಳೇಶ್ವರರಾಗಿದ್ದ ಸೇವುಣರು (ಯಾದವರು) ದೇವಗಿರಿಯನ್ನು ಹೊಸ ರಾಜಧಾನಿಯನ್ನಾಗಿ (ಈಗಿನ ಮಹಾರಾಷ್ಟ್ರ  ರಾಜ್ಯದ ದೌಲತಾಬಾದ್) ಮಾಡಿಕೊಂಡ ಐದನೆಯ ಭಿಲ್ಲಮನ (1173-92) ಆಡಳಿತಾವಧಿಯಲ್ಲಿ ಸಾರ್ವಭೌಮ ಶಕ್ತಿಯಾಗಿ ಬೆಳೆದರು. ಮೊದಲು ಅವರು ನಾಸಿಕ್ ಸಮೀಪದಲ್ಲಿರುವ ಸಿಂಧಿನೇರ (ಇಂದಿನ ಸಿನ್ನಾರ್)ದಿಂದ ಆಳುತ್ತಿದ್ದರು. ಐದನೆಯ ಭಿಲ್ಲಮನು 1186ರಲ್ಲಿ ಕಲ್ಯಾಣವನ್ನು ವಶಪಡಿಸಿಕೊಂಡ ನಂತರ, 1190ರಲ್ಲಿ ಸೊರಟೂರಿನಲ್ಲಿ ಹೊಯ್ಸಳ ಇಮ್ಮಡಿ ಬಲ್ಲಾಳನ ಜೊತೆ ಯುದ್ಧ ಮಾಡಬೇಕಾಯಿತು. ಆ ಯುದ್ಧದಲ್ಲಿ ಅವನಿಗೆ ಸೋಲಾಯಿತು. ಆದರೂ ಅವನು ನರ್ಮದಾ ನದಿಯಿಂದ ಕೃಷ್ಣಾನದಿಯವರೆವಿಗೂ ವಿಸ್ತಾರವಾದ ಬೃಹತ್ ರಾಜ್ಯವೊಂದನ್ನು ಕಟ್ಟಿದ. ಇವನ ಮಗನಾದ ಜೈತುಗಿಯು (1192-99), ಪರಮಾರರ ದೊರೆ ಸುಭಟವರ್ಮನನ್ನು ಸೋಲಿಸಿದ್ದೇ ಅಲ್ಲದೆ, ವಾರಂಗಲ್ಲಿನ ಕಾಕತೀಯ ದೊರೆಗಳಾದ ರುದ್ರ ಮತ್ತು ಮಹದೇವರನ್ನೂ ಕೊಂದು ಹಾಕಿದನು. ಸೇವುಣರಲ್ಲಿ ಅತ್ಯಂತ ಶ್ರೇಷ್ಠನಾದ ಇಮ್ಮಡಿ ಸಿಂಘಣನು ಸೇವುಣ ಸಾಮ್ರಾಜ್ಯವನ್ನು ತುಂಗಭದ್ರೆಯವರೆಗೆ ವಿಸ್ತರಿಸಿದ. ಆದರೆ ಸೇವುಣರು ದೆಹಲಿ ಸುಲ್ತಾನರ ದಾಳಿಗೆ 1296 ಹಾಗೂ 1307ರಲ್ಲಿ ನಲುಗಿ, 1318ರಲ್ಲಿ ಅಂತಿಮವಾಗಿ ಸೋತಾಗ, ಅವರ ಸಾಮ್ರಾಜ್ಯದ ನಾಮಾವಶೇಷವಾಯಿತು. ಅವರ ಮಂತರಾಗಿದ್ದ ಕುಮಾರರಾಮ ಹಾಗೂ ಅವನ ತಂದೆ ಕಂಪಿಲರಾಯರು, ಮುಸ್ಲಿಮರ ವಿರುದ್ಧ ಕ್ರಿ. ಶ. 1327ರಲ್ಲಿ ನಡೆದ ಯುದ್ದದಲ್ಲಿ ಮಡಿದರು. ಸೇವುಣರು ಮತ್ತು ಹೊಯ್ಸಳರು ಪರಸ್ಪರ ಯುದ್ಧದಲ್ಲಿ ತೊಡಗುವ ಮೂಲಕ ತಮ್ಮ ಶಕ್ತಿಯನ್ನು ಹಾಳು ಮಾಡಿಕೊಂಡಿದ್ದರಿಂದ ದೆಹಲಿಯ ಸುಲ್ತಾನರ ಸೈನ್ಯ ದಕ್ಷಿಣ ಭಾರತವನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಯಿತು. ಪ್ರಸಿದ್ಧ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯ, ಸಂಗೀತಶಾಸ್ತ್ರದ ಮಹಾಕೃತಿಕಾರ ಶಾರ್ಙ್ಗದೇವ ಮತ್ತು ಪ್ರಸಿದ್ಧ ಪಂಡಿತ ಹೇಮಾದ್ರಿ, ಇವರುಗಳಿಂದ ಸೇವುಣರು ಇತಿಹಾಸದಲ್ಲಿ ಅಮರರಾಗಿದ್ದಾರೆ. ಶಾರ್ಙ್ಗದೇವನ ಕೃತಿ ‘ಸಂಗೀತ ರತ್ನಾಕರ’ವು ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಉತ್ತಮ ಆರಂಭವನ್ನು ಒದಗಿಸಿತು.‌ ಸುಮಾರು 14ನೇ ಶತಮಾನದ ಮಧ್ಯಭಾಗದಲ್ಲಿ ವಿದ್ಯಾರಣ್ಯರು ರಚಿಸಿದ ಸಂಗೀತಸಾರ’ ಕೃತಿಗೆ ಸಂಗೀತ ರತ್ನಾಕರವೇ ಆಧಾರ.ಮಹಾರಾಷ್ಟ್ರ ರಾಜ್ಯದಲ್ಲಿ ಎಲ್ಲೆಡೆ ಕಾಣಿಸುವ ‘ಹೇಮಾಡ್‌ಪಂಥಿ ರಚನೆಗಳು’ ಎಂಬ ಹೆಸರಿನ ಸುಂದರ ದೇವಾಲಯಗಳನ್ನು ಸೇವುಣರು ನಿರ್ಮಾಣ ಮಾಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಯಡೂರಿನಲ್ಲಿರುವ ವೀರಭದ್ರ ದೇವಾಲಯವು ಅಂತಹ ರಚನೆಗಳಲ್ಲಿ ಒಂದು. ಇವರು ಉತ್ತರ ಕರ್ನಾಟಕದ ವಿವಿಧೆಡೆ ಅನೇಕ ದೇವಾಲಯಗಳನ್ನು ನಿರ್ಮಿಸುವುದರ ಜೊತೆಗೆ ಹಲವಾರು ದೇವಾಲಯಗಳಿಗೆ ನೂತನ ಸೇರ್ಪಡೆಗಳ ಮೂಲಕ ವಿಸ್ತರಿಸಿದ್ದಾರೆ.

 

ದ್ವಾರಸಮುದ್ರದ ಹೊಯ್ಸಳರು (ಕ್ರಿ. ಶ. 1052-1342)

ಹೊಯ್ಸಳರು, ಕಲಾಪ್ರೇಮಿಗಳಾಗಿದ್ದ ತಮ್ಮ ಸಾರ್ವಭೌಮರಾದ ಕಲ್ಯಾಣದ ಚಾಳುಕ್ಯರ ಶ್ರೇಷ್ಠ ಪರಂಪರೆಯನ್ನು ದುವರಿಸಿದರು. ಬೇಲೂರು, ಹಳೇಬೀಡು ಸೋಮನಾಥಪುರ ಮುಂತಾದೆಡೆಗಳಲ್ಲಿ ಅವರು ನಿರ್ಮಿಸಿರುವ ಸುಂದರ ದೇವಾಲಯಗಳಿವೆ. ಈ ವಂಶದ ಮೊದಲ ಪ್ರಸಿದ್ಧ ದೊರೆ ವಿಷ್ಣುವರ್ಧನನು (ಕ್ರಿ. ಶ. 1108-1152), 1004ರಿಂದ ಚೋಳರ ವಶದಲ್ಲಿದ್ದ ಗಂಗವಾಡಿ ಪ್ರದೇಶವನ್ನು ಕ್ರಿ. ಶ. 1114ರಲ್ಲಿ ಅವರಿಂದ ಮುಕ್ತಗೊಳಿಸಿ ವಿಜಯದ ಸ್ಮಾರಕವಾಗಿ ತಲಕಾಡಿನಲ್ಲಿ ಕೀರ್ತಿ ರಾಯಣ ದೇವಾಲಯವನ್ನೂ ಬೇಲೂರಿನಲ್ಲಿ ವಿಜಯನಾರಾಯಣ (ಚೆನ್ನಕೇಶವ) ದೇವಾಲಯವನ್ನೂ ನಿರ್ಮಾಣ ಮಾಡಿಸಿದನು. ರಾಮಾನುಜಾಚಾರ್ಯರು ಸಾಮ್ರಾಜ್ಯಕ್ಕೆ ಭೇಟಿ ನೀಡಿ ಕರ್ನಾಟಕದ ಸಾಲಿಗ್ರಾಮ, ತೊಣ್ಣೂರು ಮತ್ತು ಮೇಲುಕೋಟೆಗಳಲ್ಲಿ ಬಹಳ ಕಾಲದವರೆಗೆ ತಂಗಿದ್ದರು.ವಿಷ್ಣುವರ್ಧನನು ಈ ಆಚಾರ್ಯರಿಗೆ ಆಶ್ರಯ ನೀಡಿದ್ದು, ಗಂಗವಾಡಿ ಪ್ರದೇಶದ ಶ್ರೀವೈಷ್ಣವ ಅನುಯಾಯಿಗಳಾಗಿದ್ದ ಚೋಳ ಅಧಿಕಾರಿಗಳ ಪ್ರಭಾವಕ್ಕೆ ಮೊದಲೇ ಒಳಗಾಗಿದ್ದನೆಂಬ ಅಭಿಪ್ರಾಯವೂ ಇದೆ. ಕಲ್ಯಾಣದ ಚಾಲುಕ್ಯ ಚಕ್ರವರ್ತಿಗಳ ಸಾರ್ವಭೌಮತ್ವವನ್ನು ಪ್ರಶ್ನಿಸಿ, ತಾನೂ ಚಕ್ರವರ್ತಿಯಾಗಬೇಕೆಂಬ ಆಸೆಯಿಂದ ಅವನು ಉಪಾಯವಾಗಿ ಅಗ್ನಿಷ್ಟೋಮ, ಹಿರಣ್ಯಗರ್ಭ ಮೊದಲಾದ ವೈದಿಕ ಯಜ್ಞಗಳನ್ನು ಮಾಡಿದ. ಜೈನಧರ್ಮವು ಇಂತಹ ಆಚರಣೆಗಳನ್ನು ಒಪ್ಪುತ್ತಿರುವುದಿಲ್ಲ. ಆದರೂ ಅವನು ಜೈನಧರ್ಮವನ್ನು ಪೋಷಿಸಿದ, ಅಷ್ಟೇ ಅಲ್ಲ ಅವನ ಅನೇಕ ಮಂದಿ ನಾಧಿಪತಿಗಳು ಮತ್ತು ಪ್ರಸಿದ್ಧಳಾದ ರಾಣಿ ಶಾಂತಲಾ ಸಹ ಜೈನಧರ್ಮವನ್ನು ಅವಲಂಬಿಸಿದವರಾಗಿದ್ದರು. ಅವನ ದಂಡನಾಯಕರಲ್ಲೊಬ್ಬನಾಗಿದ್ದ ಕೇತಮಲ್ಲನು, ಹಳೆಯಬೀಡಿನ ಪ್ರಸಿದ್ಧ ಹೊಯ್ಸಳೇಶ್ವರ (ವಿಷ್ಣುವರ್ಧನ) ದೇವಾಲಯವನ್ನು ನಿರ್ಮಾಣ ಮಾಡಿಸಿದ್ದಾನೆ.

ಕರ್ನಾಟಕದಲ್ಲಿ ಅಗ್ರಹಾರಗಳು ಎಂತಹ ಆರೋಗ್ಯಕರ ಬೌದ್ಧಿಕ  ವಾತಾವರಣವನ್ನು ಬೆಳೆಯಿಸಿದ್ದವೆಂದರೆ ತಮಿಳುನಾಡಿನ ಶ್ರೀವೈಷ್ಣವ ತತ್ವದ ಪ್ರತಿಪಾದಕರಾದ ರಾಮಾನುಜರಿಗೆ ಯಾವ ತಮ್ಮ ಬೋಧನೆಗಳಿಗೆ ಸ್ವಂತ ನೆಲದಲ್ಲಿ ವಕಾಶವಿಲ್ಲವಾಯಿತೋ ಅದಕ್ಕೆ ಕರ್ನಾಟಕದ ಬೌದ್ಧಿಕ ವರ್ಗವೂ ಸೇರಿದಂತೆ ಸಾಮಾನ್ಯ ಜನವರ್ಗವೂ ಕಿವಿಗೊಟ್ಟಿತು. ಸ್ವಂತ ನೆಲದಲ್ಲೇ ಅವರ ಜೀವಕ್ಕೆ ಅಪಾಯ ಒದಗಿತ್ತೆಂಬ ಅಭಿಪ್ರಾಯವೂ ಇದೆ. ಚಾಳುಕ್ಯ ಸಾಮ್ರಾಜ್ಯದ ಪರಮಾಧಿಕಾರವನ್ನು ಪೂರ್ತಿಯಾಗಿ ಕಿತ್ತುಹಾಕಲು ವಿಷ್ಣುವರ್ಧನನಿಗೆ ಸಾಧ್ಯವಾಗಲಿಲ್ಲ. ಆದರೆ ಅವನ ಮೊಮ್ಮಗನಾದ ಇಮ್ಮಡಿ ಬಲ್ಲಾಳನು (1173-220) ಸ್ವತಂತ್ರನಾದದ್ದಷ್ಟೇ ಅಲ್ಲ, 1190ರಲ್ಲಿ ನಡೆದ ಸೊರಟೂರು ಕಾಳಗದಲ್ಲಿ ಸೇವುಣರ ಐದನೆಯ ಭಿಲ್ಲಮನನ್ನೂ ಸೋಲಿಸಿದನು. ಆದರೆ, ಅದಕ್ಕೂ ಮೊದಲೇ ಅವನು 1187ರಲ್ಲಿ ಚಾಲುಕ್ಯ ನಾಲ್ಕನೆಯ ಸೋಮೇಶ್ವರನನ್ನೂ ಸೋಲಿಸಿದ್ದನು. ಪಾಂಡ್ಯರು ತಮಿಳುನಾಡಿನಲ್ಲಿ ಚೋಳರ ಮೇಲೆ ಆಕ್ರಮಣ ಮಾಡಿದಾಗ, ಇಮ್ಮಡಿ ಬಲ್ಲಾಳನು ಪಾಂಡ್ಯರನ್ನು ಹಿಮ್ಮೆಟ್ಟಿಸಿ ‘ಚೋಳರಾಜ್ಯ ಪ್ರತಿಷ್ಠಾಚಾರ್ಯ’ ಎಂಬ ಬಿರುದನ್ನೂ ಧರಿಸಿದ. ಇದರಿಂದಾಗಿ, ಮುಂದೆ ಅವನ ಮಗ ಇಮ್ಮಡಿ ನರಸಿಂಹನ (1220-36) ಕಾಲದಲ್ಲಿ, ಹೊಯ್ಸಳರು ತಮಿಳುನಾಡಿನಲ್ಲಿ ಬಲವಾಗಿ ಕಾಲೂರಲು ಸಾಧ್ಯವಾಯಿತು. ಶ್ರೀರಂಗಮ್ ಸಮೀಪದ ಕುಪ್ಪಂ ಹೊಯ್ಸಳರ ಎರಡನೆಯ ರಾಜಧಾನಿಯೂ ಆಯಿತು. ತತ್ಪರಿಣಾಮವಾಗಿ, ಹೊಯ್ಸಳ ಸಾಮ್ರಾಜ್ಯವನ್ನು ಇವನು ತನ್ನ ಇಬ್ಬರು ಮಕ್ಕಳಿಗೆ ಹಂಚಿಕೊಡ ಬೇಕಾಯಿತು. ಈ ಸಾವಂತರ ಹೊಯ್ಸಳ ಆಡಳಿತ ಆರು ದಶಕಗಳ ಕಾಲ ಮುಂದುವರಿಯಿತು. ಮುಂದೆ ಮುಮ್ಮಡಿ ಬಲ್ಲಾಳನ ಆಳ್ವಿಕೆಯಲ್ಲಿ ಕುಪ್ಪಂ ಶಾಖೆಯೂ ಮುಖ್ಯಶಾಖೆಯಲ್ಲಿ ವಿಲೀನವಾಯಿತು. ಹೊಯ್ಸಳರ ಕೊನೆಯ ಪ್ರಮುಖ ದೊರೆಯಾದ ಮುಮ್ಮಡಿ ಬಲ್ಲಾಳನು (1291-1343) ದೆಹಲಿಯ ಸುಲ್ತಾನರ ಆಕ್ರಮಣಗಳೆದುರು ತನ್ನನ್ನು ಪಾಡಿಕೊಳ್ಳಲು  ಹೆಣಗಾಡಬೇಕಾಯಿತು. ಅವನು ಮಧುರೆಯ ಸುಲ್ತಾನನೊಂದಿಗೆ ಹೋರಾಡುತ್ತಾ ಗತಿಸಿದನು. ಮುಂದೆ ವಿಜಯನಗರ ಮ್ರಾಜ್ಯದ ಚಕ್ರಾಧಿಪತ್ಯವನ್ನು ಸ್ಥಾಪಿಸಿದ ಹರಿಹರ-ಬುಕ್ಕರಾಯರು ಇವನ ಇಬ್ಬರು ಅಧಿಕಾರಿಗಳಾಗಿದ್ದರು. ರುದ್ರಭಟ್ಟ, ಜನ್ನ, ಕೆರೆಯ ಪದ್ಮರಸ, ಹರಿಹರ, ರಾಘವಾಂಕ ಮೊದಲಾದ ಶ್ರೇಷ್ಠ ಕನ್ನಡ ಕವಿಗಳನ್ನು ಹೊಯ್ಸಳಯುಗ ಕಂಡಿತು. ಬೇಲೂರು, ಹಳೇಬೀಡು, ಮದ್ದೂರು, ಸೋಮನಾಥಪುರ, ತೊಣ್ಣೂರು, ಕಿಕ್ಕೇರಿ, ಕ್ಯಾತನಹಳ್ಳಿ, ಭದ್ರಾವತಿ, ಬಾಣಾವರ, ಬಸರಾಳು, ಅರಸೀಕೆರೆ, ಅರಳುಗುಪ್ಪೆ, ತಲಕಾಡು, ಅಮೃತಾಪುರ, ಕಡಮತ್ತೂರು, ದೊಡ್ಡಗರುಡನಹಳ್ಳಿ, ಹೊಸಹೊಳಲು, ಮೇಲುಕೋಟೆ, ಸುಂಕ ತೊಣ್ಣೂರು, ನಾಗಮಂಗಲ, ಬೆಳ್ಳೂರು, ಕೈದಾಳ, ಕುರುಡುಮಲೆ, ಸಿಂಧಘಟ್ಟ, ಹೊಸಬೂದನೂರು, ಸಂತೆಬಾಚಹಳ್ಳಿ, ವರಾಹನಾಥ ಕಲ್ಲಹಳ್ಳಿ, ಕೋರವಂಗಲ, ಅಘಲಯ, ಶ್ರವಣಬೆಳಗೊಳ, ಜಾವಗಲ್, ಕೈವಾರ, ಗೋವಿಂದನಹಳ್ಳಿ, ನುಗ್ಗೇಹಳ್ಳಿ, ತೆಂಗಿನಘಟ್ಟ, ಮಾಚಲಘಟ್ಟ, ಭೈರಾಪುರ, ತುರುವೇಕೆರೆ, ನಾಡಕಳಸ ಮೊದಲಾದೆಡೆಗಳಲ್ಲಿರುವ ಹೊಯ್ಸಳ ದೇವಾಲಯಗಳು ಈ ಕಾಲದ ಅಪೂರ್ವ ಕಲಾ ರಚನೆಗಳಾಗಿವೆ. ಭೂಮಿಯನ್ನು ಅಳೆಯಲು ಆ ದಿನಗಳಲ್ಲಿ ಉಪಯೋಗಿಸುತ್ತಿದ್ದ ಅಳತೆಗೋಲುಗಳ ಪ್ರಾತಿನಿಧಿಕ ರೇಖಾ ಕೆತ್ತನೆಗಳು ಅಮೃತಾಪುರ, ಮೂಗೂರು, ಭಾಗಮಂಡಲ ಮತ್ತು ಭೈರಾಪುರಗಳಲ್ಲಿ ಶೋಧಿಸಲ್ಪಟ್ಟಿವೆ.

 

ವಿಜಯನಗರ ಸಾಮ್ರಾಜ್ಯ (ಕ್ರಿ. ಶ. 1336-1646)

ದೆಹಲಿಯ ಖಿಲ್ಜಿ ಹಾಗೂ ತೊಘಲಕ್ ಸುಲ್ತಾನರ ಸೈನ್ಯಗಳು, ದಕ್ಷಿಣದ ನಾಲ್ಕು ಬೃಹತ್ ಸಾಮ್ರಾಜ್ಯಗಳಾದ ದೇವಗಿರಿಯ ಸೇವುಣರು, ವಾರಂಗಲ್ಲಿನ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು ಮತ್ತು ಮಧುರೆಯ ಪಾಂಡ್ಯರನ್ನು ಹಂತ ಹಂತವಾಗಿ ನಿರ್ನಾಮ ಮಾಡಿದಾಗ, ಈ ಪರ್ಯಾಯ ದ್ವೀಪಕ್ಕೆ ಭಿನ್ನವಾದ ಧಾರ್ಮಿಕ ನಂಬಿಕೆಯ ರಾಜಕೀಯ ಶಕ್ತಿಯೊಂದು ದಕ್ಷಿಣದಲ್ಲಿ ಪ್ರಭಾವಶಾಲಿಯಾಗುತ್ತದೆಂದು ತೋರಿತು. ಸೇವುಣರ ಸಾಮಂತನಾದ ಬಳ್ಳಾರಿ ಜಿಲ್ಲೆ ಕಂಪ್ಲಿಯ ಕಂಪಿಲರಾಯನ ಧೀರ ಹಾಗೂ ಸಾಹಸಿ ಪುತ್ರ ಕುಮಾರರಾಮನೂ ಸೇರಿದಂತೆ ಅನೇಕ ರಾಜಕುಮಾರರು ಮುಸ್ಲಿಮರ ಆಕ್ರಮಣಗಳನ್ನು ಪ್ರತಿಭಟಿಸಿ ನಾಮಾವಶೇಷವಾದರು. ಉತ್ತರದ ಕಡೆಯಿಂದ ಬಂದ ಈ ಆಕ್ರಮಣಕಾರರು,ಅನುಸರಿಸಿದ ಅಮಾನವೀಯ ಧೋರಣೆಯಿಂದ ಜನರು ದಿಗ್ಭಾಂತರಾಗಿದ್ದರು. ಕುಮಾರರಾಮನ ಮೇಲೆ ಕಟ್ಟಿರುವ ಹಾಡು ಮತ್ತು ಲಾವಣಿಗಳು ಜನರ ಆ ಆತಂಕವನ್ನು ವ್ಯಕ್ತಪಡಿಸುತ್ತವೆ. ಸಂಗಮ ವಂಶದ ಪಂಚಸೋದರರಾದ ಹರಿಹರ, ಬುಕ್ಕ, ಕಂಪಣ, ಮುದ್ದಪ್ಪ ಮತ್ತು ಮಾರಪ್ಪ, ಜನಬಲದೊಂದಿಗೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ ಜನತೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸಿತು.ಸಂಗಮ ಸಹೋದರರಿಗೆ ಧನಸಹಾಯ ಮಾಡಲು ವಿದ್ಯಾರಣ್ಯ ಯತಿಗಳು ಸುವರ್ಣ ಮಳೆಗರೆದರೆಂದು ಐತಿಹ್ಯ ಹೇಳುತ್ತದೆ. ವಿಜಯನಗರದ ಹಜಾರರಾಮ ದೇವಸ್ಥಾನ, ಹಂಪಿ ಸ್ಥಾಪಕರಿಗೆ ಬೇರೆ ಬೇರೆ ಮೂಲಗಳಿಂದ ಧನಸಹಾಯವನ್ನು ದೊರಕಿಸಿಕೊಡುವಲ್ಲಿ ಪ್ರಾಯಶಃ ಈ ಯತಿಗಳು ಸಫಲರಾಗಿದ್ದರೆಂಬುದನ್ನು ಇದು ಸೂಚಿಸುವಂತೆ ತೋರುತ್ತದೆ. ವಿದ್ಯಾರಣ್ಯರ ಗುರುಗಳಾದ ಭಾರತೀತೀರ್ಥರಿಗೆ ಹರಿಹರ ಮತ್ತು ಅವನ ಸಹೋದರರು ಕ್ರಿ. ಶ. 1346ರಲ್ಲಿ ಕೆಲವು ದಾನಗಳನ್ನು ನೀಡಿದ್ದಾರೆ. ಇದೇ ಶೃಂಗೇರಿ ಶಾಸನದಲ್ಲಿ, ಆ ಸಂದರ್ಭದಲ್ಲಿ ಅಲ್ಲೇ ಹಾಜರಿದ್ದ ಅಳುಪ ಮೂಲದ ಹೊಯ್ಸಳ ರಾಣಿ ಚಿಕ್ಕಾಯಿ ತಾಯಿ ಅದೇ ದಿನದಂದು ಇದಕ್ಕೆ ಪೂರಕವಾಗಿ ದಾನ ನೀಡಿದ ಉಲ್ಲೇಖವೂ ಇದೆ.

ಸಂಗಮ ವಂಶದ (1336-1485) ಹರಿಹರನು (1336-56) ಈ ಸಾಮ್ರಾಜ್ಯವನ್ನು 1336ರ ಸುಮಾರಿನಲ್ಲಿ ಸ್ಥಾಪಿಸಿ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳ ಸಮುದ್ರ ಮೇರೆಗಳ ನಡುವಣ ಉತ್ತರ ಕರ್ನಾಟಕಾಂಧ್ರ ಭಾಗಗಳನ್ನು ಹಿಡಿತಕ್ಕೆ ತೆಗೆದುಕೊಂಡನು. ಮೂರನೆಯ ಬಲ್ಲಾಳ (1343) ಹಾಗೂ ಅವನ ಮಗ ವಿರೂಪಾಕ್ಷ ಬಲ್ಲಾಳ (1346)ರ ಸಾವಿನ ನಂತರ ಹೊಯ್ಸಳ ಸಾಮ್ರಾಜ್ಯವು ಹರಿಹರನ ಆಳ್ವಿಕೆಗೆ ಸಂಪೂರ್ಣ ಒಳಗಾಯಿತು. ಇವನ ತಮ್ಮನಾದ ಬುಕ್ಕರಾಯನು (1366-77) ಮಧುರೆಯ ಸುಲ್ತಾನರ ಭುತ್ವವನ್ನು ನಾಶ ಪಡಿಸುವಲ್ಲಿ ಯಶಸ್ವಿಯಾದನು. ಅವನು ಚೀನಾ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದ. ಪ್ರಸಿದ್ಧ ವಿದ್ವಾಂಸರಾದ ಸಾಯಣ ಮತ್ತು ಮಾಧವರ ನಿರ್ದೇಶನದಲ್ಲಿ ಅನೇಕ ಪಂಡಿತರನ್ನು ತೊಡಗಿಸಿ ವೇದಗಳಿಗೆ ವ್ಯಾಖ್ಯಾನ ಬರೆಯಿಸಿ ‘ವೇದಾರ್ಥಪ್ರಕಾಶ’ ಎಂಬ ಉತ್ಕೃಷ್ಟ ಕೃತಿ ರಚನೆಯಾಗುವಂತೆ ಪ್ರಾಯೋಜಿಸಿದವನು ಈ ದೊರೆ. ಆ ಕೃತಿ ಇವನ ಮಗ ಇಮ್ಮಡಿ ಹರಿಹರನ (1377-1404) ಆಳ್ವಿಕೆಯ ಅವಧಿಯಲ್ಲಿ ಪೂರ್ಣವಾಯಿತು.ಇಮ್ಮಡಿ ಹರಿಹರನು ತನ್ನ ಸಾಮ್ರಾಜ್ಯವನ್ನು ಕೊಂಕಣ ಪ್ರದೇಶದ ಗೋವಾದ ಆಚೆಗೆ ಚೌಲ್‌ವರೆವಿಗೂ ವಿಸ್ತರಿಸಿದ್ದನು.ಪೂರ್ವದಿಕ್ಕಿನಲ್ಲಿ ಅವನು ಕೃಷ್ಣೆಯ ಉತ್ತರದ ಪಾಂಗಳವನ್ನು ಆಕ್ರಮಿಸಿದ.ಆದರೆ, ಪಾಂಗಳದ ಕೋಟೆಯನ್ನು ವಶಪಡಿಸಿಕೊಳ್ಳಲು ಸುಲ್ತಾನ ಫಿರೊಜ್‌ಷಾ ಬಹಮನಿ ಮಾಡಿದ ಪ್ರಯತ್ನಗಳನ್ನು, ಸಂಗಮರ ಶ್ರೇಷ್ಠ ದೊರೆಯಾದ ಇಮ್ಮಡಿ ದೇವರಾಯನು (1424-49) ತಾನು ಯುವರಾಜನಾಗಿದ್ದಾಗಲೇ ವಿಫಲಗೊಳಿಸಿದ್ದ.

ಇದರಿಂದ ಬಹಮನಿ ದೊರೆಗಳು ಕ್ರಿ. ಶ. 1426ರಲ್ಲಿ ತಮ್ಮ ರಾಜಧಾನಿಯನ್ನು ಉತ್ತರದ ಕಡೆಗೆ ಅಂದರೆ ಬೀದರ್‌ಗೆ ಸ್ಥಳಾಂತರಿಸಿಕೊಳ್ಳುವಂತಾಯಿತು. ಇವನು ಒರಿಸ್ಸಾದ ಗಜಪತಿಯನ್ನು ಎರಡು ಬಾರಿ ಸೋಲಿಸಿದನು. ಅಲ್ಲದೆ, ಮುದ್ಗಲ್ ಕೋಟೆಯನ್ನು ಕೈವಶ ಮಾಡಿಕೊಳ್ಳುವ ಬಹಮನಿಗಳ ಪ್ರಯತ್ನಗಳನ್ನು ವಿಫಲಗೊಳಿಸಿದನು. ಇವನ ಸೇನಾಧಿಪತಿಗಳಲ್ಲೊಬ್ಬನಾದ ಲಕ್ಕಣ ದಂಡೇಶನು ಸಿಲೋನಿನ ಮೇಲೂ ಧಾಳಿ ಮಾಡಿದ್ದ.ಪೆಗು ಮತ್ತು ಬರ್ಮಾದ (ಈಗಿನ ಮಯನ್ಮಾರ್) ತೆನೆಸೆರಿಮ್ ಅರಸರು ಇವನಿಗೆ ನಿಷ್ಠರಾಗಿದ್ದು ಕಪ್ಪ ನೀಡುತ್ತಿದ್ದರು. ಇವನು ವೀರಶೈವ ಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದನಾದರೂ, ಹಂಪಿಯ ಹಜಾರ ರಾಮಸ್ವಾಮಿ ದೇವಾಲಯ ಇವನ ಕಾಲದ ಸುಂದರ ರಚನೆಯಾಗಿದೆ. ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದ ಪರ್ಶಿಯಾ ದೇಶದ ಪ್ರವಾಸಿ ಅಬ್ದುಲ್ ರಜಾಕ್, ಇವನ ರಾಜಧಾನಿಯ ಬಗ್ಗೆ ‘ಪ್ರಪಂಚದಲ್ಲಿ ಇದಕ್ಕೆ ಸರಿಸಮನಾದ ಇನ್ನೊಂದು ಪಟ್ಟಣವಿಲ್ಲವೆಂದಿದ್ದಾನೆ. ಸ್ವತಃ ವಿದ್ವಾಂಸನಾಗಿದ್ದ ಇಮ್ಮಡಿ ದೇವರಾಯನು ಗುಂಡ ಡಿಂಡಿಮ ಎಂಬ ಸಂಸ್ಕೃತ ಕವಿ ಹಾಗೂ ಶ್ರೀನಾಥನೆಂಬ ತೆಲುಗು ಕವಿಗೂ ಆಶ್ರಯದಾತನಾಗಿದ್ದ. ಇಮ್ಮಡಿ ದೇವರಾಯನ ಕ್ರಿ. ಶ. 1420ರ ಹಂಪಿ ಸನವು, ಅವನ ಪ್ರಸಿದ್ಧ ದಂಡನಾಯಕನಾಗಿದ್ದ ಲಕ್ಷ್ಮಿಧರ ಅಮಾತ್ಯನ ಉನ್ನತ ಗುಣಗಳನ್ನು ಅತ್ಯಂತ ಸುಂದರವಾದ ಕಾವ್ಯ ಭಾಷೆಯಲ್ಲಿ ಬಣ್ಣಿಸುತ್ತದೆ. ಇಮ್ಮಡಿ ದೇವರಾಯನ ನಂತರ ಬಂದ ಸಂಗಮ ವಂಶದ ದೊರೆಗಳು ಅಶಕ್ತರು ಹಾಗೂ ರ್ವ್ಯಸನಿಗಳೂ ಆಗಿದ್ದ ಕಾರಣದಿಂದ ಛಿದ್ರಛಿದ್ರವಾಗಬಹುದಾಗಿದ್ದ ಸಾಮ್ರಾಜ್ಯವನ್ನು,  1485ರಲ್ಲಿ ಅಧಿಕಾರವನ್ನು ವಹಿಸಿಕೊಂಡ ಸಾಳುವ ನರಸಿಂಹನಂತಹ ಸಮರ್ಥ ದಂಡನಾಯಕನು ರಕ್ಷಿಸಿದ. ಇದು, ಸಾಳುವ ವಂಶದವರು (1485-1505) ಕೆಲವು ಕಾಲ ಆಳ್ವಿಕೆ ನಡೆಸಲು ಕಾರಣವಾಯಿತು. ಈ ಅವಧಿಯಲ್ಲೇ ಕ್ರಿ. ಶ. 1498ರ ಪೋರ್ಚುಗೀಸ್ ಯಾತ್ರಿಕ ವಾಸ್ಕೋಡಗಾಮನು ಪಶ್ಚಿಮ ಸಮುದ್ರತೀರದ ಕಲ್ಲಿಕೋಟೆಗೆ ಬಂದು ಇಳಿದದ್ದು, ಪಾಶ್ಚಾತ್ಯರ ಆಳ್ವಿಕೆಗೆ ಮುಕ್ತ ಅವಕಾಶಕ್ಕೆ ಎಡೆ ಮಾಡಿಕೊಟ್ಟಿತು. ಕಾಲಾಂತರದಲ್ಲಿ ತುಳುವ ವೀರ ನರಸಿಂಹನ ಮುಂದಾಳತ್ವದಲ್ಲಿ ಸಿಂಹಾಸನದ ವಿಷಯದಲ್ಲಿ ಎರಡನೆಯ ಅತಿಕ್ರಮಣ ನಡೆಯಿತು. ಇವನ ನಂತರ ತುಳುವ ವಂಶದ ಆಡಳಿತಾವಧಿ(1503-1570)ಯಲ್ಲಿ, ಮಹಾಯೋಧ, ವಿದ್ವಾಂಸ ಹಾಗೂ ಡಳಿತಗಾರನಾದ ಕೃಷ್ಣದೇವರಾಯನು 1510ರ ಜನವರಿ 24ರಂದು ಪಟ್ಟಕ್ಕೆ ಬಂದು 1529ರವರೆಗೆ ಆಳ್ವಿಕೆ ನಡೆಸಿದನು. ಇವನು ರಾಯಚೂರು ದೋಅಬ್ ಅನ್ನು 1512ರಲ್ಲಿ ಆಕ್ರಮಿಸಿದ. ಆನಂತರ, ಶತ್ರು ರಾಜಧಾನಿ ಪಟ್ಟಣಗಳಾದ ಬೀದರ್ (1512), ಜಾಪುರ (ಇಂದಿನ ವಿಜಯಪುರ)(1523) ಮತ್ತು ಪೂರ್ವದಿಕ್ಕಿನ ಗಜಪತಿ ದೊರೆಗಳ ಕಟಕ್(1518)ಗಳನ್ನು ಗೆಲ್ಲಲು ಸೈನ್ಯವನ್ನು ಮುನ್ನಡೆಸಿ ವಿಜಯಶಾಲಿಯಾದ.

ತಿರುಮಲೆಯ ವೆಂಕಟೇಶನ ಮಹಾಭಕ್ತನಾಗಿದ್ದ ಇವನು ಮೇಲಿಂದ ಮೇಲೆ (ಏಳು ಬಾರಿ) ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನಿಗೆ ಉದಾರವಾಗಿ ದಾನ-ದತ್ತಿಗಳನ್ನು ನೀಡಿದ. ಅವನ ಭಕ್ತಿಯ ದ್ಯೋತಕವಾಗಿ ಈಗಲೂ ತಿರುಮಲೆಯಲ್ಲಿ ರಾಯ ಮತ್ತವನ ಇಬ್ಬರು ರಾಣಿಯರ ಕಂಚಿನ ಪ್ರತಿಮೆಗಳಿವೆ. ಪೋರ್ಚುಗೀಸ್ ಪ್ರವಾಸಿ ಪೇಸ್‌ನ ಮಾತಿನಂತೆ ‘ಮಹಾ ಆಡಳಿತಗಾರ ಗೂ ನ್ಯಾಯಪಕ್ಷಪಾತಿ’ಯಾಗಿದ್ದ ಕೃಷ್ಣದೇವರಾಯನು ಸ್ವತಃ ಸಾಹಿತಿಯಾಗಿದ್ದು, ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದು ‘ಆಮುಕ್ತಮೌಲ್ಯದ’ ಎಂಬ ತೆಲುಗು ಮಹಾಕಾವ್ಯವನ್ನು ರಚಿಸಿದ್ದಾನೆ. ಅವನ ಆಸ್ಥಾನದಲ್ಲಿ ಅಷ್ಟದಿಗ್ಗಜ ಎಂದೇ ಪ್ರಸಿದ್ಧರಾಗಿದ್ದ ಎಂಟು ಜನ ಕವಿಗಳಿದ್ದರು. ಅವರಲ್ಲಿ ಒಬ್ಬ ಅಲ್ಲಸಾನಿ ಪೆದ್ದಣ. ರಾಯನು ರಾಜಧಾನಿ ವಿಜಯನಗರದಲ್ಲಿ ಕೃಷ್ಣಸ್ವಾಮಿ ದೇವಾಲಯವನ್ನು ರಚಿಸಿದ. ಅವನ ಆಳ್ವಿಕೆಯ ಕಾಲದಲ್ಲಿಯೇ ಕ್ರಿ.ಶ.1510ರಲ್ಲಿ ಪೋರ್ಚುಗೀಸರು ಗೋವೆಯನ್ನು ವಿಜಯಪುರದ ಸುಲ್ತಾನರಿಂದ ಕಿತ್ತುಕೊಂಡರು. ಪೋರ್ಚುಗೀಸರು ವಿಜಯನಗರದವರೊಂದಿಗೆ ಸಮೃದ್ಧವಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದು ವಿಜಯನಗರದರಸರಿಗೆ ಆದ್ಯತೆಯ ಮೇರೆಗೆ ಅರಬ್ಬೀ ಕುದರೆಗಳನ್ನು ಒದಗಿಸುತ್ತಿದ್ದು, ಅವರ ಆಡಳಿತದಿಂದಾಗಿ ಗೋವೆಯಲ್ಲಿ ಅನೇಕ ವಿಶೇಷ ಪರಿಣಾಮಗಳಾದವು. ಅವರು ತಂಬಾಕು, ಕಡ್ಲೇಕಾಯಿ, ಮೆಣಸಿನಕಾಯಿ ಮೊದಲಾದ ಹೊಸ ಸಸ್ಯವರ್ಗಗಳನ್ನು ಈ ಭಾಗಕ್ಕೆ ಪರಿಚಯ ಮಾಡಿಕೊಡುವುದರ ಜೊತೆಗೆ ಮುದ್ರಣ ತಂತ್ರಜ್ಞಾನವನ್ನೂ ನವಜಗತ್ತಿನಿಂದ ತಂದು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. ಮಂಗಳೂರು ಮತ್ತು ಬಾರಕೂರುಗಳು ವಿಜಯನಗರದ ಕಾಲದಲ್ಲಿ ಕರಾವಳಿ ದೇಶದ ಪ್ರಮುಖ ಪ್ರಾಂತಗಳಾಗಿದ್ದು, ವಿಜಯನಗರದ ಅರಸರಿಂದ ನೇಮಕವಾದ ರಾಜ್ಯಪಾಲರುಗಳಿಂದ ಆ ಪ್ರಾಂತಗಳ ಆಳ್ವಿಕೆ ನಡೆಯಿತು.

ಸದಾಶಿವರಾಯನ ಆಳ್ವಿಕೆಯ ಸಮಯದಲ್ಲಿ (1543-70) ನಾಲ್ವರು ಷಾಹಿ ಸುಲ್ತಾನರು ಸಂಯುಕ್ತವಾಗಿ ಸಾಮ್ರಾಜ್ಯದ ಮೇಲೆ ಕ್ರಮಣ ಮಾಡಿದರು. 1565ರಲ್ಲಿ ನಡೆದ ರಕ್ಕಸತಂಗಡಿ (ರಕ್ಕಸಗಿ-ತಂಗಡಗಿ) ಯುದ್ಧದಲ್ಲಿ, ವಿಜಯನಗರದ ಮಂತ್ರಿಯೂ, ಕೃಷ್ಣದೇವರಾಯನ ಅಳಿಯನೂ ಆಗಿದ್ದ ಅರವೀಡು  ರಾಮರಾಯನನ್ನು (1542-65) ಕೊಂದು, ರಾಜಧಾನಿ ವಿಜಯನಗರವನ್ನು ಸೂರೆ ಮಾಡಿದರು. ಆನಂತರ, ರಾಮರಾಯನ ತಮ್ಮಂದಿರಾದ ತಿರುಮಲರಾಯ ಹಾಗೂ ವೆಂಕಟಪತಿರಾಯರು, ರಾಜಧಾನಿಯನ್ನು ಪೆನುಗೊಂಡೆಗೆ ಬದಲಾಯಿಸಿದರು. ಕಾಲಾಂತರದಲ್ಲಿ ವಿಜಯನಗರದ ದೊರೆಗಳಿಗೆ ಚಂದ್ರಗಿರಿ ಮತ್ತು ವೆಲ್ಲೂರುಗಳು ರಾಜಧಾನಿಗಳಾದವು.ತುಳುವ ವಂಶದ ಆಳ್ವಿಕೆಯನ್ನು ಅರವೀಡು ವಂಶದವರು 1570ರಲ್ಲಿ ಬದಿಗೊತ್ತಿ, ತಾವೇ ದೊರೆಗಳಾದರು. ಅರವೀಡು ವಂಶದ ಕೊನೆಯ ದೊರೆಯಾದ ಮೂರನೆಯ ಶ್ರೀರಂಗರಾಯನಿಗೆ ಅವನ ಮರಣದವರೆವಿಗೂ ಕೆಳದಿಯ ದೊರೆಗಳು ಆಶ್ರಯ ನೀಡಿದರು. ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಕರ್ನಾಟಕದ ಕರಾವಳಿ ಪ್ರಾಂತದಲ್ಲಿ ಅಜಿಲ, ಚೌಟ, ಬಂಗ, ಮೂಲ, ಹೆಗ್ಡೆ, ಬಲ್ಲಾಳ, ಡೊಂಬ ಮುಂತಾದ ಕೆಲವು ಸಣ್ಣಪುಟ್ಟ ಸ್ಥಳೀಯ ಪಾಳೆಯಪಟ್ಟುಗಳ ರಾಜರು ಹೆಚ್ಚು ಕಡಿಮೆ ಸ್ವತಂತ್ರರಾಗಿಯೇ ಆಳ್ವಿಕೆ ನಡೆಸಿದರು. ಈ ಕಾಲದಲ್ಲಿ ವೇಣೂರು, ಮೂಡಬಿದ್ರೆ ಹಾಗೂ ಕಾರ್ಕಳಗಳು ಪ್ರಮುಖ ಜೈನ ಕೇಂದ್ರಗಳಾಗಿ ಬೆಳೆದವು. ವಿಜಯನಗರದ ಅರಸರು ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದ್ದರು. ಪೋರ್ಚುಗೀಸ್ ಪ್ರವಾಸಿ ಬಾರ್ಬೊಸಾ ವಿಜಯನಗರದ ಚಕ್ರವರ್ತಿಗಳ ಈ ಔದಾರ್ಯ ಗುಣವನ್ನು ಪ್ರಮಾಣ ಪೂರ್ವಕವಾಗಿ ಗುರುತಿಸಿದ್ದಾನೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಯಿತು. ಭಾರತೀಯ ಪರಂಪರೆಯ ತತ್ವಶಾಸ್ತ್ರ,

ಧರ್ಮ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ತಾನಾಗಿಯೇ ನಿಭಾಯಿಸುವ ಸಂದರ್ಭ ಈ ಸಾಮ್ರಾಜ್ಯಕ್ಕೆ ಅನಿವಾರ್ಯವಾಯಿತು. ಸ್ಥಳೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳನ್ನು ಕಾಪಾಡುವ ಕೆಲಸದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಮುಖ ಪಾತ್ರ ವಹಿಸಿತು. ವೇದಗಳಿಗೆ ವ್ಯಾಖ್ಯಾನಗಳನ್ನು ಬರೆಯುವುದರ ಜೊತೆಗೆ  ಸಾಯಣರು, ‘ಯಜ್ಞತಂತ್ರ ಸುಧಾನಿಧಿ’, ‘ಆಯುರ್ವೇದ ಸುಧಾನಿಧಿ’, ‘ಪುರುಷಾರ್ಥ ಸುಧಾನಿಧಿ, ‘ಸುಭಾಷಿತ ಸುಧಾನಿಧಿ’, ‘ಲಂಕಾರಸುಧಾನಿಧಿ’, ಮೊದಲಾದ ಕೃತಿಗಳ ಸಂಕಲನಾ  ಕಾರ್ಯವನ್ನು ಮಾಡುವ ಮೂಲಕ ಭಾರತೀಯ ಪರಂಪರೆಯ ಸಂರಕ್ಷಣೆಗೆ ಮುಂದಾದರು. ಮಾಧವರು (ವಿದ್ಯಾರಣ್ಯರ ಶಿಷ್ಯ), ಭಾರತೀಯ ಮೂಲದ ಎಲ್ಲಾ ಧರ್ಮಗಳನ್ನು ಪರಿಚಯಿಸುವ ‘ಸರ್ವದರ್ಶನ ಸಂಗ್ರಹ’ ಕೃತಿಯನ್ನು ರಚಿಸಿದ್ದಾರೆ. ಅವರ ‘ಪರಾಶರ ಮಾಧವೀಯ’ ಗ್ರಂಥವು ‘ಪರಾಶರ ಸ್ಮೃತಿ’ಯ ವ್ಯಾಖ್ಯಾನವಾಗಿದ್ದು, ಹಿಂದೂ ಜನಜೀವನ ಹಾಗೂ ಕಾಯ್ದೆಗಳ ಬಗೆಗಿನ ವಿಭಿನ್ನ ಕೃತಿಯಾಗಿದೆ. ಈ ಕೃತಿಯಲ್ಲಿ ಸತಿಪದ್ಧತಿಯನ್ನು ‘ಕಲಿವರ್ಜ್ಯ’ ಎಂದರೆ, ಕಲಿಯುಗದಲ್ಲಿ ಸಂಪೂರ್ಣ ತ್ಯಜಿಸಬೇಕಾದ ಆಚರಣೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಈ ಸಾಮ್ರಾಜ್ಯದ ದೊರೆಗಳು ಎಲ್ಲಾ ಧಾರ್ಮಿಕ ಪಂಥಗಳ (ಶೈವ, ವೈಷ್ಣವ, ಶ್ರೀವೈಷ್ಣವ, ಜೈನ ಇತ್ಯಾದಿ) ದೇವಾಲಯಗಳನ್ನು ಕಟ್ಟಿಸಿದ್ದಷ್ಟೇ ಅಲ್ಲ, ತಮ್ಮ ಕಾಲಕ್ಕೂ ಮೊದಲೇ ಹಾಳಾಗಿದ್ದ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವನ್ನೂ ಮಾಡಿಸಿದ್ದಾರೆ. ಅದಾಗಲೇ ಅಸ್ತಿತ್ವದಲ್ಲಿದ್ದ ದೇವಾಲಯಗಳಿಗೆ ವಿಸ್ತಾರವಾದ ಪ್ರಾಕಾರಗಳನ್ನು ಒದಗಿಸಲಾಯಿತು. ‘ರಾಯಗೋಪುರ’ ಎಂದೇ ಪ್ರಸಿದ್ಧವಾಗಿರುವ, ಎತ್ತರವೂ ಭವ್ಯವೂ ಆದ ಗೋಪುರಗಳನ್ನು ರಾಜಧಾನಿ ಹಂಪಿಯೂ ಸೇರಿದಂತೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಶ್ರೀಶೈಲಂ, ಕಾಳಹಸ್ತಿ, ತಿರುಪತಿ, ಶ್ರೀರಂಗಂ, ಚಿದಂಬರಂ, ಕಂಚಿ ಮೊದಲಾದ ಸ್ಥಳಗಳಲ್ಲಿ ನಿರ್ಮಿಸಲಾಯಿತು. ಅಲ್ಲದೆ ಬಹುಕಂಬಗಳಿಂದೊಡಗೂಡಿದ ತೆರೆದ ಕಲ್ಯಾಣ ಮಂಟಪ ಹಾಗೂ ಸಭಾಮಂಟಪಗಳನ್ನು ದೇವಾಲಯಗಳ ಸಂಕೀರ್ಣಕ್ಕೆ ಸೇರಿಸಲಾಯಿತು. ಇಂತಹ ಪ್ರತಿಯೊಂದು ಮಂಟಪಕ್ಕೂ ಸುಂದರ ಕಲಾಕೃತಿಗಳಾಗಿ ಎತ್ತರವಾದ ಹತ್ತಾರು ಏಕಶಿಲಾ ಕಂಬಗಳನ್ನು ಒದಗಿಸಲಾಯಿತು.

ಈ ಸಾರ್ವಜನಿಕ ಕೆಲಸಗಳು ಸಾವಿರಾರು ಜನಗಳಿಗೆ ಕೂಲಿಕೆಲಸವನ್ನು ಒದಗಿಸಿದವು. ಹಂಪಿ, ಹರವು, ಬೆಳ್ಳೂರು, ಕಿಕ್ಕೇರಿ, ಹೊಳಲ್ಕೆರೆ, ಶೃಂಗೇರಿ, ಕುರುಗೋಡು, ಬಾಗಳಿ, ಖಾಂಡ್ಯ, ಕಳಸ ಮೊದಲಾದ ಸ್ಥಳಗಳಲ್ಲಿರುವ ಈ ಕಾಲದ ದೇವಾಲಯಗಳು ಗಮನಾರ್ಹವಾಗಿವೆ. ಇವುಗಳ ಜೊತೆಗೆ ನೆರೆರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿಯೂ ಅಸಂಖ್ಯಾತ ದೇವಾಲಯಗಳನ್ನು ಇವರು ನಿರ್ಮಾಣ ಮಾಡಿಸಿದ್ದಾರೆ. ಇವರ ಕಾಲದಲ್ಲಿ ಸಂಸ್ಕೃತ, ಕನ್ನಡ, ತಮಿಳು ಮತ್ತು ತೆಲುಗು ಸಾಹಿತ್ಯಗಳು ಅಭಿವೃದ್ಧಿ ಹೊಂದಿ, ವೀರಶೈವ ಧರ್ಮ ಪುನರುಜ್ಜೀವನಗೊಂಡಿತು.

ವಿದ್ಯಾರಣ್ಯ, ಕಲ್ಲಿನಾಥ, ರಾಮಾಮಾತ್ಯ, ಪುರಂದರದಾಸ ಮತ್ತು ಕನಕದಾಸರಿಂದ ಕರ್ನಾಟಕ ಸಂಗೀತ ಅರಳಿತು. ಪ್ರಾಥಮಿಕ ಸರಳ ರಚನೆಗಳನ್ನು ರಚಿಸುವುದರ ಮೂಲಕ, ಕರ್ನಾಟಕ ಸಂಗೀತವನ್ನು ಕಲಿಸುವ ವ್ಯವಸ್ಥೆಗೆ ಜನಪ್ರಿಯತೆಯನ್ನು ತಂದುಕೊಟ್ಟ ಪುರಂದರದಾಸರನ್ನು, ಸಂತ ತ್ಯಾಗರಾಜರು ‘ಕರ್ನಾಟಕ ಸಂಗೀತ ಪಿತಾಮಹಾ’ ಎಂದು ಕರೆದಿರುವುದು ಅನ್ವರ್ಥವಾಗಿಯೇ ಇದೆ.ಈ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ನಿಕಾಲೊಕಾಂಟಿ (1420), ಅಬ್ದುಲ್ ರಜಾಕ್ (1443), ಬಾರ್ಬೊಸ (1500-11), ಪೇಸ್ (1520), ನ್ಯೂನಿಜ್ (1535), ಸೀಫರ್ ಫ್ರೆಡರಿಕ್ (1567) ಮೊದಲಾದ ವಿದೇಶೀ ವ್ಯಾಪಾರಿಗಳು ಮತ್ತು ಪ್ರವಾಸಿಗಳು ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಯನ್ನು, ಅದರಲ್ಲೂ ವಿಶೇಷವಾಗಿ ರಾಜಧಾನಿ ವಿಜಯನಗರವನ್ನು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ವರ್ಣರಂಜಿತವಾಗಿ ಬಣ್ಣಿಸಿದ್ದಾರೆ.

 

ಬಹಮನಿ ಸಾಮ್ರಾಜ್ಯ (ಕ್ರಿಶ. 1347-1520)

ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ಇಂಡೋ-ಸಾರ್ಸೆನೀಕ್ ಕಲಾಶೈಲಿಯನ್ನು ಪರಿಚಯಿಸುವ ಮೂಲಕ ಬಹಮನಿ ಸುಲ್ತಾನರು ಸ್ಮರಣಾರ್ಹರಾಗಿದ್ದಾರೆ. ಮಹಮ್ಮದ್ ಬಿನ್ ತೊಘಲಕ್‌ನ ಆಡಳಿತಾವಧಿಯಲ್ಲಿ ದಖನ್ನಿನಲ್ಲಿ (1347) ಅಲ್ಲಾವುದ್ದೀನ್ ಹಸನ್‌ನಿಂದ ಕಲಬುರಗಿಯಲ್ಲಿ ಸ್ಥಾಪಿತವಾದ ಬಹಮನಿ ಸಾಮ್ರಾಜ್ಯವು ತಾನು ಅಸ್ತಿತ್ವದಲ್ಲಿದ್ದಷ್ಟೂಕಾಲ ವಿಜಯನಗರದವರೊಂದಿಗೆ ಘರ್ಷಣೆಗೆ ತೊಡಗಬೇಕಾಯಿತು. ಕಲಬುರಗಿಯ ಕೋಟೆಯಲ್ಲಿರುವ ಜಾಮಿಯಾ ಮಸೀದಿಯನ್ನು ಮಹಮದ್ ಬಹಮನ್ ಷಾ 1367ರಲ್ಲಿ ಕಟ್ಟಿಸಿದ. ಅದೊಂದು ಕಲಾತ್ಮಕವೂ ಚಿರಸ್ಮರಣಿಯವೂ ಆದ ಭವ್ಯ ಸ್ಮಾರಕವಾಗಿದೆ.ಕರ್ನಾಟಕದ ವಾಸ್ತು ರಚನೆಯಲ್ಲಿ ಇವರು ಮೊದಲ ಬಾರಿಗೆ ಗಾರೆಯಿಂದ ನಿರ್ಮಿಸಲಾದ ಕಮಾನಿನಾಕಾರದ ಛಾವಣಿ, ಗುಮ್ಮಟ, ಮಿನಾರು ಹಾಗೂ ಕಮಾನುಗಳನ್ನು ಪರಿಚಯ ಮಾಡಿಸಿಕೊಟ್ಟರು.

ಈ ವಂಶದಲ್ಲಿ ಜನಿಸಿದ ಫಿರೂಜ್ ಷಾ (1397-1422), ಮತ್ತೊಬ್ಬ ಪ್ರಖ್ಯಾತ ಸುಲ್ತಾನನಾಗಿದ್ದು ರೆಡ್ಡಿ ದೊರೆಗಳಿಂದ ರಾಜಮಹೇಂದ್ರಿಯನ್ನು ಗೆದ್ದು, ಪೂರ್ವದಿಕ್ಕಿನಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ.ಅವನು ಜ್ಞಾನಿಗಳ ಒಡನಾಟದಲ್ಲಿ ಸಂತೋಷಪಡುತ್ತಿದ್ದ. ಸರ‍್ಹಿಂದಿ ಎಂಬ ವಿದ್ವಾಂಸ, ಮತ್ತು ಹಸನ್ ಗಿಲಾನಿ ಎಂಬ ಜ್ಯೋತಿಷ್ಯ ಶಾಸ್ತಜ್ಞರು ಇವನಲ್ಲಿ ಆಶ್ರಯ ಪಡೆದಿದ್ದರು.ಇವನು ದೌಲತಾಬಾದಿನಲ್ಲಿ ಖಗೋಳ ಪರಿವೀಕ್ಷಣಾ ಮಂದಿರವನ್ನು ನಿರ್ಮಾಣ ಮಾಡಿಸಿದ್ದನು. ಫಿರೂಜ್‌ಷಾನ ಉತ್ತರಾಧಿಕಾರಿಯಾದ ಒಂದನೆಯ ಅಹಮದ್ ಬಹಮನ್ ಷಾ (1422-36) ಬೀದರ್‌ಗೆ ತನ್ನ ರಾಜಧಾನಿಯನ್ನು 1426ರಲ್ಲಿ ಸ್ಥಳಾಂತರಿಸಿದ. ಆನಂತರದಲ್ಲಿ ಸುಂದರವಾದ ಅರಮನೆಗಳ ರಚನೆಯನ್ನು ಕಂಡ ಬೀದರಿನಲ್ಲಿ, ಇವನ ಕಾಲದಲ್ಲಿ, ಹದಿನಾರು ಕಂಬಗಳ ‘ಸೋಲಾ ಕಂಬ್‌ಮಸೀದಿ’ ಒಂದು ಸುಂದರ ಕಟ್ಟಡವಾಗಿ ತಲೆ ಎತ್ತಿತ್ತು. ಅವನು ಸೂಫಿ ಸಂತನಾದ ಬಂದೇ ನವಾಜನ ನಿಷ್ಟಾವಂತ ಅನುಯಾಯಿಯಾಗಿದ್ದ. ಈ ದೊರೆಯನ್ನು ಜನ ‘ವಲಿ’ (ಸಂತ) ಎಂದು ಕರೆಯುತ್ತಿದ್ದರು. ಬೀದರ್‌ನ ಸಮೀಪದ ಅಷ್ಟೂರಿನಲ್ಲಿರುವ ಈ ಸುಲ್ತಾನನ ಸಮಾಧಿಯನ್ನು ಅತಿಶಯವಾಗಿ ಪೂಜಿಸಲಾಗುತ್ತದೆ. ಪರ್ಶಿಯಾದಲ್ಲಿ ಜನ್ಮತಾಳಿದ (1481) ಮಹಮದ್ ಗವಾನ್, ಬಹಮನಿ ಸುಲ್ತಾನರ ಇತಿಹಾಸದಲ್ಲಿ ಮತ್ತೊಬ್ಬ ಪ್ರಮುಖ ಸಮರ್ಥ ಆಡಳಿತಗಾರ. ಇವನು, 1445ರಲ್ಲಿ ಬೀದರ್‌ಗೆ ಬಂದಾಗ ಅವನಿಗೆ ಬಹಮನಿ ಸುಲ್ತಾನರ ಆಸ್ಥಾನದಲ್ಲಿ ಪ್ರಮುಖವಾದ ಹುದ್ದೆಯೊಂದನ್ನು ನೀಡಲಾಯಿತು. ಇವನು 1461ರಿಂದ 1481ರವರೆಗೆ ಸಾಮ್ರಾಜ್ಯದ ಮುಖ್ಯ ಆಡಳಿತಗಾರನಾಗಿದ್ದ.ಇಬ್ಬರು ಸುಲ್ತಾನರು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ಇವನು ರಾಜ್ಯದ ಆಡಳಿತವನ್ನು ನೋಡಿಕೊಂಡಿದ್ದಷ್ಟೇ ಅಲ್ಲದೆ, ಸಾಮ್ರಾಜ್ಯವನ್ನು ದಕ್ಷಿಣದಲ್ಲಿ ಹುಬ್ಬಳ್ಳಿಯವರೆಗೂ, ಪಶ್ಚಿಮದಲ್ಲಿ ಗೋವೆಯೂ ಸೇರಿದಂತೆ, ಕೊಂಕಣದ ಕರಾವಳಿಯವರೆಗೂ, ಪೂರ್ವದಲ್ಲಿ ಕೊಂಡವೀಡು ಮತ್ತು ರಾಜ ಮಹೇಂದ್ರಿಯವರೆಗೂ ವಿಸ್ತರಿಸಿದ್ದನು. ಸ್ವತಃ ವಿದ್ವಾಂಸನಾಗಿದ್ದ ಇವನು ಬೀದರ್‌ನಲ್ಲಿ ಉನ್ನತ ವ್ಯಾಸಂಗಕ್ಕೆಂದ್ದು ‘ಮದರಸಾ’ ಹಾಗೂ ಗ್ರಂಥಭಂಡಾರಗಳನ್ನು ತನ್ನ ಸ್ವಂತ ಗಳಿಕೆಯ ಹಣದಿಂದಲೇ ಸ್ಥಾಪಿಸಿದ್ದು ಉಲ್ಲೇಖಾರ್ಹವಾಗಿದೆ. ಆ ಕಾಲದಲ್ಲಿ ಕಲಬುರಗಿ ಮತ್ತು ಬೀದರ್‌ಗಳಲ್ಲಿ ಕಟ್ಟಿರುವ ಕೋಟೆಗಳು ಮಹತ್ವದ್ದಾಗಿವೆ. ಈಗ ಶಿಥಿಲವಾಗಿ ಹಾಳಾಗಿರುವ ಬೀದರಿನ ಮದರಸಾ ಕಟ್ಟಡ ಒಂದು ಕಾಲದಲ್ಲಿ ತುಂಬಾ ಸುಂದರವಾದ ರಚನೆಯಾಗಿತ್ತು. ಆದರೆ ಆಸ್ಥಾನಿಕರ ಒಳಸಂಚಿಗೆ ಗುರಿಯಾದ ಗವಾನ್, ತಾನೇ ವಿದ್ಯೆ ಕಲಿಸಿ ಬೆಳೆಸಿದ ಸುಲ್ತಾನ್ ಮಹಮದ್‌ನಿಂದಲೇ ಮರಣದಂಡನೆಗೆ ಗುರಿಯಾಗಬೇಕಾಯಿತು. ಅವನ ಜೊತೆಯಲ್ಲೇ ಈ ಸಾಮ್ರಾಜ್ಯದ ವೈಭವವೂ ಮರೆಯಾಗಿ ಕಾಲಾಂತರದಲ್ಲಿ ಒಡೆದು ಹೋಳಾಗಿ ಐದು ಷಾಹಿ ರಾಜ್ಯಗಳು ತಲೆ ಎತ್ತಿದವು, ಕಲಬುರಗಿಯಲ್ಲಿರುವ ಬಂದೇ ನವಾಜ್ ದರ್ಗಾ, ಜಾಮಿಯಾ ಮಸೀದಿ, ಸಾಥ್ ಗುಂಬಜ್ ಮೊದಲಾದ ಇಂಡೋ ಸಾರ್ಸೆನಿಕ್ ಶೈಲಿಯ ಸುಂದರ ರಚನೆಗಳು; ಬೀದರ್‌ನಲ್ಲಿರುವ ಗವಾನನ ‘ಮದರಸಾ’ ಹಾಗೂ ಅಷ್ಟೂರಿನಲ್ಲಿರುವ ಬಹಮನಿ ಸುಲ್ತಾನರ ಸಮಾಧಿ, ಗುಮ್ಮಟಗಳು ಬಹಮನಿ ಪ್ರಭುತ್ವದ ಮಹತ್ವದ ಕೊಡುಗೆಗಳಾಗಿವೆ.

ವಿಜಯಪುರ ಆದಿಲ್‌ಶಾಹಿಗಳು (1489-1686)

ಬಹಮನಿ ಸುಲ್ತಾನರ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ಐದು ಶಾಹಿ ಮನೆತನಗಳಲ್ಲಿ ವಿಜಯಪುರದ ಆದಿಲ್‌ಶಾಹಿಗಳು, ಕರ್ನಾಟಕದ ಬಹು ಹೆಚ್ಚಿನ ಭಾಗವನ್ನು ಆಳಿದರು. ಬಹಮನಿ ರಾಜ್ಯದ ಸೇನಾಪತಿಯೂ ರಾಜ್ಯಪಾಲನೂ ಆಗಿದ್ದ ಯೂಸುಫ್ ಆದಿಲ್‌ಖಾನನಿಂದ 1489ರಲ್ಲಿ ಸ್ಥಾಪಿಸಲ್ಪಟ್ಟ ಆದಿಲ್‌ಶಾಹಿ ಸಾಮ್ರಾಜ್ಯವನ್ನು ಆಳಿದ ಸುಲ್ತಾನರು ಕಲಾಪೋಷಕರೂ, ಸ್ವತಃ ಸಾಹಿತಿಗಳೂ ಆಗಿದ್ದರು. ಇಟಲಿಯ ಪ್ರವಾಸಿ ವರ್ಥೆಮಾ ಎಂಬುವವನು ಯೂಸುಫ್ ಆದಿರ್‌ಷಾನನ್ನು ಓರ್ವ ಸಮರ್ಥ ಹಾಗೂ ಯಶಸ್ವಿ ರಾಜನೆಂದು ಹೊಗಳಿದ್ದಾನೆ. ಇವನ ಮಗ ಒಂದನೆಯ ಇಸ್ಮಾಯಿಲ ನನ್ನು (1510-34) ದೊರೆ ಎಂದು ಅಂಗೀಕರಿಸಿದ ಇರಾನ್ ದೇಶದ ಚಕ್ರವರ್ತಿ ಷಾ, ವಿಜಯಪುರಕ್ಕೆ ತನ್ನ ರಾಯಭಾರಿಗಳನ್ನೂ ಕಳುಹಿಸಿದ್ದ. ಇಸ್ಮಾಯಿಲ್‌ನ ನಂತರ ಅವನ ಮಕ್ಕಳಾದ ಮಲ್ಲು(1534-35) ಹಾಗೂ ಒಂದನೆಯ ಇಬ್ರಾಹಿಂ ಆದಿಲ್ ಷಾ (1535-1558) ಸಿಂಹಾಸನವನ್ನೇರಿ ರಾಜ್ಯಾಭಾರ ನಡೆಸಿದರು. ಆನಂತರ ಅಧಿಕಾರಕ್ಕೆ ಬಂದ ಒಂದನೆಯ ಅಲಿ (1558-80) ಆದಿಲ್ ಷಾ, ತನ್ನನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿದ್ದ, ವಿಜಯನಗರದ ರಾಮರಾಯನ ಜೊತೆ ಸ್ನೇಹದಿಂದಲೇ ಇದ್ದ.

ಆದರೆ ನೆರೆಯ ಷಾಹಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯದ ವಿರುದ್ಧ ರೂಪಿಸಿದ್ದ ವ್ಯೂಹದಲ್ಲಿ ಅಲಿಯನ್ನೂ ಸೇರಿಸಿಕೊಂಡರು. ಇದರಿಂದಾಗಿ 1565ರಲ್ಲಿ ಜರುಗಿದ ಘನಘೋರ ಯುದ್ದದಲ್ಲಿ ವಿಜಯನಗರ ಸೈನ್ಯ ಸೋತುಹೋಯಿತು. ಬಿಜಾಪುರದಲ್ಲಿರುವ ಸುಂದರ ವಿನ್ಯಾಸದಿಂದ ಕೂಡಿದ ಜಾಮಿಯಾ ಮಸೀದಿಯನ್ನು ಇವನು ಕಟ್ಟಿಸಿದ್ದಾನೆ. ಚಿಕ್ಕಪ್ಪ ಅಲಿಯ ನಿಧನಾನಂತರ ಸಿಂಹಾಸನವನ್ನೇರಿದ ಬಾಲಕ ಎರಡನೆಯ ಇಬ್ರಾಹಿಂ (1580-1626) ಆದಿಲ್‌ಷಾ, ಬಿಜಾಪುರದ ಶ್ರೇಷ್ಠ ದೊರೆ. ಪ್ರಾಪ್ತನಿದ್ದುದರಿಂದ ರಾಣಿ ಚಾಂದ್‌ಬೀಬಿಯ ರಕ್ಷಣೆಯಲ್ಲಿ ರಾಜ್ಯಭಾರವನ್ನು ಆರಂಭಿಸಿದ ಇವನು 1590ರ ನಂತರ ತಾನೇ ಅಧಿಕಾರ ಚಲಾಯಿಸಲಾರಂಭಿಸಿದನು. ಇವನು 1619ರಲ್ಲಿ ಬೀದರ್‌ನ ಬರೀದ್‌ಷಾಹಿ ಸಾಮ್ರಾಜ್ಯವನ್ನು ಜಯಿಸಿ, ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಇವನು ಅನ್ಯಮತ ಸಹಿಷ್ಣು ದೊರೆಯಾಗಿದ್ದು,ಅವನನ್ನು ಜನ ಪ್ರೀತಿಯಿಂದ ‘ಜಗದ್ಗುರು’ ಎಂದು ಕರೆಯುತ್ತಿದ್ದರು. ಇವನು ತನ್ನ ಅರಮನೆಯ ಸಮೀಪದಲ್ಲಿ ನರಸಿಂಹ ಸರಸ್ವತಿ (ದತ್ತಾತ್ರೇಯ) ದೇವಾಲಯವನ್ನು ಕಟ್ಟಿಸಿದ್ದ. ಹಿಂದೂಸ್ತಾನಿ ಸಂಗೀತ ಪ್ರೇಮಿಯಾಗಿದ್ದ ಇಬ್ರಾಹಿಂ, ಸಂಗೀತಕ್ಕೆ ಸಂಬಂಧಿಸಿದ ‘ಕಿತಾಬ್-ಎ-ನವರಸ್’ ಎಂಬ ಉರ್ದು ಕವಿತೆಗಳ ಸಂಗ್ರಹವನ್ನು ರಚಿಸಿದ್ದಾನೆ. ಮುಸಲ್ಮಾನರಿಗೆ ಹಿಂದೂಪದ್ಧತಿಯ ಸಂಗೀತ ಕಲಿಸಲು ಬರೆದ ಈ ಕೃತಿ ಸರಸ್ವತಿಯ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಫೆರಿಶ್ತಾ, ಶಿರಾಜಿಗಳಂತಹ ಗಣ್ಯ ಇತಿಹಾಸಕಾರರು ಇವನ ಆಸ್ಥಾನದಲ್ಲಿದ್ದರು. ಇಬ್ರಾಹಿಂ ರೋಜಾ, ಮಾಲಿಕ್ ಜಹಾನ್ ಮಸೀದಿ, ಆನಂದ ಮಹಲ್ ಮೊದಲಾದ ಸುಂದರ ಕಟ್ಟಡಗಳನ್ನು ಇವನು ರಾಜಧಾನಿ ವಿಜಯಪುರದಲ್ಲಿ ಕಟ್ಟಿಸಿದ್ದಾನೆ. ಇವನ ಆಸ್ಥಾನವನ್ನು 300 ಮಂದಿ ಗಾಯಕರು ಅಲಂಕರಿಸಿದ್ದರು.

ಇವನ ಉತ್ತರಾಧಿಕಾರಿಯಾದ ಒಂದನೆಯ ಮಹಮ್ಮದ್ ಆದಿಲ್‌ಷಾ (1626-56) ದಕ್ಷಿಣದಲ್ಲಿ ಬೆಂಗಳೂರಿನವರೆಗೆ, ಆಗ್ನೇಯದಲ್ಲಿ ವೆಲ್ಲೂರಿನವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಶಿವಾಜಿಯ ತಂದೆ ಷಾಹಜೀ ಭೋಸ್ಲೆಗೆ ಬೆಂಗಳೂರು ಮತ್ತದರ ಸುತ್ತಮುತ್ತಲಿನ ಪ್ರಾಂತಗಳನ್ನು ಜಹಗೀರಾಗಿ ಕೊಡಲಾಗಿದ್ದು, 1686ರವರೆಗೂ ಮರಾಠರು, ಬೆಂಗಳೂರನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ವಿಜಯಪುರದಲ್ಲಿ ಅತ್ಯದ್ಭುತವಾದ ಗೋಲ್‌ಗುಂಬಜ್ ಅನ್ನು ಕಟ್ಟಿಸಿದವನು ಇವನೇ. ಆನಂತರ ಬಂದ ಎರಡನೆಯ ಅಲಿ ಆದಿಲ್‌ಷಾ (1656-72) ಶಿವಾಜಿಯೊಂದಿಗೆ ಹೋರಾಡ ಬೇಕಾಯಿತು. ಬಿಜಾಪುರದಲ್ಲಿ ಅಪೂರ್ಣ ಸ್ಥಿತಿಯಲ್ಲಿ ಞತಿರುವ ‘ಬರಾಹಾ ಕಮಾನು’ ಇವನ ಕಾಲದ ಪಳೆಯುಳಿಕೆಯಾಗಿದೆ. ಇವನ ಉತ್ತರಾಧಿಕಾರಿಯಾದ ಸಿಖಂದರ್ ಆದಿಲ್ ಷಾನ (1672-86) ಆಳ್ವಿಕೆಯಲ್ಲಿ ಮರಾಠರ ಪ್ರಾಬಲ್ಯ, ಆಂತರಿಕ ದಂಗೆಗಳಿಂದ ಕಂಗೆಟ್ಟಿದ್ದ ಆದಿಲ್‌ಷಾಹಿ ಸಾಮ್ರಾಜ್ಯವನ್ನು, ಔರಂಗಜೇಬನು ತನ್ನ ಸಾಮ್ರಾಜ್ಯಕ್ಕೆ 1686ರಲ್ಲಿ ಸೇರಿಸಿ ಕೊಂಡನು. ವಿಜಯಪುರದಲ್ಲಿರುವ ಚಾರಿತ್ರಿಕ ಮಹತ್ವದ ಅಸಾರ್ ಮಹಲ್ ಮತ್ತು ಇಬ್ರಾಹಿಂ ರೋಜಾಗಳಲ್ಲಿ ಸುಂದರ ವರ್ಣಚಿತ್ರಗಳಿವೆ. ವಿಜಯಪುರದ ಕೇಂದ್ರ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ, ರಾಗಮಾಲ ವರ್ಣಚಿತ್ರಗಳನ್ನೂ, ಚಾಂದ್‌ಬೀಬಿಯ ಚಿತ್ರವೂ ಸೇರಿದಂತೆ ರಾಜಮನೆತನದವರ ವೈಯಕ್ತಿಕ ವರ್ಣ ಚಿತ್ರಗಳನ್ನೂ ಸಂರಕ್ಷಿಸಿಡಲಾಗಿದೆ . ವಿಜಯಪುರದ ಕೆಲವು ದೊರೆಗಳು ಷಿಯಾ ಪಂಥಕ್ಕೆ ರಿದವರಾಗಿದ್ದರು. ಇವರ ಕಾಲದಿಂದ ತಾಬೂತ್‌ಗಳನ್ನು ಪ್ರತಿಷ್ಠಾಪಿಸಿ ಮೊಹರಂ ಆಚರಣೆ ಮಾಡುವುದು ಕರ್ನಾಟಕದಲ್ಲಿ ಸರ್ವೇ ಮಾನ್ಯವಾಯಿತು.ಇವರ ಆಸ್ಥಾನದಲ್ಲಿ ‘ದಖನ್ನಿಹಿಂದಿ’ ಎನ್ನುವ ಉರ್ದು ಉಪಭಾಷೆ ಬಳಕೆಗೆ ಬಂದಿತು.

ಮೊಘಲರು ತಮ್ಮ ಸಾಮ್ರಾಜ್ಯದ ಗಡಿಯನ್ನು ದಕ್ಷಿಣಕ್ಕೂ ವಿಸ್ತರಿಸಿದರು.ಆಗ 1686ರಲ್ಲಿ ಬೆಂಗಳೂರನ್ನು ವಶಪಡಿಸಿಕೊಂಡರು.ಮೈಸೂರಿನ ಚಿಕ್ಕದೇವರಾಜ ಒಡೆಯನು ಮೊಘಲರಿಗೆ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡಿ ಬೆಂಗಳೂರನ್ನು ಪಡೆದುದು ಉಲ್ಲೇಖಾರ್ಹ. ಮೊಘಲರು ಕರ್ನಾಟಕದ ಸಿರಾ ಮತ್ತು ತಮಿಳುನಾಡಿನಲ್ಲಿ ಆರ್ಕಾಟ್ ಪಟ್ಟಣಗಳನ್ನು ತಮ್ಮ ಪ್ರಮುಖ ಪ್ರಾಂತೀಯ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದು, ಸಿರಾದಲ್ಲಿ ಸುಂದರವಾದ ಕೆಲವು ಮೊಘಲ್ ವಾಸ್ತುರಚನೆಗಳಿವೆ. ಸವಣೂರು, ಸಿರಾ ಮತ್ತು ಆದವಾನಿಯ ನವಾಬರು ಮೊಘಲರ ಹಿಡಿತದಲ್ಲಿದ್ದ ಕನ್ನಡ ಭಾಷಾ ಪ್ರದೇಶಗಳ ಮೇಲೆ ಆಳ್ವಿಕೆ ನಡೆಸಿದರೆ, ಕೆಲವು ಕನ್ನಡ ಭಾಷಾ ಪ್ರದೇಶಗಳನ್ನು ಮೊಘಲರ ಸಾಮಂತರಾಗಿದ್ದ ಗೊಲ್ಕೊಂಡದ ನಿಜಾಮರು ಆಳಿದರು.

 

ಕೆಳದಿ ಸಂಸ್ಥಾನ

ವಿಜಯನಗರದರಸರ ಸಾಮಂತರಾಗಿದ್ದ ಕೆಳದಿಯ ನಾಯಕರು, ಗೇರುಸೊಪ್ಪೆ ಮೊದಲಾದ ಕರಾವಳಿ ಪ್ರದೇಶಗಳನ್ನು ತಮ್ಮ ರಾಜ್ಯದೊಳಕ್ಕೆ ಸೇರಿಸಿಕೊಂಡ ಮೊದಲನೆಯ ವೆಂಕಟಪ್ಪ ನಾಯಕನ (1586-1629) ಆಡಳಿತಾವಧಿಯಲ್ಲೇ ಹೆಚ್ಚೂ ಕಡಿಮೆ ಸ್ವತಂತ್ರರಾಗಿದ್ದರು. ಮಹಾಯೋಧ ಹಾಗೂ ರಾಜನೀತಿಜ್ಞನಾಗಿದ್ದ ಶಿವಪ್ಪನಾಯಕನು (1645-60) ಪೋರ್ಚುಗೀಸರ ಧೀನದಲ್ಲಿದ್ದ ಪಶ್ಚಿಮ ಕರಾವಳಿಯ ಪ್ರಮುಖ ನೆಲೆಗಳಾದ ಮಂಗಳೂರು, ಹೊನ್ನಾವರ ಮತ್ತು ಬಸರೂರುಗಳನ್ನು ವಶಪಡಿಸಿಕೊಂಡು, ಅವರನ್ನು ಉಚ್ಛಾಟಿಸಿದ. ಇವನು ಭೂಕಂದಾಯ ವ್ಯವಸ್ಥೆಯನ್ನು ಪರಿಷ್ಕರಿಸಿದ. ಅದು ‘ಸಿಸ್ತು’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದ್ದು, ತನ್ಮೂಲಕ ಬೃಹತ್ ಪ್ರಮಾಣದಲ್ಲಿ ಭೂಸುಧಾರಣೆಗಳನ್ನು ಜಾರಿಗೆ ತಂದ. ಕೆಳದಿ ಸಂಸ್ಥಾನವು ಸಾಗರೋತ್ತರ ವ್ಯಾಪಾರದಲ್ಲಿ, ಅದರಲ್ಲೂ ವಿಶೇಷವಾಗಿ ಮೆಣಸಿನಕಾಯಿ, ಜವಳಿ ಮತ್ತು ಅಕ್ಕಿಯ ವ್ಯಾಪಾರದಲ್ಲಿ ತುಂಬಾ ಶ್ರೀಮಂತವಾಗಿದ್ದು, ಪ್ರಸಿದ್ಧವಾಗಿತ್ತು. ಅವರ ರಾಜಧಾನಿಗಳಾದ ಕೆಳದಿ, ಇಕ್ಕೇರಿ ಮತ್ತು ನಗರ್‌ಗಳು ಶಿವಮೊಗ್ಗ ಜಿಲ್ಲೆಯಲ್ಲಿವೆ. ಶಿವಪ್ಪನಾಯಕನ ಸೊಸೆಯಾದ ಚೆನ್ನಮ್ಮ (1571-97) ಸಾಹಸ ಧ್ಯೆರ್ಯಗಳಿಗೆ ಹೆಸರಾದವಳು. ಶಿವಾಜಿಯ ಮಗ ರಾಜಕುಮಾರ ಛತ್ರಪತಿ ರಾಜಾರಾಮನಿಗೆ ಆಶ್ರಯ ನೀಡಿ, ಔರಂಗಜೇಬನ ಸೈನ್ಯವನ್ನು ಧೈರ್ಯದಿಂದ ಎದುರಿಸಿದವಳು.

ಅವಳ ಉತ್ತರಾಧಿಕಾರಿ ಬಸವಪ್ಪ ನಾಯಕನು(1697-1714), ವಿಶ್ವಕೋಶ ಮಾದರಿಯಲ್ಲಿರುವ ‘ಶಿವತತ್ವ ರತ್ನಾಕರ’ ಎಂಬ ಸಂಸ್ಕೃತ ಗ್ರಂಥವನ್ನು ರಚಿಸಿದ್ದಾನೆ. ಕೆಳದಿಯ ಅರಸರು ‘ಕೆಳದಿ’, ‘ಇಕ್ಕೇರಿ’ ಮತ್ತು ‘ನಗರ್’ಗಳಲ್ಲಿ ಸುಂದರವಾದ ದೇವಾಲಯಗಳನ್ನೂ, ಕವಲೆದುರ್ಗದ ಬೆಟ್ಟದಮೇಲೆ ಅದ್ಭುತವಾದ ಕೋಟೆಯನ್ನೂ ಕಟ್ಟಿಸಿದ್ದಾರೆ. ಆದರೆ, 1763ರಲ್ಲಿ ಕೆಳದಿ ರಾಜ್ಯವನ್ನು ವಶಪಡಿಸಿಕೊಂಡ ಹೈದರಾಲಿಯು ಅದನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡನು. ವಿಜಯನಗರದ ಉಳಿದ ಮಾಂಡಳಿಕರಲ್ಲಿ, ಮಾಗಡಿಯ ದೊರೆಗಳಲ್ಲಿ ‘ಯಲಹಂಕ ಭೂಪಾಲ’ ಎಂದು ಕರೆಸಿಕೊಳ್ಳುವ ಮೊದಲನೆಯ ಕೆಂಪೇಗೌಡನು 1537ರಲ್ಲಿ ಬೆಂಗಳೂರಿನಲ್ಲಿ ಹೊಸ ಪಟ್ಟಣ(ಪೇಟೆ) ಹಾಗೂ ಕೋಟೆಯನ್ನು ನಿರ್ಮಾಣ ಮಾಡಿಸಿದನಾದರೂ, ಆನಂತರದಲ್ಲಿ ಈ ದೊರೆಗಳು ತಮ್ಮ ರಾಜಧಾನಿಯನ್ನು ಮಾಗಡಿಗೆ ಬದಲಾಯಿಸಿಕೊಳ್ಳಬೇಕಾಯಿತು.  ಅವರು ಅಲ್ಲಿ 1728ರವರೆಗೆ ಆಳ್ವಿಕೆ ಡೆಸಿದರು. ಮಾಗಡಿಯ ಕೋಟೆಯನ್ನು ರಚಿಸಿದ್ದು ಇವರೇ. ಚಿತ್ರದುರ್ಗದ ನಾಯಕರು ಚಿತ್ರದುರ್ಗದ ಬೆಟ್ಟದ ಮೇಲಿನ ಅದ್ಭುತವಾದ ಕೋಟೆಯನ್ನು ನಿರ್ಮಿಸಿ, ಹೈದರಾಲಿಯಿಂದ ಮದಗಿರಿ 1779ರಲ್ಲಿ ನಿರ್ನಾಮವಾಗುವವರೆಗೂ ಅಲ್ಲಿಂದ ಆಳ್ವಿಕೆ ನಡೆಸಿದರು.

 

ಮರಾಠರು

ಬಿಜಾಪುರ ರಾಜ್ಯದ ಮೇಲೆ ನಿರಂತರ ಆಕ್ರಮಣ ನಡೆಸಿದ ಮರಾಠರು, ತನ್ಮೂಲಕ ತುಂಗಭದ್ರೆಯ ಉತ್ತರಕ್ಕಿದ್ದ ಕರ್ನಾಟಕದ ಪ್ರದೇಶಗಳನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಆನಂತರದಲ್ಲಿ ಶಿವಾಜಿಯು ಉತ್ತರ ಕರ್ನಾಟಕದ ರಾಮದುರ್ಗ, ನರಗುಂದ, ಪರಸ್‌ಗಡ್, ಗಜೇಂದ್ರಗಡ, ಮೊದಲಾದ ಕಡೆ ಕೋಟೆಗಳನ್ನು ನಿರ್ಮಿಸಿದ. ದಕ್ಷಿಣದಲ್ಲಿ ಇವರಿಗೆ, ಮೊದಲು ಷಾಹಜೀ (1637-63), ಆಮೇಲೆ ಅವನ ಮಗ ಏಕೋಜಿಯ ನಿಯಂತ್ರಣಕ್ಕೊಳಪಟ್ಟಿದ ಬೆಂಗಳೂರು ಜಹಗೀರಿನ ಆಡಳಿತ ಇತ್ತು. ಮೈಸೂರಿನ ರಾಜಮನೆತನದವರು ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು 1689ರಲ್ಲಿ ಮೊಗಲರಿಂದ ಲಾವಣಿಯಾಗಿ ಪಡೆದುಕೊಂಡರು.ಆದರೆ ಅದಕ್ಕೂ ಮೊದಲು 1686ರಲ್ಲಿ ಮೊಘಲರು ಈ ಪ್ರಾಂತಗಳನ್ನು ವಿಜಯಪುರದ ಮಾಂಡಳಿಕನಾದ ಮರಾಠ ದೊರೆ ಏಕೋಜಿಯಿಂದ ಗೆದ್ದು ಕೊಂಡಿದ್ದರು. ಆನಂತರದಲ್ಲಿ ಶಿವಾಜಿಯ ಮೊಮ್ಮಗ ಛತ್ರಪತಿ ಷಾಹುನ ಕಾಲದಲ್ಲಿ (ಕ್ರಿ. ಶ. 1719 ರಲ್ಲಿ), ದಕ್ಷಿಣದ ಮಾಂಡಳಿಕರು ಮೊಗಲರಿಗೆ ಕೊಡಬೇಕಾಗಿದ್ದ ಚೌಥ್ ಮತ್ತು ಸರ್ದೇಶಮುಖಿ ತೆರಿಗೆಗಳನ್ನು ವಸೂಲು ಮಾಡುವ ಅಧಿಕಾರವನ್ನು ಮರಾಠರು ಅವರಿಂದ ಪಡೆದುಕೊಂಡರು. 1753ರಲ್ಲಿ ಬಾಲಾಜಿರಾವ್ ಪೇಶ್ವೆ ಧಾರವಾಡವನ್ನು ಗೆದ್ದುಕೊಂಡಿದ್ದ. ಆಮೇಲೆ ಹೈದರ್ ಮತ್ತು ಟಿಪ್ಪು, ಮರಾಠರಿಂದ ಧಾರವಾಡವನ್ನು ಕಸಿದುಕೊಂಡರು. 1791ರಲ್ಲಿ ಮತ್ತೆ ಧಾರವಾಡ ಪ್ರಾಂತವನ್ನು ಮರಾಠರಿಗೆ ವಹಿಸಲಾಯಿತಾದರೂ, ಪೇಶ್ವೆಗಳ ಪತನದೊಂದಿಗೆ 1818ರಲ್ಲಿ ಧಾರವಾಡ ಬ್ರಿಟಿಷರ ಪಾಲಾಯಿತು.

 

ಮೈಸೂರು ಅರಸರು

ವಿಜಯನಗರದರಸರ ಕೈಕೆಳಗೆ ಮಾಂಡಳಿಕರಾಗಿದ್ದ ಮೈಸೂರು ರಾಜಮನೆತನದ ದೊರೆಗಳು, ವಿಜಯನಗರ ಸಾಮ್ರಾಜ್ಯದ ದೌರ್ಬಲ್ಯಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಕ್ರಮೇಣ ಸ್ವತಂತ್ರರಾದರು. ವಿಜಯನಗರದ ರಾಜ್ಯಪಾಲನ (ವೈಸ್‌ರಾಯ್) ಪ್ರಾಂತೀಯ ಕೇಂದ್ರವಾಗಿದ್ದ ಶ್ರೀರಂಗಪಟ್ಟಣವನ್ನು ಕ್ರಿ. ಶ. 1610ರಲ್ಲಿ ರಾಜ ಒಡೆಯನು (1578-1617) ಗೆದ್ದುಕೊಂಡ. ಈ ಮನೆತನದ ಮೊದಲ ಸ್ವತಂತ್ರ ದೊರೆಯಾದ ಕಂಠೀರವ ನರಸರಾಜ ಒಡೆಯನು (1638-59), ತನ್ನನ್ನು ಬಗ್ಗು ಬಡಿಯಲು ಪ್ರಯತ್ನಿಸಿದ ವಿಜಯಪುರದ ಪ್ರಯತ್ನಗಳನ್ನು ಯಶಸ್ವಿಯಾಗಿ ಎದುರಿಸಿ, ತನ್ನ ರಾಜ್ಯದ ಗಡಿಗಳನ್ನು ವಿಸ್ತರಿಸಿದ. ಅವನು ಶ್ರೀರಂಗಪಟ್ಟಣದಲ್ಲಿ ನರಸಿಂಹದೇವರ ಗುಡಿಯನ್ನು ನಿರ್ಮಿಸಿದ.ಅಲ್ಲದೆ, ತನ್ನದೇ ಆದ ‘ಕಂಠೀರಾಯಪಣ’ ಎಂಬ ನಾಣ್ಯವನ್ನು ಹೊರಡಿಸಿದ.

ಚಿಕ್ಕದೇವರಾಯ ಒಡೆಯನು (1673-1704) ಬೆಂಗಳೂರು ಮತ್ತು ಜಿಂಜಿಗಳಲ್ಲಿ ಮರಾಠರನ್ನು ಪ್ರತಿಭಟಿಸಿದ್ದಷ್ಟೇ  ಅಲ್ಲದೆ, ಮಿಳುನಾಡಿಗೂ ತನ್ನ ರಾಜ್ಯವನ್ನು ವಿಸ್ತರಿಸಿದ. ಅವನು ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳನ್ನು ಮೊಘಲರಿಂದ ಲಾವಣಿಯಾಗಿ ಪಡೆದುಕೊಂಡಿದ್ದನು. ತನ್ನ ಸಮರ್ಥ ಕಂದಾಯ ನೀತಿಗಳಿಂದ ಮೈಸೂರು ರಾಜ್ಯವನ್ನು ಶ್ರೀಮಂತ ರಾಜ್ಯವನ್ನಾಗಿ ಪರಿವರ್ತಿಸಿದ. ಸ್ವತಃ ಬರಹಗಾರನಾಗಿದ್ದ ಇವನ ಆಸ್ಥಾನದಲ್ಲಿ ತಿರುಮಲರಾಯ, ಚಿಕ್ಕುಪಾಧ್ಯಾಯ, ಸಂಚಿಯ ಹೊನ್ನಮ್ಮ ಮೊದಲಾದ ಕವಿ-ಕವಿಯತ್ರಿಯರಿದ್ದು, ಇವರೆಲ್ಲಾ ಶ್ರೀವೈಷ್ಣವರಾಗಿದ್ದರು. ಇವನ ನಂತರ ಬಂದ ದುರ್ಬಲ ದೊರೆಗಳಿಂದ, ಈ ರಾಜಮನೆತನದವರು 1761ರಲ್ಲಿ ಹೈದರಾಲಿಗೆ, ರಾಜ್ಯಾಧಿಕಾರವನ್ನು ಒಪ್ಪಿಸಬೇಕಾಯಿತು. ಈ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿ, ಮಧುಗಿರಿ, ನಿಡುಗಲ್ಲು, ಆನೇಕಲ್ಲು, ಚಿಕ್ಕಬಳ್ಳಾಪುರ, ಗುಮ್ಮನಾಯಕನಹಳ್ಳಿ, ತರೀಕೆರೆ, ರಾಣಿಬೆನ್ನೂರು, ಬೇಲೂರು, ಹರಪನಹಳ್ಳಿ ಮೊದಲಾದ ಪ್ರದೇಶಗಳನ್ನು ಸ್ಥಳೀಯ ಪಾಳೇಯಗಾರರು ಸ್ವತಂತ್ರವಾಗಿ ಆಳುತ್ತಿದ್ದರು.

ಹೈದರಾಲಿ

1761ರ ಪಾಣಿಪತ್ ಯುದ್ಧದಲ್ಲಿ ಮರಾಠರಿಗೆ ಉಂಟಾದ ಸೋಲು, ಮೈಸೂರು ರಾಜ್ಯದಲ್ಲಿ ಹೈದರಾಲಿಯ ಆಕ್ರಮಣ ಪ್ರವೃತ್ತಿಗೆ ದಾರಿ ಮಾಡಿಕೊಟ್ಟಿತು. ತತ್ಪರಿಣಾಮವಾಗಿ ಕೆಳದಿ ಸಂಸ್ಥಾನವನ್ನು ಮೈಸೂರಿನೊಂದಿಗೆ ವಿಲೀನಗೊಳಿಸಿ, ಮೈಸೂರು ರಾಜ್ಯವನ್ನು ಎಲ್ಲ ದಿಕ್ಕುಗಳಿಗೂ ವಿಸ್ತರಿಸಿದನು. ಬೃಹತ್ ಪ್ರಮಾಣದಲ್ಲಿದ್ದ ಅಶ್ವಸೈನ್ಯವನ್ನು ಇವನು ಯಶಸ್ವಿಯಾಗಿ ಉಪಯೋಗಿಸಿಕೊಂಡನು. ಇವನ ಆಳ್ವಿಕೆಯಲ್ಲಿ ಮೈಸೂರು ಪ್ರಾಂತ 80,000 ಚ.ಮೈಲಿಗಳಷ್ಟು ಸೀಮೆಯನ್ನು ಒಳಗೊಂಡಿತ್ತು. ಹೈದರಾಲಿಯು ಬೆಂಗಳೂರಿನಲ್ಲಿ ಅರಮನೆಯೊಂದನ್ನು ಕಟ್ಟಿಸಿ, ಅಲ್ಲಿನ ಕೋಟೆಯನ್ನು ಭದ್ರಪಡಿಸಿದ. ಲಾಲ್‌ಬಾಗ್ ತೋಟವನ್ನು ನಿರ್ಮಿಸಲು ಆರಂಭಿಸಿದ. ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಅರಮನೆಯನ್ನು ಕಟ್ಟಿಸಿ, ಅದರ ಸುತ್ತಲೂ ಉದ್ಯಾನವೊಂದನ್ನು ನಿರ್ಮಿಸಿದ. ತಮಿಳುನಾಡಿನಲ್ಲಿ ಬ್ರಿಟಿಷರನ್ನು ಧಿಕ್ಕರಿಸಿ, ಸೋಲಿಸಿದ. ಆದರೆ ಮರಾಠಾ ಪೇಶ್ವೆ ಮಾಧವರಾಯನಿಂದ ಎರಡು-ಮೂರು ಬಾರಿ ತೇಜೋವಧೆಗೆ ಒಳಗಾಗಬೇಕಾಯಿತು.ಇವನು, ಫ್ರೆಂಚರ ಮಿತ್ರನಾಗಿ ಬ್ರಿಟಿಷರನ್ನು ವಿರೋಧಿಸಿ ಮೊದಲನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಜಯಶಾಲಿಯಾದ.

ಇದೇ ಸಮಯದಲ್ಲಿ 1779ರಲ್ಲಿ ಹೈದರಾಲಿಯು ಚಿತ್ರದುರ್ಗದ ಮದಕರಿ(ಮೇದಕೇರಿ) ಮನೆತನದವರಿಂದ ಚಿತ್ರದುರ್ಗ ಸಂಸ್ಥಾನವನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಕರಾವಳಿ ಪ್ರದೇಶದ ಮೇಲೆ ನಿಯಂತ್ರಣವನ್ನು ಸಾಧಿಸಿದ್ದ ಇವನು, ಮಂಗಳೂರು ಬಳಿಯ ಸುಲ್ತಾನ ಬತೇರಿಯಲ್ಲಿ ಬಲಿಷ್ಠವಾದ ನೌಕಾನೆಲೆಯನ್ನು ಸ್ಥಾಪಿಸಿದ್ದ. ಆದರೆ 1782ರಲ್ಲಿ ಬ್ರಿಟಿಷರ ವಿರುದ್ಧ ಆರ್ಕಾಟ್ ಸಮೀಪದ ನರಸಿಂಗರಾಯಪೇಟೆಯಲ್ಲಿ ನಡೆದ ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ.

 

ಟಿಪ್ಪೂಸುಲ್ತಾನ್

1750ರ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲಿ ಜನಿಸಿದ ಇವನು ಬ್ರಿಟಿಷರ ವಿರುದ್ಧ ಮೂರನೆಯ ಮತ್ತು ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧಗಳನ್ನು ಮಾಡುವುದರ ಮೂಲಕ ತನ್ನ ತಂದೆಯ ಬ್ರಿಟಿಷ್ ವಿರೋಧಿ ನೀತಿಯನ್ನೇ ಮುಂದುವರಿಸಿದನು. ಅಲ್ಲದೇ ಟಿಪ್ಪೂಸುಲ್ತಾನ್‌ತನ್ನ ಅಧಿಕಾರಾವಧಿಯಲ್ಲಿ(1782-99), ಬ್ರಿಟಿಷರನ್ನು ಭಾರತದಿಂದ ಓಡಿಸುವ ಕನಸು ಕಂಡಿದ್ದ. ಅದಕ್ಕಾಗಿ ಅವನು ಫ್ರೆಂಚ್ ದೊರೆ ನೆಪೋಲಿಯನ್, ತುರ್ಕಿ ಮತ್ತು ಆಫ್ಘಾನಿಸ್ಥಾನದ ದೊರೆಗಳಿಂದ ಸಹಾಯವನ್ನು ಬಯಸಿದ. ಟಿಪ್ಪೂ ಒಬ್ಬ ಚಿಂತಕ ಹಾಗೂ ಧೈರ್ಯಶಾಲಿ ಸೇನಾಧಿಪತಿಯೂ ಆಗಿದ್ದ. ಇವನು ಮೈಸೂರು ರಾಜ್ಯದಲ್ಲಿ ರೇಷ್ಮೆ ವ್ಯವಸಾಯವನ್ನು ಆರಂಭಿಸಿದ. ಉತ್ತಮ ಗುಣಮಟ್ಟದ ಕಾಗದ, ಸಂಗೀತ ವಾದ್ಯಗಳ ಉಕ್ಕಿನ ತಂತಿಗಳು, ಸಕ್ಕರೆ ಮತ್ತು ಸಕ್ಕರೆಯ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸುವಂತಹ ಅಚಲವಾದ ನಿರ್ಧಾರಗಳನ್ನು ಕೈಗೊಂಡ. ಇವನು ಅಂತಾರಾಷ್ಟ್ರೀಯ ವ್ಯಾಪಾರವನ್ನು ಅಭಿವೃದ್ಧಿಪಡಿಸುವಲ್ಲಿ ಉತ್ಸಾಹಿಯಾಗಿದ್ದ. ತನ್ನ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಹಾಗೂ ಮಧ್ಯಪ್ರಾಚ್ಯ ದೇಶಗಳಾದ ಕಛ್, ಕರಾಚಿ ಮತ್ತು ಬಸ್ರಾಹ್‌ಗಳಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿ ರಾಜ್ಯದ ವ್ಯಾಪಾರವನ್ನು ವಿಸ್ತರಿಸಿದ. ಅವನು ಕುತೂಹಲ ಮನಸ್ಸಿನವನಾಗಿದ್ದು ಬದುಕಿನ ಎಲ್ಲ ಸ್ತರಗಳಲ್ಲೂ ಹೊಸತನ್ನು ತರುವ ಆಲೋಚನೆಯನ್ನು ಹೊಂದಿದ್ದ. ಆದರೂ, ಬ್ರಿಟಿಷರನ್ನು ಹೊರದೂಡುವ ಅವನ ಆಕಾಂಕ್ಷೆ ವಿಫಲವಾಯಿತು. ಮೂರನೆಯ ಆಂಗ್ಲೋ-ಮೈಸೂರು ಯುದ್ದದಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಇವನು, ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಡಬೇಕಾಯಿತು. ಆದರೂ ಬ್ರಿಟಿಷರ ವಿರುದ್ಧ ಹೋರಾಡುತ್ತಾ, ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ 1799ರ ಮೇ ನಾಲ್ಕರಂದು ನಿಧನ ಹೊಂದಿದ. ಮೈಸೂರು ಸಂಸ್ಥಾನ ಬ್ರಿಟಿಷರ ಕೈವಶವಾಯಿತು. ಅವರು ಅದರ ಕೆಲವು ಭಾಗಗಳನ್ನು, ಈ ಯುದ್ದದಲ್ಲಿ ತಮಗೆ ಮಿತ್ರರಾಗಿದ್ದ ಮರಾಠರು ಮತ್ತು ನಿಜಾಮರಿಗೆ ವಹಿಸಿ, ಹಿಂದೂ ರಾಜಕುಮಾರ ಮುಮ್ಮಡಿ ಕೃಷ್ಣರಾಜ ಒಡೆಯರನ್ನು, ಭೌಗೋಳಿಕವಾಗಿ ಸಾಕಷ್ಟು ಕುಗ್ಗಿದ ಮೈಸೂರು ಸಂಸ್ಥಾನಕ್ಕೆ ದೊರೆಯನ್ನಾಗಿಸಿದರು. ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಿಸಲಾಯಿತು. ಟಿಪ್ಪೂವಿನ ಮರಣಾ(1799) ನಂತರ 1800-01ರ ಅವಧಿಯಲ್ಲಿ ಮದರಾಸ್ ಪ್ರೆಸಿಡೆನ್ಸಿಯ ಅಪೇಕ್ಷೆಯ ಮೇರೆಗೆ ಫ್ರಾನ್ಸಿಸ್ ಬುಕನನ್, ಹೈದರ್ ಮತ್ತು ಟಿಪ್ಪೂ ಆಳುತ್ತಿದ್ದ ಭಾಗಗಳಿಗೆ ಭೇಟಿ ನೀಡಿದ. ಇವನು ರಚಿಸಿರುವ A Journey from Madras through the Countries of Mysore, Canara and Malabar’ ಕೃತಿ ಎಲ್ಲರೂ ಗಮನಿಸಲೇಬೇಕಾದ ಮಾಹಿತಿಯುಕ್ತ ಪ್ರವಾಸಿ ದಾಖಲೆಯಾಗಿದೆ. ಪೇಶ್ವೆಗಳನ್ನು ಕ್ರಿ. ಶ. 1818ರಲ್ಲಿ ಸೋಲಿಸುವುದರ ಮೂಲಕ ತುಂಗಭದ್ರಾನದಿಯ ಉತ್ತರದ ಪ್ರಾಂತಗಳನ್ನು ವಶಪಡಿಸಿಕೊಂಡ ಬ್ರಿಟಿಷರು ಸಂಪೂರ್ಣ ಕರ್ನಾಟಕದ ಒಡೆಯರಾದರು. ಒಂದು ಸಣ್ಣ ಉಪರಾಜ್ಯ ಪ್ರಭುತ್ವವಾಗಿದ್ದ ಕೊಡಗನ್ನು ಅವರು 1834ರಲ್ಲಿ ಹಾಲೇರಿ ವಂಶದ ಚಿಕ್ಕವೀರ ರಾಜೇಂದ್ರನನ್ನು ಸಿಂಹಾಸನದಿಂದ ಕೆಳಗಿಳಿಸಿ, ಆಕ್ರಮಿಸಿದರು.1834ರಲ್ಲಿ ಕೊಡಗಿನಲ್ಲಿ ಸಾಮಂತ ಪ್ರಭುತ್ವ ನಿಂತುಹೋಗಿ, ಆ ಪ್ರಾಂತವನ್ನು, ಮದರಾಸಿನ ರಾಜ್ಯಪಾಲನ ಮೇಲ್ವಿಚಾರಣೆಯಲ್ಲಿರುವಂತೆ ಒಬ್ಬ ಕಮೀಷನರ್‌ಗೆ ವಹಿಸಲಾಯಿತು. ಕೊಡಗಿನ ಭಾಗವಾಗಿದ್ದ ಸುಳ್ಯ ಪ್ರಾಂತವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಯಿತು.

 

 

ಬ್ರಿಟಿಷರ ಆಡಳಿತ

ಭಾರತದ ಉಳಿದೆಡೆಗಳಂತೆ, ಬ್ರಿಟಿಷರ ಆಳ್ವಿಕೆಯು ಕರ್ನಾಟಕದಲ್ಲಿ ಅನೇಕ ಬದಲಾವಣೆಗಳನ್ನುಂಟು ಮಾಡಿತು. ಪೇಶ್ವೆಗಳಿಂದ 1818ರಲ್ಲಿ ಕಿತ್ತುಕೊಂಡ ಧಾರವಾಡ, ಗದಗ, ಹಾವೇರಿ, ಬಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿಗಳನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಟಿಪ್ಪೂವಿನಿಂದ ಕಸಿದುಕೊಂಡ, ಇಂದಿನ ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡಿದ್ದ ಕೆನರಾ, ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಮದರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಮುಂದೆ 1860ರಲ್ಲಿ ಕೆನರಾ ಜಿಲ್ಲೆಯನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಲಾಯಿತು. ಆನಂತರ 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಗೆ ವರ್ಗಾಯಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯು ಮದರಾಸ್ ಪ್ರೆಸಿಡೆನ್ಸಿಯಲ್ಲೇ ಉಳಿಯಿತು. ಮೈಸೂರನ್ನು ಪ್ರತ್ಯೇಕ ರಾಜಸಂಸ್ಥಾನವಾಗಿಯೇ ಉಳಿಸಿಕೊಳ್ಳಲಾಯಿತು. ಒಡೆಯರ್ ವಂಶದ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಲ್ಲಿ ಅಧಿಕಾರಕ್ಕೆ ಬಂದಾಗ ಇನ್ನೂ ಅಪ್ರಾಪ್ತ ವಯಸ್ಕ. ಬ್ರಿಟಿಷರು ಆಧುನಿಕ ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲಾ ಪ್ರದೇಶಗಳನ್ನು ಹೈದರಾಬಾದ್ ನಿಜಾಮನ ಅಧಿಕಾರಕ್ಕೆ ಒಳಪಡಿಸಿದರು. ಸವಣೂರಿನ ನವಾಬನೂ ಸೇರಿ ಒಟ್ಟು ಹದಿನೈದು ರಾಜಮನೆತನಗಳು ಸಣ್ಣಪುಟ್ಟ ಕನ್ನಡ ಸಂಸ್ಥಾನಗಳನ್ನು ಆಳುತ್ತಿದ್ದು, ಅವರಲ್ಲಿ ಜಮಖಂಡಿ, ಔಂಧ್, ರಾಮದುರ್ಗ, ಮುಧೋಳ್, ಸಂಡೂರು, ಹಿರೇಕುರುಂದವಾಡ, ಜತ್, ಸಾಂಗ್ಲಿ, ಕೊಲ್ಲಾಪುರ, ಮೀರಜ್, ಕಿರುಕುರುಂದವಾಡ, ಅಕ್ಕಲಕೋಟೆ ಸಂಸ್ಥಾನಗಳಲ್ಲಿ ಆಳುತ್ತಿದ್ದವರು ಮರಾಠ ದೊರೆಗಳಾಗಿದ್ದರು.

ದಕ್ಷಿಣ ಕರ್ನಾಟಕದ ಕೇಂದ್ರಬಿಂದುವಿನಂತಿದ್ದ ಮೈಸೂರು, ಪ್ರಗತಿಶೀಲ ಸಂಸ್ಥಾನವಾಗಿ ಬೆಳೆಯಿತು. ಅದು ಕನ್ನಡ ಸಂಸ್ಕೃತಿಯನ್ನು ಸಲಹುವುದರ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನೂ ಪ್ರೋತ್ಸಾಹಿಸಿತು. ಮೈಸೂರು ಸಂಸ್ಥಾನ ವಿಲ್ಲದೇ ಹೋಗಿದ್ದರೆ, ಕರ್ನಾಟಕದ ನೈಜ ಸ್ವರೂಪವೇ ಕಳೆದು ಹೋಗುತ್ತಿತ್ತು ಎಂಬ ಅಭಿಪ್ರಾಯವಿದೆ. ಏತನ್ಮಧ್ಯೆ, ಅಪ್ರಾಪ್ತ ವಯಸ್ಸಿನ ಮುಮ್ಮಡಿ ಕೃಷ್ಣರಾಜರು ರಾಜಮಾತೆ ಲಕ್ಷೀ ಅಮ್ಮಣ್ಣಿಯವರ ಪೋಷಣೆಯಲ್ಲಿದ್ದು ಪೂರ್ಣಯ್ಯನನ್ನು ದಿವಾನ ಹುದ್ದೆಗೆ ನೇಮಿಸಲಾಯಿತು. ಆನಂತರ 1810ರಲ್ಲಿ ಸ್ವಯಂ ಕೃಷ್ಣರಾಜರೇ ಪೂರ್ಣಾಧಿಕಾರವನ್ನು ವಹಿಸಿಕೊಂಡರು. ಆದರೆ 1831ರಲ್ಲಿ ನಡೆದ ‘ನಗರ’ ಬಂಡಾಯದ ಫಲವಾಗಿ ಆ ವರ್ಷವೇ ಮೈಸೂರಿನ ಆಡಳಿತವನ್ನು ‘ಈಸ್ಟ್ ಇಂಡಿಯಾ ಕಂಪೆನಿ’ ವಹಿಸಿಕೊಂಡಿತು. ಆನಂತರ ಮೈಸೂರು ಸಂಸ್ಥಾನವನ್ನು 50 ವರ್ಷಗಳ ಕಾಲ ಬ್ರಿಟಿಷ್ ಕಮೀಷನರ್‌ಗಳು ಆಳಿದರು. ಈ ಅವಧಿಯಲ್ಲಿ ಬೆಂಗಳೂರಿಗೆ ರಾಜಧಾನಿಯು ಸ್ಥಳಾಂತರಗೊಂಡಿತು.‌ ಇದರಿಂದಾಗಿ ಪಾಂಡಿತ್ಯಕ್ಕೆ, ಸಾಹಿತ್ಯ ಪ್ರೇಮಕ್ಕೆ ಹೆಸರಾಗಿದ್ದ ಮುಮ್ಮಡಿ ಕೃಷ್ಣರಾಜರು, ತಮ್ಮ ಜೀವಮಾನದ ಉಳಿದ ಭಾಗವನ್ನು ಸಾಹಿತ್ಯ ಮತ್ತು ಕಲಾಸೇವೆಯಲ್ಲಿ ಕಳೆದರು. ಮೈಸೂರಿನ ರಾಜಸಭೆಯು ಕರ್ನಾಟಕದ ಪುನರುಜ್ಜೀವನ ಕಾಲದ ಪ್ರಮುಖ ಕೇಂದ್ರವಾಯಿತು. 1833ರಲ್ಲಿ ಆಂಗ್ಲಭಾಷೆಯನ್ನು ಬೋಧಿಸಲು ರಾಜಾ(ಸ್ಕೂಲ್) ಶಾಲೆಯನ್ನು ಮೈಸೂರಿನಲ್ಲಿ ಸ್ಥಾಪಿಸಲಾಯಿತು. ಅದು ಮುಂದೆ ಮಹಾರಾಜ ಪ್ರೌಢಶಾಲಾ ಕೇಂದ್ರವಾಗಿ, ನಂತರ 1879ರಲ್ಲಿ ಮಹಾರಾಜಾ ಕಾಲೇಜಾಗಿ ಮೇಲ್ದರ್ಜೆಗೇರಿತು. ಇವರೇ ಅಂಬಾವಿಲಾಸ ಎಂಬ (1841) ಕಲ್ಲಚ್ಚು ಮುದ್ರಣಾಲಯವನ್ನು ಸ್ಥಾಪಿಸಿ ಕನ್ನಡದಲ್ಲಿ ಗ್ರಂಥ ಪ್ರಕಟಣೆಯನ್ನೂ ಪ್ರಾರಂಭಿಸಿದರು.

ಕಮೀಷನರ್ ಆಡಳಿತ

1831-1881ರ ಅವಧಿಯಲ್ಲಿ ಮೈಸೂರು ಸ್ಥಾನದಲ್ಲಿ ಆಳ್ವಿಕೆ ನಡೆಸಿದ ಬ್ರಿಟಿಷ್ ಕಮೀಷನರ್‌ರಲ್ಲಿ ಮಾರ್ಕ್  ಕಬ್ಬನ್(1834-61), ಲೆವಿನ್ ಬೌರಿಂಗ್(1862-70) ಗಮನಾರ್ಹರಾಗಿದ್ದಾರೆ. ಯೂರೋಪಿಯನ್ನರ ಮಾದರಿಯಲ್ಲಿ ಆಡಳಿತವನ್ನು ವ್ಯವಸ್ಥೆಗೊಳಿಸಿ ಮೈಸೂರನ್ನು ಮಾದರಿ ಸಂಸ್ಥಾನವನ್ನಾಗಿಸಿ ಬ್ರಿಟಿಷ್ ಪ್ರೆಸಿಡೆನ್ಸಿಯ ಇತರ ಜಿಲ್ಲೆಗಳ ಮಟ್ಟಕ್ಕೆ ತಂದ ಗೌರವ ಈ ಇಬ್ಬರಿಗೂ ಸಲ್ಲುತ್ತದೆ. ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರು. ಎಲ್ಲಾ ಜಿಲ್ಲಾಕೇಂದ್ರಗಳನ್ನು ಬೆಂಗಳೂರಿನೊಂದಿಗೆ ಜೋಡಿಸುವ ರಸ್ತೆ ಮಾರ್ಗ; ಬೆಂಗಳೂರು- ಮದ್ರಾಸ್(1864), ಮೈಸೂರು-ಬೆಂಗಳೂರು(1882) ರೈಲು ಮಾರ್ಗಗಳನ್ನು ನಿರ್ಮಿಸುವುದರ ಜೊತೆಗೆ, ಟೆಲಿಗ್ರಾಫ್ ಅನ್ನು ಪ್ರಾರಂಭಿಸುವುದರ ಮೂಲಕ, ಕೈಗಾರಿಕಾಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದರು.

ಮೈಸೂರು ರಾಜ್ಯಾಧಿಕಾರದ ಪುನಃಸ್ಥಾಪನೆ

ಮುಮ್ಮಡಿ ಕೃಷ್ಣರಾಜ ಒಡೆಯರ ದತ್ತುಪುತ್ರ ಹತ್ತನೆಯ ಚಾಮರಾಜ ಒಡೆಯರ್ ಪ್ರಾಪ್ತವಯಸ್ಕರಾಗುತ್ತಿದ್ದಂತೆ 1881ರಲ್ಲಿ ಸಂಸ್ಥಾನಕ್ಕೆ ಅಧಿಪತಿಯಾಗಿ ಸಿಂಹಾಸನ ಏರಿದರು ಇದರೊಂದಿಗೆ ಮೈಸೂರು ಅರಸರ ಅಧಿಕಾರದ ಪುನರ್‌ಸ್ಥಾಪನೆ ಆಯಿತು.  ಇವರಿಗೆ ಸಮರ್ಥರಾದ ಸಿ.ರಂಗಾಚಾರ್ಯ ಮತ್ತು ಕೆ. ಶೇಷಾದ್ರಿ ಐಯ್ಯರ್ ಅವರಂತಹ ದಿವಾನರ ಸಹಾಯ ದೊರೆಯಿತು.ಆಗ ದಿವಾನರಾಗಿದ್ದ ರಂಗಾಚಾರ್ಯ ಅವರು 1881ರಲ್ಲಿ ಮೈಸೂರಿನಲ್ಲಿ 144 ಜನ ನಾಮಕರಣ ಸದಸ್ಯರಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿ, ಜವಾಬ್ದಾರಿ ಸರ್ಕಾರಕ್ಕೆ ಒಂದು ಭದ್ರವಾದ ವೇದಿಕೆಯನ್ನು ನಿರ್ಮಿಸಿದರು. 1883ರಲ್ಲಿ ರಂಗಾಚಾರ್ಯರು ತೀರಿಕೊಂಡಾಗ, ದಿವಾನರಾಗಿ ಅಧಿಕಾರ ವಹಿಸಿಕೊಂಡ ಶೇಷಾದ್ರಿ ಅಯ್ಯರ್, 1901ರವರೆಗೆ ಆಡಳಿತ ನಡೆಸಿದರು. ಪ್ರಜಾಪ್ರತಿನಿಧಿ ಸಭೆಗೆ ಕಂದಾಯ ಪಾವತಿ ಮಾಡುತ್ತಿದ್ದ ಜಮೀನ್ದಾರರು, ಶ್ರೀಮಂತ ವರ್ತಕರು ಮತ್ತು ಪದವೀಧರರನ್ನು ವರ್ಷಾವಧಿಗೆ ಸದಸ್ಯರನ್ನಾಗಿ ಚುನಾಯಿಸುವ ಪದ್ಧತಿಯನ್ನು 1891ರಲ್ಲಿ ಆರಂಭಿಸಲಾಯಿತು. ಮುಂದೆ ಅದರ ಸದಸ್ಯತ್ವದ ಅವಧಿಯನ್ನು 1894ರಲ್ಲಿ ಮೂರು ವರ್ಷಕ್ಕೆ ವಿಸ್ತರಿಸಲಾಯಿತು. ಏತನ್ಮಧ್ಯೆ, ಇಂದು ಮೈಸೂರಿನಲ್ಲಿರುವ ಶ್ರೀ.ಚಾಮರಾಜೇಂದ್ರ ಪ್ರಾಣಿಸಂಗ್ರಹಾಲಯವು 1882 ರಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಖಾಸ್ ಬಂಗಲೆಯಾಗಿ ಆರಂಭವಾಗಿ, 1902 ರಲ್ಲಿ ಸಾರ್ವತ್ರಿಕಗೊಂಡಿತು. ಕನ್ನಡ ವಿದ್ವಾಂಸರನ್ನು ಪ್ರೋತ್ಸಾಹಿಸಿದ ಮುಮ್ಮಡಿ ಕೃಷ್ಣರಾಜೋಡೆಯರು ಸಾಹಿತ್ಯ ಮತ್ತು ಲಲಿತ ಕಲೆಗಳ ಬಗೆಗೆ ವಿಶೇಷ ಮಮತೆಯುಳ್ಳವರಾಗಿದ್ದರು.1894ರಲ್ಲಿ ಅವರು ತೀರಿಕೊಂಡಾಗ, ಯುವಕರಾದ ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಕ್ಕೆ ಬಂದರು. ಅವರ ತಾಯಿ ವಾಣಿವಿಲಾಸ ಸನ್ನಿಧಾನವು ರಾಜರಕ್ಷಕಿಯ ಕೆಲಸವನ್ನು ನಿರ್ವಹಿಸಿದರು.

 

ಆರ್ಥಿಕ ಬದಲಾವಣೆಗಳು:

ಕೃಷಿಗೆ ಅನುಕೂಲವಾಗುವಂತೆ ಕಾವೇರಿ ನದಿಗೆ ಹಿಂದೆ ಸಾಗರಕಟ್ಟೆಯಲ್ಲಿ ಕಟ್ಟಿದ ಅಣೆಕಟ್ಟನ್ನು ದಿವಾನ್ ಪೂರ್ಣಯ್ಯ ಎತ್ತರಿಸಿದ್ದರು. ಕಬ್ಬನ್‌ನ ಆಳ್ವಿಕೆಯಲ್ಲಿ ಆರಂಭವಾದ ಬೆಂಗಳೂರು ಮತ್ತು ಜ್ವಾಲಾರಪೇಟೆ ನಡುವಣ ರೈಲ್ವೇ ಮಾರ್ಗದ (ಬ್ರಾಡ್ಗೇಜ್) ನಿರ್ಮಾಣ ಕೆಲಸ, ಬೌರಿಂಗ್ ಕಮೀಷನರಾಗಿದ್ದ ಕಾಲದಲ್ಲೇ ಮುಕ್ತಾಯವಾಗಿದ್ದು, 1864ರಲ್ಲಿ ಸಂಚಾರವನ್ನು ಆರಂಭಿಸಲಾಯಿತು. ಮುನ್ನೂರು ಸೇತುವೆಗಳಿಂದ ಕೂಡಿದ 2560 ಕಿ. ಮೀ.ಉದ್ದದ ಹೊಸ ರಸ್ತೆಗಳ ನಿರ್ಮಾಣಕ್ಕೆ ಕಬ್ಬನ್ ಅವರೇ ಕಾರಣ. ಒಂದೂವರೆ ಲಕ್ಷ ಎಕರೆ ಪ್ರದೇಶದ ವಿಸ್ತಾರದಲ್ಲಿ ಕಾಫಿತೋಟಗಳನ್ನು ಬೆಳೆಸಲೂ ಅವರೇ ಕಾರಣರಾದರು. ಸಾರ್ವಜನಿಕ ಕಾಮಗಾರಿ ಮತ್ತು ಅರಣ್ಯ ಇಲಾಖೆಗಳನ್ನು ಸ್ಥಾಪಿಸಿದರು. 1870ರಲ್ಲಿ ಮೈಸೂರು ಸಂಸ್ಥಾನದಲ್ಲಿ ಜಿಲ್ಲಾ ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಒಟ್ಟು 55.48 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ 1882ರ ಹೊತ್ತಿಗೆ ದಿವಾನ್ ರಂಗಾಚಾರ್ಲು ಅವರು ಬೆಂಗಳೂರು-ಮೈಸೂರು ರೈಲ್ವೇ ಮೀಟರ್‌ಗೇಜ್ ಮಾರ್ಗವನ್ನು ಸಿದ್ಧಪಡಿಸಿದರು (ಕಮೀಷನರುಗಳ ಆಡಳಿತಾವಧಿಯಲ್ಲಿ). 1876-78ರಲ್ಲಿ ಮೈಸೂರು ರಾಜ್ಯ ಒಂದರಲ್ಲೇ ಹತ್ತುಲಕ್ಷಕ್ಕೂ ಹೆಚ್ಚು ಜೀವಹಾನಿಗೆ ಕಾರಣವಾದ ತೀವ್ರ ಬರಗಾಲದ ಪರಿಹಾರ ಕೆಲಸಗಳ ನೆಪದಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು. ಮುಂದೆ 1886ರಲ್ಲಿ ಕೋಲಾರದಲ್ಲಿ ಚಿನ್ನದ ಗಣಿಯನ್ನು (ಕೆ.ಜಿ.ಎಫ್.), 1894ರಲ್ಲಿ ಭೂಗರ್ಭಶಾಸ್ತ್ರ ಇಲಾಖೆಯನ್ನೂ, 1898ರಲ್ಲಿ ಕೃಷಿ ಇಲಾಖೆಯನ್ನೂ ಪ್ರಾರಂಭಿಸಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ‘ವಾಣಿವಿಲಾಸ ಸಾಗರ’ ನೀರಾವರಿ ಯೋಜನೆಯನ್ನು ರೂಪಿಸಿದವರು ದಿವಾನ್ ಶೇಷಾದ್ರಿ ಅಯ್ಯರ್. ಕೋಲಾರದ ಚಿನ್ನದ ಗಣಿಗೆ 1902ರಲ್ಲಿ, ಆನಂತರ 1905ರಲ್ಲಿ ಬೆಂಗಳೂರು ನಗರಕ್ಕೆ (ದೇಶದಲ್ಲೇ ವಿದ್ಯುತ್ ಅನುಕೂಲಗಳನ್ನು ಪಡೆದ ಮೊದಲ ನಗರ), ಹಾಗೂ 1907ರಲ್ಲಿ ಮೈಸೂರಿಗೆ ಶಿವಸಮುದ್ರದ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ವಿದ್ಯುತ್ ಪೂರೈಸಲಾಯಿತು.ಇದು ಭಾರತದಲ್ಲಿ ಕೈಗೊಂಡ ಮೊದಲ ವಿದ್ಯುತ್ ಯೋಜನೆಯಾಗಿತ್ತು. ಆದರೆ, ಅದಕ್ಕೂ ಮೊದಲೇ 1887ರಲ್ಲಿ, ಸಣ್ಣ ಪ್ರಮಾಣದಲ್ಲಿ ಗೋಕಾಕ್ ಸ್ಪಿನ್ನಿಂಗ್ ಮಿಲ್ ಮಾಲೀಕರು, ಅಂದಿನ ಬಾಂಬೇ ಪ್ರೆಸಿಡೆನ್ಸಿಯ ಭಾಗವಾಗಿದ್ದ ಗೋಕಾಕದಲ್ಲಿ ಜಲವಿದ್ಯುತ್ ಯೋಜನೆಯನ್ನು ಕೈಗೊಂಡಿದ್ದು ಗಮನಾರ್ಹವಾದ ವಿಚಾರವಾಗಿತ್ತು. ಏತನ್ಮಧ್ಯೆ, ಬೆಂಗಳೂರು ಮಿಲ್ಲನ್ನು 1884ರಲ್ಲಿ ಪ್ರಾರಂಭಿಸಲಾಯಿತು. ಆದರೆ, ಅದನ್ನು ಬೆಂಗಳೂರಿನ ಉಣ್ಣೆ, ಹತ್ತಿ ಮತ್ತು ರೇಷ್ಮೆ ಮಿಲ್ಲುಗಳನ್ನೊಳಗೊಂಡ“ಬಿನ್ನಿ” ಗುಂಪಿನವರು 1886ರಲ್ಲಿ ತಮ್ಮ ನಿಯಂತ್ರಣವೆಂದುಕೊಂಡರು. ಇದೇ ಸಮಯದಲ್ಲಿ ಕರ್ನಾಟಕದ ಇತರೆಡೆಗಳಲ್ಲೂ ಆಧುನಿಕ ಕೈಗಾರಿಕೀಕರಣ ಆರಂಭವಾಗಿ ರೈಲ್ವೆ ಮತ್ತು ರಸ್ತೆ ಸಾರಿಗೆಗಳಲ್ಲಿ  ಉತ್ತಮ ಅನುಕೂಲಗಳು ಒದಗಿದವು. 1888ರಲ್ಲಿ ಹರಿಹರ-ಪುಣೆ ರೈಲುಮಾರ್ಗವನ್ನು ಪೂರ್ತಿಗೊಳಿಸಲಾಯಿತು. 1907ರಲ್ಲಿ ಮಂಗಳೂರಿಗೆ ಮದ್ರಾಸಿನೊಂದಿಗೆ ರೈಲು ಸಂಪರ್ಕವನ್ನು ಕಲ್ಪಿಸಲಾಯಿತು. ಮುಂಬೈ ಭಾಗದಲ್ಲಿ ಗೋಕಾಕ್ ಜಲಪಾತದಿಂದ (1887) ದ್ಯುಚ್ಛಕ್ತಿಯನ್ನು ಪಡೆದು ಗೋಕಾಕ್ ನೂಲಿನ ಗಿರಣಿಯನ್ನು ಸ್ಥಾಪಿಸಲಾಯಿತು. 1888ರಲ್ಲಿ ಗುಲಬರ್ಗಾದಲ್ಲಿ ನೂಲುವ ಮತ್ತು ನೇಯುವ ಗಿರಣಿಯನ್ನು ಪ್ರಾರಂಭಿಸಲಾಯಿತು. ಪ್ರಾಥಮಿಕ ತನಿಖೆಗಳ ನಂತರ 1886ರಲ್ಲಿ ರಾಯಚೂರಿನ ಹಟ್ಟಿ ಗಣಿಯಲ್ಲಿ ಚಿನ್ನದ ಅದಿರು ತೆಗೆಯುವ ಕೆಲಸ ಆರಂಭವಾಯಿತು. ಹುಬ್ಬಳ್ಳಿ ಮತ್ತು ಗದಗಗಳಲ್ಲಿ ಅದಾಗಲೇ ಜಿನ್ನಿಂಗ್ ಕಾರ್ಖಾನೆ ಆರಂಭವಾಗಿತ್ತು. ಹೀಗೆ ಕೈಗಾರಿಕಾ ಕ್ರಾಂತಿಯು ನಗರೀಕರಣ ಹಾಗೂ ಆಧುನೀಕರಣಗಳಿಗೆ ಒತ್ತಾಸೆ ನೀಡಿತು.ಉತ್ತಮ ನೀರಾವರಿಯ ಬೆಳವಣಿಗೆಯ ಜೊತೆಗೆ ಹಾಗೂ ಕಚ್ಚಾ ವಸ್ತುಗಳಿಗೆ ಬೇಡಿಕೆ ಹೆಚ್ಚಾದುದರಿಂದ ಕೃಷಿಕ್ಷೇತ್ರಕ್ಕೂ ಮಾನ್ಯತೆ ಲಭಿಸಿತು. 1860ರ ಅಮೆರಿಕದ ಯಾದವೀ ಯುದ್ಧದಿಂದ, ಹತ್ತಿಯನ್ನು ಬೆಳೆಯುವುದರಲ್ಲಿ ಉಂಟಾದ ಉತ್ಸಾಹ (ಕಾಟನ್ ಬೂಮ್) ನಿಂದಾಗಿ ಹತ್ತಿಯ ಉತ್ಪಾದನೆ ಹೆಚ್ಚಿತಾದರೂ, ಆನಂತರದಲ್ಲಿ ಮ್ಯಾಂಚೆಸ್ಟರ್‌ನಿಂದ ಬೇಡಿಕೆ ಕಡಿಮೆಯಾಯಿತು. ಆದರೂ, ಮುಂಬೈ ಮತ್ತು ಶೋಲಾಪುರ(ಸೊಲ್ಲಾಪುರ)ಗಳಲ್ಲಿ ಸ್ಥಾಪಿತವಾದ ಹೊಸ ಗಿರಣಿಗಳು ಉತ್ತರ ಕರ್ನಾಟಕದಿಂದ ಹತ್ತಿಯನ್ನು ಕೊಂಡುಕೊಂಡವು. ಆದರೆ ಲಕ್ಷಾಂತರ ಮಂದಿ ಹೆಣ್ಣುಮಕ್ಕಳಿಗೆ, ಕೆಲಸ ಮಾಡುವ ಕಾರ್ಮಿಕರಿಗೆ ಸಮಾನವಾದ ಕೂಲಿಯನ್ನು ಕಣ್ಣಾನೂರು ಮೂಲಕ ದೊರಕಿಸುತ್ತಿದ್ದ, ನೂಲುವ ಗೃಹಕೈಗಾರಿಕೆಗಳು ಕೈಗಾರಿಕಾ ಕ್ರಾಂತಿಯಿಂದ ಸಂಪೂರ್ಣವಾಗಿ ನಾಶವಾದವು. ಇನ್ನೊಂದು ಮುಖ್ಯ ಗೃಹಕೈಗಾರಿಕೆಯಾದ ನೇಕಾರಿಕೆಯೂ ಹಾಗೆಯೇ ಹಾಳಾಯಿತು.

ಬ್ರಿಟಿಷ್ ವಿರೋಧಿ ಬಂಡಾಯ

ಬ್ರಿಟಿಷರ ಆಡಳಿತವನ್ನು ಕರ್ನಾಟಕವು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. 1800 ಮತ್ತು 1858ರ ನಡುವಿನ ಅವಧಿಯಲ್ಲಿ ಅನೇಕ ಬ್ರಿಟಿಷ್ ವಿರೋಧಿ ಬಂಡಾಯಗಳು ನಡೆದವು. ಧೋಂಡಿಯಾ ವಾಘ್ ಎಂಬ ಟಿಪ್ಪೂಸುಲ್ತಾನನ ಮಾಜಿ ಸೇನಾನಿ, ಟಿಪ್ಪೂವಿನ ಮರಣಾನಂತರ 1800ರಲ್ಲಿ ಬ್ರಿಟಿಷರ ವಿರುದ್ಧ ಬಂಡಾಯದ ಬಾವುಟವನ್ನು ಹಾರಿಸಿದ್ದೇ ಮೊದಲನೆಯದು. ಬಿದನೂರು-ಶಿಕಾರಿಪುರ ಪ್ರಾಂತಗಳಲ್ಲಿ ನಡೆದ ಈ ಬಂಡಾಯದಲ್ಲಿ ಅನೇಕ ಮಾಜಿ ದೊರೆಗಳೂ ಸೇರಿಕೊಂಡಿದ್ದರು. ಅವನ ಬಂಡಾಯವು, ಕರಾವಳಿ ಜಿಲ್ಲೆಗಳಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ, ಘಟ್ಟದ ಮೇಲು ಪ್ರದೇಶಗಳಲ್ಲಿ ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹರಡಿತ್ತು.ಆದರೆ, 1800ರ ಸೆಪ್ಟೆಂಬರ್‌ನಲ್ಲಿ ಕೋಣಗಲ್‌ನಲ್ಲಿ ಅವನ ಕೊಲೆಯಾಯಿತು. ಅಲ್ಲದೇ, ಅವನ ಸಹಚರನಾಗಿದ್ದ ಬೇಲೂರಿನ(ಬಾಲಂ) ಕೃಷ್ಣಪ್ಪ ನಾಯಕನೂ 1802ರ ಫೆಬ್ರವರಿಯಲ್ಲಿ ಕೊಲೆಯಾದನು.

ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಬಂಡಾಯವನ್ನು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ನೆನೆಯಬೇಕಾಗಿದೆ. ಅಲ್ಲಿನ ಬಂಡಾಯಗಾರರು, ದಿವಂಗತ ಟಿಪ್ಪೂಸುಲ್ತಾನನ ಮಗನಾದ ಫತೇ ಹೈದರ್‌ನನ್ನು ಬಂಡಾಯದ ನೇತೃತ್ವ ವಹಿಸಲು ಆಹ್ವಾನಿಸಿದರು. ಆದರೆ, ಆತ ಒಪ್ಪಲಿಲ್ಲ. ಆದರೂ ಈ ಬಂಡಾಯವನ್ನೂ ಬ್ರಿಟಿಷರು ಬೇಗ ಅಡಗಿಸಿದರು.1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬುವವನ ನೇತೃತ್ವದಲ್ಲಿ ನಡೆದ ಬಂಡಾಯವನ್ನೂ ಅಡಗಿಸಲಾಯಿತು. 1820ರಲ್ಲಿ ಬೀದರ್‌ನ ಸಮೀಪದಲ್ಲಿ ದೇಶಮುಖರಿಂದ ಬಂಡಾಯ ಡೆಯಿತು. 1824ರಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲೂ ಬಂಡಾಯವಾಯಿತು. 1824ರ ಕಿತ್ತೂರು ಚೆನ್ನಮ್ಮನ ಬಂಡಾಯ ಹಾಗೂ ಅದೇ ಸಂಸ್ಥಾನದ ಸಂಗೊಳ್ಳಿ ರಾಯಣ್ಣನ 1829ರ ಬಂಡಾಯ ಇತಿಹಾಸದಲ್ಲಿ ಪ್ರಖ್ಯಾತವಾಗಿದೆ. ಇದನ್ನು ಅನುಸರಿಸಿ 1830-31ರಲ್ಲಿ ನಗರದಲ್ಲಿ ಬಂಡಾಯ ನಡೆಯಿತು. ಅದರ ಬೆನ್ನಲ್ಲೇ, 1831ರಲ್ಲಿ ಕೆನರಾ ಜಿಲ್ಲೆಯ ರೈತರಿಂದ ಬಂಡಾಯ ನಡೆಯಿತು. ತರೀಕೆರೆಯ ಪಾಳೆಯಗಾರ ಸರ್ಜಾ ಹನುಮಪ್ಪ ನಾಯಕನೂ ಈ ಬಂಡಾಯದಲ್ಲಿ ಸೇರಿಕೊಂಡ. ಆದರೆ, ಈ ಬಂಡಾಯವೂ ವಿಫಲವಾಗುವುದರ ಜೊತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಅಧಿಕಾರವನ್ನೂ ಕಳೆದುಕೊಳ್ಳಬೇಕಾಯಿತು. ಮುಂದೆ 1835-37ರ ಸಮಯದಲ್ಲಿ ಕೊಡಗಿನಲ್ಲೂ ಬಂಡಾಯ ನಡೆದು, ಅದರ ನೇತೃತ್ವ ವಹಿಸಿದ್ದ ಕಲ್ಯಾಣಸ್ವಾಮಿಯ ಹೆಸರಿನಲ್ಲಿ ‘ಕಲ್ಯಾಣಪ್ಪನ ಕಾಟಕಾಯಿ’ ಎಂದೂ ಇದು ಜನಪ್ರಿಯವಾಯಿತು (ಕಲ್ಯಾಣಸ್ವಾಮಿಯನ್ನು ಸ್ವಾಮಿ ಅಪರಂಪಾರ ಎಂದೂ ಕರೆಯುತ್ತಿದ್ದರು). ಅವನು ತನ್ನನ್ನು ಕೊಡಗಿನ ರಾಜವಂಶದ ಬಂಧಿಕನೆಂದು ಪರಿಚಯಿಸಿಕೊಂಡಿದ್ದ. ಈ ಬಂಡಾಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರುಗಳಲ್ಲೂ ಪ್ರಬಲವಾಗಿತ್ತು. ಕೊನೆಯಲ್ಲಿ 1837ರಲ್ಲಿ ಕಲ್ಯಾಣಪ್ಪ, ಕುಂಬ್ಳೆ ಸುಬ್ಬರಾಯ ಹೆಗ್ಗಡೆ, ಲಕ್ಷö್ಮಪ್ಪ ಬಂಗ ಮತ್ತು ಕಾಸರಗೋಡಿನ ಬೀರಣ್ಣ ಬಂಟರನ್ನು ಗಲ್ಲಿಗೇರಿಸಲಾಯಿತು. ಪೇಶ್ವೆಗಳ ಮಾಜಿ ಅಧಿಕಾರಿಯಾಗಿದ್ದ ನರಸಪ್ಪ ಪೇಟ್ಕರ್ ಎಂಬುವವನು 1840-41ರಲ್ಲಿ ‘ಬಾದಾಮಿ ಬಂಡಾಯ’ ಎಂದೇ ಪ್ರಸಿದ್ಧವಾದ ಬ್ರಿಟಿಷ್ ವಿರೋಧಿ ಬಂಡಾಯವನ್ನು ರೂಪಿಸಿದ್ದ. ಮುಂದೆ 1857-58ರಲ್ಲಿ ನಡೆದ ಅಖಿಲ ಭಾರತ ಮಟ್ಟದ ಬಂಡಾಯಗಳಿಗೆ ಪೂರಕವಾಗಿ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ದೊರಕಿತು. ಚಾಂದಕವಾಟೆಯ ದೇಶಮುಖರು ಸುರಪುರದ ವೆಂಕಟಪ್ಪ ನಾಯಕನ ಜೊತೆಗೂಡಿ ಬ್ರಿಟಿಷರ ವಿರುದ್ಧ ಬಂಡಾಯ ಸಾರಿದರು. 1857ರ ನವೆಂಬರ್ ತಿಂಗಳಲ್ಲಿ ಹಲಗಲಿಯ ಬೇಡರು ಶಸ್ತ್ರಾಸ್ತ್ರ ಕಾನೂನಿನ ವಿರುದ್ಧ ಬಂಡೆದ್ದರು.29ನೇ ನವೆಂಬರ್ ತಿಂಗಳ ಮಧ್ಯರಾತ್ರಿ ಬ್ರಿಟಿಷರ ಸೈನ್ಯ ಅವರ ಬಂಡಾಯವನ್ನು ನಿಷ್ಕರುಣೆಯಿಂದ ದಮನ ಮಾಡಿದಾಗ, ಅನೇಕ ಜನ ಸಾವನ್ನಪ್ಪಿದರು.ಈ ಹೋರಾಟದಲ್ಲಿ 300ಕ್ಕೂ ಹೆಚ್ಚಿನ ಜನರನ್ನು ಸೆರೆಹಿಡಿಯಲಾಯಿತು.

1857ರ ಡಿಸೆಂಬರ್ 11 ಮತ್ತು 14ರಂದು ಕ್ರಮವಾಗಿ ಮುಧೋಳ ಹಾಗೂ ಹಲಗಲಿಯಲ್ಲಿ 32 ಜನರನ್ನು ಗಲ್ಲಿಗೇರಿಸಲಾಯಿತು. ಜಮಖಂಡಿಯಲ್ಲೂ ಬಂಡಾಯ ನಡೆಯಿತು. 1858ರಲ್ಲಿ ಜಮೀನ್ದಾರ್ ಮುಂಡರಗಿ ಭೀಮರಾವ್, ಗೋವನಕೊಪ್ಪ, ಹಮ್ಮಿಗೆ, ಸೊರಟೂರು ಮೊದಲಾದ ಊರಿನ ದೇಸಾಯಿಗಳೂ, ನರಗುಂದ ಮತ್ತು ಸುರಪುರದ ಪಾಳೆಯಗಾರರ ಜೊತೆ ಸೇರಿ ಬಂಡಾಯ ಹೂಡಿದರು. ಮುಂಡರಗಿ ಭೀಮರಾಯರಿಗೆ ಮರಣದಂಡನೆ ವಿಧಿಸುವುದರ ಮೂಲಕ ಆ ಬಂಡಾಯವನ್ನು ಅಡಗಿಸಲಾಯಿತು.ಆ ಸಂದರ್ಭದಲ್ಲಿ ತಾತ್ಯಾಟೋಪಿ ಹೊರಡಿಸಿದ್ದ, ಬ್ರಿಟಿಷ್ ವಿರೋಧಿ ಘೋಷಣಾ ಪತ್ರದ 12 ಪ್ರತಿಗಳು ಮುಂಡರಗಿ ಭೀಮರಾಯರ ಕುಟುಂಬಸ್ಥರ ಮನೆಯಲ್ಲಿ ದೊರೆತವು. 1858-59ರಲ್ಲಿ ಗೋವೆ ಮತ್ತು ಉತ್ತರ ಕನ್ನಡದಿಂದ ಬಂದ ಜನರ ನೇತೃತ್ವದಲ್ಲಿ ಸಿದ್ಧಿಗಳನ್ನು ಒಳಗೊಂಡಿದ್ದ ಒಂದು ದೀರ್ಘ ಬಂಡಾಯ ಸೂಪಾದಲ್ಲಿ ನಡೆದಾಗ ಅದನ್ನು ನಿಯಂತ್ರಿಸಲಾಯಿತು. ಈ ಬಂಡಾಯಗಳನ್ನು ಅಡಗಿಸಿದರೂ, ಅದರಿಂದ ಕಲಿತ ಪಾಠ, ಸಂಪೂರ್ಣವಾಗಿ ಹಾಳಾಗಲಿಲ್ಲ. 1830ರಲ್ಲಿ ನಡೆದ ನಗರ ಬಂಡಾಯ, ಸಂಸ್ಥಾನದಲ್ಲಿ ಹಲವಾರು ಆಡಳಿತಾತ್ಮಕ ಸುಧಾರಣೆಗಳಿಗೆ ಕಾರಣವಾಯಿತು. ಬ್ರಿಟಿಷರೂ ಜನರ ಸಮಸ್ಯೆಗಳಿಗೆ ಬೇಗ ಪ್ರತಿಕ್ರಿಯೆ ರಿಸಬೇಕಾಯಿತು. 1850 ಮತ್ತು 1860ರಲ್ಲಿ ಪಟ್ಟಣಗಳಲ್ಲಿ ಸ್ವಯಮಾಡಳಿತದ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. 1881ರಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆಯ ಸ್ಥಾಪನೆಗೆ ಕಾರಣವಾಯಿತು. ಏತನ್ಮಧ್ಯೆ ವ್ಯವಸ್ಥಿತ ಜನಸಂಘಟನೆಯಾಗದಿದ್ದರೆ ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂಬುದು ಜನರಿಗೂ ಅರಿವಾಯಿತು. ಶಾಂತಿಯನ್ನು ಭಂಗ ಮಾಡುವ ಸಂದರ್ಭಗಳನ್ನು ಎದುರಿಸಲು ಸಹಾಯಕವಾಗುವಂತೆ ಸಾರಿಗೆ ಮತ್ತು ಸಂಪರ್ಕ ಸಾಧನಗಳನ್ನು ಉತ್ತಮ ಪಡಿಸಬೇಕೆಂಬುದನ್ನು ಬ್ರಿಟಿಷರೂ ಮನಗಂಡರು. ಅವರು ಪ್ರಾರಂಭಿಸಿದ ಸಾರಿಗೆ ಸೌಲಭ್ಯ ಸಾಧನಗಳು ಮುಖ್ಯವಾಗಿ ಅವರ ವಸಾಹತುಶಾಹಿಯ ಆರ್ಥಿಕ ಪ್ರಗತಿಗೆ ಸಹಾಯಕವಾದವ.

 

ಪುನರುಜ್ಜೀವನದ ಆರಂಭ

ಆಧುನಿಕ ಶಿಕ್ಷಣದ ಪ್ರಸಾರಕ್ಕೆ, ಹೊಸ ಆಡಳಿತ ಸಹಾಯ ಮಾಡಿತು. ಕ್ರೈಸ್ತ ಮಿಷನರಿಗಳು, ಪಾಶ್ಚಾತ್ಯ ಮಾದರಿಯಲ್ಲಿ ಶಿಕ್ಷಣಕೇಂದ್ರಗಳನ್ನು ಸ್ಥಾಪಿಸಿದವು. 1881ರಲ್ಲಿ, ಮೈಸೂರು ಸಂಸ್ಥಾನದಲ್ಲಿ 2000ಕ್ಕಿಂತ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದವು. ಆದರೆ ಇದೇ ಸಮಯದಲ್ಲಿ ಮುಂಬೈ ಕರ್ನಾಟಕ ಪ್ರಾಂತದಲ್ಲಿ 650 ಪ್ರಾಥಮಿಕ ಶಾಲೆಗಳು ಮಾತ್ರ ಇದ್ದವು. ಮುಂಬೈ ಕರ್ನಾಟಕ ಪ್ರಾಂತದಲ್ಲಿ ಮರಾಠೀ ಶಾಲೆಗಳು ಮಾತ್ರವಿದ್ದರೂ, ಎಲಿಯಟ್ ಮತ್ತು ಡೆಪ್ಯುಟಿ ಚೆನ್ನಬಸಪ್ಪ ಮೊದಲಾದವರು ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಪ್ರಯತ್ನ ಮಾಡಿದರು.1869ರಲ್ಲಿ ಬಳ್ಳಾರಿ ಹಾಗೂ ಮಂಗಳೂರುಗಳಲ್ಲಿ ಒಂದೊಂದು ಸರ್ಕಾರಿ ಕಾಲೇಜನ್ನು ಆರಂಭಿಸಲಾಯಿತು.1870ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜೊಂದನ್ನು ಸ್ಥಾಪಿಸಲಾಯಿತು (ಅದು ಮುಂದೆ 1875ರಲ್ಲಿ ಸೆಂಟ್ರಲ್ ಕಾಲೇಜು ಎಂದು ಹೆಸರನ್ನು ಪಡೆಯಿತು). ಆಮೇಲೆ 1882ರಲ್ಲಿ ಬೆಂಗಳೂರಿನಲ್ಲಿ ಸೇಂಟ್ ಜೋಸೆಫ್  ಕಾಲೇಜು ಆರಂಭವಾಯಿತು.ಏತನ್ಮಧ್ಯೆ, 1879ರಲ್ಲಿ ಮೈಸೂರಿನಲ್ಲಿ ಮಹಾರಾಜ ಕಾಲೇಜು ಆರಂಭವಾಯಿತು.ಅದೇ ಸಂದರ್ಭದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು (1879) ಮಂಗಳೂರಿನಲ್ಲೂ ಸ್ಥಾಪಿತವಾಯಿತು.1817ರ ಹೊತ್ತಿಗೆ ಕ್ರೈಸ್ತ ಮಿಷನರಿಗಳು ಕನ್ನಡದಲ್ಲಿ ಮುದ್ರಣವನ್ನು ಆರಂಭಿಸಿದ್ದು (ಮೊದಲು ಕಲಕತ್ತೆಯ ಸಮೀಪದ ಸೆರಾಂಪುರದಲ್ಲಿ) ಮುಂದೆ 1843ರಲ್ಲಿ ಬಾಸೆಲ್ ಮಿಷನ್‌ನಿಂದ ‘ಮಂಗಳೂರು ಸಮಾಚಾರ’ ಎಂಬ ಮೊದಲ ಕನ್ನಡಪತ್ರಿಕೆ ಮಂಗಳೂರಿನಿಂದ ಪ್ರಕಾಶಿತವಾಯಿತು. ಅಲ್ಲದೆ ಅನೇಕ ಪ್ರಾಚೀನ ಕನ್ನಡ ಕೃತಿಗಳನ್ನೂ ಮುದ್ರಿಸಲಾಯಿತು. ಇವೆಲ್ಲಾ ಹೊಸರೀತಿಯಲ್ಲಿ ಸಾಹಿತ್ಯಿಕ ಚಟುವಟಿಕೆಗಳ ಭಿವೃದ್ಧಿಗೆ ಸಹಾಯಕವಾದವು.ಗದ್ಯ ಸಾಹಿತ್ಯ ಹೆಚ್ಚು ಜನಪ್ರಿಯಗೊಂಡು ಸಾಹಿತ್ಯದಲ್ಲಿ ಲೌಕಿಕ ವಿಷಯಗಳು ಡತೊಡಗಿದವು. ‘ಕನ್ನಡ ಸಮಾಚಾರ’ (ಬಳ್ಳಾರಿ 1844), ‘ಚಂದ್ರೋದಯ’ (ಧಾರವಾಡ 1877), ‘ಕರ್ನಾಟಕ ಪ್ರಕಾಶಿಕೆ’ (ಮೈಸೂರು 1865), ಅರುಣೋದಯ’ (ಬೆಂಗಳೂರು 1862) ಮೊದಲಾದ ಅನೇಕ ಸುದ್ದಿ ಪತ್ರಿಕೆ ಮತ್ತು ನಿಯತಕಾಲಿಕೆಗಳು ವಿವಿಧೆಡೆಗಳಲ್ಲಿ ಪ್ರಕಾಶಗೊಂಡವು. 1870ರಿಂದಲೇ ಕಲಾದಗಿಯಿಂದ ‘ಹಿಟಾಚಿ’ ಎಂಬ ಉರ್ದು ಪತ್ರಿಕೆ ತನ್ನ ಪ್ರಸಾರವನ್ನು ಆರಂಭಿಸಿತ್ತು. ವಿಜಯಪುರದಿಂದ ಪ್ರಕಾಶಿತವಾಗುತ್ತಿದ್ದ ‘ಕರ್ನಾಟಕ ವಾರ್ತಾ’ ಎಂಬ ವಾರಪತ್ರಿಕೆ ತುಂಬಾ ಜನಪ್ರಿಯವಾಗಿತ್ತು (1892).

ಮಿಷನರಿಗಳು ರಚಿಸುತ್ತಿದ್ದ ಪ್ರಾರ್ಥನಾ ಗೀತೆಗಳಿಂದ ಪ್ರಾರಂಭವಾದ ಭಾವಗೀತೆಗಳು ಕನ್ನಡದಲ್ಲಿ ಬೆಳಕಿಗೆ ಬಂದವು. ಮೈಸೂರಿನ ಆಸ್ಥಾನವೂ ಬರಹಗಾರರಿಗೆ ಪ್ರೋತ್ಸಾಹ ನೀಡಿತು. ಕೆಂಪುನಾರಾಯಣನ ‘ಮುದ್ರಾಮಂಜೂಷ’ (1823), ಒಂದು ಪ್ರಮುಖ ಗದ್ಯಕೃತಿ. ಏತನ್ಮಧ್ಯೆ, ಅನೇಕ ಇಂಗ್ಲಿಷ್ ಮತ್ತು ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರ ಡಲಾಯಿತು. 1887ರಲ್ಲಿ ವೆಂಕಟರಾಮಾಶಾಸ್ತ್ರಿಗಳು ರಚಿಸಿದ ‘ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ’ವೇ ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ. ಗದಗಕರ್ ರಚಿಸಿದ ‘ಸೂರ್ಯಕಾಂತ’ ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ. ಆ ಕಾಲಕ್ಕಾಗಲೇ ಇಂಗ್ಲಿಷ್, ಮರಾಠೀ ಮತ್ತು ಬಂಗಾಲಿ ಭಾಷೆಗಳ ಸಾಮಾಜಿಕ ಕಾದಂಬರಿಗಳು ಕನ್ನಡಕ್ಕೆ ಅನುವಾದವಾಗಿದ್ದವು.ಇವು ರಂಗಭೂಮಿ ಮತ್ತು ಸಂಗೀತ ಕ್ಷೇತ್ರಗಳಲ್ಲೂ ತಮ್ಮ ಪ್ರಭಾವವನ್ನು ಬೀರಿದವು. ಗದಗ್ (1874) ಮತ್ತು ಹಲಸಂಗಿಗಳಲ್ಲಿ ಹೊಸ ವೃತ್ತಿ ನಾಟಕ ತಂಡಗಳು ಅಸ್ತಿತ್ವಕ್ಕೆ ಬಂದವು.ಮೈಸೂರಿನಲ್ಲೂ ಒಂದು ನಾಟಕ ತಂಡವಿತ್ತು. 1876-77ರಲ್ಲಿ ಮರಾಠಿ ನಾಟಕ ತಂಡ ಮತ್ತು 1878ರಲ್ಲಿ ವಿಕ್ಟೋರಿಯಾ ಪಾರ್ಸಿ ನಾಟಕ ಕಂಪೆನಿಗಳು ಕರ್ನಾಟಕವನ್ನು ದರ್ಶಿಸಿದಾಗ ಇಲ್ಲಿನ ರಂಗತಂತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ವೀಣೆ ವೆಂಕಟಸುಬ್ಬಯ್ಯ, ಸಾಂಬಯ್ಯ ಮತ್ತು ಚಿಕ್ಕರಾಮಪ್ಪ ಮುಂತಾದವರು ಆ ಕಾಲದಲ್ಲಿ ಮೈಸೂರು ರಾಜರ ಆಸ್ಥಾನದಲ್ಲಿದ್ದ ಕೆಲವು ಪ್ರಖ್ಯಾತ ಸಂಗೀತ ವಿದ್ವಾಂಸರು.ಕರ್ನಾಟಕ ಸಂಗೀತದ ಒಂದು ವಿಶಿಷ್ಟ ಶೈಲಿಯಾಗಿ ಮೈಸೂರು ಪರಂಪರೆ ಈ ಅವಧಿಯಲ್ಲಿ ರೂಪುಗೊಂಡಿತು.

ವಾಸ್ತುಶಿಲ್ಪದಲ್ಲೂ ಪಾಶ್ಚಾತ್ಯರ ಪ್ರಭಾವ ಕಾಣಿಸತೊಡಗಿತು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಗಾ(ಗೊ)ಥಿಕ್ ಶೈಲಿಯ ಕಟ್ಟಡ (1860), ಅಯೋನಿಕ್ ಶೈಲಿಯ ಕಂಬಗಳಿಂದ ಕೂಡಿದ ಅಠಾರಾ ಕಛೇರಿಯ ಕಟ್ಟಡ (1867), ಕೊರಂತಿಯನ್ ಶೈಲಿಯ ಬೆಂಗಳೂರು ಮ್ಯೂಸಿಯಂ ಕಟ್ಟಡಗಳನ್ನು ಈ ಅವಧಿಯಲ್ಲಿ ನಿರ್ಮಿಸಲಾಯಿತು. ಬಾಸೆಲ್ ಮಿಷನರಿಗಳು ಮಂಗಳೂರು ಹೆಂಚನ್ನು ಉಪಯೋಗಿಸಿ, ವಾಸ್ತುಶೈಲಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು.  ಚರ್ಚುಗಳಲ್ಲೂ ಪಾಶ್ಚಾತ್ಯ ಶೈಲಿಯನ್ನು ಅಳವಡಿಸಲಾಯಿತು.  ‘ಅವರ್ ಲೇಡಿ ಆಫ್ ಸಾರೋ’ ಚರ್ಚ್ (ಮಂಗಳೂರು, 1857), ಸೇಂಟ್ ಮೇರಿ ಚರ್ಚ್ (ಶಿವಾಜಿನಗರ, ಬೆಂಗಳೂರು, 1882), ಸೇಂಟ್ ಜೋಸೆಫ್ ಸೆಮಿನರಿ ಚರ್ಚ್ (ಮಂಗಳೂರು-1890), ಸೇಂಟ್ ಮೇರಿ ಚರ್ಚ್ (ಬೆಳಗಾವಿ-1896), ಅಂತಹ ವಾಸ್ತುಗಳಿಗೆ ಕೆಲವು ಆರಂಭಿಕ ಉದಾಹರಣೆಗಳಾಗಿವೆ.ಅದೇ ಸಂದರ್ಭದಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳು  ಹಿಂದೂ ಸಮಾಜವನ್ನು ಅಲುಗಾಡಿಸುವುದರ ಜೊತೆಗೆ ಸಾಮಾಜಿಕ ಬದಲಾವಣೆಗಳಿಗೆ ಪ್ರಚೋದನೆಯನ್ನೂ ಒದಗಿದವು.ಇದಕ್ಕೆ ಕ್ರೈಸ್ತ ಮಿಶನರಿಗಳ ಮತ ಪ್ರಚಾರವೂ, ಅದರಲ್ಲೂ ವಿಶೇಷವಾಗಿ ಹೊಸದಾಗಿ ಬಂದ ಪ್ರಾಟೆಸ್ಟೆಂಟ್ ಮಿಶನರಿಗಳ ಪ್ರಚಾರ ವೈಖರಿಯೂ ಕಾರಣವಾಗಿತ್ತು. ಕೆಲವೊಮ್ಮೆ ಅದು ಋಣಾತ್ಮಕವಾಗಿಯೂ ಇತ್ತು.ಬೆಂಗಳೂರಿನಲ್ಲಿ 1866ರಲ್ಲೂ, ಮಂಗಳೂರಿನಲ್ಲಿ 1870ರಲ್ಲೂ ಬ್ರಹ್ಮಸಮಾಜವು ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಮುಂದೆ 1886ರಲ್ಲಿ ಮೈಸೂರು ಸಂಸ್ಥಾನದಲ್ಲಿ ಥಿಯೋಸಾಫಿಕಲ್ ಸೊಸೈಟಿ ಕಾರ್ಯಾರಂಭ ಮಾಡಿತು.ಇದರ ಜೊತೆಗೆ 1897ರಲ್ಲಿ ಮಂಗಳೂರಿನಲ್ಲಿ

ಕುದ್ಮುಲ್ ರಂಗರಾವ್ ಅವರು ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’ ಅನ್ನು ಸ್ಥಾಪಿಸಿದರು. ಅದು ಕೆಳವರ್ಗದವರಿಗಾಗಿ ಅನೇಕ ಶಾಲೆಗಳನ್ನು ಆರಂಭಿಸಿತು.ಬೆಂಗಳೂರಿನಲ್ಲಿ 1894ರಲ್ಲಿ ಇಂಡಿಯನ್ ಪ್ರೊಗ್ರೆಸೀವ್ ಯೂನಿಯನ್ ಸ್ಥಾಪಿತವಾಯಿತು.ಮೈಸೂರು ರಾಜ್ಯದಲ್ಲಿ ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹವನ್ನು ನಿಷೇಧಿಸಲಾಯಿತು. ಶಾಲೆಗಳಿಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದ ಅಸ್ಪೃಶ್ಯರಿಗಾಗಿ ಶೇಷಾದ್ರಿ ಐಯ್ಯರ್ ಅವರು ಪ್ರತ್ಯೇಕ ಶಾಲೆಗಳನ್ನು ಆರಂಭಿಸಿದರು. ಅರಮನೆಯ ಭಕ್ಷಿ ಅಂಬಳೆ ನರಸಿಂಹ ಅಯ್ಯಂಗಾರ್ ಅವರಿಂದ 1881ರಲ್ಲಿ ಸ್ಥಾಪಿತವಾದ ಮೈಸೂರಿನ ಮಹಾರಾಣಿ ಶಾಲೆ, 1891ರಲ್ಲಿ ಪ್ರೌಢಶಾಲೆಯಾಯಿತು.ಆನಂತರ 1901ರಲ್ಲಿ ಕಾಲೇಜಾಗಿ ಮೇಲ್ದರ್ಜೆಗೇರಿತು.1904ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿತವಾಯಿತು.ಇವುಗಳಿಂದ ಮಹಿಳಾ ವಿಮೋಚನಾ ಹೋರಾಟಕ್ಕೆ ಹಾಗೂ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಕುಮ್ಮಕ್ಕು ಸಿಕ್ಕಿತು. ಇಂತಹ ವಾತಾವರಣದಲ್ಲಿಯೇ ರಾಜ್ಯದ ಇತಿಹಾಸವನ್ನು ದಾಖಲಿಸುವ ಕೆಲಸ ಆರಂಭವಾದದ್ದು. ಬಿ. ಎಲ್. ರೈಸ್ ಅವರ ‘ಮೈಸೂರು ಮತ್ತು ಕೂರ್ಗ್’, ಫ್ಲೀಟ್ ಅವರ ‘ಡೈನಾಸ್ಟೀಸ್ ಆಫ್ ಕೆನರೀಸ್ ಡಿಸ್ಟಿçಕ್ಟ್’ (ಕರ್ನಾಟಕದ ಜಿಲ್ಲೆಗಳ ರಾಜಮನೆತನಗಳು) (1892), ಭಂಡಾರ್ಕರ್ ಅವರ ‘ಅರ್ಲಿ ಹಿಸ್ಟರಿ ಆಫ್ ಡೆಕ್ಕನ್’ (ದಖ್ಖನ್ನಿನ ಪ್ರಾಚೀನ ಇತಿಹಾಸ-1884), ರೈಸ್ ಅವರ ‘ಎಫಿಗ್ರಾಫಿಯಾ ಕರ್ನಾಟಿಕಾ’ ಸಂಪುಟಗಳು (1886ರಿಂದ ಆರಂಭ), ಕಲ್ಕತ್ತಾದ ಇಂಡಿಯನ್ ಆಂಟಿಕ್ವರಿ ಸಂಪುಟಗಳು (1872ರಿಂದ), ರಾರ‍್ಟ್ ಸಿವಿಲ್ ಅವರ ‘ದಿ ಫರ್‌ಗಾಟನ್ ಎಂಪೈರ್’ (ಮರೆತುಹೋದ ಸಾಮ್ರಾಜ್ಯ-1901) ಮೊದಲಾದವು ಕರ್ನಾಟಕ ಇತಿಹಾಸದ ಪುನಾರಚನೆಗೆ ಸಹಾಯಕವಾದವು. ಅದರಿಂದ ಕರ್ನಾಟಕದ ಜನತೆ ತಮ್ಮ ಭವ್ಯ ಗತಕಾಲದ ಬಗ್ಗೆ ಹೆಮ್ಮೆ ಪಡುವಂತಾಯಿತು. ಇದು 20ನೇ ಶತಮಾನದಲ್ಲಿ ನಡೆದ ಪುನರುಜ್ಜೀವನಕ್ಕೂ ರಾಷ್ಟ್ರೀಯ ಎಚ್ಚರಕ್ಕೂ ಹಾದಿ ಮಾಡಿಕೊಟ್ಟಿತು.ಈ ಎಲ್ಲ ಬೆಳವಣಿಗೆಗಳ ನಡುವೆ, ಮೈಸೂರು ಸಂಸ್ಥಾನದಲ್ಲಿ ಮೊತ್ತ ಮೊದಲ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು 1888ರಲ್ಲಿ ಏರ್ಪಡಿಸಲಾಗಿತ್ತು.

ಧಾರವಾಡದ ವಿದ್ಯಾವರ್ಧಕ ಸಂಘ (1890), ಬೆಂಗಳೂರಿನ ಮಿಥಿಕ್ ಸೊಸೈಟಿ (1909), ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ (1914)ಗಳ ಸ್ಥಾಪನೆಯಿಂದ ಪುನರುಜ್ಜೀವನ ಕ್ರಿಯೆಗೆ ಮತ್ತಷ್ಟು ಸಹಾಯವಾಯಿತು. ಅಖಿಲ ಕರ್ನಾಟಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆಯೊಂದು 1915ರಲ್ಲಿ ಕಾಣಿಸಿಕೊಂಡು ಬೆಂಗಳೂರು ಕೇಂದ್ರಸ್ಥಾನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಮುಂದೆ ಇದೇ ‘ಕನ್ನಡ ಸಾಹಿತ್ಯ ಪÀರಿಷತ್’ ಆಯಿತು. ಅದಕ್ಕೆ ಮೈಸೂರು ಸರ್ಕಾರದ ಕ್ರಿಯಾತ್ಮಕ ಬೆಂಬಲವೂ ಇತ್ತು. ಅದರ ಅಧ್ಯಕ್ಷರಾಗಿದ ಎಚ್. ವಿ. ನಂಜುಂಡಯ್ಯ ಹೊಸದಾಗಿ ಸ್ಥಾಪಿತವಾದ (1916) ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯೂ ಆದರು. 1917ರಲ್ಲಿ ಕನ್ನಡಿಗರಿಗೆ, ಕನ್ನಡ ಸಂಸ್ಕೃತಿಯ ಇತಿಹಾಸ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಪರಿಚಯ ಮಾಡಿಕೊಡುವ ‘ಕರ್ನಾಟಕದ ಗತವೈಭವ’ ಕೃತಿಯನ್ನು ಆಲೂರು ವೆಂಕಟರಾಯರು ರಚಿಸಿದರು. ತೀವ್ರ ಭಾವಾವೇಶದ ಧ್ವನಿಯಲ್ಲಿ ರಚಿತವಾಗಿದ್ದ ಈ ಕೃತಿ, ರಾಷ್ಟ್ರೀಯ ಭಾವನೆಯ ಉದ್ದೀಪನಕ್ಕೆ ಸಹಾಯ ಮಾಡಿತು. ಆಲೂರರು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ನೇತಾರರೂ ಆಗಿದ್ದರು.

 

ಆಧುನೀಕರಣ

ಮೈಸೂರು ಸಂಸ್ಥಾನದ ದೊರೆಗಳು ಪ್ರಗತಿಪರ ಆಡಳಿತಗಾರರಾಗಿದ್ದರು. ರಾಜ್ಯದ ಅಭಿವೃದ್ಧಿಗೆ ಅವರು ತೋರಿಸುತ್ತಿದ್ದ ಪ್ರಾಮಾಣಿಕ ಕಾಳಜಿ, ಜನತೆಯ ಪ್ರೀತಿ-ಗೌರವಗಳನ್ನು ಅವರಿಗೆ ತಂದುಕೊಟ್ಟಿತು. ಅವರೆಲ್ಲರೂ ಶಿಕ್ಷಣ, ಸಾಹಿತ್ಯ, ಸಂಗೀತ ಮತ್ತು ಲಲಿತಕಲೆಗಳ ಬಗೆಗೆ ವಿಶೇಷ ಒಲವು ಹೊಂದಿದ್ದರು. 1902ರಿಂದ 1940ರವರೆಗೆ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ದೃಷ್ಟಿಕೋನದ ಆಡಂಬರರಹಿತ ಧರ್ಮಶ್ರದ್ಧೆಗಳಿಂದ ಕೂಡಿದ ಜೀವನ ನಡೆಸಿದರು.ಅವರ ಕಾಲದಲ್ಲಿ ಮೈಸೂರು ಸಂಸ್ಥಾನ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿತು. ಅವರ ಕಿರಿಯ ಸಹೋದರ, ಯುವರಾಜ ಕಂಠೀರವ ರಸಿಂಹರಾಜ ಒಡೆಯರ್ ಉತ್ಕಟ ಲಲಿತಕಲಾ ಪ್ರೇಮಿಯಾಗಿದ್ದು ಬಹಳ ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ರವಾಧ್ಯಕ್ಷರಾಗಿದ್ದರು. 1940ರಲ್ಲಿ ಪಟ್ಟಕ್ಕೆ ಬಂದ ಜಯಚಾಮರಾಜ ಒಡೆಯರು ಕೂಡಾ ಅಷ್ಟೆ ಉತ್ಸಾಹಿಗಳಾಗಿದ್ದರು. ದೇಶಕ್ಕೆ ತಂತ್ರ ದೊರೆತಾಗ ಮೈಸೂರು ಸಂಸ್ಥಾನ ಭಾರತದ ಒಕ್ಕೂಟದೊಂದಿಗೆ ಸೇರ್ಪಡೆಯಾಯಿತು. ಜಯಚಾಮರಾಜ ಒಡೆಯರು ಮೈಸೂರಿನ ರಾಜ್ಯಪಾಲರಾಗಿ ಸೇವೆಸಲ್ಲಿಸಿ ಜನರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದರು.  ಏತನ್ಮಧ್ಯೆ ಆಡಳಿತ ಸೂತ್ರವನ್ನು ಹಿಡಿದಿದ್ದ ದಿವಾನರು, ಮೈಸೂರು ಸಂಸ್ಥಾನವನ್ನು ಆಧುನಿಕ ರಾಜ್ಯವನ್ನಾಗಿ ಮಾಡಿದರಷ್ಟೇ ಅಲ್ಲ, ಮಾದರಿ ರಾಜ್ಯವನ್ನಾಗಿ ಮಾಡಿದರೆಂಬುದನ್ನೂ ಈಗಾಗಲೇ ಗಮನಿಸಿದ್ದೇವೆ. ದಿವಾನ ಪಿ.ಎನ್. ಕೃಷ್ಣಮೂರ್ತಿ (1901-06) ಬ್ರಿಟಿಷ್ ಭಾರತದಲ್ಲಿ ಜಾರಿಯಲ್ಲಿದ್ದ ಕಛೇರಿ ನಿಯಮ ಹಾಗೂ ದಾಖಲೆಗಳನ್ನು ನಿರ್ವಹಿಸುವ ಆಧುನಿಕ ಪದ್ಧತಿಗಳನ್ನು ಜಾರಿಗೆ ತಂದು ಆಡಳಿತವನ್ನು ಉತ್ತಮಪಡಿಸಿದರು. ಅವರು 1906ರಲ್ಲಿ ಸಹಕಾರಿ ಇಲಾಖೆಯನ್ನು ಸ್ಥಾಪಿಸಿದರು. ಆನಂತರದಲ್ಲಿ ದಿವಾನರಾದ ವಿ. ಪಿ. ಮಾಧವರಾವ್ 1907ರಲ್ಲಿ ಮೇಲ್ಮನೆಯಾದ ವಿಧಾನ ಪರಿಷತ್ತನ್ನು ಸ್ಥಾಪಿಸಿದರು.ಅಲ್ಲದೇ ಅರಣ್ಯ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಿದರು. ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (ಕೇಂದ್ರ ಸಹಕಾರಿ ಬ್ಯಾಂಕ್) ಸಹ ಅವರದೇ ಕೂಸು.

ಮುಂದೆ, ಅಪೂರ್ವ ಮುಂದಾಲೋಚನೆಯ ಇಂಜಿನಿಯರ್, ಶ್ರೇಷ್ಠ ಅರ್ಥಶಾಸ್ತ್ರಜ್ಞ ಮತ್ತು ದೂರದರ್ಶಿ ಆಡಳಿತಗಾರರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು 1912ರಲ್ಲಿ ದಿವಾನರಾದರು. ಅವರು ತಮ್ಮ ಆಡಳಿತಾವಧಿಯಲ್ಲಿ ಈ ಹಿಂದೆಯೇ ಯೋಜಿಸಲಾಗಿದ್ದ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಈ ಅವಧಿಯಲ್ಲಿ ಮೇಲ್ಮನೆಯ ಸದಸ್ಯರ ಸಂಖ್ಯೆಯನ್ನು 24ಕ್ಕೆ ಏರಿಸಲಾಯಿತು. ಅಲ್ಲದೆ ಜೂನ್ 1917ರಲ್ಲಿ ಬಜೆಟ್ ಅಧಿವೇಶನವನ್ನು ಅದರ ಕಾರ್ಯಸೂಚಿಯಲ್ಲಿ ಸೇರಿಸುವ ಮೂಲಕ ಸಂಸ್ಥಾನದ ಬಜೆಟ್ ಬಗ್ಗೆ ಚರ್ಚಿಸಲು ಆ ಸಭೆಗೆ ಅಧಿಕಾರವನ್ನು ನೀಡಿ ಅದನ್ನು ಹೆಚ್ಚು ಬಲಪಡಿಸಲಾಯಿತು.ಇವರು ಅನೇಕ ಉದ್ಯಮಗಳನ್ನು ಸ್ಥಾಪಿಸುವುದರ ಜೊತೆಗೆ ತಮ್ಮ ಪ್ರಗತಿಪರ ಮುಂದಾಲೋಚನೆಯಿಂದಾಗಿ ಅಭಿವೃದ್ಧಿಕಾರ್ಯಗಳನ್ನು ಯೋಜಿಸುವ ಮೂಲಕ ‘ಆಧುನಿಕ ಮೈಸೂರಿನ ನಿರ್ಮಾಪಕ’ ಎಂದು ಖ್ಯಾತರಾದರು. ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ  (1916), ಮೈಸೂರಿನ ಕ್ರೋಂ ಟ್ಯಾನಿಂಗ್ ಫ್ಯಾಕ್ಟರಿ (1918), ಬೆಂಗಳೂರಿನ ಸರ್ಕಾರಿ ಸಾಬೂನು ಕಾರ್ಖಾನೆ (1916), ಭದ್ರಾವತಿಯ ವುಡ್ ಡಿಸ್ಟಿಲೇಷನ್ ಫ್ಯಾಕ್ಟರಿಗಳನ್ನು ಸ್ಥಾಪಿಸಿದವರು ಸರ್.ಎಂ.ವಿಶ್ವೇಶ್ವರಯ್ಯ. ಭದ್ರಾವತಿಯ ಕಬ್ಬಿಣದ ಕಾರ್ಖಾನೆಯೂ ಅವರ ಚಿಂತನೆಯ ಕೂಸು. ಅವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು (1917) ಮತ್ತು ವೈದ್ಯಕೀಯ ಶಾಲೆಯನ್ನು (1917) ಸ್ಥಾಪಿಸಿದರು. ಭವಿಷ್ಯದ ಕೃಷಿ ವಿಶ್ವವಿದ್ಯಾಲಯದ ಕೇಂದ್ರಬಿಂದುವಾಗಲ್ಲಿದ್ದ ಕೃಷಿ ಶಾಲೆ (1913), ಮತ್ತು ಮೈಸೂರು ವಿಶ್ವವಿದ್ಯಾಲಯ (1916)ಗಳೂ ಅವರ ಕೊಡುಗೆಗಳಾಗಿವೆ. ಅವರ ಕಾಲದಲ್ಲಿ ಮೈಸೂರು ಬ್ಯಾಂಕ್(1913) ಹಾಗೂ ಮೈಸೂರು ಚೇಂಬರ್ ಆಫ್ ಕಾಮರ್ಸ್(1916)ಗಳು ಪ್ರಾರಂಭವಾದವು. ಈ ಅವಧಿಯಲ್ಲಿ ಬ್ರಾಹ್ಮಣೇತರರ ಸಾಮಾಜಿಕ ಸಮಾನತೆಗಾಗಿ ಒತ್ತಾಯ ಹೇರುವ ಉದ್ದೇಶದಿಂದ, 1917ರಲ್ಲಿ ‘ಪ್ರಜಾಮಿತ್ರ ಮಂಡಳಿ’ ಎಂಬ ಬ್ರಾಹ್ಮಣೇತರ ಪಕ್ಷವೊಂದು ಸಂಸ್ಥಾನದಲ್ಲಿ ಸ್ಥಾಪಿತವಾಯಿತು. ಸರ್ಕಾರವು ಅದರ ಅಹವಾಲುಗಳನ್ನು ಪರಿಶೀಲಿಸಲು ‘ಮಿಲ್ಲರ್ ಕಮಿಟಿ’ಯನ್ನು ನೇಮಕ ಮಾಡಿತು. ಆ ಸಂದಭದಲ್ಲಿ ವಿಶ್ವೇಶ್ವರಯ್ಯನವರು ರಾಜೀನಾಮೆ(1918) ನೀಡಿದರು.  ಆನಂತರ 1919ರಲ್ಲಿ ಮಿಲ್ಲರ್ ಕಮಿಟಿ ತನ್ನ ವರದಿಯನ್ನು ನೀಡಿ, ಅದರಲ್ಲಿ ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಉದ್ದಿಮೆಗಳಲ್ಲಿ ಸರಿಯಾಗಿ ಪ್ರಾತಿನಿಧ್ಯ ನೀಡಿ ಕೆಲಸ ಕೊಡಬೇಕೆಂದು ಶಿಫಾರಸ್ಸು ಮಾಡಿತು. ಪ್ರಜಾಪ್ರತಿನಿಧಿ ಸಭೆಯ ಸದಸ್ಯರನ್ನು ಚುನಾಯಿಸಲು, ಹೆಚ್ಚು ಪ್ರಜಾಪ್ರಭುತ್ವ ಮಾರ್ಗವನ್ನು ಯೋಚಿಸಲಾಯಿತು.ಅದರ ಸಂಖ್ಯೆಯನ್ನು 250ರಿಂದ 275ಕ್ಕೆ ಏರಿಸಲಾಯಿತು. 50 ರೂಪಾಯಿಗಳನ್ನು ಭೂಗಂದಾಯವಾಗಿ ಇಲ್ಲವೇ, 10 ರೂಪಾಯಿಗಳನ್ನು ನಗರಸಭೆ ಶುಲ್ಕವಾಗಿ ನೀಡುವವರಿಗೆ ಹಾಗೂ ಸ್ತ್ರೀಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

ಸರ್ ಮಿರ್ಜಾ ಇಸ್ಮಾಯಿಲ್ (1926-41), ಮೈಸೂರಿನ ಇನ್ನೊಬ್ಬಪ್ರಮುಖ ದಿವಾನರು. ಇವರು ಕೈಗಾರಿಕೆಗಳ ವಿಸ್ತರಣೆ, ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ಪ್ರಮುಖ ಕೃಷಿ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ಮೈಸೂರನ್ನು ಪ್ರಸಿದ್ಧ ಸಂಸ್ಥಾನವನ್ನಾಗಿಸಿದರು. ಆರ್ಥಿಕ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಾಧನೆಗಳಿಂದ ಮೈಸೂರು ಸಂಸ್ಥಾನ ಕರ್ನಾಟಕದ ಶಕ್ತಿಯುತ ಕೇಂದ್ರಬಿಂದುವಾಗಿ ಬೆಳೆಯಿತು. ಮೈಸೂರು ಮತ್ತು ಕೊಡಗು ಪ್ರಾಂತಗಳಲ್ಲಿ ತೋಟಗಾರಿಕೆ ಮೂಲದ ಕೈಗಾರಿಕೆಗಳನ್ನು ವಿಸ್ತರಿಸಲಾಯಿತು. ಹಿಂದಿನ ದಿವಾನರುಗಳ ಕಾಲದಲ್ಲಿ ಯೋಜಿಸಲಾಗಿದ್ದ ಕನ್ನಂಬಾಡಿ ಯೋಜನೆಯಂತೆ ಕೃಷ್ಣರಾಜಸಾಗರ ಅಣೆಕಟ್ಟನ್ನು ಸರ್ ಮಿರ್ಜಾ ಪೂರ್ಣಗೊಳಿಸಿದರು. ಇದರಿಂದ ಕಬ್ಬು ಬೆಳೆಯುವುದಕ್ಕೆ ಒತ್ತಾಸೆ ಸಿಕ್ಕಿ, ಕೆಲವು ಕಾಲದ ನಂತರ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲು ಅನುಕೂಲವಾಯಿತು. ದಿವಾನ್ ಮಿರ್ಜಾ ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷ ಎಕರೆ ಜಮೀನಿನ ನೀರಾವರಿಗೆ ಅನುಕೂಲವಾಗುವ ಕಾವೇರಿ ಮೇಲ್ದಂಡೆ ನಾಲೆ ಯೋಜನೆಯನ್ನು ಕೈಗೊಳ್ಳಲಾಯಿತು. ಕೈಗಾರಿಕೋದ್ಯಮ, ಮೈಸೂರು ಪ್ರಾಂತದಲ್ಲಿ ಬಿರುಸಿನಿಂದ ನಡೆಯಿತು. ಸರ್ ಎಂ. ವಿಶ್ವೇಶ್ವರಯ್ಯನವರಿಂದ ಅದಾಗಲೇ ಸ್ಥಾಪಿತವಾಗಿದ್ದ ಭದ್ರಾವತಿಯ ಕಬ್ಬಿಣದ ಕಾರ್ಖಾನೆಗೆ ಸರ್ ಮಿರ್ಜಾ ಇಸ್ಮಾಯಿಲ್ ಉಕ್ಕು ಘಟಕವನ್ನು ಸೇರಿಸಿ ವಿಸ್ತರಿಸಿದರು.

ಜಿಲ್ಲಾ ಖಜಾನೆಗಳ ಅಧೀನದಲ್ಲಿ ಜಿಲ್ಲಾ ಉಳಿತಾಯ ಬ್ಯಾಂಕ್‌ಗಳನ್ನು 1870ರಲ್ಲಿ ತೆರೆಯಲಾಗಿತ್ತು. ಆದರೆ ಅದಕ್ಕೂ 1868ರ ವೇಳೆಗೆ ಬೆಂಗಳೂರಿನಲ್ಲಿ ಮೂರು ಬ್ಯಾಂಕಿಂಗ್ ಕಂಪನಿಗಳು ಅಸ್ತಿತ್ವಕ್ಕೆ ಬಂದಿದ್ದವು.1876ರ ಹೊತ್ತಿಗೆ ಒಟ್ಟಿಗೆ 24 ಅಂತಹ ಸಂಸ್ಥೆಗಳು ಹುಟ್ಟಿಕೊಂಡರೂ, ಹೆಚ್ಚಿನವು ಸ್ಥಿರವಾಗಿ ಉಳಿಯಲಿಲ್ಲ. 1870ರಲ್ಲಿ ಚಿತ್ರದುರ್ಗದಲ್ಲಿ ಉಳಿತಾಯ ಬ್ಯಾಂಕ್ ಅನ್ನು ಪ್ರಾರಂಭಿಸಲಾಯಿತು. ಮುಂಬೈ ಪ್ರೆಸಿಡೆನ್ಸಿ ಬ್ಯಾಂಕ್ 1863ರಲ್ಲಿ ಧಾರವಾಡದಲ್ಲಿ ಆರಂಭವಾದರೆ, ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕ್ 1864ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು.  ಆನಂತರ ಬೆಳಗಾವಿ ಮತ್ತು ಮಂಗಳೂರು (1867), ಹುಬ್ಬಳ್ಳಿ (1870) ಮತ್ತು ಕುಮಟಾ (1872-73)ಗಳಲ್ಲೂ ಶಾಖೆಗಳನ್ನು ತೆರೆಯಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ (ಮಂಗಳೂರು-1906) ಮತ್ತು ಕಾರ್ಪೊರೇಷನ್ ಬ್ಯಾಂಕ್ (ಉಡುಪಿ)ಗಳು ಪ್ರಾರಂಭವಾದವು. ಆನಂತರ, ಪಾಂಗಲ್ ನಾಯಕ್ ಬ್ಯಾಂಕ್ (1920), ಜಯಲಕ್ಷ್ಮಿ ಬ್ಯಾಂಕ್ (1923), ಕರ್ಣಾಟಕ ಬ್ಯಾಂಕ್ (1924), ಉಡುಪಿ ಬ್ಯಾಂಕ್ (1925), ಕ್ಯಾಥೊಲಿಕ್ ಬ್ಯಾಂಕ್ (1925), ವಿಜಯಾ ಬ್ಯಾಂಕ್ (1925) ಮತ್ತು ಸಿಂಡಿಕೇಟ್ ಬ್ಯಾಂಕ್ (1925) ಬಂದವು. 1915ರಲ್ಲಿ ಹೊಸಪೇಟೆಯಲ್ಲಿ ನಗರ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು.ಗದಗ ಜಿಲ್ಲೆಯ ಕಣಗಿನಹಾಳ(1906)ದಲ್ಲಿ ಪ್ರಾರಂಭವಾದ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಸೇರಿದಂತೆ ಅನೇಕ ಸಹಕಾರಿ ಸಂಘಗಳು ಅಸ್ತಿತ್ವಕ್ಕೆ ಬಂದವು. ಅವುಗಳಲ್ಲಿ ಈಗ ಗದಗ ಜಿಲ್ಲೆಯಲ್ಲಿ ಸೇರಿರುವುದೇ ಹೆಚ್ಚು. 1916ರಲ್ಲಿ ಧಾರವಾಡದಲ್ಲಿ ಡಿ. ಸಿ. ಸಿ. ಬ್ಯಾಂಕ್ ಆರಂಭವಾಯಿತು. ಕ್ರಮೇಣ, ಸಹಕಾರ ಚಳವಳಿಯು ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ದಾಪುಗಾಲು ಹಾಕಿತು. ದಕ್ಷಿಣ ಕನ್ನಡ ಜಿಲ್ಲೆಗೂ ಕೈಗಾರಿಕೆಗಳನ್ನು ವಿಸ್ತರಿಸಲಾಯಿತು. 1924ರಲ್ಲಿ ಪೀಯರ್ಸ್ ಲೆಸ್ಲೆ ಮತ್ತು ಮಲ್ಯ ಕ್ಯಾಶ್ಯೂ ಮೊದಲಾದ ಗೋಡಂಬಿ ಸುಲಿಯುವ ಕಾರ್ಖಾನೆಗಳನ್ನು ಆರಂಭಿಸಲಾಯಿತು. ಕರಾವಳಿ ಪ್ರಾಂತಗಳಲ್ಲಿ ಬೀಡಿ ಸುತ್ತುವ ಕಾರ್ಖಾನೆಗಳೂ, ಮೈಸೂರು ಸಂಸ್ಥಾನದಲ್ಲಿ ಅಗರಬತ್ತಿ ತಯಾರಿಕಾ ಕೇಂದ್ರಗಳೂ ಗೃಹ ಕೈಗಾರಿಕೆಗಳಾಗಿ ವ್ಯವಸ್ಥಿತವಾಗಿ ಆರಂಭವಾದವು. ಸ್ವದೇಶೀ ಚಳವಳಿ ಬ್ರಿಟಿಷರ ಆಳ್ವಿಕೆಯ ಕರ್ನಾಟಕ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಒತ್ತಾಸೆ ನೀಡಿತು.1918ರಲ್ಲಿ ದಾವಣಗೆರೆಯಲ್ಲಿ ಒಂದು ದೊಡ್ಡ ಬಿ.ಟಿ. ಎಣ್ಣೆ ಕಾರ್ಖಾನೆ ಆರಂಭವಾಯಿತು. ಇದಕ್ಕಿಂತ ಮುಂಚೆಯೇ ಆ ನಗರದಲ್ಲಿ ಅನೇಕ ನೂಲುವ ಕಾರ್ಖಾನೆಗಳು ಆರಂಭವಾಗಿದ್ದವು.ಸರ್ ಮಿರ್ಜಾ ಇಸ್ಮಾಯಿಲ್ ಅವರು ಅನೇಕ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣರಾದರೆಂದು ಈಗಾಗಲೇ ಹೇಳಿದೆ. ಅವರು ಭದ್ರಾವತಿಯಲ್ಲಿ ಸರ್ಕಾರಿ ಸಿಮೆಂಟ್ ಫ್ಯಾಕ್ಟರಿ (1936), ಮೈಸೂರು ಕಾಗದ ಕಾರ್ಖಾನೆ (1930)ಗಳನ್ನು ಸ್ಥಾಪಿಸಿದರು. ಅಷ್ಟೇ ಅಲ್ಲ, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ (1934), ಬೆಳಗೊಳದ ಮೈಸೂರು ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (1937) (ಇಂತಹುದು ಭಾರತದಲ್ಲೇ ಮೊಟ್ಟಮೊದಲು), ಬೆಂಗಳೂರಿನಲ್ಲಿ ಗಾಜು ಮತ್ತು ಪೋರ್ಸ್ಲೇನ್ ಕಾರ್ಖಾನೆ (1939)ಗಳು ಸ್ಥಾಪಿತವಾದವು. ಶಿಂಷಾ ಮತ್ತು ಜೋಗಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಪ್ರಯತ್ನಶೀಲವಾದುದು ಇವರ ಕಾಲದಲ್ಲೇ. ಇವರ ಆಡಳಿತಾವಧಿಯಲ್ಲಿ ಹಿಂದೂಸ್ತಾನ್ ಏರ್‌ಕ್ರಾಫ್ಟ್ (ಎಚ್‌ಎಎಲ್)ನಂತಹ ಮಹತ್ವದ ಕಾರ್ಖಾನೆ 1940ರಲ್ಲಿ ಆರಂಭವಾಯಿತು. ಕೈಸರ್ ಎ ಹಿಂದ್ ಉಣ್ಣೆ ಬಟ್ಟೆ ಮಿಲ್ 1922ರಲ್ಲಿ ಉತ್ಪಾದನೆಯನ್ನು ಆರಂಭಿಸಿತ್ತು. ಮಿನರ್ವಾ ಮಿಲ್ ಅದನ್ನು ಅನುಸರಿಸಿತು. ಹೀಗೆ ಕೈಗಾರಿಕೋದ್ಯಮ ಬಿರುಸಿನಿಂದ ಕೂಡಿತ್ತು. ಎರಡನೆಯ ಮಹಾಯುದ್ಧವೂ ಅದಕ್ಕೆ ಹೆಚ್ಚಿನ ಬಲವನ್ನು ಒದಗಿಸಿತು. ಹರಿಹರದಲ್ಲಿ ಮೈಸೂರು ಕಿರ್ಲೋಸ್ಕರ್ ಯಂತ್ರ  ಕಾರ್ಖಾನೆಯು 1941ರಲ್ಲಿ ಆರಂಭವಾಯಿತು. 1939ರಲ್ಲಿ ಆರಂಭವಾದ ದಾವಣಗೆರೆಯ ಹತ್ತಿ ಗಿರಣಿಯು, ಅಂತಹ ಹೆಚ್ಚು ಗಿರಣಿಗಳು ಆ ನಗರದಲ್ಲಿ ಸ್ಥಾಪನೆಯಾಗಲು ಕಾರಣವಾಯಿತು. 1935ರಲ್ಲಿ ಹೊಸಪೇಟೆಯಲ್ಲಿ ಹಾಗೂ 1944ರಲ್ಲಿ ಮುನಿರಾಬಾದಿನಲ್ಲಿ ಸಕ್ಕರೆ ಕಾರ್ಖಾನೆಗಳು ಸ್ಥಾಪಿತವಾದವು. 1944ರಲ್ಲಿ ರಾಯಚೂರಿನಲ್ಲಿ ಫರೂಕ್ ಅನ್ವರ್ ಎಣ್ಣೆ ಕಾರ್ಖಾನೆ ಆರಂಭವಾಯಿತು. ಕ್ರಮೇಣ ಎಣ್ಣೆ ಸಾಬೂನು ತಯಾರಿಕೆ, ಮರ ಕೊಯ್ಯುವುದು ಮೊದಲಾದ ಕಿರುಕಾರ್ಖಾನೆಗಳು ಸಣ್ಣ ನಗರಗಳಲ್ಲೂ ಸ್ಥಾಪಿತವಾದವು. ಬ್ಯಾಂಕ್‌ಗಳು ಹಾಗೂ ಸಹಕಾರಿ ಕ್ಷೇತ್ರದ ಸಂಸ್ಥೆಗಳು ಅಗತ್ಯವಾದ ಬಂಡವಾಳವನ್ನು ಅವುಗಳಿಗೆ ಒದಗಿಸಿದವ.

 

ಸಾಂಸ್ಕೃತಿಕ ಅಭಿವೃದ್ಧಿ

20ನೆಯ ಶತಮಾನದಲ್ಲಿ ಉಂಟಾದ ಸಾಂಸ್ಕೃತಿಕ ಪುನರುಜ್ಜೀವನದಿಂದ ಸಂಗೀತ, ನೃತ್ಯ, ವರ್ಣಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅನೇಕ ಅಸಾಧಾರಣ ಪ್ರಗತಿ ಕಾಣಿಸಿಕೊಂಡಿತು.ಮೈಸೂರು ಸಂಸ್ಥಾನದ ಆಶ್ರಯದಲ್ಲಿ ವೀಣೆ ಶೇಷಣ್ಣ, ಲಕ್ಷ್ಮಿ ನಾರಾಯಣಪ್ಪ, ಭಕ್ಷಿ ಸುಬ್ಬಣ್ಣ, ವಾಸುದೇವಾಚಾರ್ಯ, ಮುತ್ತಯ್ಯ ಭಾಗವತರ್ ಮತ್ತು ಬಿಡಾರಂ ಕೃಷ್ಣಪ್ಪ ಮೊದಲಾದ ಶ್ರೇಷ್ಠ ಕಲಾವಿದರಿದ್ದರು. ಯುವ ಜನಾಂಗದಲ್ಲೂ ಏಳು ತಂತಿಯ ಪಿಟೀಲನ್ನು ಆವಿಷ್ಕರಿಸಿದ ಟಿ. ಚೌಡಯ್ಯ, ಮತ್ತು ಕ್ಲಾರಿಯೋನೆಟ್ ವಾದಕ ಬಿ. ದೇವೇಂದ್ರಪ್ಪ ಮೊದಲಾದ ಮಹಾ ಕಲಾವಿದರಿದ್ದರು.ಮೈಸೂರು ಸಂಸ್ಥಾನದಲ್ಲಿ ಜಟ್ಟಿ ತಾಯಮ್ಮ, ಮೂಗೂರು ಸುಬ್ಬಣ್ಣ ಮೊದಲಾದ ಖ್ಯಾತ ಪಾರಂಪರಿಕ ನೃತ್ಯಗಾರರಿದ್ದರು.ನಾಟಕ ಪ್ರಪಂಚದಲ್ಲಿ ಮೈಸೂರು ಸಂಸ್ಥಾನವು ವರದಾಚಾರ್ಯ ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ನಾಟಕದ ಸುಬ್ಬಣ್ಣ, ಸ್ತ್ರೀಪಾತ್ರಧಾರಿ ಎಂ.ಕೆ.ನಂಜಪ್ಪ, ಶ್ರೀಮತಿ ಮಳವಳ್ಳಿ ಸುಂದರಮ್ಮ ಮೊದಲಾದ ಮಹಾ ಕಲಾವಿದರನ್ನು ಕಂಡಿತು.

ಉತ್ತರ ಕರ್ನಾಟಕ ಪ್ರಾಂತದಲ್ಲೂ ಶಿರಹಟ್ಟಿ ವೆಂಕೋಬರಾವ್, ಗರೂಡ ಸದಾಶಿವರಾಯ ಮತ್ತು ವಾಮನರಾವ್ ಮಾಸ್ತರರಂತಹ ಮಹಾನ್ ಕಲಾವಿದರಿದ್ದರು.ಕೈಲಾಸಂ, ಬಳ್ಳಾರಿ ರಾಘವ ಮತ್ತು ಜೋಳದರಾಶಿ ದೊಡ್ಡನಗೌಡರು ಹವ್ಯಾಸಿ ರಂಗಭೂಮಿಯ ಮಹಾ ಕಲಾವಿದರಾಗಿದ್ದರು.ಕನ್ನಡದಲ್ಲಿ ಚಲನಚಿತ್ರಗಳೂ ತಯಾರಾದವು. ಉತ್ತರ ಕರ್ನಾಟಕದಲ್ಲಿ ಸವಾಯಿ ಗಂಧರ್ವ (ರಾಮ್‌ಭಾವು ಕುಂದಗೋಳ್ಕರ್), ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿ ಮತ್ತು ಮಲ್ಲಿಕಾರ್ಜುನ ಮನ್ಸೂರ್ ಮೊದಲಾದ ಮಹಾನ್ ಹಿಂದೂಸ್ತಾನಿ ಸಂಗೀತ ಗಾಯಕರಿದ್ದರು. ಮೈಸೂರು ಸಂಸ್ಥಾನದಲ್ಲಿ ವರ್ಣಚಿತ್ರಕಲೆಗೂ ಪ್ರೋತ್ಸಾಹ ದೊರಕಿತು.ದೊರೆಯು ಕೆ. ವೆಂಕಟಪ್ಪ ಅವರನ್ನು ಶಾಂತಿನಿಕೇತನಕ್ಕೆ ಕಳುಹಿಸಿಕೊಟ್ಟಿದ್ದರು. ಈ ವರ್ಣಚಿತ್ರಕಾರರು ವಿಶ್ವವಿಖ್ಯಾತರಾದರು.ಅವರು ನುರಿತ ಶಿಲ್ಪಿಯೂ ಆಗಿದ್ದರು.ಮೈಸೂರಿನ ಸಿದ್ಧಲಿಂಗಸ್ವಾಮಿ ಇನ್ನೊಬ್ಬ ಗಮನಾರ್ಹ ಶಿಲ್ಪಿ. ಕಲಾವಿದರಿಗೆ ತರಬೇತಿಯನ್ನು ನೀಡಲು ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯವನ್ನು ಸ್ಥಾಪಿಸಲಾಯಿತು.

ಜಗನ್ಮೋಹನ ಅರಮನೆಯನ್ನು ಕಲಾವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಮಲೆನಾಡಿನ ಪಾರಂಪರಿಕ ಗುಡಿಕಾರರು (ಸಾಗರ-ಸಿರ್ಸಿ ಪ್ರಾಂತ) ಹೊಸ ತಂತ್ರಗಳನ್ನು ಬಳಸಿ ಶ್ರೀಗಂಧ ಮತ್ತು ಆನೆಯ ದಂತಗಳನ್ನು ಬಳಸಿ ಅಪೂರ್ವ ಕಲಾಕೃತಿಗಳನ್ನು ತಯಾರಿಸಿ ವಿಶ್ವಮಾರುಕಟ್ಟೆಯನ್ನು ಸಂಪಾದಿಸಿದರು. ಅವರ ಕೈಚಳಕವನ್ನು ಮೈಸೂರು ಅರಮನೆ ಹಾಗೂ ವಿಧಾನಸೌಧದ ಅಲಂಕರಣಗಳಲ್ಲಿ ಕಾಣಬಹುದಾಗಿದೆ. ನವೋದಯ ಪುನರುಜ್ಜೀವನವು ಸಾಹಿತ್ಯದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಗದ್ಯ ರಚನೆ ಜನಪ್ರಿಯಗೊಂಡು ಪತ್ರಿಕೋದ್ಯಮವೂ ಬೆಳೆಯಿತು. ಸಣ್ಣಕಥೆ, ಪ್ರಬಂಧ, ಕಾದಂಬರಿ, ನಾಟಕ, ಭಾವಗೀತೆ ಮೊದಲಾದ ಸಾಹಿತ್ಯ ಪ್ರಕಾರಗಳು ಕನ್ನಡದಲ್ಲಿ ಅಭಿವೃದ್ಧಿಯಾದವು.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪಂಜೆ ಮಂಗೇಶರಾಯ, ಎಂ.ಎನ್. ಕಾಮತ್, ಕೆರೂರು ವಾಸುದೇವಾಚಾರ್ಯ ಮೊದಲಾದವರು ಆರಂಭದ ಸಣ್ಣಕಥೆಗಾರರು.ಅವರನ್ನು ಅನುಸರಿಸಿ ಆನಂದಕಂದ, ಎ. ಆರ್. ಕೃಷ್ಣಶಾಸ್ತ್ರಿ, ಕೆ. ಗೋಪಾಲಕೃಷ್ಣರಾಯ, ಕೃಷ್ಣಕುಮಾರ್ ಕಲ್ಲೂರ,  ಅ. ನ. ಕೃಷ್ಣರಾಯ (ಅನಕೃ), ಭಾರತೀಪ್ರಿಯ (ವೆಂಕಟರಾವ್), ಗೊರೂರು ರಾಮಸ್ವಾಮಿ ಐಯ್ಯಂಗಾರ್, ಡಾ.ರಂ. ಶ್ರೀ. ಮುಗಳಿ, ಗೌರಮ್ಮ ಮತ್ತು ರಾಘವ (ಎಂ. ವಿ. ಸೀತಾರಾಮಯ್ಯ)  ಸಣ್ಣಕಥೆಗಳನ್ನು ರಚಿಸಿ ಪ್ರಸಿದ್ಧರಾದರು.ಶಿವರಾಮ ಕಾರಂತ ಮತ್ತು ಅನಕೃ ಪ್ರಸಿದ್ಧ ಕಾದಂಬರಿಕಾರರು. ಬಿ.ಎಂ.ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತೆಗಳು’ (1921) ಕನ್ನಡದ ಆಧುನಿಕ ಭಾವಗೀತೆಗಳ ಮೊದಲ ಸಂಕಲನ. ಎಂ.ಗೋವಿಂದಪೈ, ಡಿ. ವಿ.ಗುಂಡಪ್ಪ, ದ.ರಾ. ಬೇಂದ್ರೆ, ಪು.ತಿ. ನರಸಿಂಹಾಚಾರ್, ಜಿ.ಪಿ.ರಾಜರತ್ನಂ, ಕೆ.ಪರಮೇಶ್ವರಭಟ, ಪಂಜೆ ಮಂಗೇಶರಾಯ, ಕಡೆಂಗೋಡ್ಲು ಶಂಕರಭಟ್ಟ, ವಿ. ಸೀತಾರಾಮಯ್ಯ, ವಿ.ಕೃ.ಗೋಕಾಕ್, ಕುವೆಂಪು (ಕೆ.ವಿ. ಪುಟ್ಟಪ್ಪ) ಮೊದಲಾದವರು ಈ ಕ್ಷೇತ್ರದಲ್ಲಿ ಪ್ರಸಿದ್ಧರು. 1911ರಲ್ಲಿ ಪ್ರಾಸತ್ಯಾಗ ಮಾಡಿದವರಲ್ಲಿ ಮೊದಲಿಗರು  ಗೋವಿಂದಪೈ.

ಗೋಪಾಲಕೃಷ್ಣ ಅಡಿಗರು ತಮ್ಮ ನವ್ಯ ಶೈಲಿಯ ಕವಿತೆಗಳಿಂದ ಕವಿತಾ ರಚನೆಗೆ ಒಂದು ಹೊಸ ಆಯಾಮವನ್ನೇ ಒದಗಿಸಿದರು.ಆಧುನಿಕ ಕನ್ನಡ ನಾಟಕ ರಚನೆಯಲ್ಲಿ ಮುಂಚೂಣಿಯಲ್ಲಿದ್ದವರು ಬಿ.ಎಂ.ಶ್ರೀಕಂಠಯ್ಯ, ಸಂಸ, ಕೈಲಾಸಂ, ಶ್ರೀರಂಗ ಮತ್ತು ಶಿವರಾಮ ಕಾರಂತ.ಎಲ್ಲ ಜಿಲ್ಲೆಗಳ ಶಾಸನಗಳನ್ನು ಸಂಗ್ರಹಿಸಿ ರೈಸ್ ಮತ್ತು ಆರ್. ನರಸಿಂಹಾಚಾರ್ ಪ್ರಕಟಿಸಿದ ಎಫಿಗ್ರಾಫಿಯಾ ಕರ್ನಾಟಿಕಾ ಸಂಪುಟಗಳು, ಮೈಸೂರು ಸಂಸ್ಥಾನದ ಇತಿಹಾಸ ರಚನೆಗೆ ಅನನ್ಯ ಮಾರ್ಗದರ್ಶಿ ಸಾಧನಗಳಾದವು.ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್ಸಿಟಿಟ್ಯೂಟ್‌ನಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಶೋಧಿಸಿ ಪ್ರಕಟಿಸಿದ ಡಾ.ಆರ್.ಶಾಮಾಶಾಸ್ತ್ರಿ, ಭಾರತಾಧ್ಯಯನಗಳನ್ನು ನಡೆಸಿದ ಪ್ರೊ. ಎಂ.ಹಿರಿಯಣ್ಣ, ಮುಂತಾದವರು ಮೈಸೂರು ಮತ್ತು ಕರ್ನಾಟಕಗಳಿಗೆ ವಿಶ್ವಖ್ಯಾತಿ ತಂದುಕೊಟ್ಟರು. ಮುದ್ರಣ ಚಟುವಟಿಕೆ ವ್ಯಾಪಕವಾಗಿ ಬೆಳೆಯಿತು.

ಸಾಹಿತ್ಯಾಭಿವೃದ್ಧಿ, ಆಧುನಿಕ ಮತ್ತು ವೈಜ್ಞಾನಿಕ ತತ್ವಗಳ ಪ್ರಚಾರ, ದೇಶಭಕ್ತಿ, ಪ್ರಗತಿಶೀಲ, ಸಾಮಾಜಿಕ ವಿಚಾರಗಳ ಪ್ರಸಾರ, ಕಲಾಮಾಧ್ಯಮದಲ್ಲಿ ಅತ್ಯುತ್ತಮವಾದವುಗಳನ್ನು ಉತ್ತೇಜಿಸುವುದೇ ಮೊದಲಾದ ಕಾರ್ಯಗಳಲ್ಲಿ ವಾರ್ತಾಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದವು. ಮೈಸೂರಿನಲ್ಲಿ ‘ವೃತ್ತಾಂತ ಚಿಂತಾಮಣಿ’ ಎಂಬ ಪತ್ರಿಕೆಯನ್ನು (1885) ಎಂ.ವೆಂಕಟಕೃಷ್ಣಯ್ಯನವರು ನಡೆಸುತ್ತಿದ್ದರು.‘ಮೈಸೂರು ಸ್ಟ್ಯಾಂಡರ್ಡ್’ ಮತ್ತು ‘ಮೈಸೂರು ಸ್ಟಾರ್’ ಮೊದಲಾದವು ಮೈಸೂರು ಸಂಸ್ಥಾನದ ಇನ್ನೂ ಕೆಲವು ಪ್ರಮುಖ ವೃತ್ತಪತ್ರಿಕೆಗಳು. ಕರಾವಳಿ ಕರ್ನಾಟಕದಲ್ಲಿ ಸುವಾಸಿನಿ (1900), ಕೃಷ್ಣಸೂಕ್ತಿ (1905), ಮತ್ತು ಸ್ವದೇಶಾಭಿಮಾನಿ (1907) ಪತ್ರಿಕೆಗಳು ಪ್ರಸಾರದಲ್ಲಿದ್ದವು. ಮುದವೀಡು ಕೃಷ್ಣರಾಯರು ಸಂಪಾದಕರಾಗಿದ್ದ ಕರ್ಣಾಟಕ ವೃತ್ತ (1890), ಕನ್ನಡಕೇಸರಿ (ಹುಬ್ಬಳ್ಳಿ, 1902), ರಾಜಹಂಸ (ಧಾರವಾಡ, 1891), ಕರ್ನಾಟಕ ವೈಭವ (ವಿಜಯಪುರ, 1897)-ಇವು ಉತ್ತರ ಕರ್ನಾಟಕದ ನಿಯತಕಾಲಿಕೆಗಳು. ಸ್ವಾತಂತ್ರ್ಯ ಸಂಗ್ರಾಮ ಹಲವಾರು ವೃತ್ತಪತ್ರಿಕೆಗಳ ಪ್ರಕಟಣೆಗೆ ಸ್ಫೂರ್ತಿಯನ್ನು ನೀಡಿತು.

 

ಸ್ವಾತಂತ್ರ್ಯ ಸಂಗ್ರಾಮ

1920ರ ನಂತರ ಸ್ವಾತಂತ್ರ್ಯ ಚಳವಳಿಯ ಜೊತೆಜೊತೆಗೆ ಕರ್ನಾಟಕ ಏಕೀಕರಣದ ಒತ್ತಾಯವೂ ಕರ್ನಾಟಕದಲ್ಲಿ ತುಂಬಾ ಪ್ರಬಲವಾಯಿತು.ಕರ್ನಾಟಕದಲ್ಲಿ ನಡೆದ ಈ ದ್ವಿ-ಹೋರಾಟದ ನೆನಪು ಸ್ಮರಣಾರ್ಹವಾಗಿದೆ.ಸ್ವಾತಂತ್ರ್ಯ ಚಳುವಳಿಯು ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಕೈಗಾರಿಕೆ ಮತ್ತು ಸಾಮಾಜಿಕ ರಂಗಗಳ ಮೇಲೆ ಪ್ರಭಾವ ಬೀರಿತು.ಅದು ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮ ಹಾಗೂ ಮಹಿಳಾ ಅಭಿವೃದ್ಧಿಗಳ ಕಡೆಗೆ ಒತ್ತು ಕೊಟ್ಟಿತು.ಸಾಮಾಜಿಕ ಸಮಾನತೆಯನ್ನು ಸಾಧಿಸುವುದು, ಮತ್ತು ಜಾತಿ ವೈಷಮ್ಯಗಳನ್ನು ನಿವಾರಿಸುವುದು ಈ ಚಳವಳಿಯ ಗುರಿಯಾಗಿತ್ತು. ವೀರಶೈವ ಮಹಾಸಭೆ (1904), ಒಕ್ಕಲಿಗರ ಸಂಘ (1906) ಮತ್ತು ಅಂತಹ ಇನ್ನಿತರ ಸಂಘ-ಸಂಸ್ಥೆಗಳು ಶಿಕ್ಷಣ ಪ್ರಸಾರ, ಹಾಗೂ ಹಿಂದುಳಿದ ವರ್ಗಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯನ್ನು ಬೆಳೆಸಿಕೊಳ್ಳುವತ್ತ ಸಹಾಯ ಮಾಡಿದವು. 1917ರಲ್ಲಿ ಮೈಸೂರಿನಲ್ಲಿ ‘ಪ್ರಜಾಮಿತ್ರ ಮಂಡಲಿ’ ಹಾಗೂ 1920ರಲ್ಲಿ ಹುಬ್ಬಳ್ಳಿಯಲ್ಲಿ ‘ಬ್ರಾಹ್ಮಣೇತರ ಪರಿಷತ್ತು’ಗಳು ಸ್ಥಾಪಿತವಾಗಿ, ಇದೇ ಗುರಿಯನ್ನು ಇಟ್ಟುಕೊಂಡು ಶ್ರಮಿಸಿದವು. ಈ ಕ್ರಿಯೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ  ಕಾಂಗ್ರೆಸ್‌ಗೆ ವಿರುದ್ಧವಾಗಿದ್ದರೂ, ಕೆಲವು ಕಾಲದ ನಂತರ ಎಲ್ಲವೂ ಹೃದಯಪೂರ್ವಕವಾಗಿಯೇ ಕಾಂಗ್ರೆಸ್‌ನ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೈಜೋಡಿಸಿದವು. ಆದರೆ, ಅದಕ್ಕಿಂತ ಮೊದಲು ಕಾಂಗ್ರೆಸ್ ಸಂಸ್ಥೆಯ ಮೊದಲ ಅಧಿವೇಶನ 1885ರಲ್ಲಿ ಮುಂಬೈನಲ್ಲಿ ನಡೆದಾಗ ಕರ್ನಾಟಕದಿಂದ ನಾಲ್ಕು ಮಂದಿ (ಬೆಳಗಾವಿಯಿಂದ ಒಬ್ಬರು, ಬಳ್ಳಾರಿಯಿಂದ ಮೂವರು) ಅದರಲ್ಲಿ ಭಾಗವಹಿಸಿದ್ದರು.ಬಾಲಗಂಗಾಧರ ತಿಲಕರ ವ್ಯಕ್ತಿತ್ವ ಹಾಗೂ ಅವರ ‘ಕೇಸರಿ’ ಪತ್ರಿಕೆ ಕರ್ನಾಟಕದ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದವು. ತತ್ಪರಿಣಾಮವಾಗಿ ಮುಂಬೈ ಪ್ರಾಂತೀಯ ಸರ್ಕಾರದ ರಾಜಕೀಯ ಅಧಿವೇಶನಗಳನ್ನು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಉತ್ತರ ಕರ್ನಾಟಕ ಪ್ರದೇಶದ ಧಾರವಾಡ (1903), ಬೆಳಗಾವಿ (1916) ಮತ್ತು ಬಿಜಾಪುರ (1918)ಗಳಲ್ಲಿ ನಡೆಸಲಾಯಿತು. ಬಂಗಾಳದ ವಿಭಜನೆಯನ್ನು ವಿರೋಧಿಸಿದ ಸ್ವದೇಶಿ  ಚಳುವಳಿಯ ಸಮಯದಲ್ಲಿ 1907ರಲ್ಲಿ ಬೆಳಗಾವಿಯಲ್ಲಿ ನಾಲ್ಕು ಸಾರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆದಾಗ (ಧರಣಿ) ಹದಿನೈದು ಮಂದಿಯನ್ನು ಸೆರೆಹಿಡಿಯಲಾಗಿತ್ತು. ಆನಂತರದಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮತ್ತು ಬಿಜಾಪುರಗಳಲ್ಲಿ ರಾಷ್ಟ್ರೀಯ ಶಾಲೆಗಳನ್ನು ತೆರೆಯಲಾಯಿತು. ಅದಕ್ಕಿಂತ ಮೊದಲೇ ಬೆಂಗಳೂರಿನಲ್ಲಿ ದೇಶಿಯ ವಿದ್ಯಾಶಾಲೆ (ನ್ಯಾಷನಲ್ ಹೈಸ್ಕೂಲ್) 1917ರಲ್ಲೇ ಆರಂಭವಾಗಿತ್ತು.

ಕರ್ನಾಟಕಕ್ಕೆ ಗಾಂಧೀಜಿಯ ಆರಂಭದ ಭೇಟಿಗಳು

 ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ಅದೇ ವರ್ಷ ಭಾರತಕ್ಕೆ ಹಿಂದಿರುಗಿದ  ಗಾಂಧೀಜಿ (1869-1948) ಮದ್ರಾಸಿಗೆ ಭೇಟಿ ನೀಡಿದರು. ಡಿ.ವಿ. ಗುಂಡಪ್ಪನವರ ಕೋರಿಕೆಯಂತೆ ಅವರು ಎಂಟು ಮೇ 1915ರಂದು ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವನ್ನು ಅನಾವರಣ ಮಾಡಲು ಬೆಂಗಳೂರಿಗೆ ಭೇಟಿ ನೀಡಿದರು. ಆಗ, ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಗುಜರಾತಿ ವರ್ತಕರು ಅವರಿಗೆ ಹಾರ ಹಾಕಿ ಗೌರವಿಸಿದರು.ಇದು, ಅವರು ಮೈಸೂರು ಸಂಸ್ಥಾನಕ್ಕೆ ನೀಡಿದ ಮೊತ್ತ ಮೊದಲ ಭೇಟಿಯಾಗಿತ್ತು.ಆನಂತರ ಅವರು 1916ರಲ್ಲಿ ಬೆಳಗಾವಿಗೆ ಭೇಟಿ ನೀಡಿ ಬಾಂಬೆ ಪ್ರಾಂತದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಐದು ದಿನ ತಂಗಿದ್ದರು. ಮುಂದೆ, ಧಾರವಾಡದಲ್ಲಿ ಕರ್ನಾಟಕ ಪ್ರಾಂತದ ಮೊಟ್ಟಮೊದಲ ರಾಜಕೀಯ ಅಧಿವೇಶನವನ್ನು 1920ರಲ್ಲಿ ನಡೆಸಲಾಯಿತು.ಅಲ್ಲಿ ಕೈಗೊಂಡ ನಿರ್ಣಯದಂತೆ, 1920ರಲ್ಲಿ ನಡೆದ ನಾಗಪುರ ಅಧಿವೇಶನದಲ್ಲಿ ಕರ್ನಾಟಕದಿಂದ 800ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ನಾಗಪುರ ಅಧಿವೇಶನದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಾಂತೀಯ ಕಾಂಗ್ರೆಸ್ ಸಮಿತಿ(1921)ಗೆ ಒಪ್ಪಿಗೆ ದೊರೆಯಿತು. ಬೆಳಗಾವಿಯ ಗಂಗಾಧರರಾವ್ ದೇಶಪಾಂಡೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಏತನ್ಮಧ್ಯೆ, 1920-21ರ ಅಸಹಕಾರ ಚಳವಳಿಯಿಂದಾಗಿ ಅನೇಕ ವಕೀಲರು ತಮ್ಮ ವಕೀಲಿ ವೃತ್ತಿಯನ್ನು ತೊರೆದರು, ಅನೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿದರು. ಖಿಲಾಫತ್ ಚಳುವಳಿಯೂ ಇದರೊಂದಿಗೆ ಆರಂಭವಾಯಿತು. ಆ ಸಂದರ್ಭದಲ್ಲಿ 50ಕ್ಕೂ ಹೆಚ್ಚು ದೇಶಿಯ ವಿದ್ಯಾಶಾಲೆಗಳನ್ನು ಕರ್ನಾಟಕದಲ್ಲಿ ಆರಂಭಿಸಲಾಯಿತು.ಬ್ರಿಟಿಷ್ ಆಡಳಿತದ ಜಿಲ್ಲಾ ಪ್ರದೇಶಗಳಿಂದ 70ಕ್ಕೂ ಹೆಚ್ಚು ಮಂದಿ ಸೆರೆಯಾಗಲು ಮುಂದೆ ಬಂದರು.ಪಿಕೆಟಿಂಗ್ ನಡೆಸುತ್ತಿದ್ದವರ ಮೇಲೆ ಧಾರವಾಡ ಮತ್ತು ಬೆಂಗಳೂರುಗಳಲ್ಲಿ ಗೋಲಿಬಾರ್ ಮಾಡಲಾಯಿತು. ಧಾರವಾಡದಲ್ಲಿ ಮೂರು ಮಂದಿ ಖಿಲಾಫತ್ ಕಾರ್ಮಿಕರು, ಬೆಂಗಳೂರಿನ ದಂಡುಪ್ರದೇಶದಲ್ಲಿ ಇಬ್ಬರು ಮೃತರಾದರು. ಈ ಮಧ್ಯೆ ಕರ್ನಾಟಕದ ಡಾ.ಹರ್ಡೀಕರ್ ಅವರು ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಸ್ವಯಂ ಸೇವಾ ಸಂಘವಾದ ‘ಅಖಿಲ ಭಾರತ ಹಿಂದೂಸ್ತಾನಿ ಸೇವಾದಳ’ವನ್ನು ಆಯೋಜಿಸಿದರು. ಈ ಮಧ್ಯೆ ಖಿಲಾಫತ್ ಚಳವಳಿಯ ಅಂಗವಾಗಿ ಗಾಂಧೀಜಿ, 11-08-1920ರಂದು ಬೆಂಗಳೂರಿಗೆ ಭೇಟಿ ನೀಡಿ, ಸಾರ್ವಜನಿಕ ಭಾಷಣದ ನಂತರ ಮದ್ರಾಸಿಗೆ ತೆರಳಿದರು. ಒಂದು ವಾರದ ನಂತರ ಮದ್ರಾಸಿನಿಂದ ಹಿಂತಿರುಗುವಾಗ 19-08-1920ರಂದು ಕಾಸರಗೋಡು ಮತ್ತು ಮಂಗಳೂರಿಗೆ ಭೇಟಿ ನೀಡಿದರು. ಅದೇ ವರ್ಷ ನವೆಂಬರ್ ಏಳು ರಂದು ಗಾಂಧೀಜಿ, ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳಿಗೆ ಭೇಟಿ ನೀಡಿ ಬೆಳಗಾವಿಯಲ್ಲಿ ತಂಗಿದ್ದರು.10ನೇ ನವೆಂಬರ್ ಧಾರವಾಡಕ್ಕೆ ಭೇಟಿ ನೀಡಿದ್ದರು. ಮಾರನೆಯ ದಿವಸ ಹುಬ್ಬಳ್ಳಿ ಮತ್ತು ಗದಗ್‌ಗಳಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದ ನಂತರ ಮೀರಜ್‌ಗೆ ಪ್ರಯಾಣ ಬೆಳೆಸಿದರು.1921ರ ಅವಧಿಯಲ್ಲಿ 27 ಹಾಗೂ 28ರ ಮೇ ತಿಂಗಳಲ್ಲಿ ಅವರು ಬಾಗಲಕೋಟೆ, ವಿಜಯಪುರ ಮತ್ತು ಕೊಲ್ಹಾರಗಳಿಗೆ ಭೇಟಿ ನೀಡಿದರು.ಅದೇ ವರ್ಷ ನವೆಂಬರ್ 30ರಂದು ಕಾರಣಾಂತರಗಳಿಂದ ಅವರು ಬಲವಂತವಾಗಿ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿಯೇ ರಾತ್ರಿ ಉಳಿದುಕೊಳ್ಳಬೇಕಾಯಿತು. ಆನಂತರ ಬೆಳಗ್ಗೆ ಅವರು ಗುಂತಕಲ್‌ಗೆ ಪ್ರಯಾಣ ಬೆಳೆಸಿದರು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕಮಾತ್ರ ಅಖಿಲ ಭಾರತ 39ನೆಯ ಕಾಂಗ್ರೆಸ್ ಅಧಿವೇಶನ 1924ರಲ್ಲಿ ಬೆಳಗಾವಿಯಲ್ಲಿ ನಡೆದು ಅಭೂತಪೂರ್ವವಾಗಿ ಯಶಸ್ವಿಯಾಯಿತು. ಅಲ್ಲದೆ ರಾಜ್ಯದ ಜನತೆಯಲ್ಲಿ ಅರಿವು ಮೂಡಿಸುವುದಕ್ಕೆ ಕಾರಣವಾಯಿತು. ಗಂಗಾಧರರಾವ್ ದೇಶಪಾಂಡೆ, ವಿಜಯಪುರದ ಹನುಮಂತರಾವ್ ಕೌಜಲಗಿ ಹಾಗೂ ಶ್ರೀನಿವಾಸರಾವ್ ಕೌಜಲಗಿ, ಬಳ್ಳಾರಿಯ ಟೇಕೂರರು, ಮಂಗಳೂರಿನ ಕಾರ್ನಾಡ್ ಸದಾಶಿವರಾಯರು ಕರ್ನಾಟಕದ ಮೊದಮೊದಲ ಕಾಂಗ್ರೆಸ್ ನೇತಾರರಾಗಿದ್ದರು.  

1927ರಲ್ಲಿಯ ಕರ್ನಾಟಕ ಪ್ರವಾಸ ಗಾಂಧೀಜಿ

1927ರಲ್ಲಿ ಗಾಂಧೀಜಿ ಖಾದಿಪ್ರಚಾರ ಪ್ರವಾಸವನ್ನು ಆರಂಭಿಸಿದರು.ಅದರ ಅಂಗವಾಗಿ 31ನೇ ಮಾರ್ಚ್ನಲ್ಲಿ ನಿಪ್ಪಾಣಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರ ಆರೋಗ್ಯ ಕೆಟ್ಟಿತು. ಅಲ್ಪಪ್ರಮಾಣದ ಲಕ್ವವೂ ಹೊಡೆಯಿತು. ವೈದ್ಯರ ನಿರ್ದೇಶನದಂತೆ ಅವರು ಏಪ್ರಿಲ್ ಒಂದರಂದು ಬೆಳಗಾವಿಯಿಂದ ಮಹಾರಾಷ್ಟ್ರದ ಬೋಲಿಗೆ ಹೋಗಿ ವಿಶ್ರಾಂತಿ ಪಡೆದರು. ಆದರೆ, ಅಲ್ಲಿ ಅವರಿಗೆ ಹಿತವೆನಿಸಲಿಲ್ಲ. ಏಪ್ರಿಲ್ 19ರಂದು ಬೆಳಗಾವಿಯ ಮೂಲಕ ನಂದಿಗೆ ಹೊರಟು 20-04-1927ರಂದು ನಂದಿಯನ್ನು ತಲುಪಿದರು.ನಂದಿಯಲ್ಲಿ ಅವರು 45 ದಿವಸಗಳ ಕಾಲ (20-04-1927ರಿಂದ 05-06-1927) ವಿಶ್ರಾಂತಿ ಪಡೆದರು. 1927 ಜೂನ್ ಐದರಂದು ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.ಬೆಂಗಳೂರಿನಲ್ಲಿ ಅವರು 30-08-1927ರ ವರೆಗೆ ಇದ್ದರು.ಬೆಂಗಳೂರಿನಲ್ಲಿದ್ದಾಗ ಅವರು ಯಲಹಂಕ (02-07-1927), ತುಮಕೂರು ಮತ್ತು ಮಧುಗಿರಿ (ಜುಲೈ 14-16), ನಂತರ ಮೈಸೂರು, ಕೃಷ್ಣರಾಜಸಾಗರ, ಕೆ.ಆರ್.ನಗರ ಮತ್ತು ಶ್ರೀರಂಗಪಟ್ಟಣಗಳಿಗೆ ಭೇಟಿ ನೀಡಿದ ನಂತರ ಜುಲೈ 23ರಂದು ಮೈಸೂರಿಗೆ ಹಿಂತಿರುಗಿದರು.

ರಾಮನಗರ ಮತ್ತು ಕನಕಪುರ (31 ಜುಲೈ ಮತ್ತು 1 ಆಗಸ್ಟ್), ಅರಸೀಕೆರೆ (2 ಆಗಸ್ಟ್), ಹೊಳೆನರಸೀಪುರ ಮತ್ತು ಹಾಸನ (3-4, ಆಗಸ್ಟ್) ದಾವಣಗೆರೆ (12 ಆಗಸ್ಟ್) ಹರಿಹರ, ಹೊನ್ನಾಳಿ, ಮಲೆ ಬೆನ್ನೂರು (13 ಆಗಸ್ಟ್), ಶಿವಮೊಗ್ಗ (14-15 ಆಗಸ್ಟ್) ಅಯ್ಯನೂರು, ಕುಂಶಿ, ಕೆರೋಡಿ, ಆನಂದಪುರ, ಮತ್ತು ಸಾಗರ (16 ಆಗಸ್ಟ್), ತೀರ್ಥಹಳ್ಳಿ, ಮಂಡಗದ್ದೆ, ಗಾಜನೂರುಗಳಿಗೆ ಭೇಟಿ ನೀಡಿ ಶಿವಮೊಗ್ಗದಲ್ಲಿ (17 ಆಗಸ್ಟ್) ತಂಗಿದರು. ಭದ್ರಾವತಿ, ಕಡೂರು ಮತ್ತು ಬೀರೂರು (18 ಆಗಸ್ಟ್), ಚಿಕ್ಕಮಗಳೂರು (19 ಆಗಸ್ಟ್), ಬೇಲೂರು, ಹಳೇಬೀಡು ಮತ್ತು ಅರಸೀಕೆರೆ (20 ಆಗಸ್ಟ್)ಗೆ ಭೇಟಿ ನೀಡಿ, ಕೊನೆಯಲ್ಲಿ 30-08-1927ರಂದು ಬೆಂಗಳೂರಿನಿಂದ ವೆಲ್ಲೂರಿಗೆ ಪ್ರಯಾಣ ಬೆಳೆಸಿದರು.

ಕಾನೂನು ಭಂಗ ಚಳವಳಿ

1930ರಲ್ಲಿ ಗಾಂಧೀಜಿ ಹೂಡಿದ ಕಾನೂನು ಭಂಗ ಚಳವಳಿಯ ಭಾಗವಾಗಿ, ಕರ್ನಾಟಕದ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭಗೊಂಡಿತು. ಜೊತೆಗೆ ರೈತರು ಭೂಕಂದಾಯವನ್ನು ಪಾವತಿ ಮಾಡಲು ನಿರಾಕರಿಸಿದಾಗ ಜಂಗಲ್ ಸತ್ಯಾಗ್ರಹ, ಸಾರಾಯಿ ಅಂಗಡಿಯ ಮುಂದೆ ಪಿಕೆಟಿಂಗ್ ನಡೆಸುವುದು, ಹುಲ್ಲುಬನ್ನಿ ತೆರಿಗೆಯ ಪಾವತಿ ನಿರಾಕರಣೆ, ಕೊನೆಗೆ ಕರ ನಿರಾಕರಣೆ-ಹೀಗೆ ವಿವಿಧ ಬಗೆಯಲ್ಲಿ ಕಾನೂನು ಭಂಗ ಚಳವಳಿ ವ್ಯಾಪಕಗೊಂಡು. ಬ್ರಿಟಿಷ್ ಆಡಳಿತ ಪ್ರಾಂತಗಳಲ್ಲಿ 2000ಕ್ಕಿಂತ ಹೆಚ್ಚು ಮಂದಿ ಜೈಲು ಸೇರಿದರು. ಅದರಲ್ಲೂ ಬೆಳಗಾವಿ ಪ್ರಾಂತದ ಸಂಖ್ಯೆಯೇ 750ರಷ್ಟು ದೊಡ್ಡದಾಗಿತ್ತು. ಆದರೆ ಗಾಂಧಿ-ಇರ್ವಿನ್ ಒಪ್ಪಂದದ ಬೆನ್ನಲ್ಲೇ, ನಿಲ್ಲಿಸಲಾಗಿದ್ದ  ಈ ಚಳವಳಿಯನ್ನು 1932ರಲ್ಲಿ, ಒಂಬತ್ತು ತಿಂಗಳ ನಂತರ ಮತ್ತಷ್ಟು ಬಿರುಸಾಗಿ ಆರಂಭಿಸಲಾಯಿತು. ಸಿದ್ದಾಪುರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಕೈಗೊಂಡ ಕರನಿರಾಕರಣೆ ಚಳವಳಿ ಒಂದು ಮಹಾ ಸಂಘರ್. 800 ಸಂಸಾರಗಳ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 1,000 ಮಂದಿ ಜೈಲು ಸೇರಿದರು. ಅದರಲ್ಲಿ ಅನಕ್ಷರಸ್ಥರು, ಸಾಂಪ್ರದಾಯಕವಾಗಿ ತಲೆಯನ್ನು ಬೋಳಿಸಿಕೊಂಡಿದ್ದ ವಿಧವೆಯರೂ ಸೇರಿದಂತೆ 100 ಮಂದಿ ಸ್ತ್ರೀಯರೂ ಸೇರಿದ್ದರು.ಅವರು ತಮ್ಮ ಭೂಮಿಯನ್ನು ಹಿಂತಿರುಗಿ ಪಡೆದದ್ದು 1939ರಲ್ಲಿ.ಅಲ್ಲಿಯವರೆಗೆ ಅವರೆಲ್ಲಾ ಮೌನವಾಗಿ ಬ್ರಿಟಿಷ್ ದಬ್ಬಾಳಿಕೆಯನ್ನು ಸಹಿಸಿಕೊಂಡಿದ್ದರು. 1932ರಲ್ಲಿ ಗಾಂಧೀಜಿ ಅಸ್ಪೃಶ್ಯತಾ ನಿವಾರಣೆಗಾಗಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಾಗ ಕರ್ನಾಟಕದಲ್ಲಿ ಪ್ರಚಾರ ಕಾರ್ಯಕ್ರಮಗಳನ್ನು ಯೋಜಿಸಲಾಯಿತು. ಸಿರಸಿಯ ಮಾರಿಕಾಂಬ ದೇವಾಲಯಕ್ಕೆ, ಬೆಂಗಳೂರಿನ ಬಸವಣ್ಣನ ಗುಡಿಗೆ ಹರಿಜನರಿಗೆ ಪ್ರವೇಶ ನೀಡಬೇಕೆಂಬುದು ಈ ಚಳವಳಿಯ ಮಹತ್ವದ ಕಾರ್ಯಕ್ರಮವಾಗಿತ್ತು.  ಹರಿಜನೋದ್ಧಾರ ಕಾರ್ಯಕ್ರಮದ ಭಾಗವಾಗಿ ಗಾಂಧೀಜಿ 1934 ಮತ್ತು 1936ರಲ್ಲಿ ಕರ್ನಾಟಕದಲ್ಲಿ ಪ್ರವಾಸ ಮಾಡಿದರು. ಅಷ್ಟು ಹೊತ್ತಿಗಾಗಲೇ, ಸರ್ದಾರ್ ವೀರಣ್ಣಗೌಡರು ಅಧ್ಯಕ್ಷರಾಗಿದ್ದ ಹರಿಜನ ಸೇವಕ ಸಂಘದ ಒಂದು ಶಾಖೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಗಾಂಧೀಜಿ 1934ರಲ್ಲಿಯ ಕರ್ನಾಟಕ ಪ್ರವಾಸ

 1934ರ ತಮ್ಮ ಪ್ರವಾಸದಲ್ಲಿ ಗಾಂಧೀಜಿ, ವಿದುರಾಶ್ವತ್ಥ, ಗೌರೀಬಿದನೂರು, ದೊಡ್ಡಬಳ್ಳಾಪುರ, ತುಮಕೂರು, ತ್ಯಾಮಗೊಂಡ್ಲು, ನೆಲಮಂಗಲ, ಬೆಂಗಳೂರುಗಳಿಗೆ ಭೇಟಿ ನೀಡಿ 04-01-1934ರಂದು ಮೈಸೂರಿನಲ್ಲಿ ತಂಗಿದ್ದರು. ಮಾರನೆಯ ದಿನ ತಗಡೂರು, ಬದನವಾಳ, ನಂಜನಗೂಡುಗಳಿಗೆ ಭೇಟಿ ನೀಡಿ, ಮೈಸೂರಿನಲ್ಲಿ (5ನೇ ಜನವರಿ) ಬಿಡಾರ ಹೂಡಿದ್ದರು. ಅಲ್ಲಿಂದ ಮುಂದಕ್ಕೆ ಸಕ್ಕರೆ ನಗರ ಮಂಡ್ಯಕ್ಕೆ ತೆರಳಿ, ಮದ್ದೂರು, ಬೆಸಗರಹಳ್ಳಿ, ಶಿವಪುರ, ಸೋಮನಹಳ್ಳಿ, ಚನ್ನಪಟ್ಟಣ, ರಾಮನಗರ, ಕನಕಪುರ, ಬಿಡದಿ, ಕೆಂಗೇರಿಗಳಿಗೆ ಭೇಟಿ ನೀಡಿದ ನಂತರ ಬೆಂಗಳೂರನ್ನು ತಲುಪಿದರು (6ನೇ ಜನವರಿ). 10ನೇ ತಾರೀಖಿನಂದು ವಲ್ಲವಿಕೋಟೆಗೆ ಹೊರಟು, ತಮಿಳುನಾಡಿನ ಪ್ರವಾಸ ಮುಗಿಸಿ, ಮೈಸೂರು, ತಿತ್ತಿಮಟ್ಟಿ, ಇಕ್ಕೇರಿ, ಪೊನ್ನಂಪೇಟೆ, ಮತ್ತು ಹುದಿಗೆರೆ (22ನೇ ಫೆಬ್ರವರಿ)ಗಳಿಗೆ ಭೇಟಿ ನೀಡಿ, ನಂತರ ವಿರಾಜಪೇಟೆ, ಬೆಳ್ಳೂರು, ಸೋಮವಾರಪೇಟೆ, ಗುಂಡುಗುತ್ತಿಗಳಿಗೆ ಭೇಟಿ ನೀಡಿ, ಮಡಿಕೇರಿಯಲ್ಲಿ ತಂಗಿದರು(23ನೇ ಫೆಬ್ರವರಿ). ಅಲ್ಲಿಂದ ಹೊರಟು ಸಂಪಾಜೆ, ಸುಳ್ಯ, ಪುತ್ತೂರು, ಉಪ್ಪಿನಂಗಡಿ, ವಿಠಲ, ಕನ್ನಡ್ಕ, ಪಾಣೆ ಮಂಗಳೂರು, ಬಂಟ್ವಾಳಗಳಿಗೆ ತೆರಳಿ, ಮಂಗಳೂರಿನಲ್ಲಿ ತಂಗಿದರು (24ನೇ ಫೆಬ್ರವರಿ). ಮಾರನೆಯ ದಿನ ಗುರುಪುರ, ಬಜ್ಪೆ, ಕಟೀಲು, ಕೆಂಗೋಳಿ, ಮುಲ್ಕಿ, ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರ, ಉಡುಪಿ, ಬ್ರಹ್ಮಾವರಗಳಿಗೆ (25ನೇ ಫೆಬ್ರವರಿ) ಭೇಟಿ ನೀಡಿ, ಕುಂದಾಪುರದಲ್ಲಿ ತಂಗಿದರು (25-26ನೇ ಫೆಬ್ರವರಿ). ಭಟ್ಕಳ್, ಹೊನ್ನಾವರ, ಕದಿರಿಗಳಿಗೆ ಭೇಟಿ ನೀಡಿ ಕಾರವಾರದಲ್ಲಿ (27ನೇ ಫೆಬ್ರವರಿ) ತಂಗಿದರು. ಮಾರನೆಯ ಬೆಳಿಗ್ಗೆ ಬಿನಗ, ಚಂದಿಯಾ, ಅಂಕೋಲ, ಹಿರೇಗುತ್ತಿ, ಮಂದಗೇರಿ, ಕುಮಟಾ, ಅಮ್ಮನಪಲ್ಲಿ, ಹೆಗ್ಡೆಗಳಿಗೆ ಭೇಟಿ ನೀಡಿ ಸಿರಸಿಯಲ್ಲಿ ತಂಗಿದರು. (28ನೇ ಫೆಬ್ರವರಿ); ಕಣಸೂರು, ಸಿದ್ದಾಪುರ, ದಾಸನಕೊಪ್ಪ, ಈಸೂರು, ಯಕ್ಕಂಬಿ, ಸಮಸಗಿ, ಅಕ್ಕಿ ಆಲೂರು, ದೇವೀ ಹೊಸೂರು, ಹಾವೇರಿ, ಬ್ಯಾಡಗಿ, ಮೋಟೆಬೆನ್ನೂರು, ಮುರುಘಾಮಠ ಮಾರ್ಗವಾಗಿ ಬಂದು ಹಾವೇರಿಯಲ್ಲಿ ತಂಗಿದರು(1ನೇ ಮಾರ್ಚ್). ಮಾರನೆಯ ದಿವಸ ರಾಣೆಬೆನ್ನೂರು, ಹರಿಹರ, ದಾವಣಗೆರೆ, ದುಗ್ಗತ್ತಿ, ಬೆಣ್ಣೆಹಾಳ್, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಕಣವಿಹಳ್ಳಿಗಳಿಗೆ ಭೇಟಿನೀಡಿ ಸಂಡೂರಿನಲ್ಲಿ ತಂಗಿದರು (2ನೇ ಮಾರ್ಚ್), ಮುಂದುವರಿದು ಬಳ್ಳಾರಿ, ಹೊಸಪೇಟೆ, ಭಾನಾಪುರ, ಗದಗ್, ಜಕ್ಕಲಿಗಳಿಗೆ ಭೇಟಿ ನೀಡಿ ಹುಬ್ಬಳ್ಳಿಯಲ್ಲಿ ತಂಗಿದರು.(3ನೇ ಮಾರ್ಚ್), ಮುಂದಕ್ಕೆ ಧಾರವಾಡ, ಮರೆವಾಡ, ಅಮ್ಮನಭಾವಿ, ಮೊರಬ, ಹಾರೋಬೀಡಿ, ಇನಾಂ ಹೊಂಗಲ, ಉಪ್ಪಿನ ಬೆಟಗೇರಿ, ಹಿರೇಹುಲ್ಲೇಕೆರೆ, ಸೌಂದತ್ತಿ, ಗೂರ್ಲಹೊಸೂರು, ಬೈಲಹೊಂಗಲ, ಸಂಪಗಾವ್ ಮತ್ತು ಬಾಗೇವಾಡಿಗಳಿಗೆ ಭೇಟಿ ನೀಡಿ (4ನೇ ಮಾರ್ಚ್) ಬೆಳಗಾವಿಯಲ್ಲಿ ತಂಗಿದರು (4-5ನೇ ಮಾರ್ಚ್).ಮರುದಿನ ತೊಂಡೆಕಟ್ಟೆಗೆ ಭೇಟಿಕೊಟ್ಟು ಬೆಳಗಾವಿಗೆ ಹಿಂತಿರುಗಿದರು. (6ನೇ ಮಾರ್ಚ್) ಯಮಕನಮರಡಿ, ವಂಟಮುರಿ, ಹುಕ್ಕೇರಿ, ಗೋಕಾಕ್ ಮತ್ತು ಸಂಕೇಶ್ವರ; ಮಹಾರಾಷ್ಟ್ರದಲ್ಲಿರುವ ಗಡಿಹಿಂಗಲಗಾ ಮತ್ತು ಹತ್ತಿಕಣಲೆಗಳಿಗೆ ಭೇಟಿ ನೀಡಿದರು. ನಿಪ್ಪಾಣಿ, ಭೋಜ, ಹಾವಿನಹಾಳ, ಕೊತ್ತಹಳ್ಳಿ, ಧೋಲಗರವಾಡಿ, ಚಿಕ್ಕೋಡಿ, ಅಂಕಲಿಗಳಿಗೆ ಭೇಟಿ ನೀಡಿ ಶೇಡಬಾಳದಲ್ಲಿ ತಂಗಿದರು(7ನೇ ಮಾರ್ಚ್); ಮಾರ್ಚ್ 8ರಂದು, ಮಂಗಸೂಳಿ, ಬನಹಟ್ಟಿ, ಅಥಣಿ, ಹೊನ್ನವಾಡ, ತಿಕೋಟಾ, ತೊರವಿ, ಬಿಜಾಪುರ ಮತ್ತು ಇಳಕಲ್‌ಗಳಿಗೆ ಭೇಟಿನೀಡಿ ಜೋರಾಪುರದ ಮೂಲಕ ಹೈದರಾಬಾದ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಈ ಎರಡು ತಿಂಗಳ ಕಾಲದ ಪ್ರವಾಸ, ಸಾಮಾಜಿಕ ಎಚ್ಚರವನ್ನು ಉಂಟುಮಾಡುವುದರ ಜೊತೆಗೆ ದಲಿತರನ್ನು ಹರಿಜನರೆಂದು ಕರೆಯುವ ಮೂಲಕ ಆ ವರ್ಗಕ್ಕೆ ಆತ್ಮಸ್ಥೈರ್ಯವನ್ನೂ ನೈತಿಕ ಧೈರ್ಯವನ್ನೂ ಒದಗಿಸಿತು.

 

 

ಗಾಂಧೀಜಿಯ ಆನಂತರದ ಭೇಟಿಗಳು (1936 ಮತ್ತು 1937):

ಮುಂದೆ 1936ರಲ್ಲಿ ವಿಪರೀತ ರಕ್ತದ ಒತ್ತಡದಿಂದ ಗಾಂಧೀಜಿ ಮತ್ತೆ ಅನಾರೋಗ್ಯಕ್ಕೆ ಒಳಗಾದರು.ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಯಿತು. ಆದ್ದರಿಂದ ಅವರು 1936ರ ಮೇ ತಿಂಗಳಲ್ಲಿ ನಂದಿಬೆಟ್ಟಕ್ಕೆ ಬಂದು ತಂಗಿದರು.ಅಲ್ಲಿದ್ದ ಅವಧಿಯಲ್ಲಿ (ಮೇ 11 ರಿಂದ 30ರವರೆಗೆ) ಅವರು ಬಹುಬೇಗ ಚೇತರಿಸಿಕೊಂಡರು. 31ರ ಮೇ, ನಂದಿಯಿಂದ ಹೊರಟು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ, ಬಂಗಾರಪೇಟೆ ಮತ್ತು ಕೆಜಿಎಫ್‌ಗಳಿಗೆ ಭೇಟಿ ನೀಡಿ ಸಭೆ ನಡೆಸಿ, ದೇಣಿಗೆ ಸ್ವೀಕರಿಸಿ ಮಾಲೂರಿನ ಮೂಲಕ ಬೆಂಗಳೂರನ್ನು ತಲುಪಿದರು. ಅಲ್ಲಿಂದಾಚೆಗೆ 10-06-1936ರವರೆಗೆ ಬೆಂಗಳೂರಿನಲ್ಲಿದ್ದು, ಕೆಂಗೇರಿಗೆ ಭೇಟಿ ನೀಡಿದ ನಂತರ 11-06-1936ರಂದು ಮದ್ರಾಸಿಗೆ ತೆರಳಿದರು. ಇದು ಬೆಂಗಳೂರಿಗೆ ಹಾಗೂ ಮೈಸೂರು ಸಂಸ್ಥಾನಕ್ಕೆ ಅವರು ನೀಡಿದ ಕೊನೆಯ ಭೇಟಿಯಾಗಿತ್ತು. ಆದರೆ ಮುಂಬೈ ಪ್ರಾಂತದ ಬೆಳಗಾವಿ ಜಿಲ್ಲೆಯ ಪ್ರಮುಖ ಖಾದಿ ಕೇಂದ್ರವಾಗಿದ್ದ ಹುದಲಿ ಬೆಳಗಾವಿ ಜಿಲ್ಲೆಗೆ ಖಾದಿ ವಸ್ತು ಪ್ರದರ್ಶನಾಲಯವನ್ನು ಉದ್ಘಾಟಿಸಲು ಗಾಂಧೀಜಿ 1937ರ ಏಪ್ರಿಲ್ ತಿಂಗಳಲ್ಲಿ ಬಂದಿದ್ದರು.ಅಲ್ಲಿ ಅವರು ಏಪ್ರಿಲ್ 16ರಿಂದ 21ರವರೆಗೆ ತಂಗಿದ್ದರು.ಇದು ಅವರ ಕರ್ನಾಟಕದ ಕೊನೆಯ ಭೇಟಿಯಾಗಿತ್ತು.ಆನಂತರ ಅವರು 1948ರಲ್ಲಿ ಮರಣ ಹೊಂದುವವರೆಗೂ ತಮಗೆ ಮೆಚ್ಚಿಗೆಯಾಗಿದ್ದ ಕರ್ನಾಟಕ ಪ್ರಾಂತಕ್ಕೆ ಭೇಟಿ ನೀಡಲು ಸಾಧ್ಯವಾಗಲೇ ಇಲ್ಲ. ಹೀಗೆ, ಗಾಂಧೀಜಿಯವರು ಕರ್ನಾಟಕದ ವಿವಿಧ ಭಾಗಗಳಿಗೆ ನೀಡಿದ ಈ ಭೇಟಿಗಳು ಕರ್ನಾಟಕದ ಜನತೆಗೆ ಖಂಡಿತವಾಗಿಯೂ ಸ್ಫೂರ್ತಿ, ಪ್ರೇರಣೆ ನೀಡಿದವು.

 

ಧ್ವಜ ಸತ್ಯಾಗ್ರಹ:

ಇವೆಲ್ಲದರ ನಡುವೆ ಮೈಸೂರು ಸಂಸ್ಥಾನದಲ್ಲಿ 1937ರವರೆಗೆ ಯಾವ ಸತ್ಯಾಗ್ರಹಗಳು ನಡೆಯದೇ ಹೋದರೂ, ಆ ವರ್ಷದಲ್ಲಿ ಮೈಸೂರು ಸಂಸ್ಥಾನದಲ್ಲಿ, ಮೈಸೂರು ಕಾಂಗ್ರೆಸ್ ಸ್ಥಾಪನೆಗೊಂಡು, ಏಪ್ರಿಲ್ 1938ರಲ್ಲಿ ಮಂಡ್ಯ ಜಿಲ್ಲೆಯ ಶಿವಪುರ(ಮದ್ದೂರು ತಾಲೂಕು)ದಲ್ಲಿ ಮೊದಲನೆಯ ಅಧಿವೇಶನವನ್ನು ನಡೆಸುವುದರ ಮೂಲಕ, ಧ್ವಜ ಸತ್ಯಾಗ್ರಹವನ್ನು ಆರಂಭಿಸಿತು.ಇದಾದ ನಂತರ ಪೋಲಿಸರ ಗೋಲಿಬಾರಿಗೆ ಹತ್ತು ಜನ ಅಮಾಯಕರು ಬಲಿಯಾದ ಅಹಿತಕರ ಘಟನೆ, 25 ಏಪ್ರಿಲ್ 1938ರಂದು ವಿದುರಾಶ್ವತ್ಥದಲ್ಲಿ ನಡೆಯಿತು. ಇದರ ಜೊತೆಗೇ ಅರಣ್ಯ ಸತ್ಯಾಗ್ರಹ ಹಾಗೂ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ  1939ರಲ್ಲಿ ಚಳವಳಿಗಳು ನಡೆದವು.ಚಳವಳಿಯ ಸಂದರ್ಭದಲ್ಲಿ 1200ಕ್ಕೂ ಹೆಚ್ಚು ಮಂದಿಯನ್ನು ಸೆರೆಹಿಡಿಯಲಾಗಿತ್ತು. ಟಿ. ಸಿದ್ಧಲಿಂಗಯ್ಯ, ಹೆಚ್.ಟಿ.ದಾಸಪ್ಪ, ಎಸ್. ಸಿದ್ದಯ್ಯ, ಕೆ.ಸಿ.ರೆಡ್ಡಿ, ಎಚ್. ಕೆ. ವೀರಣ್ಣಗೌಡ, ಕೆ.ಟಿ. ಭಾಷ್ಯಂ, ಟಿ. ಸುಬ್ರಹ್ಮಣ್ಯಂ, ಕೆ.ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಎಂ.ಎನ್. ಜೋಯಿಸ್, ಶ್ರೀಮತಿ ಯಶೋಧರಮ್ಮ ದಾಸಪ್ಪ ಮೊದಲಾದವರು ಮೈಸೂರು ಕಾಂಗ್ರೆಸ್‌ನ ಪ್ರಮುಖ ನೇತಾರರಾಗಿದ್ದರು. ಹಾಗೆಯೇ 1938ರಲ್ಲಿ ಹೈದರಾಬಾದ್ ಕಾಂಗ್ರೆಸ್‌ನ ಸ್ಥಾಪನೆಯಾಗಿ, ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಅಲ್ಲಿಯೂ ಬಲವಾಗಿ ಒತ್ತಾಯಿಸಲಾಯಿತು. ಕೆ.ಜಿ.ಎಫ್.ನಲ್ಲೂ 1939ರಲ್ಲಿ ಈ ಸತ್ಯಾಗ್ರಹವನ್ನು ಆರಂಭಿಸಿದಾಗ ಗಣಿ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಯಿತು. ಇದೇ ರೀತಿ ಕರ್ನಾಟಕದ ಇತರ ರಾಜಸಂಸ್ಥಾನಗಳಲ್ಲೂ ಜವಾಬ್ದಾರಿ ಸರ್ಕಾರಕ್ಕಾಗಿ ಬಲವಾದ ಒತ್ತಾಯಗಳೂ, ಚಳವಳಿಗಳೂ ರಾಷ್ಟ್ರೀಯ ಕಾಂಗ್ರೆಸ್‌ನ ಮಾರ್ಗದರ್ಶನದಲ್ಲಿ ನಡೆದವು.

 

ಭಾರತ ಬಿಟ್ಟು ತೊಲಗಿ ಚಳವಳಿ 1942-43:

ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಕರ್ನಾಟಕ ಹಿಂದೆಂದೂ ಕಾಣದ ಜಾಗೃತಿಯನ್ನು ಕಂಡಿತು.ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮುಷ್ಕರ ಹೂಡಿದರು.ಬೆಂಗಳೂರು ಮತ್ತು ಇತರ ಪ್ರದೇಶಗಳ 30,000ಕ್ಕೂ ಹೆಚ್ಚು ಕಾರ್ಮಿಕರು ಎರಡು ವಾರಗಳಿಗೂ ಹೆಚ್ಚುಕಾಲ ಕೆಲಸವನ್ನು ಸ್ಥಗಿತಗೊಳಿಸಿದರು.ಪೋಲಿಸರು ನಡೆಸಿದ ಗೋಲಿಬಾರಿನಲ್ಲಿ 50ಕ್ಕೂ ಹೆಚ್ಚು ಮಂದಿ (ಬೆಂಗಳೂರಿನಿಂದಲೇ 11 ಮಂದಿ) ಬಲಿಯಾದರು. ಬೈಲಹೊಂಗಲದಿಂದ ಏಳು, ದಾವಣಗೆರೆಯಿಂದ ಏಳು ಮತ್ತು ಶ್ರವಣಬೆಳಗೊಳದಿಂದ ಆರು ಮಂದಿ, ಭಾರತಬಿಟ್ಟು ತೊಲಗಿ ಚಳವಳಿಯಲ್ಲಿ ಹುತಾತ್ಮರಾದರು. ಅದರಲ್ಲೂ ಹಾವೇರಿ ಜಿಲ್ಲೆಯ ಮೈಲಾರ ಮಹಾದೇವಪ್ಪ ಮತ್ತು ಅವನ ಇಬ್ಬರು ಸಹಚರರ ಸಾವು ತುಂಬಾ ದಾರುಣವಾಗಿತ್ತು. ಬ್ರಿಟಿಷರ ವಿರುದ್ಧ ಅಂಕೆಯಿಲ್ಲದ ಕೋಪ ಪ್ರದರ್ಶಿಸಿದ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಐದು ಮಂದಿ ವೀರರಿಗೆ ಗಲ್ಲು ಶಿಕ್ಷೆಯಾಯಿತು. 1942-43ರಲ್ಲಿ ಕರ್ನಾಟಕದಿಂದ 15,000 ಮಂದಿ (ಇದರಲ್ಲಿ 10,000 ಮಂದಿ ಮೈಸೂರು ಸಂಸ್ಥಾನದವರು) ಸೆರೆಮನೆಗೆ ಹೋದರು. ಧಾರವಾಡ, ಬಿಜಾಪುರ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಪ್ರದೇಶಗಳು, ಜಯಪ್ರಕಾಶ ನಾರಾಯಣರಿಂದ ‘ಕರ್ನಾಟಕಶೈಲಿ’ ಎಂದೇ ಹೊಗಳಿಸಿಕೊಂಡಿದ್ದ, ದೇಶಭಕ್ತರ ವ್ಯವಸ್ಥಿತ ಗುಂಪುಗಳಿಂದ ವಿರೋಚಿತ ವಿಧ್ವಂಸಕ ಹಾಗೂ ಬುಡಮೇಲು ಕೃತ್ಯಗಳನ್ನು ಕಂಡವು.1947ರಲ್ಲಿ ಭಾರತ ಸ್ವತಂತ್ರವಾದರೂ, ಹೈದರಾಬಾದ್ ಕರ್ನಾಟಕ ಪ್ರಾಂತವನ್ನು 1948ರ ಪೋಲಿಸ್ ಕಾರ್ಯಾಚರಣೆಯ ನಂತರವೇ ಬಿಡಿಸಿಕೊಳ್ಳಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಸಭೆಗಳನ್ನು ಯೋಜಿಸಿದವರಲ್ಲಿ ಸ್ವಾಮಿ ರಮಾನಂದತೀರ್ಥ, ಜನಾರ್ಧನರಾವ್ ದೇಸಾಯಿ, ಜಿ. ರಾಮಾಚಾರ್, ಕೃಷ್ಣಾಚಾರ್ಯಜೋಷಿ, ಎ. ವಮೂರ್ತಿಸ್ವಾಮಿ, ಮತ್ತು ಶರಣಗೌಡ ಇನಾಮ್‌ದಾರ್ ಹೈದರಾಬಾದ್ ಕರ್ನಾಟಕದ ಪ್ರಮುಖ ನೇತಾರರಾಗಿದ್ದರು.

 

ಮೈಸೂರು ಚಲೋ ಚಳವಳಿ (1947)

ಇದೇ ಸಂದರ್ಭದಲ್ಲಿ ಮೈಸೂರು ರಾಜ್ಯದಲ್ಲಿ ‘ಜವಾಬ್ದಾರಿ ಸರ್ಕಾರ’ವನ್ನು ಸ್ಥಾಪಿಸಲು ‘ಮೈಸೂರು ಚಲೊ’ ಚಳವಳಿಯನ್ನು ಹಮ್ಮಿಕೊಳ್ಳಲಾಯಿತು. ಆ ಚಳವಳಿ ಸಫಲವಾಗಿ ಅಕ್ಟೋಬರ್ 1947ರಲ್ಲಿ ಕೆ.ಚೆಂಗಲರಾಯ ರೆಡ್ಡಿಯವರ ಮುಖ್ಯಮಂತ್ರಿತ್ವದಲ್ಲಿ, ಸಚಿವ ಸಂಪುಟವು ಅಧಿಕಾರಕ್ಕೆ ಬಂದಿತು.ಮುಂದೆ, ಅವರ ನಂತರ ಕೆ. ಹನುಮಂತಯ್ಯ (1952) ಮತ್ತು ಕಡಿದಾಳ್ ಮಂಜಪ್ಪ (1956) ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದರು. 20ನೆಯ ಶತಮಾನದ ಅತಿ ದೊಡ್ಡ ಕಲಾತ್ಮಕ ವಾಸ್ತು, ‘ವಿಧಾನಸೌಧ’ದ ನಿರ್ಮಾಣದ ಕೀರ್ತಿ ಕೆ. ಹನುಮಂತಯ್ಯನವರಿಗೆ ಸಲ್ಲುತ್ತದೆ. ತರುಣ ಕರ್ನಾಟಕ (ಹುಬ್ಬಳ್ಳಿ), ಸಂಯುಕ್ತ ಕರ್ನಾಟಕ (ಮೊದಲು ಬೆಳಗಾವಿ, ಆನಂತರ ಹುಬ್ಬಳ್ಳಿ), ಜನವಾಣಿ, ತಾಯಿನಾಡು, ನವಜೀವನ, ವೀರಕೇಸರಿ, ವಿಶ್ವಕರ್ನಾಟಕ (ಎಲ್ಲ ಬೆಂಗಳೂರಿನಿಂದ), ಮಡಿಕೇರಿಯಿಂದ ‘ಕೊಡಗು’ (ವಾರಪತ್ರಿಕೆ), ಮೊದಲಾದ ದಿನಪತ್ರಿಕೆಗಳು, ಈ ಚಳವಳಿಗಳಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವು. ಸ್ತ್ರೀಯರೂ ಮುಂಚೂಣಿಯಲ್ಲಿ ನಿಂತು ಮೆರವಣಿಗೆಗಳಲ್ಲಿ ಭಾಗವಹಿಸಿದರು. ಸಾರಾಯಿ-ಸೇಂದಿ ಅಂಗಡಿಗಳ ಮುಂದೆ ವ್ಯಾಪಾರಿಗಳ ವಿರುದ್ಧ ಪಿಕೆಟಿಂಗ್ ನಡೆಸಿ, ಲಾಠಿ ಏಟಿನ ರುಚಿಯನ್ನು ಅನುಭವಿಸಿ, ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಜೈಲಿಗೂ ಹೋದರು. ಈ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ, ಉಮಬಾಯಿ ಕುಂದಾಪುರ, ಕೃಷ್ಣಾಬಾಯಿ ಪಂಜೇಕರ್, ಯಶೋಧರ ದಾಸಪ್ಪ, ಸಿದ್ದಮ್ಮ, ಬಳ್ಳಾರಿ ಗೌರಮ್ಮ ಮುಂತಾದ ಮಹಿಳೆಯರನ್ನು ಹೆಸರಿಸಬಹುದಾಗಿದೆ.

ಕರ್ನಾಟಕ ಏಕೀಕರಣ

1799ರಲ್ಲಿ ಟಿಪ್ಪೂವಿನ ಮರಣಾನಂತರ ಬ್ರಿಟಿಷರು. ಕನ್ನಡ ನಾಡನ್ನು ಮೂರು ಭಾಗವನ್ನಾಗಿ ಮಾಡಿದರು. ಟಿಪ್ಪೂವಿನ ಮೇಲಿನ ಯುದ್ಧದಲ್ಲಿ ಆಗಿದ್ದ ಒಪ್ಪಂದದಂತೆ ಬ್ರಿಟಿಷರು ಹೈದರಾಬಾದಿನ ನಿಜಾಮ ಮತ್ತು ಮರಾಠರಿಗೂ ಕರ್ನಾಟಕ ರಾಜ್ಯದಲ್ಲಿ ಪಾಲು ನೀಡಬೇಕಾಗಿತ್ತು. ಒಂಬತ್ತು ಜಿಲ್ಲೆಗಳಿಂದ ಕೂಡಿದ ಹಳೆಯ ಮೈಸೂರು ಸಂಸ್ಥಾನವನ್ನು ಮೈಸೂರು ಅರಸರಿಗೂ, ಈಶಾನ್ಯ ಭಾಗದ ಕನ್ನಡ ತೆಲಗು, ಮರಾಠಿ, ಉರ್ದು ಭಾಷಿಕ ಪ್ರದೇಶಗಳಾದ ರಾಯಚೂರು, ಕಲಬುರ್ಗಿ, ಲಿಂಗಸೂಗೂರು, ಬೀದರ್, ಉಸ್ಮಾನಾಬಾದ್ ಪ್ರದೇಶಗಳನ್ನು ಹೈದರಾಬಾದ್ ನಿಜಾಮರಿಗೂ ಹಂಚಿಕೆ ಮಾಡಿದರು.

ದಕ್ಷಿಣ ಕನ್ನಡ, ಬಳ್ಳಾರಿ, ನೀಲಗಿರಿ, ಕೊಳ್ಳೇಗಾಲ, ಹೊಸೂರು ಪ್ರದೇಶಗಳನ್ನು ತಮ್ಮದೇ ಆದ ಮದ್ರಾಸ್ ಸರ್ಕಾರಕ್ಕೂ ಸೇರಿಸಿಕೊಂಡರು. ಕೊಡಗಿನ ಅರಸರ ಪತನದ ನಂತರ ಕೊಡಗುರಾಜ್ಯವು ಸಹ ಬ್ರಿಟಿಷರಿಗೆ ಸೇರಿತು. ಅದಕ್ಕೆ ಅವರು ಪ್ರತ್ಯೇಕ ರಾಜ್ಯದ ಸ್ಥಾನ ನೀಡಿದರು. ತುಂಗಭದ್ರಾ ನದಿಯ ಉತ್ತರಕ್ಕಿದ್ದ ಕರ್ನಾಟಕದ ಬಹುಭಾಗ ಮರಾಠಾ ಪೇಶ್ವೆಗಳೇ ದೊರೆಯಿತು. ಕ್ರಿ.ಶ 1818ರವರೆಗೆ ಮರಾಠಾ ಪೇಶ್ವೇಗಳೇ ಈ ಪ್ರದೇಶವನ್ನು ಆಳುತ್ತಿದ್ದರು. ಆದರೆ ಪೇಶ್ವೆಗಳ ಆಡಳಿತ ಕೊನೆಗೊಂಡಾಗ, ಅವೆಲ್ಲವೂ ಬ್ರಿಟಿಷರ ವಶವಾಗಿ ಮುಂಬಾಯಿ ಪ್ರಾಂತ್ಯಕ್ಕೆ ಸೇರಿದವು.

ಈ ಪ್ರದೇಶದಲ್ಲಿ ಬ್ರಿಟಿಷರು 1881ರ ಹೊತ್ತಿಗೆ ಧಾರವಾಡ, ಬಿಜಾಪುರ, ಬೆಳಗಾವಿ, ಕನ್ನಡ (ಉತ್ತರ ಕನ್ನಡ) ಜಿಲ್ಲೆಗಳನ್ನು ರಚಿಸಿ, ತಮ್ಮದೇ ಆದ ಮುಂಬಾಯಿ ಪ್ರಾಂತ್ಯಕ್ಕೆ ಸೇರಿಸಿಕೊಂಡರು. ಕರ್ನಾಟಕದ ಉತ್ತರ ಭಾಗಗದಲ್ಲಿ ಇದ್ದ ಅನೇಕ ಸಣ್ಣ ಸಣ್ಣ ಕನ್ನಡದ ಸಂಸ್ಥಾನಗಳ ಆಡಳಿತವನ್ನು ಮರಾಠಿ ಸಂಸ್ಥಾನಿಕರಿಗೇ ವಹಿಸಿದರು. ಈ ಸಂಸ್ಥಾನಗಳಲ್ಲಿ ಕನ್ನಡ ಭಾಷಿಕರೇ ಬಹುಸಂಖ್ಯಾತರಾಗಿದ್ದರು, ಆದರೆ ಆಳ್ವಿಕೆ ನಡೆಸುವ ಸಂಸ್ಥಾನಿಕರಲ್ಲಿ ಹೆಚ್ಚಿನವರು ಮರಾಠರೇ ಆಗಿದ್ದರು. ಮರಾಠಿ ಮತ್ತು ಬ್ರಿಟಿಷ್ ಅಧಿಕಾರಿಗಳು ಆಡಳಿತ ಸೂತ್ರ ಹಿಡಿದಿದ್ದರು. ಹೀಗಾಗಿ ಅವರು ಕನ್ನಡವನ್ನು ಕಡೆಗಣಿಸಿ, ಸರ್ಕಾರದ ವ್ಯವಹಾರಗಳಲ್ಲಿ, ವಿದ್ಯಾಭ್ಯಾಸದಲ್ಲಿ ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಿದರು. ಜನರು ಗತ್ಯಂತರವಿಲ್ಲದೆ ಮರಾಠಿ ಕಲಿಯಬೇಕಾಯಿತು. ಇದರಿಂದ ಉತ್ತರ ಭಾಗದಲ್ಲಿ ಮರಾಠಿಯೂ, ಹಳೆಯ ಮೈಸೂರು ಸಂಸ್ಥಾನದಲ್ಲಿ ಕನ್ನಡ ಭಾಷೆಯೂ ಉಳಿದು ಬೆಳೆಯಲು ಕಾರಣವಾಯಿತು. ಹೈದರಾಬಾದ್ ಪ್ರಾಂತ್ಯದಲ್ಲಿ ಕನ್ನಡವೂ ಸೇರಿದಂತೆ ಇತರ ಭಾಷೆಗಳು ಕಡೆಗಣಿಸಲ್ಪಟ್ಟು, ಉರ್ದು ರಾಜ್ಯಭಾಷೆಯಾಯಿತು. ಮುಂಬಯಿ ಸರ್ಕಾರಕ್ಕೆ ಸೇರಿದ ಜಿಲ್ಲೆಗಳಲ್ಲಿ ಮರಾಠಿ ಪ್ರಾಬಲ್ಯದ ನಡುವೆಯೂ ಬ್ರಿಟಿಷ್ ಮತ್ತು ಕನ್ನಡದ ಅಧಿಕಾರಿಗಳ ನೆರವಿನಿಂದ ಕನ್ನಡ ಭಾಷೆಯು ಉಳಿದು ಬಂದಿತು. ದಕ್ಷಿಣ ಕನ್ನಡ, ಕೊಡಗಿನಲ್ಲಿ ಕನ್ನಡ ಭಾಷೆ ಪ್ರಾಧಾನ್ಯತೆ ಪಡೆಯಿತು. ಕೊಳ್ಳೇಗಾಲ ಪ್ರದೇಶದಲ್ಲಿ ತಮಿಳು ಭಾಷೆ ಸಂಪರ್ಕ ಮತ್ತು ಆಡಳಿತ ಭಾಷೆಯಾಯಿತು.

 

ಹರಿದು ಹಂಚಿ ಹೋಗಿದ್ದ ಕರ್ನಾಟಕ

ಬ್ರಿಟಿಷರ ಕಾಲದಲ್ಲಿ ವಸಾಹತು ನೀತಿ ಮತ್ತು ಆಡಳಿತದ ಅನುಕೂಲದ ದೃಷ್ಟಿಯಿಂದ ಉತ್ತರ ಕರ್ನಾಟಕವು ಈ ಕೆಳಗೆ ನಮೂದಿಸಿದಂತೆ, ಸುಮಾರು 20 ಘಟಕಗಳಲ್ಲಿ ಹರಿದು ಹಂಚಿಹೋಗಿತ್ತು. ಈ ಹಂಚಿಕೆಯಲ್ಲಿ ಭಾಷೆಗೆ, ಜನರ ಅಭೀಪ್ಸೆ ಆಕಾಂಕ್ಷೆಗಳಿಗೆ ಯಾವುದೇ ಪ್ರಾಧಾನ್ಯತೆಯೂ ಇರಲಿಲ್ಲ. ಸ್ಥಳೀಯವಾಗಿ ತಮಗೆ ಅನುಕೂಲಕರವಾದ ರೀತಿಯಲ್ಲಿ ನಡೆದುಕೊಂಡು ಕಂಪನಿ ಸರ್ಕಾರಕ್ಕೆ ರಾಜರಿಗೆ, ದೇಸಗತಿಯವರಿಗೆ ಬ್ರಿಟಿಷರು

1) ಮದ್ರಾಸ್ ಪ್ರಾಂತ್ಯ-ದಕ್ಷಿಣ ಕನ್ನಡ, ಬಳ್ಳಾರಿ, ನೀಲಗಿರಿ ಜಿಲ್ಲೆಗಳೂ, ಕೊಳ್ಳೇಗಾಲ, ಹೊಸೂರು, ಮಡಕಶಿರಾ ತಾಲೂಕುಗಳು,

2) ಮುಂಬಾಯಿ ಪ್ರಾಂತ್ಯ-ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬೆಳಗಾವಿ ಜಿಲ್ಲೆಗಳು, ಸೊಲ್ಲಾಪುರ ಮತ್ತು ಮಂಗಳವೇಡೆ ಪ್ರಾಂತ್ಯಗಳು,

3) ಹೈದರಾಬಾದ್ ಸಂಸ್ಥಾನ- ಗುಲ್ಬರ್ಗಾ, ಬೀದರ್, ರಾಯಚೂರು ಜಿಲ್ಲೆಗಳು

4) ಕೊಡಗು ಜಿಲ್ಲೆ.

5) ಕೊಲ್ಲಾಪುರ ಸಂಸ್ಥಾನ –ರಾಯ್‌ಭಾಗ್, ಕಡಕೊಳ, ತೋರಗಲ್ಲು,

6) ಸಾಂಗಲಿ ಸಂಸ್ಥಾನ –ತೇರದಾಳ, ಶಹಪೂರ, ದೊಡ್ಡವಾಡ, ಶಿರಹಟ್ಟಿ,

7) ದೊಡ್ಡ ಮೀರಜ್ ಸಂಸ್ಥಾನ, ಲಕ್ಷೆö್ಮÃಶ್ವರ,

8) ಚಿಕ್ಕ ಮೀರಜ್ ಸಂಸ್ಥಾನ- ಬುಧಗಾಂವ್, ಗುಡಗೇರಿ,

9) ಹಿರಿಯ ಕುಂದರವಾಡ ಸಂಸ್ಥಾನ,

10) ಕಿರಿಯ ಕುಂದರವಾಡ ಸಂಸ್ಥಾನ

11)ಜಮಖಂಡಿ ಸಂಸ್ಥಾನ- ಕುಂದಗೋಳ್, ಚಿಪ್ಪಲಕಟ್ಟಿ,

12) ಮುಧೋಳ್ ಸಂಸ್ಥಾನ,

13)ಜತ್ ಸಂಸ್ಥಾನ,

14)ಅಕ್ಕಲಕೋಟೆ ಸಂಸ್ಥಾನ,

15)ಔಂಧ್ ಸಂಸ್ಥಾನ,

16) ರಾಮದುರ್ಗ ಸಂಸ್ಥಾನ,

17)ಸೊಂಡೂರು ಸಂಸ್ಥಾನ,

18)ಸವಣೂರು ನವಾಬರ ಸಂಸ್ಥಾನ,

19) ಬೆಂಗಳೂರು ದಂಡು ಪ್ರದೇಶ,

20) ಬೆಳಗಾವಿ ದಂಡು ಪ್ರದೇಶ,

21) ಬಳ್ಳಾರಿ ದಂಡು ಪ್ರದೇಶ

ಹರಿದು ಹಂಚಿಹೋಗಿದ್ದ ಕನ್ನಡ ನಾಡು ಒಂದಾಗಿ ಏಕೀಕೃತ ಕರ್ನಾಟಕ ರಾಜ್ಯವಾಗಲು ಹಲವಾರು ಸಂಘ ಸಂಸ್ಥೆಗಳು, ಅವುಗಳನ್ನು ಕಟ್ಟಿದ ನೂರಾರು ಸಾರ್ವಜನಿಕರು ತ್ರಿಕರಣಪೂರ್ವಕವಾಗಿ, ನಾಡು ನುಡಿಯ ಅಭಿಮಾನದಿಂದ ಅಹರ್ನಿಶಿ ಶ್ರಮಿಸಿದ್ದಾರೆ. ಸುಮಾರು 1800ರಲ್ಲಿ ಬಳ್ಳಾರಿಯ ಕಲೆಕ್ಟರ್ ಆಗಿದ್ದ ಥಾಮಸ್ ಮನ್ರೋ ಉತ್ತರ ಕರ್ನಾಟಕ ಪ್ರದೇಶವು ಮರಾಠಾ ಪ್ರದೇಶವಲ್ಲ, ಇಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ, ಆದುದರಿಂದ ಈ ಸೀಮೆಯನ್ನು ಮತ್ತು ಸೊಂಡೂರು ಸೀಮೆಯನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸುವುದು ಒಳ್ಳೆಯದೆಂದು ಕಂಪನಿ ಸರ್ಕಾರಕ್ಕೆ ವರದಿಯನ್ನು ನೀಡಿದರು. ಆದರೆ 1830ರಲ್ಲಿ ಕಂಪನಿ ರ್ಕಾರವು ಈ ಪ್ರದೇಶವನ್ನು ಮುಂಬಾಯಿ ಪ್ರಾಂತ್ಯಕ್ಕೆ ಸೇರಿಸಿ, ಈ ಭಾಗದ ಡಳಿತ ಭಾಷೆ ಕನ್ನಡವೇ ಆಗಿರಬೇಕೆಂದು 1835ರಲ್ಲಿ ಆದೇಶ ಹೊರಡಿಸಿತು. ಆದರೆ ಅಧಿಕಾರಿಗಳು ಮರಾಠಿಗರು ಮತ್ತು ಆಂಗ್ಲರು ಆಗಿದ್ದರಿಂದ ಈ ಆದೇಶ ಸರಿಯಾಗಿ ಜಾರಿಗೆ ಬರಲಿಲ್ಲ. ಕನ್ನಡಿಗರಲ್ಲಿ ಕರ್ನಾಟಕತ್ವ ಜಾಗೃತವಾಗಲು ಈ ಭಾಗದ ಅನೇಕ ಆಂಗ್ಲ ಮತ್ತು ಕನ್ನಡದ ಅಧಿಕಾರಿಗಳು, ಮಿಷನರಿಗಳು, ಕನ್ನಡ ವಿದ್ವಾಂಸರು, ಕನ್ನಡ ಸಂಘ ಸಂಸ್ಥೆಗಳನ್ನು ಕಟ್ಟಿ ಕಾರಣಕರ್ತರಾದರು.

ಕರ್ನಾಟಕದ ಹುಲಿ ಡೆಪ್ಯುಟಿ ಚನ್ನಬಸಪ್ಪನವರು, ಸರ್ ವಾಲ್ಟರ್ ಎಲಿಯಟ್, ರಸೆಲ್, ಹೂಲಿ, ವಿರೂಪಾಕ್ಷಪ್ಪ, ಮೊದಲಾದ ಅಧಿಕಾರಿಗಳ ಪ್ರಯತ್ನದಿಂದ ಉತ್ತರ ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಆರಂಭವಾದವು. ಇವರ ಪ್ರಯತ್ನದ ಫಲವಾಗಿ ಕನ್ನಡ ಶಿಕ್ಷಕರನ್ನು ತಯಾರು ಮಾಡಲು 1856ರಲ್ಲಿ ಧಾರವಾಡದಲ್ಲಿ ನಾರ್ಮಲ್ ಸ್ಕೂಲ್ ಆರಂಭವಾಯಿತು. ಡೆಪ್ಯುಟಿ ಚನ್ನಪ್ಪನವರೇ ಈ ಶಾಲೆಯ ಮೊದಲ ಪ್ರಾಂಶುಪಾಲರಾಗಿ ಬಂದು ಶಿಕ್ಷಣಕ್ರಮದಲ್ಲಿ ಕನ್ನಡ ಭಾಷೆಯ ಬೇರೂರಿ ತಲೆಯೆತ್ತಲು ಕಾರಣರಾದರು.

 

ಕರ್ಣಾಟಕ ವಿದ್ಯಾವರ್ಧಕ ಸಂಘ:

ಕನ್ನಡವು ಶಿಕ್ಷಣ ಮಾಧ್ಯಮವಾಗಿ ಕನ್ನಡಿಗರಲ್ಲಿ ಜಾಗೃತಿ ಮೂಡಲು ಕಾರಣವಾದುದು ಒಂದೆಡೆಯಾದರೆ, ಇನ್ನೊಂದೆಡೆ, ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮೊದಲಾದವುಗಳ ಬಗ್ಗೆ ಕನ್ನಡ ಭಾಷಿಕರಲ್ಲಿ ಅಭಿಮಾನ ಮೂಡಿಸಿ, ಕನ್ನಡಿಗರನ್ನು ಒಂದಾಗಿಸುವ ಪ್ರಯತ್ನಗಳ ಫಲವಾಗಿ ಧಾರವಾಡದಲ್ಲಿ “ಕರ್ನಾಟಕ ವಿದ್ಯಾವರ್ಧಕ ಸಂಘ”ವು 20-7-1890ರಂದು ಸ್ಥಾಪನೆಯಾಯಿತು. ಮುಂಬಯಿ ವಿ.ವಿ.ಯಲ್ಲಿ 1884ರಲ್ಲಿ ಕನ್ನಡ ಎಂ.ಎ. ಪದವಿ ಪಡೆದು, ಮುಖ್ಯೋಪಾಧ್ಯಾಯರಾಗಿ, ನಂತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದ ರಾಮಚಂದ್ರ ಹಣವಂತ ದೇಶಪಾಂಡೆಯವರು ಈ ಸಂಸ್ಥೆಯು ಪ್ರಾರಂಭವಾಗಲು ಕಾರಣಕರ್ತರು ಹಾಗೂ ಇದರ ಮೊದಲ ಕಾರ್ಯದರ್ಶಿಗಳು, ಕೈಕಿಣಿ ಶ್ಯಾಮರಾವ್ ಅವರು ಇದರ ಮೊದಲ ಅಧ್ಯಕ್ಷರು. ವೆಂಕಟರಂಗೋಕಟ್ಟಿ, ಗುರುಸಿದ್ಧಪ್ಪಾ ಗಿಲಗಂಚಿ, ಫ.ಗು.ಹಳಕಟ್ಟಿ, ಶಾಂತಕವಿ(ಸಕ್ಕರಿ ಬಾಳಾಚಾರ್ಯ) ದೋಂಡೋ ನರಸಿಂಹ ಮುಳಬಾಗಿಲ್, ರಾಮರಾವ್ ದೇಸಾಯಿ, ಶಾಂತವೀರಪ್ಪ ಮೆಣಸಿನಕಾಯಿ, ಮಡಿವಾಳೇಶ್ವರ ತುರಮರಿ, ವಿರೂಪಾಕ್ಷಪ್ಪ ಹೂಲಿ, ಶಿವನಪ್ಪ ದೇಸಾಯಿ ಗುರಾಚಾರ್ಯ ಮೊರಬ್, ರೊದ್ದ ಶ್ರೀನಿವಾಸರಾಯರು, ಶೇಷಗಿರಿರಾವ್ ಕೊಪ್ಪಿಕರ್, ವರುಗಳೆಲ್ಲಾ ಈ ಸಂಸ್ಥೆಯ ವ್ಯವಸ್ಥಾಪಕರಾಗಿದ್ದರು. ಈ ಸಂಸ್ಥೆಯ 1896ರ ನವೆಂಬರ್ ತಿಂಗಳಲ್ಲಿ “ವಾಗ್ಭೂಷಣ” ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ಕನ್ನಡ ಭಾಷೆ, ಸಾಹಿತ್ಯ, ಕರ್ನಾಟಕದ ಇತಿಹಾಸ, ಕರ್ನಾಟಕದ ಏಕೀಕರಣ ಮೊದಲಾದ ವಿಷಯಗಳ ಬಗ್ಗೆ ಲೇಖನಗಳನ್ನು ಪ್ರಕಟಿಸತೊಡಗಿತು. ಈ ಪತ್ರಿಕೆಯಲ್ಲಿ ಕನ್ನಡದ ಕುಲಪುರೋಹಿತರೆನಿಸಿದ ಆಲೂರು ವೆಂಕಟರಾಯರು 1907ರಲ್ಲಿ “ಕರ್ನಾಟಕವು ಒಂದಾಗದೇ ಕರ್ನಾಟಕಸ್ಥರ ಏಳಿಗೆಯು ಎಂದಿಗೂ ಸಾಧ್ಯವಾಗದು” ಎಂಬ ಧೀರೋದಾತ್ವ ಲೇಖನವನ್ನು ಪ್ರಕಟಿಸಿದರು. ಈ ಲೇಖನವೇ ಮುಂದೆ ಕರ್ನಾಟಕ ಏಕೀಕರಣದ ಬೀಜಮಂತ್ರವಾಯಿತೆಂದು ಹೇಳಬಹುದು. ಈ ಪತ್ರಿಕೆಯು 23 ವರ್ಷಗಳ ಕಾಲ ನಡೆದು ನಿಂತು ಹೋಯಿತು. ಈ ಪತ್ರಿಕೆ ಪ್ರಾರಂಭವಾದ ತಿಂಗಳಲ್ಲೇ 1956ರಲ್ಲಿ ಕರ್ನಾಟಕದ ಏಕೀಕರಣದವಾದುದು ಕಾಕತಾಳೀಯ.

ಈ ಸಂಸ್ಥೆಯು 1907ರ ಜೂನ್ ತಿಂಗಳಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳವನ್ನು ನಡೆಸಿ “ಕರ್ನಾಟಕ ಪುಸ್ತಕ ಮಾಲೆ” ಪ್ರಸಿದ್ಧ ಲೇಖಕರಿಂದ ಕೃತಿಗಳನ್ನುಬರೆಸಿ ಪ್ರಕಟಿಸಲು ತೀರ್ಮಾನಿಸಿತು. ಅದರಂತೆ ಒಟ್ಟು ಸುಮಾರು 61 ಗ್ರಂಥಗಳು ಈ ಸಂಸ್ಥೆಯಿಂದ ಪ್ರಕಟವಾದವು. 1910ರ ವೇಳೆಗೆ ಆಲೂರು ವೆಂಕಟರಾಯರು “ಕರ್ನಾಟಕ ಗತ ವೈಭವ” ಎಂಬ ಕೃತಿಯನ್ನು ಪ್ರಕಟಿಸಿದರು. ಇದು ಕನ್ನಡ ಜನತೆಯಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಜಾಗೃತಿಯನ್ನು ಮೂಡಿಸಿತು. ಈ ಗ್ರಂಥಗಳನ್ನು ಸಂಗ್ರಹಿಸಿ ಪುನರ್‌ಮುದ್ರಿಸುವ ಕೆಲಸವನ್ನು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಮಾಡಬೇಕಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮೈಸೂರು ಸಂಸ್ಥಾನದಿಂದಲೂ ಪ್ರೋತ್ಸಾಹ ದೊರೆಯಿತು. ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಅವರು ಈ ಸಂಸ್ಥೆಯ ಕಟ್ಟಡಕ್ಕೆ 6,000 ರೂ.ಗಳ ಧನಸಹಾಯ ಮಾಡಿದರು. ಕರ್ನಾಟಕ ಮಂದಿರ ಎಂಬ ಹೆಸರನ್ನು ಇಡಲಾಗಿದೆ. ಈ ಸಂಘವು ಕನ್ನಡ ನಾಡಿನ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದೆ.

 

ಕರ್ನಾಟಕ (ಕನ್ನಡ) ಸಾಹಿತ್ಯ ಪರಿಷತ್ತು

ಉತ್ತರ ಕರ್ನಾಟಕದಲ್ಲಿ ಪ್ರಖ್ಯಾತವಾಗಿದ್ದ ಕರ್ಣಾಟಕ ವಿದ್ಯಾವರ್ಧಕ ಸಂಘದಂತಹ ಒಂದು ಸಂಸ್ಥೆಯು ಮೈಸೂರು ಸಂಸ್ಥಾನದಲ್ಲಿಯೂ ಇರಬೇಕೆಂಬುದು ಇಲ್ಲಿನ ವಿದ್ವಾಂಸರ, ಜನರ ಅಪೇಕ್ಷೆಯಾಗಿತ್ತು. 1915ರಲ್ಲಿ ಕರ್ನಾಟಕದ ಸಾಹಿತಿಗಳ ಮೊದಲ ಸಭೆಯು ಹಾಸನದಲ್ಲಿ ನಡೆದು ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ನಿರ್ಣಯಿಸಿತು. ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜದ 1914ನೇ ಇಸವಿಯ ವಾರ್ಷಿಕ ಸಮ್ಮೇಳನದಲ್ಲಿ ಇಂತಹ ಒಂದು ಸಂಸ್ಥೆಯ ಸ್ಥಾಪನೆಯ ಬಗ್ಗೆ “ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತವೆಂದು ಸಂಪದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು” ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಈ ನಿರ್ಣಯವನ್ನು ಅನುಸರಿಸಿ ಬೆಂಗಳೂರಿನ ಗೌರ್ನಮೆಂಟ್ ಹೈಸ್ಕೂಲಿನಲ್ಲಿ 1915ನೇ ಇಸವಿ ಮೇ 5 ರಂದು ಒಂದು ಸಭೆಯು ಸೇರಿತು. ಈ ಸಭೆಗೆ ಮೈಸೂರು ಸಂಸ್ಥಾನದ ಜೊತೆಗೆ ಕನ್ನಡ ನಾಡಿನ ಇತರ ಭಾಗಗಳಾದ, ಬೆಳಗಾವಿ, ಕಾರವಾರ, ಬಾಯಿ, ಮದ್ರಾಸು, ಧಾರವಾಡ, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಮೊದಲಾದ ಎಲ್ಲ ಕಡೆಗಳಿಂದಲೂ ಜನರು ವಿದ್ವಾಂಸರು ಬಂದಿದ್ದರು. ನಿರ್ಣಯದಲ್ಲಿ ಕರ್ಣಾಟಕ ಮತ್ತು ಪರಿಷತ್ತು ಎಂಬ ಎರಡು ಪದಗಳ ಮಧ್ಯೆ ಸಾಹಿತ್ಯ ಎಂಬ ಒಂದು ಪದವನ್ನು ಸೇರಿಸಿ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಅದರಿಂದಾಗಿ ಈ ಸಂಸ್ಥೆಗೆ ಅಖಿಲ ಕರ್ಣಾಟಕದ ಸ್ವರೂಪ ಬಂದಿತು.ಈ ಸಂಸ್ಥೆಯ ಸ್ಥಾಪನೆಗೆ ಸಹಾಯ ಮಾಡಿದ ಮಹನೀಯರೆಂದರೆ, ಸರ್ದಾರ್ ಕಾಂತರಾಜ ಅರಸ್, ಎಚ್.ವಿ.ನಂಜುಂಡಯ್ಯ, ಎಂ. ಶಾಮರಾವ್, ಎಂ. ಎಸ್.ಪುಟ್ಟಣ್ಣ, ಕೆ.ಪಿ.ಪುಟ್ಟಣ್ಣ ಶೆಟ್ಟರು, ಹೆಚ್. ಲಿಂಗರಾಜ ಅರಸ್, ಕರ್ಪೂರ ಶ್ರೀನಿವಾಸರಾವ್, ಬಿ.ಕೃಷ್ಣಪ್ಪ, ಸೋಸಲೆ ಅಯ್ಯಾಶಾಸ್ತ್ರಿ, ಮುದವೀಡು ಕೃಷ್ಣರಾವ್ ಕೆರೂರು ವಾಸುದೇವಾಚಾರ್ಯ, ಚ. ವಾಸುದೇವಯ್ಯ, ಆಲೂರು ವೆಂಕಟರಾಯರು ಮೊದಲಾದವರು. ಕರ್ಣಾಟಕ ಸಾಹಿತ್ಯ ಪರಿಷತ್ತು, ಮೈಸೂರು ಸಂಸ್ಥಾನದಿಂದ ಹೊರಗೆ ಬೀದರ್, ಕಲಬುರಗಿ(ಗುಲಬರ್ಗಾ), ಬೆಳಗಾವಿ, ಧಾರವಾಡ, ರಾಯಚೂರು, ಬಳ್ಳಾರಿ, ಆದವಾನಿ, ಸೊಲ್ಲಾಪುರ, ರಬಕವಿ, ಮದ್ರಾಸ್, ಕಾಸರಗೋಡು ಮೊದಲಾದ ಕಡೆ ವಾರ್ಷಿಕ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಕನ್ನಡ ಜನರನ್ನು ಒಂದುಗೂಡಿಸಿ ಕರ್ನಾಟಕ ಏಕೀಕರಣಕ್ಕಾಗಿ ಒತ್ತಾಯಿಸಿ ನಿರ್ಣಯಗಳನ್ನು ಕೈಗೊಳ್ಳುತ್ತಾ ಬಂದಿತು. “ಕನ್ನಡ ನುಡಿ” ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಪ್ರಕಟಿಸಿತು.ಕರ್ನಾಟಕ ಪ್ರದೇಶದ ಕಾಂಗ್ರೆಸ್ ಹಾಗೂ ಇತರ ಕೆಲವು ಸಂಸ್ಥೆಗಳು: 1905ರಲ್ಲಿ ಸ್ವದೇಶಿ ಚಳವಳಿ ಪ್ರಾರಂಭವಾದಾಗ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯಬೇಕೆಂಬ ಹೋರಾಟ ಪ್ರಾರಂಭವಾಯಿತು. ಸಾಹಿತ್ಯ ಮತ್ತು ಸಂಸ್ಕೃತಿ ದೃಷ್ಟಿಯಿಂದ ಅನೇಕ ಸಂಸ್ಥೆಗಳು ಕರ್ನಾಟಕ ಏಕೀಕರಣಕ್ಕೆ ದುಡಿದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕರ್ನಾಟಕದ ಏಕೀಕರಣಕ್ಕೆ ರಾಜಕೀಯ ಹಿನ್ನೆಲೆಯನ್ನು ರೂಪಿಸುವುದರಲ್ಲಿ ಯಶಸ್ವಿಯಾಯಿತು.1916ರಲ್ಲಿ ಗದಿಗೆಯ್ಯ ಹೊನ್ನಾಪುರಮಠ, ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ನರಗುಂದಕರ್ ಅವರ ನೇತೃತ್ವದಲ್ಲಿ ಸಾಹಿತಿಗಳು ಮತ್ತು ಕನ್ನಡ ಅಭಿಮಾನಗಳಿಂದ ಕೂಡಿದ್ದ, ‘ಕರ್ನಾಟಕ ಸಭೆ’ಯು ಸ್ಥಾಪನೆಯಾಗಿ ಕರ್ನಾಟಕ ಏಕೀಕರಣದ ವಿಷಯವನ್ನು ಪ್ರಧಾನವಾಗಿ ತೆಗೆದುಕೊಂಡಿತು. 1918ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆಯಾಯಿತು. 1920ರಲ್ಲಿ ಈ ಪರಿಷತ್ತಿನ ಮೊದಲ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ಮೈಸೂರು ನಿವೃತ್ತ ದಿವಾನ್ ವಿ.ಪಿ.ಮಾಧವರಾಯರು ಇದರ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ “ಕಾಂಗ್ರೆಸ್ ಸಂಸ್ಥೆಯು ಕನ್ನಡ ಮಾತನಾಡುವ ಪ್ರದೇಶವನ್ನೆಲ್ಲಾ ಸೇರಿಸಿ ಒಂದು ಸ್ವತಂತ್ರ ಪ್ರಾಂತವನ್ನಾಗಿಸಬೇಕು” ಎಂಬ ನಿರ್ಣಯವನ್ನು ಕೈಗೊಂಡಿತು.

ಕಾಂಗ್ರೆಸ್ ಪಕ್ಷ ಏಕೀಕರಣ ಪರಿಷತ್ತಿಗೆ ತನ್ನ ಬೆಂಬಲ ಸೂಚಿಸಿತು. ಅಂತಿಮವಾಗಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಅಧಿವೇಶನದಲ್ಲಿ (1920), ಕಾಂಗ್ರೆಸ್ ಸಂಸ್ಥೆಯ ಮೂಲಕ ಏಕೀಕರಣಕ್ಕಾಗಿ ಚಳವಳಿ ನಡೆಸಲು ನಿರ್ಧರಿಸಲಾಯಿತು. ನಾಗಪುರದ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲು ಒಪ್ಪಿಕೊಳ್ಳಲಾಯಿತು. ಹೀಗೆ ಕನ್ನಡ ಬರಹಗಾರರು ಮತು ಪತ್ರಿಕೋದ್ಯಮಿಗಳ ಚಿಂತನೆಯಾಗಿದ್ದ ಏಕೀಕರಣವು, ಕ್ರಮೇಣ ರಾಜಕಾರಣಿಗಳ ಒತ್ತಾಸೆಯನ್ನೂ ಪಡೆಯಿತು. 1924ರಲ್ಲಿ ಸಿದ್ದಪ್ಪ ಕಂಬಳಿ ಅಧ್ಯಕ್ಷರಾಗಿದ್ದ ಮೊದಲನೆಯ ಏಕೀಕರಣ ಅಧಿವೇಶನವು ಬೆಳಗಾವಿಯಲ್ಲಿ, ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿಯೇ ನಡೆಯಿತು. ಅಂತಹ ಏಕೀಕರಣ ಅಧಿವೇಶನಗಳನ್ನು 1926ರಿಂದ 1947ರವರೆಗೆ ಬಳ್ಳಾರಿ (1926, 1936), ಧಾರವಾಡ (1928, 1933, 1944) ಬೆಳಗಾವಿ (1929), ಹುಕ್ಕೇರಿ (1931) ಸೊಲ್ಲಾಪುರ (1940), ಮುಂಬೈ (1946) ಮತ್ತು ಕಾಸರಗೋಡು (1947) ಮುಂತಾದೆಡೆಗಳಲ್ಲಿ ನಡೆಸಲಾಯಿತು.ಅದೇ ಸಂದರ್ಭದಲ್ಲಿ ಡಾ. ಎನ್.ಎಸ್. ಹರ್ಡಿಕರ್ ಸ್ಥಾಪಿಸಿದ (1923) ಹಿಂದೂಸ್ತಾನಿ ಸೇವಾದಳವು ಏಕೀಕರಣಕ್ಕಾಗಿ ಸಹಿ ಸಂಗ್ರಹಣಾ ಕೆಲಸವನ್ನು 1926ರಲ್ಲಿ ಪ್ರಾರಂಭ ಮಾಡಿದಾಗ, 36000 ಮಂದಿ ಅದಕ್ಕಾಗಿ ತಮ್ಮ ಸಹಿ ಹಾಕಿದರು. 1928ರಲ್ಲಿ ಜವಾಹರಲಾಲ್ ನೆಹರೂ ಸಮಿತಿಯು, ಪ್ರತ್ಯೇಕ ಕರ್ನಾಟಕ ಪ್ರಾಂತಕ್ಕಾಗಿ ಬಲವಾಗಿ ಶಿಫಾರಸ್ಸು ಮಾಡಿತು.ಸಾಹಿತ್ಯ ದಿಗ್ಗಜರಾದ ದ.ರಾ. ಬೇಂದ್ರೆ. ಶಂಬಾಜೋಷಿ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಪಂಜೆಮಂಗೇಶರಾವ್, ಮಂಜೇಶ್ವರದ ಗೋವಿಂದಪೈ, ಶಿವರಾಮ ಕಾರಂತ, ತೀ.ತಾ. ಶರ್ಮ, ಡಿ. ವಿ.ಗುಂಡಪ್ಪ, ಕಪಟರಾಳ ಕೃಷ್ಣರಾಯ, ತಾರಾನಾಥ, ಬಿ.ಶಿವಮೂರ್ತಿಶಾಸ್ತ್ರಿ, ವಿ.ಕೆ. ಗೋಕಾಕ್, ಅ.ನ. ಕೃಷ್ಣರಾಯ, ಬಿ.ಎಂ.ಶ್ರೀಕಂಠಯ್ಯ, ಕುವೆಂಪು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮೊದಲಾದವರು ತಮ್ಮ ಬರಹಗಳಿಂದ ಚಳುವಳಿಗೆ ಸ್ಫೂರ್ತಿ ನೀಡಿದರು. ಇದಕ್ಕೆ ಪೂರಕವಾಗಿ ಕನ್ನಡ ವೃತ್ತಪತ್ರಿಕೆಗಳು ಮತ್ತು ಸಂಘ-ಸಂಸ್ಥೆಗಳೂ ಏಕೀಕರಣಕ್ಕಾಗಿ ಶ್ರಮಿಸಿದವು.ಕಾಂಗ್ರೆಸ್‌ನಿಂದ ಏಕೀಕರಣದ ಬಗ್ಗೆ ಸ್ಪಷ್ಟ ಭರವಸೆ ದೊರೆಯದ ಕಾರಣ 1955ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ರಾಜಕೀಯೇತರ ಸಂಸ್ಥೆಯಾಗಿ ಹಾವೇರಿಯಲ್ಲಿ ಸಮ್ಮೇಳನವನ್ನು ನಡೆಸಿ ಕರ್ನಾಟಕ ಏಕೀಕರಣಕ್ಕೆ ನಿರ್ಣಯವನ್ನು ಸ್ವೀಕರಿಸಿತು.1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ ಸುಮಾರು 800 ಮಂದಿ ಪ್ರತಿನಿಧಿಗಳಾಗಿ ಹೋಗಿದ್ದರು. ಕರ್ನಾಟಕಕ್ಕೆ ಪ್ರತ್ಯೇಕ ಕಾಂಗ್ರೆಸ್ ಸಮಿತಿ ಬೇಕೆಂಬ ಈ ಪ್ರತಿನಿಧಿಗಳ ಬೇಡಿಕೆಗೆ ಕಾಂಗ್ರೆಸ್ ಪಕ್ಷ ಒಪ್ಪಿಗೆ ಸೂಚಿಸಿತು. ಇದರಿಂದ ಮುಂಬಯಿ ಕರ್ನಾಟಕದ ನಾಲ್ಕು ಜಿಲ್ಲೆಗಳು ಮುಂಬಯಿ ಪ್ರಾಂತ್ಯ ಕಾಂಗ್ರೆಸ್ ಸಮಿತಿಯಿಂದ ಪ್ರತ್ಯೇಕಗೊಂಡು, ಕರ್ನಾಟಕ ಪ್ರಾಂತ (ಪ್ರದೇಶ) ಕಾಂಗ್ರೆಸ್ ಸಮಿತಿ ಸ್ಥಾಪನೆ ಆಯಿತು. ನಾಗಪುರ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಭಾಷಾವಾರು ಪ್ರಾಂತ್ಯ ಕಾಂಗ್ರೆಸ್ ಸಮಿತಿ ರಚನೆಯಿಂದ ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿ ರಚನೆಯಿಂದ ಕರ್ನಾಟಕ ಏಕೀಕರಣಕ್ಕೆ ರಾಜಕೀಯ ಸ್ವರೂಪ ದೊರಕಿತು.

1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣವನ್ನು ಸಮರ್ಥಿಸುವ “ಕರ್ನಾಟಕ ಕೈಪಿಡಿ” ಎಂಬ ಕೃತಿ ಪ್ರಕಟವಾಯಿತು. ಅಧಿವೇಶನದ ಜೊತೆಗೆ ಕರ್ನಾಟಕ ಏಕೀಕರಣ ಪರಿಷತ್ತಿನ ಸಮ್ಮೇಳನವೂ ನಡೆಯಿತು. ಕರ್ನಾಟಕ ಏಕೀಕರಣಕ್ಕೆ ಕಾಂಗ್ರೆಸ್ ಬೆಂಬಲವನ್ನು ನೀಡಿತು. 1928ರಲ್ಲಿ ನೇಮಕಗೊಂಡ ನೆಹರೂ ಸಮಿತಿಯೂ ಕರ್ನಾಟಕ ಪ್ರಾಂತ್ಯ ರಚನೆಯೂ ಸೇರಿದಂತೆ ಭಾಷಾವಾರು ಪ್ರಾಂತ್ಯಗಳ ರಚನೆ ಅವಶ್ಯಕತೆ ಎಂದು ವರದಿ ನೀಡಿತು. 21-9-1937ರಲ್ಲಿ ಭಾಷಾವಾರು ಪ್ರಾಂತ್ಯ ಹೋರಾಟಕ್ಕೆ ಮಹಾತ್ಮಾ ಗಾಂಧೀಜಿಯವರಿಂದ ಮನ್ನಣೆ ದೊರೆಯಿತು. 1947ರಲ್ಲಿ ಮುಂಬಯಿ ಮತ್ತು ಮದ್ರಾಸ್ ವಿಧಾನ ಮಂಡಲಗಳು ಭಾಷಾವಾರು ಪ್ರಾಂತ್ಯ ರಚನೆಗೆ ನಿರ್ಣಯ ತೆಗೆದುಕೊಂಡವು. ಮಹಾತ್ಮಾ ಗಾಂಧೀಜಿಯವರು 25-1-1948ರಂದು ಕರ್ನಾಟಕ ಪ್ರಾಂತ್ಯ ರಚನೆಯ ವಿಚಾರವನ್ನು ತಾವು ಮನಸಾ ಒಪ್ಪಿರುವುದಾಗಿ ಘೋಷಿಸಿದರು. ಈ ಮಧ್ಯೆ ವೀರಶೈವ ಮಹಾಸಭೆಯು ತಾನು ನಡೆಸಿದ ಅನೇಕ ಸಮ್ಮೇಳನಗಳಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ನಿರ್ಣಯವನ್ನು ಕೈಗೊಂಡು, ಕರ್ನಾಟಕ ಏಕೀಕರಣದ ಬಗ್ಗೆ ಜನಸಾಮಾನ್ಯರೂ ಇದ್ದಾರೆ ಎಂಬುದನ್ನು ತೋರಿಸಿತು.

 

 

ರಾಜ್ಯ ಪುನರ್ ವಿಂಗಡಣಾ ಆಯೋಗ

1946ರಲ್ಲಿ ಸೊಂಡೂರು ಸಂಸ್ಥಾನದವರು ಕರ್ನಾಟಕ ಏಕೀಕರಣಕ್ಕೆ ತಮ್ಮ ಬೆಂಬಲ ಸೂಚಿಸಿದರು. ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ 1948ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಧಾರ್ ಸಮಿತಿ ರೂಪುಗೊಂಡಿತು. ಆದರೆ ಈ ಸಮಿತಿಯಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇದಾದ ನಂತರ ನೆಹರೂ, ವಲ್ಲಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ನೇತೃತ್ವದಲ್ಲಿ ರಾಜ್ಯ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ತ್ರಿಮೂರ್ತಿ ಸಮಿತಿ ನೇಮಕವಾಯಿತು. ಭಾಷಾವಾರು ಪ್ರಾಂತ್ಯ ರಚನೆ ಅಗತ್ಯ ಆದರೆ ಈಗ ಅದು ಸಾಧ್ಯವಿಲ್ಲ ಎಂಬ ವರದಿಯನ್ನು ಈ ಸಮಿತಿ ನೀಡಿತು. 1952ರಲ್ಲಿ ಪೊಟ್ಟಿ ಶ್ರೀರಾಮುಲು ಅವರು ಧ್ರಪ್ರಾಂತ್ಯ ರಚನೆಗಾಗಿ ಅಮರಣಾಂತ ಉಪವಾಸ ಕೈಗೊಂಡು 58 ದಿನಗಳ ಉಪಾಸದ ನಂತರ 15-12 1952ರಲ್ಲಿ ನಿಧನರಾದರು. 19-12-52 ರಂದು ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಆಂಧ್ರಪ್ರಾಂತ್ಯ ರಚನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. 1953ರ ಜನವರಿ ತಿಂಗಳಿನಲ್ಲಿ ಎ.ಐ.ಸಿಸಿ. ಅಧಿವೇಶನವು ಹೈದರಾಬಾದ್‌ನಲ್ಲಿ ನಡೆಯಿತು. ಮೈಸೂರು ರಾಜ್ಯದ ಜೊತೆಗೆ ಕನ್ನಡ ಪ್ರದೇಶಗಳನ್ನು ಸೇರಿಸಿ ಏಕೀಕೃತ ಕರ್ನಾಟಕವನ್ನು ಸ್ಥಾಪಿಸಬೇಕೆಂದು ತಮ್ಮ ಧೀರೋದಾತ್ತ ನಿಲುವನ್ನು ಪ್ರಕಟಿಸಿದರು. ಈ ಮಧ್ಯೆ ಬಳ್ಳಾರಿ ವಿಷಯದಲ್ಲಿ ಕೇಳ್ಕರ್ ಸಮಿತಿ, ಎನ್.ಕೆ. ವಾಂಛೂ ಸಮಿತಿಗಳು ವರದಿಗಳು ಬಂದವು. ಆದರೆ ಇವುಗಳಿಂದ ರ್ನಾಟಕದ ಏಕೀಕರಣ ವಿಚಾರ ಇನ್ನಷ್ಟು ಕಗ್ಗಂಟಾಯಿತು. ಆಂಧ್ರ ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ನ್ಯಾ.ಎಲ್.ಎಸ್. ಮಿಶ್ರಾ ಸಮಿತಿ ವರದಿಯು ಪ್ರಕಟವಾಗಿ ಅಂಗೀಕಾರವಾಯಿತು. 1953 ಆಗಸ್ಟ್ ತಿಂಗಳಲ್ಲಿ ಲೋಕಸಭೆಯಲ್ಲಿ ಆಂಧ್ರಪ್ರದೇಶ ಮಸೂದೆ ಅಂಗೀಕಾರವಾಯಿತು. ಇದರ ಫಲವಾಗಿ 2-10-53 ರಂದು ಕರ್ನಾಟಕ ಏಕೀಕರಣದ ಮೊದಲ ಹಂತವಾಗಿ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡವು. ಈ ಸಮಾರಂಭದಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಭಾಗವಹಿಸಿ ನನ್ನನ್ನು ನಿಮ್ಮ ಸೇವೆಗೆ ಅರ್ಪಿಸಿಕೊಂಡಿದ್ದೇನೆ ಎಂದರು. ಈ ಸನ್ನಿವೇಶದಲ್ಲಿ ಕನ್ನಡಪರ ಹೋರಾಟಗಾರ ರಮ್‌ಜಾನ್‌ಸಾಹೇಬ್ ಎಂಬುವವರನ್ನು ಬಳ್ಳಾರಿ ವಿಲೀನ ವಿರೋಧಿಗಳು ಕೊಲೆ ಮಾಡಿದ ಆಘಾತಕಾರಿ ಸನ್ನಿವೇಶ ನಡೆಯಿತು. ಮಿಶ್ರಾ ಸಮಿತಿ ನೇಮಕದ ವಿರುದ್ಧ ಕಾಂಗ್ರೆಸ್ ಸದಸ್ಯರೇ ಆದ ಅದರಗುಂಚಿ ಶಂಕರಗೌಡರು 28-3-53ರಿಂದ ಅಮರಣಾಂತ ಉಪವಾಸ ಕೈಗೊಂಡರು. 19-4-53ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಸೇರಿ ಕರ್ನಾಟಕ ಏಕೀಕರಣದ ಬಗ್ಗೆ ಚರ್ಚೆ ನಡೆಸಲು ಏರ್ಪಾಡಾಗಿತ್ತು. ಅಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸುಮಾರು 25000ಕ್ಕೂ ಹೆಚ್ಚು ಜನರು ಸಭೆ ನಡೆಯುವ ಜಾಗಕ್ಕೆ ನುಗ್ಗಿದರು. ಲಾಠೀ ಜಾರ್ಜ್ ಆಯಿತು. ಈ ಗೊಂದಲದ ನಡುವೆಯೇ ಕೆ.ಪಿ.ಸಿ.ಸಿ.ಯು ಕರ್ನಾಟಕ ಏಕೀಕರಣವಾಗಲೇ ಬೇಕೆಂದು ನಿರ್ಣಯವನ್ನು ಗೀಕರಿಸಿತು. ಮೈಸೂರು ಕಾಂಗ್ರೆಸ್ ಮುಖಂಡರುಗಳು ಎಸ್.ನಿಜಲಿಂಗಪ್ಪನವರ ನೇತೃತ್ವದಲ್ಲಿ 14-9-53ರಂದು ಪ್ರಧಾನ ಮಂತ್ರಿ ಪೂರ್ಣವಾಗಿ ವಿವರಿಸಿ, ಕರ್ನಾಟಕ ಏಕೀಕರಣವಾಗಲೇ ಬೇಕೆಂದು ಮನದಟ್ಟು ಮಾಡಿಕೊಟ್ಟರು. ನೆಹರೂ ಅವರು ನಾನು ಕರ್ನಾಟಕದ ಬೇಡಿಕೆಯನ್ನುö ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆಂದು ಹೇಳಿದರು. ಮೈಸೂರು ಸಂಸ್ಥಾನ ಹಾಗೂ ಕರ್ನಾಟದ ಇತರ ಭಾಗಗಳಲ್ಲಿ ಎರಡು ಕರ್ನಾಟಕ, ಮೂರು ಕರ್ನಾಟಕ, ನಾಲ್ಕು ಕರ್ನಾಟಕ ರಾಜ್ಯಗಳ ಸ್ಥಾಪನೆಯ ವಿಚಾರವೂ ಕೆಲವರಿಂದ ಬಂದು ಅದಕ್ಕೆ ಬೆಂಬಲ ದೊರೆಯುಲಿಲ್ಲ.ಹೋರಾಟಗಳ ಫಲವಾಗಿ ಪ್ರಧಾನ ಮಂತ್ರಿ ನೆಹರೂ ಅವರು 22-12-1953 ರಂದು ಲೋಕಸಭೆಯಲ್ಲಿ ರಾಜ್ಯಗಳ ಪುನರ್ ವಿಂಗಡಣೆಗೆ ಫಜಲ್ ಅಲಿಯವರ ನೇತೃತ್ವದಲ್ಲಿ ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ರಚಿಸಿರುವುದಾಗಿ ಲೋಕಸಭೆಯಲ್ಲಿ ಘೋಷಿಸಿದರು. 29-12-1953 ರಂದು ಆಯೋಗ ರಚನೆ ಆಯಿತು. ಹೃದಯನಾಥ್ ಕುಂಜ್ರೂ ಮತ್ತು ಕೆ.ಎಮ್.ಫಣಿಕ್ಕರ್ ಅವರು ಈ ಆಯೋಗದ ಸದಸ್ಯರಾಗಿದ್ದರು. 1954ರ ಜೂನ್ ತಿಂಗಳಿನಿಂದ ರಾಜ್ಯ ಪುನರ್ ವಿಂಗಡಣಾ ಆಯೋಗವು ನಾಡಿನಲ್ಲಿ ಸಂಚರಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ತೊಡಗಿತು. ಕೆ.ಪಿ.ಸಿ.ಸಿ, ಮೈಸೂರು ಪ್ರದೇಶ ಕಾಂಗ್ರೆಸ್, ಮೈಸೂರು ಸರ್ಕಾರ, ಅನೇಕ ಸಂಘಸಂಸ್ಥೆಗಳು, ಸಾರ್ವಜನಿಕರು ಆಯೋಗಕ್ಕೆ ತಮ್ಮ ಮನವಿಗಳನ್ನು ಸಲ್ಲಿಸಿದರು. 10-10-1955 ರಂದು

ಆಯೋಗವು ತನ್ನ ವರದಿಯನ್ನು ಈಗಾಗಲೇ ಮೈಸೂರಿಗೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರಗುಪ್ಪ, ಹೊಸಪೇಟೆ ತಾಲೂಕುಗಳು ಇರಲಿಲ್ಲ. ಬೀದರ್ ಜಿಲ್ಲೆಯೂ ಇರಲಿಲ್ಲ. ಕಾಸರಗೋಡನ್ನು ಕೈಬಿಡಲಾಗಿತ್ತು. ಹೊಸೂರು, ಧರ್ಮಪುರಿ, ಅಕ್ಕಲಕೋಟೆ, ಜತ್, ಸೊಲ್ಲಾಪುರ, ಮಡಕಶಿರಾ ಈ ಕನ್ನಡ ಪ್ರದೇಶಗಳೂ ಸೇರಿರಲಿಲ್ಲ. ಇದರಿಂದ ಅಸಂತುಷ್ಟರಾದ ಕನ್ನಡಿಗರೂ ಮತ್ತೆ ಹೋರಾಟ ಪ್ರಾರಂಭಿಸಿದರು. ಪುನರ್ ವಿಂಗಡಣಾ ಆಯೋಗದ ವರದಿಯನ್ನು ಪರಿಶೀಲಿಸಲು ಕಾಂಗ್ರೆಸ್ ಪಕ್ಷವು ನೆಹರೂ ಅವರ ನೇತೃತ್ವದಲ್ಲಿ ಉಪಸಮಿತಿಯನ್ನು ನೇಮಿಸಿತು. 1956ರ ಜನವರಿ ತಿಂಗಳಲ್ಲಿ ಉಪ ಸಮಿತಿಯ ವರದಿಯ ಮೇರೆಗೆ ಬಳ್ಳಾರಿ ಜಿಲ್ಲೆ, ಕಾಸರಗೋಡಿನ ಚಂದ್ರಗಿರಿ ನದಿಯ ಮೇಲಿನ ಭಾಗ, ಬೀದರ್ ಜಿಲ್ಲೆಗಳನ್ನು ಕರ್ನಾಟಕಕ್ಕೆ ಸೇರಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿತು. 16-1-56ರಂದು ರಾಜ್ಯ ಪುನರ್ ವಿಂಗಡಣೆಯ ಬಗ್ಗೆ ಕೇಂದ್ರ ಸರ್ಕಾರವು ಪ್ರಕಟಣೆಯನ್ನು ಹೊರಡಿಸಿ ಮೈಸೂರು ರಾಜ್ಯವನ್ನು ರಚಿಸಲು ತೀರ್ಮಾನಿಸಿತು. 8 ಮೈಸೂರು ಸಂಸ್ಥಾನ ಇಡಿಯಾಗಿ 8 ಮುಂಬಯಿ ರಾಜ್ಯದ ಬಿಜಾಪುರದ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಂದಾಗಡ ತಾಲ್ಲುಕನ್ನು ಬಿಟ್ಟು) ಜಿಲ್ಲೆಗಳು 8 ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಹೊರತುಪಡಿಸಿ) ರಾಯಚೂರು ಜಿಲ್ಲೆ (ಆಲಂಪುರ ತಾಲೂಕನ್ನು ಹೊರತುಪಡಿಸಿ). ಬೀದರ್ ಜಿಲ್ಲೆ (ಬೀದರ್, ಭಾಲ್ಕಿ, ಔರಾದ್ ಮತ್ತು ಹುಮ್ನಾಬಾದ್ ತಾಲ್ಲೂಕುಗಳು) ಬಸವಕಲ್ಯಾಣವನ್ನು ಹೊರತುಪಡಿಸಿ 8 ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲೂಕು ಮತ್ತು ಅಮೀನ್ ದ್ವೀಪಗಳನ್ನು ಹೊರತುಪಡಿಸಿ), ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕು 8 ಕೊಡಗು ಈ ಪ್ರಕಟಣೆಯಲ್ಲೂ ಬಸವಕಲ್ಯಾಣ ತಾಲೂಕು ಸೇರಿರಲಿಲ್ಲ. ಆನಂತರ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಮುಖಂಡರು ಸಭೆಸೇರಿ ಬಸವಕಲ್ಯಾಣವನ್ನು ಮೈಸೂರಿಗೆ, ಗದ್ವಾಲನ್ನು ಆಂಧ್ರ ರಾಜ್ಯಕ್ಕೆ ಬಿಡಲು ಒಪ್ಪಿದರು. ಈ ಒಪ್ಪಂದವನ್ನು ರಾಜ್ಯ ಪುನರ್ ವಿಂಗಡಣಾ ಮಸೂದೆಯಲ್ಲಿ ಸೇರಿಸಲಾಯಿತು.ಈ ಬಗ್ಗೆ ಕೇಂದ್ರವು ವಿಧೇಯಕವನ್ನು ರಚಿಸಿ, ರಾಜ್ಯ ವಿಧಾನ ಮಂಡಲಗಳ ಒಪ್ಪಿಗೆಗಾಗಿ ಕಳುಹಿಸಿತು. ರಾಜ್ಯವಿಧಾನ ಮಂಡಲಗಳ ಒಪ್ಪಿಗೆ ಬಂಧ ನಂತರ 18-4-1956ರಂದು ಲೋಕಸಭೆಯಲ್ಲಿ ವಿಧೇಯಕವನ್ನು ಮಂಡಿಸಲಾಯಿತು. ಚರ್ಚೆಯ ನಂತರ ವಿಧೇಯಕವನ್ನು ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ಕಳುಹಿಸಲಾಯಿತು. ಈ ಸಮಿತಿಯ 16-2-56ರಂದು ತನ್ನ ವರದಿಯನ್ನು ನೀಡಿ, ಮೈಸೂರಿನ ಬದಲು ಕರ್ನಾಟಕ ಎಂಬ ಹೆಸರನ್ನಿಡುವಂತೆ ಶಿಫಾರಸ್ಸು ಮಾಡಿತು.  ಉಪಸಮಿತಿಯ ಶಿಫಾರಸ್ಸಿನ ನಂತರ ಮತ್ತೆ ವಿಧೇಯಕವು 26-7-2956ರಂದು ಲೋಕಸಭೆಯಲ್ಲಿ ಚರ್ಚೆಗೆ ಮಂಡಿತವಾಗಿ 10-8-56ರಂದು ಅಂಗೀಕಾರವಾಯಿತು.16-8-56ರಿಂದ 23-8-56ರವರೆಗೆ ಈ ವಿಧೇಯಕವು ಮೈಸೂರು ಶಾಸನ ಸಭೆಯಲ್ಲಿ ಚರ್ಚೆಯಾಯಿತು. ಸೊಲ್ಲಾಪುರ  ಜಿಲ್ಲೆ, ಕಾಸರಗೋಡು ಮೈಸೂರಿಗೆ ಸೇರಬೇಕೆಂದು, ರಾಜ್ಯಕ್ಕೆ ಕರ್ನಾಟಕವೆಂಬ ಹೆಸರೇ ಇರಬೇಕೆಂದು ಎಲ್ಲ ಸದಸ್ಯರು ಪ್ರತಿಪಾದಿಸಿದರು. 31-8-1956 ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆಯಿತು. ಆದರೆ ಮೈಸೂರು ರಾಜ್ಯ ಎಂಬ ಹೆಸರೇ ಉಳಿಯಿತು. ಸೊಲ್ಲಾಪುರ ಜಿಲ್ಲೆ, ಕಾಸರಗೋಡು ಕರ್ನಾಟಕಕ್ಕೆ ಸೇರಿರಲಿಲ್ಲ. 1956 ನವೆಂಬರ್ 1 ರಂದು ಹೊಸ ಮೈಸೂರು ರಾಜ್ಯದ ಉದಯವಾಯಿತು. ಹೊಸ ಮೈಸೂರು ರಾಜ್ಯದ ರಾಜ್ಯಪಾಲರಾಗಿ ರಾಜಪ್ರಮುಖರಾಗಿದ್ದ ಜಯಚಾಮರಾಜ ಒಡೆಯರ್ ನೇಮಕವಾದರು. 21-10-1956 ರಂದು ನಿಜಲಿಂಗಪ್ಪನವರು ಕರ್ನಾಟಕ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. 1956 ನವೆಂಬರ್ 1 ರಂದು ರಾಷ್ಟ್ರಪತಿ  ಬಾಬೂ ರಾಜೇಂದ್ರ ಪ್ರಸಾದ್‌ರವರು ಬೆಂಗಳೂರಿನಲ್ಲಿ ವಿಶಾಲ ಮೈಸೂರು ರಾಜ್ಯವನ್ನು ಉದ್ಫಾಟಿಸಿದರು. 1-11-56ರಂದು ಜಯಚಾಮರಾಜ ಒಡೆಯರ್ ಅವರು ರಾಜ್ಯಪಾಲರಾಗಿ, ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

(ಮಾಹಿತಿ ಮೂಲ: ಕರ್ನಾಟಕ ಕೈಪಿಡಿ-2017, ಕರ್ನಾಟಕ ರಾಜ್ಯ ಗೆಜೆಟಿಯರ್‌ ವಿಶೇಷ ಪ್ರಕಟಣೆ)

ಇತ್ತೀಚಿನ ನವೀಕರಣ​ : 08-09-2021 03:45 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn